One N Only Exclusive Cine Portal

ರಾಜು ಕನ್ನಡ ಮೀಡಿಯಂ : ಬೆರಗಾಗಿಸುವ ಬದುಕಿನ ಹುಡುಕಾಟ!

ಫಸ್ಟ್ ರ್‍ಯಾಂಕ್ ರಾಜು ಎಂಬ ಯಶಸ್ವೀ ಸಿನಿಮಾವನ್ನು ಕೊಟ್ಟಿದ್ದ ನರೇಶ್, ಗುರುನಂದನ್ ಮತ್ತವರ ತಂಡ, ಶಿವಲಿಂಗ, ಶ್ರಾವಣಿ ಸುಬ್ರಮಣ್ಯ, ಗೋವಿಂದಾಯ ನಮಃದಂಥ ಹಿಟ್ ಚಿತ್ರಗಳನ್ನು ನೀಡಿ ಗೆಲುವಿನ ಸರದಾರ ಎನಿಸಿಕೊಂಡಿದ್ದ ಕೆ.ಎ. ಸುರೇಶ್ ನಿರ್ಮಾಣ ಮತ್ತು ಎಲ್ಲದಕ್ಕಿಂತ ಮುಖ್ಯವಾಗಿ ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ನಟಿಸಿರೋ ಕಾರಣಕ್ಕೆ ಸಾಕಷ್ಟು ಕತೂಹಲ ಸೃಷ್ಟಿಸಿದ್ದ ಸಿನಿಮಾ ರಾಜು ಕನ್ನಡ ಮೀಡಿಯಂ. ಈ ಎಲ್ಲ ಶಕ್ತಿಗಳು ಒಂದಾಗಿ ಶಕ್ತಿಯುತವಾದ ಸಿನಿಮಾ ನೀಡಿರುವುದರಿಂದ ಈ ಬಾರಿ ಕೂಡಾ ಗೆಲುವು ಕೈಗೆಟುಕುವ ಸೂಚನೆ ಕಾಣುತ್ತಿದೆ.


ಚಿತ್ರದ ಪ್ರಚಾರಕ್ಕಷ್ಟೇ `ಕನ್ನಡ’ವನ್ನು ಬಳಸಿಕೊಳ್ಳುವವರ ನಡುವೆ ನಿಜಕ್ಕೂ ಕನ್ನಡ ಭಾಷೆಯ ಮೇಲೆ ಹೃದಯಾಂತರಾಳದ ಅಭಿಮಾನವಿಟ್ಟಿರೋದು ಈ ಚಿತ್ರದ ಬಗ್ಗೆ ಮೆಚ್ಚಲೇ ಬೇಕಾದ ಅಂಶ. ನರೇಶ್ ನಿರ್ದೇಶನದ ಮೊದಲ ಸಿನಿಮಾದಲ್ಲೂ ಬದುಕನ್ನು ಹುಡುಕುವ ಪ್ರಯತ್ನ ಮಾಡಿದ್ದರು. ಇಲ್ಲೂ ಸಹ ಅದು ಮುಂದುವರೆದಿದೆ. ಕನ್ನಡ ಮೀಡಿಯಂ ಶಾಲೆಯಲ್ಲಿ ಓದಿದ ಹುಡುಗ ರಾಜು. ಶಾಲೆಯಲ್ಲಿ ಓದುವಾಗಲೇ ರಾಜುವಿಗೂ ಮತ್ತೊಬ್ಬಳು ಹುಡುಗಿಗೂ ಆಕರ್ಷಣೆ ಹುಟ್ಟಿಕೊಂಡು, ಕೊಡೆಯೊಂದರ ಅಡಿಯಲ್ಲಿ ಪಯಣ ಶುರುವಾಗುತ್ತದೆ. ಜಿಟಿಜಿಟಿ ಮಳೆಯಲ್ಲೇ ಅದಿನ್ನೇನು ಮುಂದುವರೆಯಬೇಕು ಅನ್ನುವಷ್ಟರಲ್ಲಿ ಆ ಪ್ರೀತಿ ಕಳೆದುಹೋಗುತ್ತದೆ. ನಂತರ ಜೊತೆಗೆ ಓದಿದ ಸ್ನೇಹಿತರ ತಂಡ ಕೂಡಾ ತಂತಮ್ಮ ಬದುಕು ರೂಪಿಸಿಕೊಳ್ಳುವ ಕಾರಣಕ್ಕೆ ವಿಘಟನೆ ಹೊಂದುತ್ತದೆ. ಇನ್ನು ಸಂಬಂಧವೇ ಮುಖ್ಯ ಅಂತಾ ನಂಬುವ ಹೊತ್ತಿಗೆ ರಕ್ತ ಸಂಬಂಧಿಕರ ಬಣ್ಣ ಬಯಲಾಗುತ್ತದೆ. ಹೇಗೋ ಮಾಡಿ ಕೆಲಸ ಗಿಟ್ಟಿಸಿಕೊಳ್ಳುವ ರಾಜುಗೆ ಯಾರದ್ದೋ ಬದುಕಿನ ಮಹಲಿಗೆ ತಾನು ಇಟ್ಟಿಗೆಯಾಗಬಾರದು ಅನಿಸುತ್ತದೆ.

ಅಷ್ಟರಲ್ಲಿ ಮತ್ತೆ ಜೊತೆಯಾದ ಇನ್ನೊಂದು ಪ್ರೀತಿಯನ್ನು ದಕ್ಕಿಸಿಕೊಳ್ಳಲೇಬೇಕೆಂಬ ಹಠಕ್ಕೆ ಬೀಳುತ್ತಾನೆ. ಆ ಹೊತ್ತಿಗೇ ಕನ್ನಡ ಮೀಡಿಯಮ್ಮಿನಲ್ಲೇ ಓದಿ ತೀರಾ ದೊಡ್ಡ ಎತ್ತಕ್ಕೇರಿದ ಉದ್ಯಮಿ ಸುದೀಪ್ ಕಣ್ಣಿಗೆ ಬೀಳುತ್ತಾರೆ. ಉಸಿರುಗಟ್ಟಿಸಿಕೊಂಡು ಕೆಲಸ ಮಾಡಿದರಷ್ಟೇ ಗೆಲುವು ಸಾಧಿಸಲು ಸಾಧ್ಯ ಅನ್ನೋದು ಅವರಿಂದ ತಿಳಿಯುತ್ತದೆ. ತನ್ನ ಕಾಲಮೇಲೆ ನಿಲ್ಲುವ ಛಲಕ್ಕೆ ಬಿದ್ದು ತ್ರಿವಿಕ್ರಮನಂತೆ ಹೋರಾಟ ಆರಂಭಿಸುವ ರಾಜು ಸಂಪಾನೆಯನ್ನೇ ಪ್ರಧಾನ ಗುರಿಯಾಗಿಸಿಕೊಂಡು ಗೆಲ್ಲುತ್ತಾನೆ… ಅಷ್ಟೇ ಆಗಿಬಿಟ್ಟರೆ ಇದೊಂದು ಪರ್ಸನಾಲಿಟಿ ಡೆವಲಪ್ ಮೆಂಟ್ ಪುಸ್ತಕದಂತಾಗಿಬಿಡುತ್ತಿತ್ತೋ ಏನೋ? ಅಷ್ಟರಲ್ಲಿ ಯಾರೂ ಊಹಿಸದ ತಿರುವುಗಳನ್ನು ನೀಡಿ ಇಡೀ ಕಥೆಯನ್ನು ರೋಚಕಗೊಳಿಸುತ್ತಾ, ಕಾಡುವ ನಿರೂಪಣೆಯ ಮೂಲಕ ಹಿಡಿದಿಟ್ಟು ಕಡೇ ದೃಶ್ಯದ ತನಕ ಕುತೂಹಲ ಉಳಿಸಿರೋದು ನಿರ್ದೇಶಕ ನರೇಶ್ ಅವರ ಜಾಣತನ ಅನ್ನಬಹುದು.


ರಾಜು ಕನ್ನಡ ಮೀಡಿಯಂ ಸಿನಿಮಾ ಗಟ್ಟಿ ಎಳೆಯೊಂದಿಗೆ ಅತ್ಯದ್ಭುತ ಎನ್ನುವ ತಾಂತ್ರಿಕತೆಯಿಂದ ಗಮನ ಸೆಳೆಯುತ್ತದೆ. ಶೇಖರ್ ಚಂದ್ರ ಅವರ ಕ್ಯಾಮೆರಾ ಕೆಲಸ ಪ್ರತಿಯೊಂದು ದೃಶ್ಯವನ್ನೂ ಕಣ್ಣೆದುರು ತಂದು ನಿಲ್ಲಿಸುವಲ್ಲಿ ಫಲಪ್ರದವಾಗಿದೆ. ಗುರುನಂದನ್ ತಮ್ಮ ಅಮೋಘ ನಟನೆಯಿಂದ ಪ್ರತಿಯೊಬ್ಬರನ್ನೂ ಸೆಳೆಯುತ್ತಾರೆ. ಚಿತ್ರದ ನಾಯಕಿಯರಾಗಿ ಬರುವ ಆಶಿಕಾ ರಂಗನಾಥ್ ಅವರ ದೃಶ್ಯಗಳು ಕಡಿಮೆಯಿದ್ದರೂ ಆಕೆ ಉಳಿಸಿಹೋಗುವ ಫೀಲ್ ದೊಡ್ಡದು. ಆ ನಂತರ ಬರುವ ಆವಂತಿಕಾ ಶೆಟ್ಟಿಯ ನಟನೆ ನಿಜಕ್ಕೂ ಅಮೋಘ. ಮುಖಭಾವದಲ್ಲೇ ನಟನೆಯನ್ನು ಅಡಗಿಸಿಕೊಂಡಿರುವ ಆವಂತಿಕಾ ಪಾತ್ರದಲ್ಲಿ ಲೀನವಾದವಳಂತೆ ನಟನೆಯನ್ನು ಹೊರಹಾಕಿದ್ದಾಳೆ. ದ್ವಿತೀಯಾರ್ಧದಲ್ಲಿ ಬರುವ ಫಾರಿನ್ ಹುಡುಗಿ ಏಂಜಲಿನಾ ಕೂಡಾ ಪೂರಕವಾಗಿ ನಟಿಸಿದ್ದಾಳೆ. ಹಂತ ಹಂತವಾಗಿ ಬದುಕಿನ ಬಗ್ಗೆ ಫಿಲಾಸಫಿಯನ್ನು ಹೇಳುತ್ತಾ ಸಾಧನೆಗೆ ಬೆಳಕಾಗುವ ಮಾರ್ಗದರ್ಶಕನ ಪಾತ್ರ ಸುದೀಪ್ ಅವರಿಗೆ ಹೇಳಿ ಮಾಡಿಸಿದಂತಿದೆ.


ಸಿನಿಮಾದ ಕೊನೆಯ ಭಾಗದಲ್ಲಿ ಬರುವ ಅರ್ಧ ಗಂಟೆಯ ಐಲ್ಯಾಂಡ್ ಎಪಿಸೋಡು ದೀರ್ಘವೆನಿಸಿದರೂ ರಮ್ಯಮನೋಹರವಾದ ಹಿನ್ನೆಲೆ ಅದನ್ನೂ ಮರೆಸುತ್ತದೆ. ವಿಮಾನ ಮತ್ತು ಶಾರ್ಕ್ ಮೀನಿನ ದೃಶ್ಯಗಳು ನಿಜಕ್ಕೂ ಇದು ಗ್ರಾಫಿಕ್ಸಾ ಎನ್ನುವಷ್ಟು ನೈಜವಾಗಿ ಮೂಡಿಬಂದಿವೆ. ಅಂಡರ್ ವಾಟರ್‌ನಲ್ಲಿ ಚಿತ್ರೀಕರಿಸಿರುವ ದೃಶ್ಯಗಳ ಕಲ್ಪನೆಯ ವಿಚಾರ ಮತ್ತು ಅದನ್ನು ತೆರೆಮೇಲೆ ಮೂಡಿಸಿರುವ ಕೌಶಲ್ಯಗಳ ಕಾರಣಕ್ಕೆ ನಿರ್ದೇಶಕ ನರೇಶ್ ಮತ್ತು ಛಾಯಾಗ್ರಾಹಕ ಶೇಖರ್ ಚಂದ್ರ ಮತ್ತೆ ಮತ್ತೆ ಹೊಗಳಿಸಿಕೊಳ್ಳುವ ಅರ್ಹತೆಗೆ ಪಾತ್ರರಾಗಿದ್ದಾರೆ. ಪದೇ ಪದೇ ಗುನುಗುವಂಥಾ ಹಾಡುಗಳನ್ನು ಕೊಟ್ಟಿರೋ ಸಂಗೀತ ನಿರ್ದೇಶಕ ಕಿರಣ್ ರವೀಂದ್ರನಾಥ್ ಇಷ್ಟು ದಿನ ಅದೆಲ್ಲಿದ್ದರೋ. ರಾಜು ಕನ್ನಡ ಮೀಡಿಯಂನಲ್ಲಿ ಅತಿ ಹೆಚ್ಚು ಅಂಕ ಪಡೆದವರಲ್ಲಿ ಇವರೂ ಒಬ್ಬರಾಗಿದ್ದಾರೆ.

ಒಟ್ಟಾರೆ ಎಲ್ಲ ಬೇರೆ ಭಾಷೆಗಳ ಸಿನಿಮಾಗಳನ್ನು ಆರಾಧಿಸೋರಿಂದ ಹಿಡಿದು ಪ್ರತಿಯೊಬ್ಬ ಸಿನಿಮಾ ಪ್ರೇಮಿಯೂ ನೋಡಬೇಕಾದ ಅಪ್ಪಟ ಕನ್ನಡ ಸಿನಿಮಾ ರಾಜು ಕನ್ನಡ ಮೀಡಿಯಂ.

Leave a Reply

Your email address will not be published. Required fields are marked *


CAPTCHA Image
Reload Image