One N Only Exclusive Cine Portal

ದೇಶವನ್ನಾವರಿಸಿರುವ ಪಿಡುಗಿನ ವಿರುದ್ಧದ ಗುಡುಗು!

ನೈಜ ಘಟನೆಯನ್ನಾಧರಿಸಿದ ಚಿತ್ರವೆಂಬ ವಿಚಾರ, ಚೆಂದದ ಹಾಡುಗಳಿಂದ ಗಮನ ಸೆಳೆದಿದ್ದ ಚಿತ್ರ ಪ್ರೀತಿಯ ರಾಯಭಾರಿ. ಇದೀಗ ಬಿಡುಗಡೆಯಾಗಿರೋ ಈ ಚಿತ್ರ ಒಂದು ಸಣ್ಣ ಕಥೆ, ಛಕ್ಕನೆ ಎದುರಾಗೋ ತಿರುವು, ಪ್ರೀತಿ ಪ್ರೇಮ, ಬದುಕನ್ನೇ ನಾಶ ಮಾಡಲು ಹೊರಡುವ ಉಳ್ಳವರ ಅಟ್ಟಹಾಸ… ಇಂಥಾ ನಾನಾ ಕಂಟೆಂಟುಗಳ ದೆಸೆಯಿಂದ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಒಂದು ಮಟ್ಟದಲ್ಲಿ ಗೆಲುವು ಕಂಡಿದೆ.

ಜಗಳದಿಂದಲೇ ನಾಯಕ ನಾಯಕಿಯ ನಡುವೆ ಬೆಸೆದುಕೊಳ್ಳುವ ಪರಿಚಯ, ಅದು ಪ್ರೀತಿಯಾಗಿ, ಅದರ ನಡುವೆ ಕದನ ಸಂಭವಿಸಿ, ಮತ್ತೆ ಒಂದಾಗಿ ಸಂಸಾರ ನಡೆಸಬೇಕೆಂಬಷ್ಟರಲ್ಲಿ ಬಂದೊದಗುವ ಟ್ವಿಸ್ಟು. ಜೀವದಂತೆ ಪ್ರೀತಿಸೋ ನಾಯಕಿಯ ಮೇಲೆ ನಾಯಕನ ಕಣ್ಣೆದುರೇ ಅತ್ಯಾಚಾರ ನಡೆಸುವ ಕಿರಾತಕರು. ಈ ಅತ್ಯಾಚಾರಿಗಳಲ್ಲೊಬ್ಬ ಶಾಸಕನ ಮಗ ಎಂಬ ಕಾರಣಕ್ಕೆ ಹಳ್ಳ ಹಿಡಿಯೋ ಕೇಸು… ಸಾಮಾನ್ಯ ಅನ್ನಿಸುವಂಥಾ ಕಥಾ ಎಳೆಯನ್ನು ಹೊಂದಿದ್ದರೂ ಅಸಾಮಾನ್ಯ ಎಂಬಂಥ ಒಂದಷ್ಟು ಅಂಶಗಳನ್ನೂ ಬಚ್ಚಿಟ್ಟುಕೊಂಡಿರೋ ಪ್ರೀತಿಯರಾಯಭಾರಿ ತುಸು ಭಿನ್ನವಾಗಿ ನಿಲ್ಲುವುದು ಕೂಡಾ ಆ ಕಾರಣದಿಂದಲೇ.

ನಿರ್ದೇಶಕ ಮುತ್ತು ಅವರು ಸತ್ಯ ಘಟನೆಯೊಂದನ್ನು ಆಧರಿಸಿ ಈ ಚಿತ್ರ ಮಾಡಿರೋದಾಗಿ ಹೇಳಿಕೊಂಡಿದ್ದರು. ಆದರೆ ಚಿತ್ರವನ್ನು ನೋಡಿದರೆ ಈವತ್ತು ದೇಶಾದ್ಯಂತ ನಡೆಯುತ್ತಿರುವ ಅತ್ಯಾಚಾರದಂಥಾ ಅಮಾನವೀಯ ಘಟನೆಗಳೆಲ್ಲದರ ಕನ್ನಡಿಯಂತೆ ಈ ಚಿತ್ರ ಮೂಡಿ ಬಂದಿದೆ. ಸುಂದರವಾದ ಸಹಜ ಲೊಕೇಷನ್ನುಗಳನ್ನು ಕ್ಯಾಮೆರಾ ಫ್ರೇಮಿಗೆ ಒಗ್ಗಿಸುವ ಕಲಾತ್ಮಕತೆಯಿಂದಲೇ ಚಿತ್ರ ಸತ್ಯವೆನಿಸುತ್ತದೆ. ಸಣ್ಣ ಕಥಾ ಎಳೆಯನ್ನೇ ವಿಸ್ತರಿಸಿದ ಫಲವಾಗಿ ಚಿತ್ರ ಅಲ್ಲಲ್ಲಿ ವಿನಾಕಾರಣ ಎಳೆದಾಡಿದಂತೆ ಭಾಸವಾಗಿ, ಚಲನೆ ಕೊಂಚ ನಿಧಾನವಾದ ಫೀಲ್ ಹುಟ್ಟಿದರೂ ಅದರ ಬೆನ್ನಿಗೇ ಟ್ವಿಸ್ಟುಗಳನ್ನಿಡೋ ಮೂಲಕ ನಿರ್ದೇಶಕರು ಜಾಣ್ಮೆ ಪ್ರದರ್ಶಿಸಿದ್ದಾರೆ.

ಇನ್ನು ನಾಯಕಿ ಸುಕೃತಾ ದೇಶಪಾಂಡೆ ಅದ್ಭುತವೆನಿಸುವಂತೆ ನಟಿಸಿದ್ದಾಳೆ. ನಾಯಕ ನಟನೆಯಲ್ಲಿ ಮಾತ್ರವಲ್ಲದೆ ಎಲ್ಲರನ್ನೂ ಹುಚ್ಚೆಬ್ಬಿಸುವಂತೆ ಡ್ಯಾನ್ಸ್ ಮಾಡಿದ್ದಾನೆ. ಜೊತೆಗೆ ಫೈಟು ಮಾಡೋದರಲ್ಲೂ ಅಬ್ಬರಿಸಿರುವ ನಾಯಕ ನಕುಲ್ ನಟನೆಯಲ್ಲೂ ಇನ್ನೊಂದಷ್ಟು ಪಳಗಿದರೆ ನೆಲೆ ನೆಲ್ಲಬಹುದು. ಅರ್ಜುನ್ ಜನ್ಯಾ ಸಂಗೀತ ನೀಡಿರೋ ಹಾಡುಗಳೆಲ್ಲವೂ ಹಿತವೆನಿಸುತ್ತವೆ. ಇದೆಲ್ಲದರ ಜೊತೆ ಜೊತೆಗೇ ಹಣ, ಅಧಿಕಾರ ಇರುವವರು ಅತ್ಯಾಚಾರದಂಥಾ ಅಮಾನವೀಯ ಕೆಲಸ ಮಾಡಿ ಹೇಗೆಲ್ಲಾ ಬಚಾವಾಗುತ್ತಾರೆಂಬ ವಿಚಾರವನ್ನೂ ಪರಿಣಾಮಕಾರಿಯಾಗಿಯೇ ತೋರಿಸಲಾಗಿದೆ.

ನಾಯಕ ತನ್ನ ಕಣ್ಣೆದುರೇ ನಾಯಕಿಯ ಮೇಲೆ ಅತ್ಯಾಚಾರ ನಡೆಸಿದ ದುಷ್ಟರಿಗೆ ಯಾವ ಪಾಠ ಕಲಿಸುತ್ತಾನೆಂಬುದೇ ಅಸಲೀ ಆಂತರ್ಯ. ಅದನ್ನು ಒಂದು ಬಾರಿ ನೋಡಿ ಕಣ್ತುಂಬಿಕೊಳ್ಳೋದೊಳ್ಳೆಯದು. ಎಲ್ಲೆಲ್ಲೂ ವಿಕೃತಿ ಮೆರೆಯುತ್ತಿರುವ, ಹೆಣ್ಮಕ್ಕಳ ಪಾಲಿಗೆ ಕಂಟಕರಾಗಿರುವವರಿಗೂ ಒಮ್ಮೆ ಈ ಸಿನಿಮಾವನ್ನು ತೋರಿಸಲೇ ಬೇಕು. ಸ್ತ್ರೀಪೀಡಕರೇನಾದರೂ ಈ ಸಿನಿಮಾ ನೋಡಿದರೆ ಜನ್ಮೇಪಿ ಹೆಣ್ಮಕ್ಕಳ ಮೇಲೆ ಕೆಟ್ಟ ದೃಷ್ಟಿ ಬೀರಲು ಸಾಧ್ಯವೇ ಇಲ್ಲ. ಅಂತಾ ಶಿಕ್ಷೆ ಸಿನಿಮಾದಲ್ಲೇನಿದೆ ಅನ್ನೋದನ್ನು ತಿಳಿಯಲಾದರೂ ಸಿನಿಮಾವನ್ನೊಮ್ಮೆ ನೋಡಿ.

(3/5)

Leave a Reply

Your email address will not be published. Required fields are marked *


CAPTCHA Image
Reload Image