One N Only Exclusive Cine Portal

ತಪ್ಪೊಪ್ಪಿಕೊಂಡ ರ್‍ಯಾಪಿಡ್ ರಶ್ಮಿಯನ್ನು ತಬ್ಬಲಿ ಮಾಡೋ ಹುನ್ನಾರ!

Rapid ರಶ್ಮಿ ಶೋನಲ್ಲಿ ರಾಜರಥ ಟೀಮು ಮಾಡಿಕೊಂಡಿದ್ದ ಯಡವಟ್ಟೀಗ ಭಂಡಾರಿ ಬ್ರದರ್ಸ್ ಕ್ಷಮೆ ಕೇಳುವ ಮೂಲಕ ಪರ್ಯಾವಸಾನ ಹೊಂದಿದೆ. ಆದರೆ ಈ ವಿವಾದವನ್ನು ಮುಂದಿಟ್ಟುಕೊಂಡು ರ್‍ಯಾಪಿಡ್ ರಶ್ಮಿಯ ವೃತ್ತಿ ಬದುಕನ್ನೇ ಸರ್ವನಾಶ ಮಾಡಲು ಅಗೋಚರ ಶಕ್ತಿಗಳು ಪ್ರಯತ್ನ ನಡೆಸುತ್ತಿವೆಯಾ? ವೃತ್ತಿ ವೈಶಮ್ಯದ ಕಿಸುರೂ ಇದಕ್ಕೆ ಕೈ ಜೋಡಿಸಿದೆಯಾ? ಹೀಗೆ ಹತ್ತಾರು ಪ್ರಶ್ನೆಗಳು ಚಿತ್ರರಂಗ ಮತ್ತು ಮೀಡಿಯಾದ ಒಳ ಹೊರಗನ್ನು ಬಲ್ಲವರನ್ನೆಲ್ಲ ಕಾಡಲಾರಂಭಿಸಿದೆ.

ನಿಜ, ರಾಜರಥ ಚಿತ್ರದ ನಿರ್ದೇಶಕ ಅನೂಪ್, ಹೀರೋ ನಿರೂಪ್ ಮತ್ತು ನಟಿ ಆವಂತಿಕಾ ಶೆಟ್ಟಿ ತಮ್ಮ ಚಿತ್ರ ನೋಡದ ಕನ್ನಡಿಗರನ್ನು ಕಚಡಾಗಳೆಂಬಂತೆ ಜರಿದಿದ್ದು ಖಂಡಿತಾ ತಪ್ಪು. ಅದು ತಾವೆಂಥಾ ಕಚಡಾ ಸಿನಿಮಾ ಮಾಡಿದರೂ ಜನ ನೋಡಬೇಕೆಂಬಂಥಾ ಅವರೊಳಗಿನ ಅಹಮ್ಮಿಕೆಯ ಸಂಕೇತ. ಅದಕ್ಕೆ ಕನ್ನಡಿಗರ ಕಡೆಯಿಂದ ಸರಿಯಾಗಿಯೇ ಗುನ್ನ ಬಿದ್ದಿದೆ. ಭಂಡಾರಿ ಬ್ರದರ್ಸ್ ಕ್ಷಮೆ ಕೇಳಿದೇಟಿಗೆ ಕನ್ನಡಿಗರು ಅದನ್ನೊಪ್ಪಿಕೊಂಡಿದ್ದಾರೆ. ಹಾಗೆಯೇ, ಭಂಡಾರಿ ಬ್ರದರ್ಸ್ ಮಾತಿಗೆ ಕೇಕೆ ಹಾಕುತ್ತಲೇ ಸಮ್ಮತಿ ಸೂಚಿಸಿದ್ದ ರ್‍ಯಾಪಿಡ್ ರಶ್ಮಿ ಕೂಡಾ ಕ್ಷಮೆ ಕೇಳಿದ್ದಾರೆ. ರಂಗಿತರಂಗ ಅಂತೊಂದು ಚಿತ್ರದ ಮೂಲಕ ಪ್ರತ್ಯಕ್ಷರಾದ ಭಂಡಾರಿ ಬ್ರದರ್ಸನ್ನೇ ಕ್ಷಮಿಸಿದ ಕನ್ನಡಿಗರು ಹತ್ತಾರು ವರ್ಷಗಳಿಂದ ಕನ್ನಡ ನೆಲದಲ್ಲಿಯೇ ಸಕ್ರಿಯರಾಗಿರುವ ಅಪ್ಪಟ ಕನ್ನಡದ ಹುಡುಗಿ ರ್‍ಯಾಪಿಡ್ ರಶ್ಮಿಯನ್ನು ಕ್ಷಮಿಸದಿರುತ್ತಾರಾ? ಅದು ನಿಜವಾದ ಔದಾರ್ಯ.

ಆದರೆ, ಕನ್ನಡಿಗರೆಲ್ಲ ಔದಾರ್ಯ ತೋರಿದರೂ ಚಿತ್ರರಂಗಕ್ಕೆ ಸಂಬಂಧಿಸಿದ ಕೆಲ ಮಂದಿಯೇಕೆ ರ್‍ಯಾಪಿಡ್ ರಶ್ಮಿ ವಿಚಾರದಲ್ಲಿ ಪೆಡಸಾಗಿ ವರ್ತಿಸುತ್ತಿದ್ದಾರೆ? ಕನ್ನಡ ಚಿತ್ರರಂಗದ ಹೆಬ್ಬಾಗಿಲಲ್ಲೇ ನಾನಾ ಸಮಸ್ಯೆಗಳು ಪಿತಗುಡುತ್ತಿರುವ ಹೊತ್ತಿನಲ್ಲಿಯೂ ಮುಗುಮ್ಮಾಗಿರುವ ಸಾ ರಾ ಗೋವಿಂದು ಅವರೇಕೆ ಈ ಹುಡುಗಿಯ ವಿರುದ್ಧ ಆ ಪಾಟಿ ಯುದ್ಧ ಸಾರಿದ್ದಾರೆ? ಇಂಥಾ ನಾನಾ ಪ್ರಶ್ನೆಗಳು ಸೂಕ್ಷ್ಮತೆ ಹೊಂದಿರುವ ಕನ್ನಡಿಗರನ್ನೆಲ್ಲ ಕಾಡುತ್ತಿವೆ.

ಅಷ್ಟಕ್ಕೂ ರ್‍ಯಾಪಿಡ್ ರಶ್ಮಿ ಮೇಲೆ ಸಾ ರಾ ಗೋವಿಂದು ಮಾಡುತ್ತಿರುವ ಘನಗಂಭೀರ ಆರೋಪಗಳೇ ನಗೆಪಾಟಲಿನವುಗಳು. ಆಕೆ ಒಂದು ಶೋಗೆ ಲಕ್ಷ ತಗೋತಾಳೆ ಎಂಬರ್ಥದ ಮಾತನ್ನಾಡುವ ಮುನ್ನ ಗೋವಿಂದು ಅವರು ಯೋಚಿಸಬೇಕಲ್ಲ? ರಶ್ಮಿ ಲಕ್ಷ ತೆಗೆದುಕೊಂಡು ಶೋ ಮಾಡುತ್ತಾರೆಂಬುದಕ್ಕೆ ಅವರ ಬಳಿ ಯಾವ ಸಾಕ್ಷಿಗಳಿವೆ? ಹಾಗೆ ನೋಡಿದರೆ ರಶ್ಮಿ ದುಡ್ಡು ಕಾಸಿನ ಗೊಡವೆಯಿಲ್ಲದೆ ನಡೆಸಿಕೊಟ್ಟ ಸಿನಿಮಾ ಪ್ರೋಗ್ರಾಮುಗಳ ಸಂಖ್ಯೆಯೇ ಅಧಿಕವಿದೆ. ಸ್ಟಾರ್‌ಗಳನ್ನು ಮಾತ್ರವೇ ಗುಡ್ಡೆ ಹಾಕಿಕೊಂಡು ಮೈಲೇಜು ಗಿಟ್ಟಿಸಿಕೊಳ್ಳುವವರ ಮಧ್ಯೆ ಹೊಸಬರನ್ನೂ ಮಾತಾಡಿಸಿ ಅಂಥವರ ಸಿನಿಮಾಗಳಿಗೆ ಪಬ್ಲಿಸಿಟಿ ಕೊಟ್ಟ ಉದಾಹರಣೆಗಳೂ ಸಾಕಷ್ಟಿವೆ. ಒಂದು ತಪ್ಪು ನಡೆದೇಟಿಗೆ ಇಲ್ಲದ್ದನ್ನೆಲ್ಲ ಆಕೆಯ ತಲೆಗೆ ಕಟ್ಟಿ ಹೊಸಕಿ ಹಾಕಲು ಪ್ರಯತ್ನಿಸುವುದು ಯಾವ ಪುರುಷಾರ್ಥವೂ ಅಲ್ಲ. ಕೆಲವರಂತೂ ಇವೆಲ್ಲಾ ಪ್ರಕರಣ ನಡೆದು ದಿನಗಳು ಕಳೆದರೂ ಇವತ್ತಿಗೂ ಸಿನಿಮಾ ನಿರ್ಮಾಪಕರುಗಳಿಗೆ ಕರೆ ಮಾಡಿ `ರಶ್ಮಿ ಪ್ರೋಗ್ರಾಮಿಗೆ ಹೋದ್ರೆ ಹುಷಾರ್’ ಎಂದು ಬೆದರಿಕೆ ಒಡ್ಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.

ರಶ್ಮಿ ಪ್ರತಿಭಾವಂತೆ. ತನ್ನದೇ ಆದೊಂದು ಶೈಲಿ ರೂಢಿಸಿಕೊಂಡು ರೇಡಿಯೋ ಜಗತ್ತಿನಲ್ಲಿ ಪ್ರಸಿದ್ಧರಾಗುತ್ತಲೇ ಕ್ರಿಯೇಟಿವ್ ವಲಯದಲ್ಲಿ ಸಕ್ರಿಯರಾಗಿರುವವರು. ಆದರೆ ಆಕೆಯ ಬೆಳವಣಿಗೆ ಕಂಡು ಒಂದಷ್ಟು ಮಂದಿಗೆ ಉರಿ ಇದ್ದರೂ ಇರಬಹುದು. ಅಂಥವರೆಲ್ಲ ಸಾ ರಾ ಗೋವಿಂದು ಸಾಹೇಬರ ಹೆಗಲ ಮೇಲೆ ಬಂದೂಕಿಟ್ಟು ರಶ್ಮಿಯತ್ತ ಫೈರ್ ಮಾಡುವಂಥಾ ದುಷ್ಟತನ ಪ್ರದರ್ಶಿಸುತ್ತಿದ್ದರೂ ಅಚ್ಚರಿಯೇನಿಲ್ಲ. ಆದರೆ ಇದರಿಂದ ಘನತೆ ತಗ್ಗುತ್ತಿರೋದು ಸಾ ರಾ ಗೋವಿಂದು ಅವರದ್ದೇ. ಓರ್ವ ಹೆಣ್ಣುಮಗಳ ಮೇಲೆ ಪ್ರಹಾರ ಆರಂಭಿಸುವ ಮುನ್ನವೇ ಅವರು ಇಂಥಾದ್ದೊಂದು ಸೂಕ್ಷ್ಮತೆಯಿಂದ ವರ್ತಿಸಬೇಕಿತ್ತೆಂಬುದು ಬಹುತೇಕರ ಅಭಿಪ್ರಾಯ.

ತೀರಾ ಕೊಲೆಯಂಥಾ ತಪ್ಪಿಗೂ ಕಾನೂನು ಚೌಕಟ್ಟಿನ ಶಿಕ್ಷೆ ವಿಧಿಸಿ ಬದುಕಲು ಅವಕಾಶ ಮಾಡಿಕೊಡುವುದು ಈ ಮಣ್ಣಿನ ಗುಣ ಮತ್ತು ಘನತೆ. ಆದರೆ ಕೆಲ ಮಂದಿ ರ್‍ಯಾಪಿಡ್ ರಶ್ಮಿ ಎಂಬ ಹೆಣ್ಣುಮಗಳೊಬ್ಬಳ ವಿಚಾರದಲ್ಲಿ ನೇರವಾಗಿ ಗಲ್ಲು ಶಿಕ್ಷೆಯನ್ನೇ ವಿಧಿಸಿ ಬಿಡುವ ಹುಮ್ಮಸ್ಸಿನಲ್ಲಿದ್ದಾರೆ. ಅಂಥಾ ಮನಸ್ಥಿತಿಗಳೇ ಆಕೆಯ ಶೋಗಳನ್ನು ಬ್ಯಾನ್ ಮಾಡಬೇಕು ಎಂಬರ್ಥದಲ್ಲಿ ಗಂಟಲು ಹರಿದುಕೊಳ್ಳುತ್ತಿದ್ದಾರೆ. ಕೆಲವೊಮ್ಮೆ ಯಶಸ್ಸಿನ ಹುಮ್ಮಸ್ಸು ಎಚ್ಚರ ತಪ್ಪಿಸುವ ಸಾಧ್ಯತೆಗಳಿವೆ. ರಶ್ಮಿ ಎಚ್ಚರ ತಪ್ಪಿದ ತಪ್ಪಿಗಾಗಿ ಕ್ಷಮೆ ಕೇಳಿದ್ದಾರೆ. ತಮ್ಮದು ತಪ್ಪೆಂದು ಒಪ್ಪಿಕೊಂಡಿದ್ದಾರೆ. ಅದರಾಚೆಗೂ ಆಕೆಯ ವಿರುದ್ಧ ಯುದ್ಧ ಸಾರಿದರೆ ಅದನ್ನು ದುಷ್ಟತನ ಎನ್ನದೆ ಬೇರೆ ವಿಧಿಯಿಲ್ಲ. ಆ ಯುದ್ಧದ ಪರಿಣಾಮ ಖಡ್ಗ ಹಿರಿಯಲು ಮುಂದಾದ ಕೈಗಳ ಮೇಲಾಗಬಹುದೇ ಹೊರತು ರಶ್ಮಿಯ ಮೇಲಲ್ಲ. ಯಾಕೆಂದರೆ ಆಕೆ ಕೂಡಾ ಜಂಜಡಗಳ ಜೊತೆ ಗುದ್ದಾಡಿಕೊಂಡೇ ಮೇಲೇರಿ ಬಂದವರು. ಪ್ರತಿಭೆಯ ಮೂಲಕವೇ ಹೆಸರು ಮಾಡಿದವರು. ಊರೆಲ್ಲ ಖಡ್ಗ ಹಿಡಿದು ನಿಂತರೂ ಇಷ್ಟು ವರ್ಷ ರಶ್ಮಿಯನ್ನು ಪೊರೆದ ಕನ್ನಡಿಗರು ಖಂಡಿತಾ ಆಕೆಯ ಕೈ ಬಿಡಲಾರರು…

 

 

Leave a Reply

Your email address will not be published. Required fields are marked *


CAPTCHA Image
Reload Image