One N Only Exclusive Cine Portal

ಫೇಸ್‌ಬುಕ್ ಕ್ರಿಮಿಗಳ ವಿರುದ್ಧ ರ‍್ಯಾಪಿಡ್ ರಶ್ಮಿ ಕಂಪ್ಲೇಂಟ್!

ಒಂದು ವಿವಾದವೆದ್ದರೆ ಅದರ ತಲೆ ಬುಡ ಅರ್ಥವಾಗದಿದ್ದರೂ ಬಬ್ರುವಾಹನರಂತೆ ಅಬ್ಬರಿಸೋ ಅವಿವೇಕಿಗಳು ಫೇಸ್‌ಬುಕ್‌ನಂಥಾ ಸಾಮಾಜಿಕ ಜಾಲತಾಣಗಳಲ್ಲಿ ತುಂಬಿ ಹೋಗಿದ್ದಾರೆ. ಇಂಥಾ ಕೆಲ ಅನಿಷ್ಠ ಮನಸ್ಥಿತಿಯ ಮಂದಿ ಹೆಣ್ಣುಮಕ್ಕಳು ವಿವಾದದ ಕೇಂದ್ರಬಿಂದುಗಳಾದಾಗ ಕನಿಷ್ಠ ವಿವೇಚನೆಯೂ ಇಲ್ಲದೆ ಸೊಂಟದ ಕೆಳಗಿನ ಭಾಷೆ ಪ್ರಯೋಗ ಮಾಡುತ್ತಾರೆ. ಇನ್‌ಬಾಕ್ಸಿಗೆ ಹೋಗಿ ಕೊಳಕು ಕಾರುತ್ತಾ ವಿಕೃತಾನಂದ ಪಡೆಯುತ್ತಾರೆ. ಇದೀಗ ಇಂಥಾ ಕ್ರಿಮಿಗಳಿಗೆಲ್ಲ ತಕ್ಕ ಪಾಠ ಕಲಿಸಲು ಆರ್‌ಜೆ ರ‍್ಯಾಪಿಡ್ ರಶ್ಮಿ ಮುಂದಾಗಿದ್ದಾರೆ!

ರ‍್ಯಾಪಿಡ್ ರಶ್ಮಿ ಶೋನಲ್ಲಿ ರಾಜರಥ ಚಿತ್ರ ತಂಡದ ವಿವಾದವೆದ್ದು ಅದಕ್ಕಾಗಿ ಖುದ್ದು ರಶ್ಮಿಯೇ ಕ್ಷಮೆ ಕೇಳಿದ್ದೂ ಆಗಿದೆ. ಆದರೆ ಮಾಡಲು ಬೇರೆ ಕ್ಯಾಮೆ ಇಲ್ಲದ ಕ್ರಿಮಿಗಳೊಂದಷ್ಟು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ರಶ್ಮಿ ವಿರುದ್ಧ ಕೊಳಕು ಪ್ರಹಾರವನ್ನು ಯಥಾ ಸ್ಥಿತಿಯಲ್ಲಿ ಮುಂದುವರೆಸಿದ್ದಾರಂತೆ. ರಶ್ಮಿ ಫೇಸ್ ಬುಕ್ ಖಾತೆಯ ಇನ್ ಬಾಕ್ಸಿಗೂ ಲಗ್ಗೆ ಇಟ್ಟಿರುವ ಇಂಥವರನೇಕರು ಅವಹೇಳನಕಾರಿಯಾಗಿ ಮಾತಾಡುತ್ತಿರೋದಲ್ಲದೆ ರೇಪ್ ಥ್ರೆಟ್‌ನಂಥಾ ನೀಚ ಮಟ್ಟಕ್ಕೂ ಇಳಿದಿದ್ದಾರಂತೆ. ಇಷ್ಟು ದಿನ ಇಂಥವನ್ನೆಲ್ಲ ಅವುಡುಗಚ್ಚಿ ಸಹಿಸುತ್ತಾ ಬಂದಿದ್ದ ರಶ್ಮಿ ಇದೀಗ ಇಂಥಾ ಕ್ರಿಮಿಗಳ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿ ಸರಿಯಾದ ಕ್ರಮ ಕೈಗೊಳ್ಳಲು ಮನವಿ ಮಾಡಿಕೊಂಡಿದ್ದಾರೆ.

‘ರ‍್ಯಾಪಿಡ್ ರಶ್ಮಿಯಾದ ನಾನು ಕಳೆದ ಹನ್ನೊಂದು ವರ್ಷಗಳಿಂದ ಸತತವಾಗಿ ಕನ್ನಡ ಕಲಾ ಸೇವೆ ಮಾಡಿಕೊಂಡು ಬರುತ್ತಿದ್ದೇನೆ. ನಾನು ಕನ್ನಡ ಮತ್ತು ಕನ್ನಡಿಗರ ವಿರುದ್ಧ ಮಾತಾಡಿಲ್ಲ ಮತ್ತು ಮುಂದೆಂದೂ ಮಾತಾಡುವುದೂ ಇಲ್ಲ. ಕನ್ನಡದ ಪರವಾಗಿ, ಕನ್ನಡದ ಧ್ವನಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ಸೇವೆ ಮುಂದೆಯೂ ನಿರಂತರವಾಗಿರುತ್ತದೆ. ಆದರೆ ಇತ್ತೀಚೆಗೆ ನಡೆದ ರಾಜರಥ ಚಿತ್ರದ ವಿವಾದದ ನಂತರ ಕೆಲ ಪಟ್ಟಭದ್ರ ಹಿತಾಸಕ್ತಿಗಳು ನನ್ನ ಹೆಸರಿಗೆ ಧಕ್ಕೆ ತರುವ, ನನ್ನ ತೇಜೋವಧೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ರಾಜರಥ ವಿವಾದದ ಬಗ್ಗೆ ಕ್ಷಮೆ ಕೇಳಿದ ಮೇಲೂ ನನಗೆ ಬಹಳಷ್ಟು ಅಶ್ಲೀಲವಾದ ಸಂದೇಶಗಳು ಬಂದಿವೆ ಮತ್ತು ಈಗಲೂ ಬರುತ್ತಿವೆ. ಅದರಲ್ಲಿ ಕೆಲವು ಲೈಂಗಿಕ ದೌರ್ಜನ್ಯ, ರೇಪ್ ಥ್ರೆಟ್ ಮತ್ತು ಮಾನಸಿಕ ಕಿರುಕುಳ ನಿಡುವಂಥಾ ಸಂದೇಶಗಳನ್ನು ನೋಡಿ ನನ್ನ ಮನಸಿಗೆ ಘಾಸಿ ಉಂಟಾಗಿದೆ. ಈ ಎಲ್ಲ ಅಪರಾಧಗಳನ್ನು ಪರಿಗಣಿಸಿ ಸಂಬಂಧಿಸಿದವರಿಗೆ ತಕ್ಕ ಶಿಕ್ಷೆ ವಿಧಿಸಬೆಕೆಂದು, ಸಾಮಾಜಿಕ ಜಾಲತಾಣಗಳಲ್ಲಿ ಹೆಣ್ಣು ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯಗಳನ್ನು ತಡೆಯಬೇಕೆಂದು ಓರ್ವ ಜವಾಬ್ದಾರಿಯುತ ಹೆಣ್ಣುಮಗಳಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ’. ಎಂಬುದು ರಶ್ಮಿ ಮಹಿಳಾ ಆಯೋಗಕ್ಕೆ ನೀಡಿರುವ ದೂರಿನ ಸಂಕ್ಷಿಪ್ತ ಸಾರಾಂಶ.

ಈ ಮೂಲಕ ರಶ್ಮಿ ಫೇಸ್‌ಬುಕ್‌ನ ಕೆಲ ಕೋಡಂಗಿಗಳಿಗೆ ಸರಿಯಾದ ಪಾಠ ಕಲಿಸಲು ಮುಂದಡಿ ಇಟ್ಟಿದ್ದಾರೆ. ಮಹಿಳಾ ಆಯೋಗಕ್ಕೆ ನೀಡಿರುವ ದೂರಿನಲ್ಲಿ ತಮಗೆ ಬಂದಿರುವ ಮತ್ತು ತಮ್ಮ ಬಗ್ಗೆ ಹಲವರು ಬರೆದುಕೊಂಡಿರುವ ಅಶ್ಲೀಲ ವಿಚಾರಗಳ ದಾಖಲೆಯನ್ನೂ ರಶ್ಮಿ ಲಗತ್ತಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಕೊಳಕು ಕಾರಿಕೊಂಡು ಡೀ ಆಕ್ಟಿವೇಟ್ ಮಾಡಿಕೊಂಡು ಹೋದರೆ ತಮ್ಮನ್ಯಾರು ಕೇಳೋರಿಲ್ಲ ಎಂಬ ಮನಸ್ಥಿತಿಯೇ ಹಲವರನ್ನು ದುಷ್ಟರನ್ನಾಗಿಸಿದೆ. ಆದರೆ ಅಂಥವರಿಗೆಲ್ಲ ರ‍್ಯಾಪಿಡ್ ರಶ್ಮಿ ನೀಡಿರುವ ದೂರು ಜೈಲಿನ ದಾರಿ ತೋರಿಸುವ ದಿನಗಳು ಹತ್ತಿರದಲ್ಲಿವೆ!

 

Leave a Reply

Your email address will not be published. Required fields are marked *


CAPTCHA Image
Reload Image