ಅಯೋಗ್ಯ ಚಿತ್ರದ ಭರ್ಜರಿ ಗೆಲುವಿನ ನಂತರ ರಚಿತಾ ರಾಮ್ ಅದೃಷ್ಟ ಮೆಲ್ಲಗೆ ಖುಲಾಯಿಸಿಕೊಳ್ಳುತ್ತಿದೆ. ಈಕೆ ನಟಿಸಿದ ಚಿತ್ರಗಳೂ ಸಕ್ಸಸ್ ಕಾಣುತ್ತವೆಂಬ ನಂಬಿಕೆಯೂ ಟಿಸಿಲೊಡೆಯುತ್ತಿದೆ. ಆರಂಭದಲ್ಲಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಟಿಸೋ ಅದೃಷ್ಟ ಗಿಟ್ಟಿಸಿಕೊಂಡು ಅಚ್ಚರಿ ಹುಟ್ಟಿಸಿದ್ದ ರಚಿತಾ ಇದೀಗ ಮೊದಲ ಸಲ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ನಾಯಕಿಯಾಗಿ ನಟಿಸಲಿರೋ ಸುದ್ದಿಯೊಂದು ಹೊರ ಬಿದ್ದಿದೆ!

ಇದೀಗ ಶಿವರಾಜ್ ಕುಮಾರ್ ರುಸ್ತುಂ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ವಿವೇಕ್ ಓಬೇರಾಯ್ ನಟಿಸುತ್ತಿರೋ ವಿಚಾರ ಗೊತ್ತೇ ಇದೆ. ಇಲ್ಲಿ ವಿವೇಕ್ ಒಬೇರಾಯ್‌ಗೆ ಜೋಡಿಯಾಗಿ ರಚಿತಾ ರಾಮ್ ಕೂಡಾ ನಟಿಸಿದ್ದಾರೆ. ಅದಾಗಲೇ ಅವರು ಶಿವಣ್ಣನ ಮುಂದಿನ ಚಿತ್ರಕ್ಕೆ ನಾಯಕಿಯಾಗಿಯೂ ಆಯ್ಕೆಯಾಗಿದ್ದಾರೆ.

ಅಂದಹಾಗೆ ಇದು ದ್ವಾರಕೀಶ್ ಚಿತ್ರ ಬ್ಯಾನರಿನಡಿ ನಿರ್ಮಾಣಗೊಳ್ಳಲಿರೋ ಚಿತ್ರ. ಇದರ ಟೈಟಲ್ಲು ಇನ್ನೂ ಪಕ್ಕಾ ಆಗಿಲ್ಲ. ಆದರೆ ಈ ಚಿತ್ರವನ್ನು ಖ್ಯಾತ ನಿರ್ದೇಶಕ ಪಿ ವಾಸು ನಿರ್ದೇಶನ ಮಾಡಲಿದ್ದಾರೆಂಬ ಖಚಿತ ಸುದ್ದಿ ಹೊರ ಬಿದ್ದಿದೆ. ಈ ಹಿಂದೆ ಶಿವಲಿಂಗ ಚಿತ್ರದ ಮೂಲಕ ವಾಸು ಮತ್ತು ಶಿವಣ್ಣ ಒಂದಾಗಿದ್ದರು. ಆ ಚಿತ್ರ ಸೂಪರ್ ಹಿಟ್ ಕೂಡಾ ಆಗಿತ್ತು. ಈ ಯಶಸ್ವಿ ಜೋಡಿ ಎರಡನೇ ಬಾರಿ ಒಂದಾಗುತ್ತಿರೋ ಚಿತ್ರಕ್ಕೆ ರಚಿತಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಇದು ರಚಿತಾ ರಾಮ್ ಶಿವಣ್ಣನಿಗೆ ನಾಯಕಿಯಾಗಿ ನಟಿಸುತ್ತಿರೋ ಮೊದಲನೇ ಚಿತ್ರ. ಈಗ ಸ್ಕ್ರಿಪ್ಟ್ ಮುಂತಾದ ಕೆಲಸ ಕಾರ್ಯ ನಡೆಯುತ್ತಿದೆ. ಶಿವರಾಜ್‌ಕುಮಾರ್ ಒಂದರ ಹಿಂದೊಂದರಂತೆ ಚಿತ್ರಗಳಲ್ಲಿ ಬ್ಯುಸಿ ಇರೋದರಿಂದ ಈ ಚಿತ್ರ ಮುಂದಿನ ವರ್ಷದ ಆರಂಭದಲ್ಲಿಯೇ ಸೆಟ್ಟೇರಲಿದೆ. #

LEAVE A REPLY

Please enter your comment!
Please enter your name here

twelve + 10 =