One N Only Exclusive Cine Portal

Rapid ರಶ್ಮಿ ಶೋ ಫುಲ್ ಫೇಮಸ್ಸು!

ಬಿಗ್ ಎಫ್‌ಎಂ ರೇಡಿಯೋ ಜಾಕಿ ರ್‍ಯಾಪಿಡ್ ರಶ್ಮಿ ಅಂದರೆ ಕಣ್ಣರಳಿಸೋ ಅಭಿಮಾನಿ ಪಡೆಯೇ ಸೃಷ್ಟಿಯಾಗಿದೆ. ಪಟ ಪಟನೆ ಮಾತಾಡುವ ಮೂಲಕವೇ ಭಾರೀ ಜನಪ್ರಿಯತೆ ಗಳಿಸಿಕೊಂಡಿರುವ, ಅಪಾರ ಅಭಿಮಾನಿಗಳನ್ನೂ ಹೊಂದಿರುವ ರಶ್ಮಿಯ ಬೋಲ್ಡ್ ಮಾತುಗಳಿಗೆ ಕ್ಲೀನ್ ಬೌಲ್ಡ್ ಆದವರ ಸಂಖ್ಯೆಯೇನೂ ಕಡಿಮೆ ಇಲ್ಲ. ಸಾಮಾನ್ಯವಾಗಿ ರೇಡಿಯೋ ಅಂದರೆ ಅಶರೀರವಾಣಿ ಎಂಬ ವಿಚಾರವನ್ನೂ ಮರೆ ಮಾಚುವಂತೆ ರಶ್ಮಿ ಇದೀಗ ಜೆ.ಪಿನಗರದ ಸ್ಟೋರ್‍ಸ್ ಎನ್ನುವ ಸ್ಥಳದಲ್ಲಿ ಫೇಸ್ ಬುಕ್ ಮೂಲಕ ಲೈವ್ ಶೋ ಕೊಟ್ಟು ಚರ್ಚೆ ನಡೆಸುವ ವಿನೂತನ ಪ್ರಯೋಗಕ್ಕೂ ಕೈ ಹಾಕಿದ್ದಾರೆ. ಈ ಕಾರ್ಯಕ್ರಮ ಜನಪ್ರಿಯವೂ ಆಗಿದೆ.
ಇದೇ ಶೋ ಮೂಲಕ ಹಲವಾರು ಚಿತ್ರಗಳಿಗೆ ವ್ಯಾಪಕ ಪ್ರಚಾರ ಕಲ್ಪಿಸೋ ಕೆಲಸಕ್ಕೂ ರ್‍ಯಾಪಿಡ್ ರಶ್ಮಿ ಕೈ ಹಾಕಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಆರಂಭವಾದ ಈ ಕಾರ್ಯಕ್ರಮವೀಗ ಐವತ್ತು ಶೋಗಳನ್ನು ಯಶಸ್ವಿಯಾಗಿ ಪೂರೈಸಿದ ಸಂಭ್ರಮದಲ್ಲಿದೆ. ಒಂದಕ್ಕಿಂತ ಒಂದು ಕಾರ್ಯಕ್ರಮಗಳನ್ನು ವಿಭಿನ್ನವಾಗಿ ಮುನ್ನಡೆಸಿದ ರಶ್ಮಿ ಕೂಡಾ ಇದರಿಂದ ಖುಷಿಗೊಂಡಿದ್ದಾರೆ. ಇದರಿಂದ ಕನ್ನಡ ಸಿನಿಮಾಗಳಿಗೂ ಅಪಾರವಾದ ಸಹಾಯವಾಗುತ್ತಿದೆ. ರಶ್ಮಿ ಅವರಿಗಿರುವ ಜನಪ್ರಿಯತೆ ಸಿನಿಮಾಗಳನ್ನು ಪ್ರಮೋಟ್ ಮಾಡಲು ಅನುಕೂಲವಾಗುತ್ತಿದೆ.
ಕೇವಲ ರೇಡಿಯೋ ವಲಯ ಮಾತ್ರವಲ್ಲದೆ ಡ್ಯಾನ್ಸು, ನಟನೆ, ನಿರೂಪಣೆ… ಹೀಗೆ ರಶ್ಮಿ ಪಾದಾರ್ಪಣೆ ಮಾಡದ ಕ್ಷೇತ್ರಗಳೇ ಕಡಿಮೆ. ಇಂಥಾ ಚಟುವಟಿಕೆ, ಚುರುಕುತನಗಳ ಮೂಲಕವೇ ಇಷ್ಟವಾಗೋ ರ್‍ಯಾಪಿಡ್ ರಶ್ಮಿ ಎತ್ತೆತ್ತ ಸುತ್ತಿದರೂ ಮತ್ತೆ ಮತ್ತೆ ಬಂದು ರೇಡಿಯೋ ಲೋಕದಲ್ಲಿಯೇ ಸಕ್ರಿಯರಾಗುತ್ತಾರೆ. ಅವರನ್ನು ಆ ವಲಯದಲ್ಲಿಯೇ ನೋಡ ಬಯಸೋ ಮನಸುಗಳೂ ಕೂಡಾ ಲೆಕ್ಕವಿಲ್ಲದಷ್ಟಿವೆ. ಇಂಡಿಯನ್ ರೇಡಿಯೋ ಫೋರಂ ನಲ್ಲಿ ರಶ್ಮಿ ಅವರ ರೇಡಿಯೋ ಶೋಗೆ 2017ರ ಸಿಲ್ವರ್ ಮೆಡಲ್ ಬಂದಿದೆ. ಸ್ತನ ಕ್ಯಾನ್ಸರ್ ಜಾಗೃತಿಗಾಗಿ ನಡೆಸಿದ ಪಿಂಕ್’ಥಾನ್’ನಲ್ಲಿ  ಮಿಲಿಂದ್ ಸೋಮನ್ ಅವರೊಂದಿಗೆ ಕೂಡಾ ರಶ್ಮಿ ಪಾಲ್ಗೊಂಡಿದ್ದಾರೆ. 
ಪಕ್ಕಾ ಬೆಂಗಳೂರು ಹುಡುಗಿಯಾದ ರ್‍ಯಾಪಿಡ್ ರಶ್ನಿ ಬೆಂಗಳೂರಿನ ಹಿಸ್ಟರಿಯ ಪಳಯುಳಿಕೆಯಂತಿರೋ, ಆತ್ಮದಂತಿರೋ ಬಸವನಗುಡಿಯಲ್ಲೇ ಹುಟ್ಟಿ ಬೆಳೆದವರು. ಬೇರೆ ಬೇರೆ ವೆರೈಟಿಯ ಪ್ರತಿಭೆ ಇರೋ ರಶ್ಮಿ ಆರಂಭದಲ್ಲಿ ಉದಯ ಟಿವಿಯಲ್ಲಿ ಆಂಕರಿಂಗ್ ಮಾಡೋ ಮೂಲಕ ವೃತ್ತಿ ಜೀವನ ಆರಂಭಿಸಿದವರು. ಆ ಕಾಲದಲ್ಲಿ ಹೊಸದಾಗಿ ಹುಟ್ಟಿಕೊಂಡಿದ್ದು ಎಫ್ಫೆಮ್ ರೇಡಿಯೋ ಟ್ರೆಂಡ್. ಅದಕ್ಕೆ ಅಚ್ಚ ಕನ್ನಡದಲ್ಲಿ ಅರಳು ಹುರಿದಂತೆ ಮಾತಾಡೋ ಜಾಕಿಗಳ ಅವಶ್ಯಕತೆ ಇತ್ತು. ಇದೇ ಸಂದರ್ಭದಲ್ಲಿ ಟೀವಿ ಲೋಕ ಬಿಟ್ಟು ರೇಡಿಯೋ ಜಗತ್ತಿಗೆ ಕಾಲಿಟ್ಟು ಸುದೀರ್ಘವಾಗಿ ಇಷ್ಟೊಂದು ವರ್ಷಗಳ ಕಾಲ ಚಾಲ್ತಿಯಲ್ಲಿರೋದು ನಿಜಕ್ಕು ರ್‍ಯಾಪಿಡ್ ರಶ್ಮಿಯವರ ಹೆಚ್ಚುಗಾರಿಕೆ.
ಇದು ನಿಜಕ್ಕೂ ಸವಾಲಿನ ಕೆಲಸ. ದಿನಾ ಗಂಟೆಗಟ್ಟಲೆ ರೂಮೊಂದರಲ್ಲಿ ಕೂತು ಮಾತಾಡೋದಂದರೆ ಸಲೀಸಿನ ಸಂಗತಿಯೇನಲ್ಲ. ಆಡಿದ್ದನ್ನೇ ಮಾತಾಡುತ್ತಾ ಹೋದರೆ ವಾರ ಕಳೆತೋವಷ್ಟರಲ್ಲಿ ಕೇಳುಗರ ಕಿವಿ ಬೋರು ಹೊಡೆಯುತ್ತೆ. ಹಾಗಾಗದಂತೆ ನೋಡಿಕೊಳ್ಳಬೇಕೆಂದರೆ ಹೊಸಾ ವಿಚಾರಗಳನ್ನು ತಿಳಿದುಕೊಳ್ಳಬೇಕು. ಹೊಸತನಕ್ಕೆ ಒಗ್ಗಿಕೊಳ್ಳಬೇಕು. ಅದಕ್ಕೆ ಸದಾ ತೆರೆದುಕೊಂಡೇ ಬಂದಿರೋ ರಶ್ಮಿ ಇದೀಗ ಚಲನಚಿತ್ರ ಸಂಬಂಧಿ ಕಾರ್ಯಕ್ರಮದ ಮೂಲಕ ಚಿತ್ರರಂಗದ ಭಾಗವೂ ಆಗಿದ್ದಾರೆ.
ಚಲನಚಿತ್ರಗಳಿಗೆ ಸಂಬಂಧಿಸಿದ ಅವರ ಸಾರಥ್ಯದ ಶೋ ಅದೇ ಖದರಿನೊಂದಿಗೆ ಇದೀಗ ಐವತ್ತರ ಹೊಸ್ತಿಲು ದಾಟಿಕೊಂಡಿದೆ.

Leave a Reply

Your email address will not be published. Required fields are marked *


CAPTCHA Image
Reload Image