One N Only Exclusive Cine Portal

ರೈತ ನಾಯಕ ಪುಟ್ಟಣ್ಣಯ್ಯ ಅಂತಿಮ ದರ್ಶನ ಪಡೆದ ದರ್ಶನ್!

ರೈತ ನಾಯಕ ಪುಟ್ಟಣ್ಣಯ್ಯ ಹೃದಯಾಘಾತದಿಂದ ನಿಧನರಾಗಿದ್ದಾರೆ. ಚಿತ್ರರಂಗದ ಸಾಕಷ್ಟು ಮಂದಿ ಈ ಬಗ್ಗೆ ಸಂತಾಪ ಸೂಚಿಸಿದ್ದಾರೆ. ಆದರೆ ಪುಟ್ಟಣ್ಣಯ್ಯನವರು ನಿಧನರಾದ ವಿಚಾರ ತಿಳಿದಾಕ್ಷಣವೇ ರಾತ್ರೋ ರಾತ್ರಿ ಪುಟ್ಟಣ್ಣಯ್ಯನವರ ಊರಾದ ಕ್ಯಾತನಹಳ್ಳಿಗೆ ತೆರಳಿರುವ ದರ್ಶನ್ ಅಂತಿಮ ದರ್ಶನ ಪಡೆದು ದುಃಖತಪ್ತರಾಗಿದ್ದ ಕುಟುಂಬಸ್ತರಿಗೆ ಸಾಂತ್ವನ ಹೇಳಿದ್ದಾರೆ.


ಕಬಡ್ಡಿ ಪಂದ್ಯ ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಪುಟ್ಟಣ್ಣಯ್ಯ ಹೃದಯಾಘಾತದಿಂದ ಕುಸಿದು ಬಿದ್ದಿದ್ದರು. ತಕ್ಷಣವೇ ಅವರನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದರು. ರೈತ ನಾಯಕನ ಸಾವಿನ ಸುದ್ದಿ ತಿಳಿದ ದರ್ಶನ್ ಅವರು ಕೂಡಲೇ ಬೆಂಗಳೂರಿನಿಂದ ಕ್ಯಾತನಹಳ್ಳಿಗೆ ಹೊರಟು ರಾತ್ರಿ ಒಂದು ಘಂಟೆ ಹೊತ್ತಿಗೆ ತಲುಪಿದ್ದಾರೆ. ಬಳಿಕ ಸರತಿಯಲ್ಲಿ ನಿಂತು ಪುಟ್ಟಣ್ಣಯ್ಯನವರ ಅಂತಿಮ ದರ್ಶನ ಪಡೆದಿದ್ದಾರೆ. ಅವರ ಮಡದಿ ಮತ್ತು ಮಗನಿಗೆ ಸಾಂತ್ವನ ಹೇಳಿ ಕೆಲ ಕಾಲ ಅಲ್ಲಿದ್ದು ವಾಪಾಸಾಗಿದ್ದಾರೆ.
ಸಾಮಾನ್ಯವಾಗಿ ಚಿತ್ರರಂಗದ ಮಂದಿ ಬೇರೆ ವಲಯಗಳ ಸಾವಿಗೆ ಸ್ಪಂದಿಸೋದು ಕಡಿಮೆ. ಆದರೆ ರೈತಾಪಿ ಬದುಕಿನ ಹಿನ್ನೆಲೆ ಇರುವ, ರೈತಪರವಾದ ಹೋರಾಟದ ದಾವಾನಲದಂತಿರುವ ಮಂಡ್ಯ ಮೈಸೂರು ಪ್ರಾಂತ್ಯದವರೇ ಆದ ದರ್ಶನ್ ಈ ವಿಚಾರದಲ್ಲಿ ಮಾದರಿಯಾಗಿ ನಡೆದುಕೊಂಡಿದ್ದಾರೆ.


ಪುಟ್ಟಣ್ಣಯ್ಯನವರು ನಂಜುಂಡಸ್ವಾಮಿಯವರ ಆದರ್ಶಗಳನ್ನೇ ಮುಂದುವರೆಸಿಕೊಂಡು ಬಂದಿದ್ದ ಹಿರಿಯ ರೈತ ನಾಯಕ. ರೈತರ ಬದುಕು ತಲ್ಲಣಿಸಿದಾಗೆಲ್ಲ ಅವರ ಪರವಾಗಿ ಧ್ವನಿಯೆತ್ತಿ ನ್ಯಾಯ ಸಿಗುವಂತೆ ಮಾಡಿದ್ದವರು ಪುಟ್ಟಣ್ಣಯ್ಯ. ಅಧಿಕಾರ ಕೇಂದ್ರದ ಹತ್ತಿರ ಹೋದರೇನೇ ರೈತರ ಆಶೋತ್ತರಗಳಿಗೆ ಬಲ ಸಿಗುತ್ತದೆ ಎಂಬ ಕಾರಣದಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರು ರಾಜಕೀಯ ರಂಗಕ್ಕೂ ಪಾದಾರ್ಪಣೆ ಮಾಡಿದ್ದರು. ಹಾಗಂತ ಅಲ್ಲಿಯೂ ಆದರ್ಶಗಳನ್ನು ಬಿಟ್ಟು ಕೊಡುವ ಜಾಯಮಾನ ಅವರದ್ದಾಗಿರಲಿಲ್ಲ.
ಅದಾಗ ತಾನೇ ಜೀವ ಪಡೆದಿದ್ದ ಸರ್ವೋದಯ ಪಕ್ಷದಿಂದ ಕಣಕ್ಕಿಳಿದಿದ್ದ ಪುಟ್ಟಣ್ಣಯ್ಯ ಮೇಲುಕೋಟೆ ಕ್ಷೇತ್ರದಿಂದ ಅನಾಯಾಸವಾಗಿ ಗೆದ್ದು ಶಾಸಕರಾಗಿದ್ದರು. ಆ ನಂತರವೂ ರೈತರ ಆಶೋತ್ತರಕ್ಕಾಗಿಯೇ ಶಾಸಕತ್ವವನ್ನು ಮುಡಿಪಾಗಿಟ್ಟಿದ್ದ ಅವರು ಆದರ್ಶ ರಾಜಕಾರಣಿಯಾಗಿಯೂ ಕರ್ನಾಟಕದ ಇತಿಹಾಸದಲ್ಲಿ ದಾಖಲಾಗಿದ್ದಾರೆ!

Leave a Reply

Your email address will not be published. Required fields are marked *


CAPTCHA Image
Reload Image