One N Only Exclusive Cine Portal

ಬಣ್ಣ ಬದಲಿಸದ ರಾಜ್!

ಡಾ. ರಾಜ್‌ಕುಮಾರ್ ಎಂಬ ಮಾಯೆ ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. ಆದುದರಿಂದಲೇ `ಅವರು ನೆನಪಾಗಿದ್ದಾರೆ ಎಂಬ ಮಾತೇ ಮೂರ್ಖತನದ್ದೆನಿಸುತ್ತದೆ. ಯಾಕೆಂದರೆ ಅವರು ಅದ್ಯಾವತ್ತು ಮರೆತು ಹೋಗಿದ್ದರು. ಈಗ ಎದುರಾಗಿರುವ ಹನ್ನೊಂದನೇ ವರ್ಷದ ಪುಣ್ಯಸ್ಮರಣೆಯಂಥಾ ನೆಪಗಳು ಆ ನೆನಪುಗಳನ್ನು ಮತ್ತಷ್ಟು ತೀವ್ರವಾಗಿಸಬಹುದಷ್ಟೇ!

ದೊಡ್ಡ ಗಾಜನೂರೆಂಬ ಕುಗ್ರಾಮದ ಸಿಂಗಾನೆಲ್ಲೂರು ಪುಟ್ಟಸ್ವಾಮಯ್ಯನವರ ಮಗನಾದ ಮುತ್ತುರಾಜ್ ಯಾವುದೇ ಗಾಡ್ ಫಾದರ್‌ಗಳಿಲ್ಲದೆ, ರಂಗಭೂಮಿಯಿಂದ ಕನ್ನಡ ಚಿತ್ರರಂಗಕ್ಕೆ ಬಂದು ತಾನೂ ಬೆಳೆದು, ಚಿತ್ರರಂಗವನ್ನೂ ಬೆಳೆಸಿದ ಕಥೆ ಕನ್ನಡ ಸಿನಿಮಾಗಳಷ್ಟೇ ರೋಚಕವಾದದ್ದು ಮತ್ತು ರೋಮಾಂಚನಕಾರಿಯಾದದ್ದು.


ಅತ್ಯಂತ ಹಿಂದುಳಿದ ಗ್ರಾಮೀಣ ಪ್ರದೇಶದಿಂದ, ಬಡ ರೈತಾಪಿ ಕುಟುಂಬದ ಹಿನ್ನೆಲೆಯಿಂದ ಬಂದ ಸಾಮಾನ್ಯ ಮುತ್ತುರಾಜ್ ನಾಲ್ಕು ಕೋಟಿ ಕನ್ನಡಿಗರ ಕಣ್ಮಣಿಯಾದದ್ದು ವರ್ತಮಾನದ ಚಿತ್ರರಂಗದ ಇತಿಹಾಸದಲ್ಲಂತೂ ಅಪರೂಪ. ಭಾರತದಂತಹ ಶ್ರೇಣೀಕೃತ ಸಮಾಜದಲ್ಲಿ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಕೆಳಸ್ಥರದಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಪ್ರತಿಭೆ ಹಾಗೂ ಕಠಿಣ ಶ್ರಮಗಳಿಂದ ಮೇಲೇರುವುದು ಕೇವಲ ಸಾಂಸ್ಕೃತಿಕ ವಿದ್ಯಮಾನ ಮಾತ್ರವಲ್ಲದೆ ಸಾಮಾಜಿಕ ವಿದ್ಯಮಾನವೂ ಆಗಿದೆ. ಆದ್ದರಿಂದಲೇ ಕೆಲವರು ರಾಜ್‌ಕುಮಾರರನ್ನು ಮೇರು ನಟ ಎಂದು ಮಾತ್ರವಲ್ಲದೆ ಸಾಂಸ್ಕೃತಿಕ ನಾಯಕನೆಂದೂ, ಪ್ರಜಾ ಪ್ರತಿಭೆಯೆಂದೂ ಬಣ್ಣಿಸುತ್ತಾರೆ. ಈ ಕಾರಣಗಳಿಂದಾಗಿಯೇ ರಾಜ್‌ರ ಬದುಕಿನಲ್ಲೂ, ಸಾವಿನಲ್ಲೂ ಅದೇ ಹಿನ್ನೆಲೆಯ ಕೋಟಿ ಕೋಟಿ ಸಾಮಾನ್ಯ ಜನ ತಮ್ಮ ಬದುಕನ್ನೂ, ಕನಸನ್ನೂ ಅವರಲ್ಲಿ ಕಂಡುಕೊಳ್ಳುತ್ತಾರೆ.


ಅಂದರೆ ಬೆವರಿನ ಸಂಸ್ಕೃತಿಯಿಂದ ಬಂದು ಬೆವರನ್ನು ಹಂಗಿಸುವ ಬಂಗಾರವಾಗಿದ್ದಕ್ಕಾಗಿ ಅಲ್ಲ. ಬದಲಿಗೆ ಬೆವರಿನ ಸಂಸ್ಕೃತಿಯಲ್ಲೇ ಹುಟ್ಟಿ, ಬೆವರಿನಲ್ಲೇ ಬದುಕಿ, ಬಂಗಾರವಾಗಿ ರೂಪಾಂತರಗೊಳ್ಳದೇ, ಬೆವರಿನ ಸಂಸ್ಕೃತಿಗೆ ಬೆಲೆ ತಂದುಕೊಟ್ಟಿದ್ದಕ್ಕಾಗಿ ಅವರೆಲ್ಲರೂ ನಿಜವಾದ ಪ್ರಜಾನಾಯಕರಾಗಿದ್ದರು.
ಡಾ. ರಾಜ್ ವ್ಯಕ್ತಿತ್ವವನ್ನು ವಿಶ್ಲೇಷಿಸುತ್ತಾ ಹೋದರೆ ಅವರ ಜನಪ್ರಿಯತೆಗೆ ಕಾರಣಗಳು ಸಿಗುತ್ತಾ ಹೋಗುತ್ತವೆ. ಐದು ದಶಕಗಳ ಕಾಲಾವಧಿಯಲ್ಲಿ ಆಯ್ಕೆ ಮಾಡಿದ ಪಾತ್ರಗಳು ಆರಂಭದಲ್ಲಿ ಅವರಿಗೆ ದೊಡ್ಡ ಇಮೇಜ್, ತಾರಾಮೌಲ್ಯವನ್ನು ತಂದು ಕೊಟ್ಟಿದ್ದವು. ರಾಜ್ ತರಹ ಎಲ್ಲಾ ರೀತಿಯ ಪಾತ್ರಗಳನ್ನು ನಿಭಾಯಿಸಿದ ಮತ್ತೊಬ್ಬ ನಟ ನಮಗೆ ಕರ್ನಾಟಕದಲ್ಲಿ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲೇ ಸಿಗುವುದಿಲ್ಲ.


ಭಕ್ತಿಪ್ರಧಾನ ಚಿತ್ರಗಳಲ್ಲಿ ಗೆದ್ದ ರಾಜ್ ಜೇಮ್ಸ್ ಬಾಂಡ್ ಚಿತ್ರಗಳಲ್ಲೂ ಸೈ ಎನಿಸಿಕೊಂಡರು. ಪೌರಾಣಿಕ, ಐತಿಹಾಸಿಕ ಚಿತ್ರಗಳಲ್ಲಿ ಮೆರೆದರು. ಕಾದಂಬರಿ ಆಧಾರಿತ ಚಿತ್ರಗಳಲ್ಲಿ ಮಧ್ಯಮ ವರ್ಗದ ಜನರ ಮನಸ್ಸು ಗೆದ್ದರು. ಜೇಮ್ಸ್ ಬಾಂಡ್ ಚಿತ್ರಗಳಿಂದ ಸಾಹಸ ಪ್ರಿಯರ ಮನಸ್ಸು ಗೆದ್ದರು. ಕಾಮಿಡಿ ಚಿತ್ರಗಳಲ್ಲಿ ಜನರನ್ನು ರಂಜಿಸಿದರೆ, ಹಾಡುವ ಮೂಲಕ ಇನ್ನಷ್ಟು ಅಭಿಮಾನಿಗಳನ್ನು ಪಡೆದರು. ಕಲಾತ್ಮಕತೆಯೇ ಮೈವೆತ್ತ ರಾಜ್ ಮಾಡದ ಪಾತ್ರಗಳೇ ಇಲ್ಲ ಎನ್ನಬಹುದು.
ಈ ವೈವಿಧ್ಯಮಯ ಪಾತ್ರಗಳಿಂದ ಬೇರೆಬೇರೆ ವಯೋಮಾನದ ಅಭಿಮಾನಿಗಳನ್ನು ಪಡೆಯುತ್ತಾ ಹೋದರು. ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಧಕೆಕ ಬಂದಾಗಲೆಲ್ಲಾ ಬೀದಿಗಿಳಿದು ಹೋರಾಟ ಮಾಡಿದ್ದರಿಂದ ರಾಜ್ ಕುಮಾರ್ ಒಂದು ರೀತಿಯಲ್ಲಿ ನಮ್ಮ ಕನ್ನಡ ಸಂಸ್ಕೃತಿಯ ರಾಯಭಾರಿಯಾಂತೆ ಕಂಡರು. ಕನ್ನಡಿಗರ ಕನ್ನಡ ಪ್ರೇಮವನ್ನು ಜಾಗೃತಗೊಳಿಸಿದ ರಾಜ್, ಕನ್ನಡ ಭಾಷೆಯ ಆಪತ್ಬಾಂಧವನ ತರಹವೂ ಕಂಡರು.


ಸಾಮಾನ್ಯವಾಗಿ ಚಲನಚಿತ್ರರಂಗದ ಹೀರೋಗಳೆಂದರೆ ಶ್ರೀಮಂತಿಕೆ ಮತ್ತು ವೈಭವ ಜೀವನದ ಪ್ರತೀಕದಂತೆ ಕಂಡರೆ, ಡಾ. ರಾಜ್ ೨೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರೂ ಅವರು ಸದಾ ಜನಸಾಮಾನ್ಯರಲ್ಲಿ ಜನ ಸಾಮಾನ್ಯರಂತೆ ಕಂಡುಬಂದರು. ಒಂದು ಬಿಳಿ ಪಂಚೆ, ಬಿಳಿ ಶರ್ಟ್ ಬಿಟ್ಟು ಬೇರೆ ಉಡುಪು ಧರಿಸಿ ಸಾರ್ವಜನಿಕವಾಗಿ ಅವರು ಕಾಣಿಸಿಕೊಂಡಿದ್ದೇ ಅಪರೂಪ. ಹಾಗೆ ನೋಡಿದರೆ ರಾಜ್ ಹೊರತಾಗಿ ಬೇರೆ ಯಾವ ನಟನೂ ಇಂತಹ ಸಾಮಾನ್ಯ ಉಡುಪಿನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದೇ ಇಲ್ಲ.


ಡಾ. ರಾಜ್ ಹಾಡಿದ ಭಕ್ತಿಗೀತೆಗಳು ಇನ್ನೊಂದು ರೀತಿಯಲ್ಲಿ ಅವರನ್ನು `ದೇವತಾ ಮನುಷ್ಯನನ್ನಾಗಿಸಿದವು. ರಾಜ್ ಕಂಠಸಿರಿಯಲ್ಲಿ ಭಕ್ತಿ ಗೀತೆಗಳನ್ನು ಕೇಳಿದ ಎಂಥವರೂ ಸಹ ಅವರ ಅಭಿಮಾನಿಯಾಗದೇ ಇರಲು ಸಾಧ್ಯವೇ ಇಲ್ಲ. ಅವರ ಕಂಠಕ್ಕೆ ಅಂತಹ ಒಂದು ಅದ್ಭುತವಾದ ಶಕ್ತಿಯಿತ್ತು. ಬರೀ ಬೆಳ್ಳಿತೆರೆಯ ಪಾತ್ರಗಳಿಂದ ಮಾತ್ರವಲ್ಲ ತನ್ನ ನಡೆ, ನುಡಿ, ನಯ, ವಿನಯ ಮಾತುಗಳಿಂದ ಕೂಡಾ ರಾಜ್ ಕನ್ನಡಿಗರ ಮನಸ್ಸನ್ನು ಗೆದ್ದರು. ತಮ್ಮ ಭಕ್ತಿ ಗೀತೆಗಳ ಮೂಲಕ ಸಿನಿಮಾ ನೋಡದ ಮಡಿವಂತ ವರ್ಗದ ಜನರನ್ನು ಕೂಡಾ ಸಂಪಾದಿಸಿದರು. ಇದೆಲ್ಲಕಿಂತ ಮುಖ್ಯವಾಗಿ ನಮ್ಮ ನೆರೆಯ ರಾಜ್ಯದ ನಟ-ನಟಿಯರೆಲ್ಲಾ ರಾಜಕೀಯಕ್ಕೆ ಧುಮುಕಿದರೂ, ರಾಜ್ ಮಾತ್ರ ಕಲಾ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದು ಎಲ್ಲರೂ ಮೆಚ್ಚಿದ ಮತ್ತೊಂದು ಗುಣ.
ಹೀಗೆ ರಾಜ್ ತಮ್ಮ ಹತ್ತು ಹಲವು ಗುಣಗಳಿಂದ ಎಲ್ಲರನ್ನು ಗೆದ್ದವರೇ ವಿನಃ ಅವರನ್ನು ದೂಷಿಸಲು ಒಂದೇ ಒಂದು ವಿಷಯವೂ ಸಿಗುವುದಿಲ್ಲ. ನಮ್ಮ ಸಮಾಜದಲ್ಲಿ ದಿನಕ್ಕೊಂದು ಬಣ್ಣ ಬದಲಾಯಿಸುತ್ತಿರುವ ಜನಗಳೇ ತುಂಬಿ ಹೋಗಿರುವ ಬಣ್ಣದ ಲೋಕದಲ್ಲೇ ಇದ್ದು ಒಮ್ಮೆಯೂ ಬಣ್ಣ ಬದಲಾಯಿಸದ ರಾಜಣ್ಣ ಜನಮಾನಸದಲ್ಲಿ ಈ ಪರಿ ನೆಲೆಗೊಂಡಿದ್ದಾರೆ…

Leave a Reply

Your email address will not be published. Required fields are marked *


CAPTCHA Image
Reload Image