One N Only Exclusive Cine Portal

ರಾಘವೇಂದ್ರ ಚಿತ್ರವಾಣಿಯ ಚರಿತ್ರೆ…

ಯಾರೋ ಕನಸಿಟ್ಟುಕೊಂಡು ಮಾಡಿದ ಸಿನಿಮಾವನ್ನು ತಮ್ಮದೇ ಕೂಸೆಂಬಂತೆ ಜತನದಿಂದ ಪ್ರೇಕ್ಷಕರಿಗೆ ಪರಿಚಯಿಸೋ ಸಾರ್ಥಕ ಕೆಲಸ ಪ್ರಚಾರಕರ್ತರದ್ದು. ಅಂಥಾ ಕೆಲಸವನ್ನು ಭಕ್ತಿಯಿಂದಲೇ ಮಾಡುತ್ತಾ ಚಿತ್ರರಂಗದ ಪ್ರಮುಖ ಕೊಂಡಿಯಂತೆ ಕೆಲಸ ಮಾಡಿದ್ದವವರು ದಿವಂಗತ ಡಿ.ವಿ ಸುಧೀಂದ್ರ. ಅವರು ಮರೆಯಾದ ನಂತರ ಸಿನಿಮಾರಂಗ ಹಲವಾರು ಪಲ್ಲಟಗಳನ್ನು ಕಂಡಿದೆ. ಇಲ್ಲಿನ ಮನಸ್ಥಿತಿಗಳು ಬದಲಾಗಿವೆ. ಪ್ರಚಾರವೆಂಬುದು ತಂತ್ರಗಾರಿಕೆಯ ಸ್ವರೂಪ ಪಡೆದುಕೊಂಡು ಅಲ್ಲೊಂದು ವ್ಯವಹಾರದ ಛಾಯೆ ಆವರಿಸಿಕೊಂಡಿದೆ. ಆದರೆ ಸುಧೀಂದ್ರ ಅವರ ರೀತಿ ರಿವಾಜುಗಳನ್ನು ಅವರ ಅಣ್ಣನ ಮಗ ವೆಂಕಟೇಶ್ ಯಥಾ ರೀತಿಯಲ್ಲಿಯೇ ಪರಿಪಾಲಿಸಿಕೊಂಡು ಬರುತ್ತಿದ್ದಾರೆ.

ಇಂದು ಕನ್ನಡದ ಅನೇಕ ಸ್ಟಾರ್ ನಟರುಗಳ ದೊಡ್ಡ ಸಿನಿಮಾಗಳ ಪ್ರಚಾರಕರ್ತರಾಗಿ ಪ್ರಸಿದ್ಧಿ ಪಡೆದುಕೊಂಡಿರುವವರು ಸುಧೀಂದ್ರ ವೆಂಕಟೇಶ್. ತಮ್ಮ ಚಿಕ್ಕಪ್ಪ ಸುಧೀಂದ್ರ ಅವರ ಪ್ರಭಾವಲಯದಲ್ಲಿಯೇ ಬೆಳೆದು ಬಂದಿರುವ ವೆಂಕಟೇಶ್ ತಮ್ಮ ಹೆಸರಿನ ಮುಂದೆ ಚಿಕ್ಕಪ್ಪನ ಹೆಸರನ್ನು ಸೇರಿಸಿಕೊಂಡು ಅವರ ಕನಸುಗಳನ್ನೂ ಕೂಡಾ ತಮ್ಮದೇ ಎಂಬಂತೆ ಕಾಪಾಡಿಕೊಂಡು ಬರುತ್ತಿದ್ದಾರೆ. ಸುಧೀಂದ್ರ ಅವರು ಕನ್ನಡದ ಪ್ರಥಮ ಸಿನಿಮಾ ಪ್ರಚಾರಕರ್ತ ಎಂಬ ಹೆಗ್ಗಳಿಕೆ, ಆ ಕಾಲದ ಸೂಪರ್ ಸ್ಟಾರ್‌ಗಳ ನಿಕಟ ಸಖ್ಯ ಹೊಂದಿದ್ದರೂ ಕೂಡಾ ತಾವು ದುಡಿದದ್ದರಲ್ಲಿ ಒಂದು ಪಾಲನ್ನು ಸಮಾಜಮುಖಿ ಕೆಲಸಕ್ಕೆಂದೇ ಮುಡಿಪಾಗಿಟ್ಟಿದ್ದ ಮಾದರಿ ವ್ಯಕ್ತಿ. ಅವರು ಸ್ಫಾಪಿಸಿದ್ದ ಸಂಸ್ಥೆ ಶ್ರೀ ರಾಘವೇಂದ್ರ ಚಿತ್ರವಾಣಿಯೀಗ ನಲವತ್ತೊಂದು ವರ್ಷವನ್ನು ಸಂಭ್ರಮದಿಂದ ಪೂರೈಸಿದೆ.

ರಾಘವೇಂದ್ರ ಚಿತ್ರವಾಣಿ ಸಂಸ್ಥೆಯನ್ನು ಸುಧೀಂದ್ರ ಅವರು ಹುಟ್ಟು ಹಾಕಿದ್ದರ ಹಿಂದೆ ನಾನಾ ಕನಸುಗಳಿದ್ದವು. ತಮ್ಮ ಬೆಳವಣಿಗೆಗೆ ಕಾರಣರಾದವರನ್ನೂ ಸಾರ್ಥಕವಾಗಿ ಸ್ಮರಿಸಿಕೊಳ್ಳುವ, ನೆರವಾಗುವ ಉದ್ದೇಶದಿಂದಲೇ ಈ ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ಪ್ರತೀ ವರ್ಷವೂ ಈ ಸಂಸ್ಥೆಯ ಮೂಲಕ ಚಿತ್ರರಂಗದ ನಿರ್ಮಾಪಕ, ನಿರ್ದೇಶಕರು ಮತ್ತು ಸಿನಿಮಾ ಪತ್ರಕರ್ತರನ್ನು ಪ್ರಶಸ್ತಿ ನೀಡಿ ಸನ್ಮಾನಿಸುವ ಪರಿಪಾಠವನ್ನೂ ರೂಢಿಸಿಕೊಂಡು ಬಂದಿದ್ದರು. ಸುಧೀಂದ್ರ ಅವರು ಮರೆಯಾಗಿದ್ದರೂ ಕೂಡಾ ಅವರ ಹಾದಿಯಲ್ಲಿಯೇ ಮುಂದುವರೆಯುತ್ತಿರುವ ವೆಂಕಟೇಶ್ ಅದನ್ನು ಅನೂಚಾನವಾಗಿ ಮುಂದುವರೆಸಿಕೊಂಡು ಬಂದಿದ್ದಾರೆ. ಆದ್ದರಿಂದಲೇ ರಾಘವೇಂದ್ರ ಚಿತ್ರವಾಣಿ ಕಾರ್ಯಕ್ರಮ ಹದಿನೇಳನೇ ವರ್ಷವನ್ನು ದಾಟಿಕೊಂಡಿದೆ.

ಯಾವ ಸಮಾರಂಭವನ್ನೇ ಆಗಿದ್ದರೂ, ಸಿನಿಮಾ ಪ್ರಚಾರ ಕಾರ್ಯವೇ ಆಗಿದ್ದರೂ ಶ್ರದ್ಧೆಯಿಂದ, ಎಲ್ಲರೂ ಅಚ್ಚರಿಗೊಳ್ಳುವಂತೆ ಮಾಡೋದು ವೆಂಕಟೇಶ್ ಅವರ ಕಾರ್ಯವೈಖರಿ. ಈ ಬಾರಿಯ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಸಮಾರಂಭವನ್ನೂ ಕೂಡಾ ಅಷ್ಟೇ ಅಚ್ಚುಕಟ್ಟಾಗಿ ಮಾಡಿದ್ದಾರೆ. ಹಿರಿಯ ನಿರ್ಮಾಪಕರಾದ ಕೆಸಿಎನ್ ವೇಣು ಗೋಪಾಲ್, ನಿರ್ದೇಶಕ ಎಸ್ ನಾರಾಯಣ್, ಕಲಾವಿದೆ ಸುಂದರಶ್ರೀ, ಹಿನ್ನೆಲೆ ಗಾಯಕಿ ನಂದಿತಾ, ಹಿರಿಯಪತ್ರಕರ್ತ ಕೃಷ್ಣರಾವ್, ಸಂಗೀತ ನಿರ್ದೇಶಕ ಬಾಪು ಪದ್ಮನಾಭ, ಯುವ ನಿರ್ದೇಶಕ ಸಂತೋಷ್ ಆನಂದರಾಮ್, ನಿರ್ದೇಶಕ ನರ್ತನ್, ಸಂಭಾಷಣೆಕಾರ ರಾಜ್ ಬಿ ಶೆಟ್ಟಿ, ಖ್ಯಾತ ಗೀತರಚನೆಗಾರ ವಿ ನಾಗೇಂದ್ರ ಪ್ರಸಾದ್ ಹಾಗೂ ನಟ ಮನ್‌ದೀಪ್ ರಾಯ್ ಸೇರಿದಂತೆ ಅನೇಕರಿಗೆ ಈ ಬಾರಿಯ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿಯನ್ನು ಕೊಡ ಮಾಡಿದ್ದಾರೆ.

ಸುಧೀಂದ್ರ ವೆಂಕಟೇಶ್ ಬಹು ಬೇಡಿಕೆಯ, ವಿಶ್ವಾಸಾರ್ಹ ಪಿಆರ್‌ಓ ಆಗಿ ಉಳಿದುಕೊಂಡಿರೋದು ಅವರ ಪ್ರಾಮಾಣಿಕವಾದ ಕಾರ್ಯವೈಖರಿಯ ಮೂಲಕ. ತಮ್ಮ ಜೊತೆಗೆ ಸಹೋದರರಾದ ಡಿ.ಎಸ್. ಸುನಿಲ್ ಮತ್ತು ಡಿ.ಜಿ. ವಾಸುದೇವ ಅವರನ್ನೂ ಇದೇ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ವೆಂಕಟೇಶ್ ಕೆಲಸದಲ್ಲಿ ಪಕ್ಕಾ ಮಿಲಿಟರಿ ಶಿಸ್ತು ರೂಢಿಸಿಕೊಂಡಿರುವವರು. ಸಿನಿಮಾಗಳ ಜೊತೆ ಜೊತೆಗೇ ತಾವೂ ಕೂಡಾ ಹೊಸತನದೊಂದಿಗೆ ಅಪ್‌ಡೇಟ್ ಆಗುತ್ತಾ, ಒಂದು ಸಿನಿಮಾವನ್ನು ಒಪ್ಪಿಕೊಂಡರೆ ಪ್ರಚಾರ ಕಾರ್ಯಕ್ಕಾಗಿ ಅಹೋಕಾಲವೂ ಶ್ರಮಿಸುತ್ತಾ ನಂಬಿಕೆಗೆ ಪಾತ್ರರಾಗಿದ್ದಾರೆ. ತಾವು ಮಾತ್ರ ಬೆಳೆಯುವುದಲ್ಲದೇ ಬೇರೆಯವರ ಬೆಳವಣಿಗೆಗೂ ಪ್ರೋತ್ಸಾಹಿಸುವ ಗುಣದಿಂದಲೇ ವೆಂಕಟೇಶ್‌ರನ್ನು ಸಿನಿಮಾ ಮಂದಿ ಆಪ್ತವಾಗಿ ಕಾಣುತ್ತಾರೆ. ಇನ್ನು ಪತ್ರಕರ್ತರ ವಿಚಾರಕ್ಕೆ ಬಂದರೆ, ಒಬ್ಬೊಬ್ಬರದ್ದೂ ಒಂದೊಂದು ಥರದ ಮನಸ್ಥಿತಿಯಿರುತ್ತದೆ. ಅವರೆಲ್ಲರನ್ನೂ ನಗುನಗುತ್ತಲೇ ಬ್ಯಾಲೆನ್ಸ್ ಮಾಡಿಕೊಂಡು, ಎಲ್ಲರೊಂದಿಗೂ ಸ್ನೇಹಯುತವಾಗಿ ಬೆರೆಯೋ ಗುಣ ವೆಂಕಟೇಶ್ ಮತ್ತು ಸಹೋದರರಿಗೆ ಸಿದ್ಧಿಸಿರುವ ವರ!

ವ್ಯವಹಾರದಾಚೆಗೆ ಸಿನಿಮಾ ಜಗತ್ತನ್ನು ಪ್ರೀತಿಸೋ ಮನಸ್ಥಿತಿಯ ಸುಧೀಂದ್ರ ವೆಂಕಟೇಶ್ ಮತ್ತು ಸಹೋದರರು ಇದೇ ರೀತಿಯಲ್ಲಿ ಸಿನಿಮಾ ಪ್ರಚಾರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಾ ಇನ್ನಷ್ಟು ಹೊಸತುಗಳ ರೂವಾರಿಗಳಾಗಲೆಂದು ಹಾರೈಸೋಣ.

ಫೋಟೋ ಕೃಪೆ : ಚಿತ್ರತಾರಾ-ಮನೋಹರ್, ಸಿನಿಸರ್ಕಲ್ -ಕೆ.ಎನ್.ನಾಗೇಶ್ ಕುಮಾರ್

Leave a Reply

Your email address will not be published. Required fields are marked *


CAPTCHA Image
Reload Image