One N Only Exclusive Cine Portal

ಪುಟ್ಟಗೌರಿ ರಂಜನಿ ಬಗ್ಗೆ ನಿಮಗೆಷ್ಟು ಗೊತ್ತು?

 

ರಂಜನಿ ಸೀರಿಯಲ್ ಜಗತ್ತಿಗೆ ಎಂಟ್ರಿ ಕೊಟ್ಟಿದ್ದೇ ಆಕಸ್ಮಿಕ ಸಂದರ್ಭವೊಂದರಲ್ಲಿ. ಶೇಷಾದ್ರಿಪುರಂ ಕಾಲೇಜಿನಲ್ಲಿ ಬಿಕಾಂ ಓದೋ ಸಮಯದಲ್ಲಿಯೇ ರಂಜನಿ ಒಂದೆರಡು ನಾಟಕಗಳಲ್ಲಿ ಅಭಿನಯಿಸಿದ್ದರಂತೆ. ಆದ ಕಾರಣ ಸ್ಟೇಜ್ ಅಂದರೆ ಅಂಥಾದ್ದೇನೂ ಭಯ ಇರಲಿಲ್ಲ. ಇದೇ ಸಂದರ್ಭದಲ್ಲಿ ಈ ಕಾಲೇಜಿನ ಸಮೀಪವೇ ಧಾರಾವಾಹಿ ಒಂದಕ್ಕಾಗಿ ಆಡಿಷನ್ ನಡೆಯುತ್ತಿತ್ತು. ರಂಜನಿ ಸಣ್ಣ ಕುತೂಹಲದೊಂದಿಗೆ ಅದರಲ್ಲಿ ಪಾಲ್ಗೊಂಡು ಸೆಲೆಕ್ಟ್ ಆಗಿ ಬಿಟ್ಟಿದ್ದರು. ಆದರೆ ಅದೇಕೋ ಆ ಧಾರಾವಾಹಿ ಪ್ರಾಜೆಕ್ಟು ಮುಂದುವರೆಯಲಿಲ್ಲ.

ಪುಟ್ಟಗೌರಿ ಮದುವೆ ಧಾರಾವಾಹಿಯ ಮೂಲಕ ಕರ್ನಾಟಕದ ಭೂಭಾಗಗಳ ತುಂಬಾ ಪುಟ್‌ಗೌರಿ ಎಂದೇ ಪ್ರಸಿದ್ಧಿ ಪಡೆದಿರುವಾಕೆ ರಂಜನಿ ರಾಘವನ್. ಧಾರಾವಾಹಿಯ ಪಾತ್ರಗಳನ್ನೂ ಮನೆಯ ಸದಸ್ಯರಂತೆಯೇ ಮನಸೊಳಗೆ ಬಿಟ್ಟುಕೊಂಡು ಆರಾಧಿಸೋ ಭಾವುಕ ಮನಸಿನ ಕನ್ನಡಿಗರನ್ನು ಮನೆಮಗಳಂತೆಯೇ ಆವರಿಸಿಕೊಂಡಿರೋ ರಂಜನಿ ಇದೀಗ ಚಿತ್ರರಂಗದಲ್ಲಿಯೂ ಬ್ಯುಸಿ ನಟಿ. ರಾಜಹಂಸ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿರೋ ಅವರ ಮುಂದೀಗ ಮೊದಲ ಚಿತ್ರ ನಿರೀಕ್ಷಿತ ಗೆಲುವು ಕಾಣದಿದ್ದರೂ ಅವಕಾಶಗಳು ಸಾಲುಗಟ್ಟಿ ನಿಂತಿವೆ.


ಕನ್ನಡದ ಬಗ್ಗೆ ತೀವ್ರ ಅಭಿಮಾನವಿರೋ ಅಪ್ಪಟ ಬೆಂಗಳೂರಿನ ಹುಡುಗಿ ರಂಜನಿ ಧಾರಾವಾಹಿಯೆಂಬೋ ಮಾಯಾಲೋಕಕ್ಕೆ ಅಡಿಯಿರಿಸಿದ್ದು ನಂತರ ಸ್ಟಾರ್ ನಟಿಯಾಗಿ ಕಿರುತೆರೆಯನ್ನು ಆವರಿಸಿಕೊಂಡಿದ್ದೆಲ್ಲ ಆಕಸ್ಮಿಕ. ಶಾಲಾ ಕಾಲೇಜು ದಿನಗಳಲ್ಲಿಯೇ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ರಂಜನಿಗೆ ಗಾಯಕಿಯಾಗಬೇಕೆಂಬ ಹಂಬಲವಿತ್ತೇ ಹೊರತು ನಟಿಯಾಗಿ ಮಿಂಚಬೇಕೆಂಬ ಸಣ್ಣ ಆಸೆಯೂ ಇರಲಿಲ್ಲವಂತೆ.


ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ವಾಸವಿರೋ ರಾಘವನ್ ಮತ್ತು ರೋಹಿಣಿ ದಂಪತಿಯ ಹಿರಿಮಗಳಾದ ರಂಜಿನಿಗೆ ಇಂಜಿನಿಯರಿಂಗ್ ಓದುತ್ತಿರೋ ತಂಗಿಯಿದ್ದಾಳೆ. ತಂದೆ ರಾಘವನ್ ಬಿಇಎಲ್ ನೌಕರ. ತಾಯಿ ರೋಹಿಣಿ ಗೃಹಿಣಿ. ಅದೊಂದು ಸಾಹಿತ್ಯ, ಸಂಗೀತಗಳೆಡೆಗೆ ಅತೀವ ಅಭಿಮಾನ ಹೊಂದಿರೋ ಚೆಂದದ ಸಣ್ಣ ಕುಟುಂಬ. ಬಣ್ಣದ ಜಗತ್ತೆಂಬುದು ಅಪರಿಚಿತವಾದ ಈ ಸಂಸಾರಕ್ಕೆ ಚಲನಚಿತ್ರಗಳ ದರ್ಶನವಾಗುತ್ತಿದ್ದದ್ದೂ ಅಪರೂಪವೇ. ಆದರೆ ಮಗಳ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮಾತ್ರ ಸದಾ ಉತ್ತೇಜನ ಇದ್ದೇ ಇತ್ತು.


ಇಂಥಾ ಹಿನ್ನೆಲೆಯ ರಂಜನಿ ಸೀರಿಯಲ್ ಜಗತ್ತಿಗೆ ಎಂಟ್ರಿ ಕೊಟ್ಟಿದ್ದೇ ಆಕಸ್ಮಿಕ ಸಂದರ್ಭವೊಂದರಲ್ಲಿ. ಶೇಷಾದ್ರಿಪುರಂ ಕಾಲೇಜಿನಲ್ಲಿ ಬಿಕಾಂ ಓದೋ ಸಮಯದಲ್ಲಿಯೇ ರಂಜನಿ ಒಂದೆರಡು ನಾಟಕಗಳಲ್ಲಿ ಅಭಿನಯಿಸಿದ್ದರಂತೆ. ಆದ ಕಾರಣ ಸ್ಟೇಜ್ ಅಂದರೆ ಅಂಥಾದ್ದೇನೂ ಭಯ ಇರಲಿಲ್ಲ. ಇದೇ ಸಂದರ್ಭದಲ್ಲಿ ಈ ಕಾಲೇಜಿನ ಸಮೀಪವೇ ಧಾರಾವಾಹಿ ಒಂದಕ್ಕಾಗಿ ಆಡಿಷನ್ ನಡೆಯುತ್ತಿತ್ತು. ರಂಜನಿ ಸಣ್ಣ ಕುತೂಹಲದೊಂದಿಗೆ ಅದರಲ್ಲಿ ಪಾಲ್ಗೊಂಡು ಸೆಲೆಕ್ಟ್ ಆಗಿ ಬಿಟ್ಟಿದ್ದರು. ಆದರೆ ಅದೇಕೋ ಆ ಧಾರಾವಾಹಿ ಪ್ರಾಜೆಕ್ಟು ಮುಂದುವರೆಯಲಿಲ್ಲ.


ಅದಾದ ಬೆನ್ನಿಗೇ ಪುಟ್‌ಗೌರಿ ಸೀರಿಯಲ್ಲಿಗೆ ಸೀನಿಯರ್ ಪುಟ್‌ಗೌರಿ ಪಾತ್ರಕ್ಕಾಗಿ ಆಡಿಷನ್ ನಡೆಯುತ್ತಿರೋ ವಿಚಾರ ಗೊತ್ತಾದೇಟಿಗೆ ಅದರಲ್ಲಿಯೂ ರಂಜಿನಿ ಪಾಲ್ಗೊಂಡಿದ್ದರು. ನಟಿಸಿ ತೋರಿಸಿದ ಆಕೆ ಸೆಲೆಕ್ಟ್ ಆಗಿ ಪುಟ್‌ಗೌರಿ ಸೀರಿಯಲ್‌ನಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದರು. ಆದರೆ ಈ ಜಗತ್ತಿನ ಪರಿಚಯವೇ ಇಲ್ಲದ ಮನೆ ಮಂದಿ ಮಾತ್ರ ಅತ್ತ ಖುಷಿ ಪಟ್ಟುಕೊಳ್ಳಲೂ ಆಗದ, ಇತ್ತ ಬೇಡವೆನ್ನಲೂ ಆಗದ ಸ್ಥಿತಿಯಲ್ಲಿ ಒಪ್ಪಿಗೆ ಸೂಚಿಸಿದ್ದರಂತೆ. ಆ ನಂತರ ಲೇಟ್ ನೈಟ್ ಶೂಟಿಂಗ್ ಮುಗಿಸಿ ಮನೆಗೆ ಬರಲಾರಂಭಿಸಿದರಲ್ಲಾ ರಂಜನಿ? ಆವಾಗ ಅಪ್ಪ ಅಮ್ಮನ ಭಯ ಮತ್ತಷ್ಟು ಉಲ್ಬಣಿಸಿಕೊಂಡಿತ್ತಂತೆ. ಆದರೆ ಈ ಧಾರಾವಾಹಿ ರಂಜನಿಗೆ ತಂದುಕೊಟ್ಟ ಭರಪೂರ ಖ್ಯಾತಿ ಎಲ್ಲ ಭಯಗಳನ್ನೂ ಇಲ್ಲವಾಗಿಸಿದೆ.


ಹೀಗೆ ಆಕಸ್ಮಿಕವಾಗಿ ಕಿರುತೆರೆಗೆ ಎಂಟ್ರಿ ಕೊಟ್ಟು ಸ್ಟಾರ್ ನಟಿಯಾಗಿ ಹೊರ ಹೊಮ್ಮಿರೋ ರಂಜಿನಿಗೆ ಇಲ್ಲೇ ಮುಂದುವರೆಯೋ ಆಸೆಯೇನೂ ಇರಲಿಲ್ಲ. ಆದ್ದರಿಂದಲೇ ಎಂಬಿಎಗೆ ಸೇರಿಕೊಂಡಿದ್ದರು. ಯಾವುದಾದರೂ ಒಳ್ಳೆ ಕಂಪೆನಿಯಲ್ಲಿ ಹ್ಯೂಮನ್ ರಿಸೋರ್ಸ್ ವಿಭಾಗದಲ್ಲಿ ಒಂದಷ್ಟು ಕಾಲ ಕೆಲಸ ಮಾಡಿ ನಂತರ ಸ್ವಂತದ್ಯಾವುದಾದರೂ ಬ್ಯುಸಿನೆಸ್ ಶುರು ಮಾಡೋ ಪ್ಲಾನು ಮಾಡಿಕೊಂಡಿದ್ದರಂತೆ. ಆದರೆ ಬರ ಬರುತ್ತಾ ನಟನೆ ಎಂಬುದು ಮನಸ್ಸಿನ ತುಂಬಾ ಆವರಿಸಿಕೊಂಡು ಇಲ್ಲೇ ಮುಂದುವರೆಯೋ ನಿರ್ಧಾರ ಮಾಡಿರೋ ರಂಜನಿಗೆ ಅವಕಾಶಗಳ ಸುರಿಮಳೆಯಾಗುತ್ತಿದೆ.


ಇದೀಗ ಶಿವು ಜಮಖಂಡಿ ನಿರ್ದೇಶನದ ಚಿತ್ರವೊಂದನ್ನು ರಂಜನಿ ಒಪ್ಪಿಕೊಂಡಿದ್ದಾರೆ. ನಟನೆಗೆ ಅವಕಾಶವಿರೋ ಚೆಂದದ ಪಾತ್ರಕ್ಕೆ ಅವರು ಮನಸೋತಿದ್ದಾರೆ. ಇನ್ನೊಂದು ಚಿತ್ರದ ಮಾತುಕತೆಯೂ ಜಾರಿಯಲ್ಲಿದೆಯಂತೆ. ಅಂದಹಾಗೆ ಮೂರರಲ್ಲಿ ಮತ್ತೊಂದನೆಯವರಾಗಿ ಚಿತ್ರರಂಗದಲ್ಲಿ ಕಳೆದು ಹೋಗಲೊಲ್ಲದ ರಂಜನಿ ಪ್ರತೀ ಅವಕಾಶ ಬಂದಾಗಲೂ ಕಥೆಗೆ ಹೆಚ್ಚು ಒತ್ತು ಕೊಡುತ್ತಾರಂತೆ. ಅದು ಕೊಂಚ ಏರುಪೇರಾದಂತೆ ಕಂಡು ಬಂದರೂ ರಂಜನಿ ಸುತಾರಾಂ ಒಪ್ಪಿಕೊಳ್ಳೋದಿಲ್ಲ. ಇದೇ ರೀತಿ ಈವರೆಗೆ ಅವರು ಕಡಿಮೆ ಎಂದರೂ ಎಂಟು ಚಿತ್ರಗಳನ್ನು ರಿಜೆಕ್ಟ್ ಮಾಡಿದ್ದಾರೆ!


ಸಾಮಾನ್ಯವಾಗಿ ಒಂದಷ್ಟು ಕಂತುಗಳಾದ ನಂತರ ಸೀರಿಯಲ್ಲುಗಳು ಪ್ರೇಕ್ಷಕರಿಗಿರಲಿ ನಟ ನಟಿಯರಿಗೇ ಬೋರು ಹೊಡೆಸುತ್ತವೆ. ಆದರೆ ಪ್ರತೀ ದಿನವೂ ಕುತೂಹಲ ಉಳಿಯುವಂತೆ ಮುಂದುವರೆಯುತ್ತಿರೋದು ಪುಟ್‌ಗೌರಿ ಮದುವೆ ಸೀರಿಯಲ್ಲಿನ ಸ್ಪೆಷಾಲಿಟಿ. ಇದರಲ್ಲಿ ರಂಜನಿ ಅವರ ಪುಟ್‌ಗೌರಿ ಪಾತ್ರವಂತೂ ವಾರ ವಾರವೂ ಟ್ವಿಸ್ಟ್‌ಗಳ ಮೂಲಕ ಗಮನ ಸೆಳೆಯುತ್ತಿದೆ. ಇಂಥಾ ಹೊಸತನಗಳ ಮೂಲಕವೇ ಈ ಧಾರಾವಾಹಿ ತಂಡ ತಮ್ಮನ್ನು ಬೋರು ಹೊಡೆಸದಂತೆ ನೋಡಿಕೊಳ್ಳುತ್ತಿದೆ ಎಂಬುದು ರಂಜನಿಯ ಖುಷಿ. ಅದೆಷ್ಟು ಧಾರಾವಾಹಿಗಳಲ್ಲಿ ನಟಿಸಿದರೂ ಸಿಗದಂಥಾ ಜನಪ್ರಿಯತೆ ಕೊಟ್ಟಿರೋ ಪುಟ್‌ಗೌರಿ ಮದುವೆ ಧಾರಾವಾಹಿ ಬಿಟ್ಟರೆ ಬೇರೆ ಯಾವುದನ್ನೂ ಒಪ್ಪಿಕೊಳ್ಳದ ರಂಜನಿ ಅದರ ಜೊತೆಗೇ ಚಿತ್ರರಂಗದಲ್ಲಿಯೂ ಸಕ್ರಿಯರಾಗೋ ಕನಸು ಹೊಂದಿದ್ದಾರೆ.


ಇನ್ನು ರಂಜನಿಯ ಕನ್ನಡ ಇಷ್ಟೊಂದು ಸ್ಪಷ್ಟವಾಗಿದೆಯಲ್ಲಾ? ಅದು ಹೇಗೆ ಅಂದರೆ, ರಂಜನಿ ಪುಟ್ ಹುಡುಗಿಯಾಗಿದ್ದಾಗ ಈಕೆಯ ಅಪ್ಪ ಪೂರ್ಣಚಂದ್ರ ತೇಜಸ್ವಿಯವರ ಕಥೆ ಪುಸ್ತಕಗಳನ್ನು ತಂದುಕೊಡುತ್ತಿದ್ದರಂತೆ. ಹಾಗೆಯೇ ಕನ್ನಡದ ಅನೇಕ ಸಾಹಿತಿ, ಬರಹಗಾರರ ಕೃತಿಗಳನ್ನು ಓದುತ್ತಾ ಬೆಳೆದದ್ದರಿಂದ ರಂಜನಿ ಇಷ್ಟು ಚೆಂದದ ಕನ್ನಡ ಉಚ್ಚರಿಸಲು ಸಾಧ್ಯವಾಗಿದೆ. ಯಾವುದೇ ಸಾಹಿತ್ಯದ ಓದು ಇಲ್ಲದೆ, ಹೊಸತನ್ನು ಸೃಷ್ಟಿಸುವುದಾಗಲಿ, ಕ್ರಿಯಾಶೀಲವಾಗಿ ಬದುಕುವುದಾಗಲಿ ಸಾಧ್ಯವಿಲ್ಲ ಅನ್ನೋ ರಂಜನಿ ನಿಜಕ್ಕೂ ಈ ಕಾಲದ ಹೆಣ್ಣುಮಕ್ಕಳ ಪಾಲಿಗೆ ಆದರ್ಶವಾಗಬಲ್ಲರು.

ಸದ್ಯ ಸೀರಿಯಲ್ ಪ್ರೇಕ್ಷಕರ ಮನೆ ಮಗಳಾಗಿ ಗುರುತಿಸಿಕೊಂಡಿರೋ ಪುಟ್‌ಗೌರಿ ರಂಜನಿ ಸಿನಿ ಪ್ರೇಕ್ಷಕರನ್ನೂ ಸೆಳೆದುಕೊಳ್ಳೋ ಕಾಲ ದೂರವಿದ್ದಂತಿಲ್ಲ!

Leave a Reply

Your email address will not be published. Required fields are marked *


CAPTCHA Image
Reload Image