One N Only Exclusive Cine Portal

ಮೋದಿ ಬಗ್ಗೆ ಸಿನಿಮಾ ಮಾಡ್ತಾರಂತೆ ರೂಪಾ ಅಯ್ಯರ್?

ಪ್ರಜಾಪ್ರಭುತ್ವದಲ್ಲಿ ಅಧಿಕಾರ ಕೇಂದ್ರದಲ್ಲಿರುವವರನ್ನು ಸದಾ ಚಿಕಿತ್ಸಕ ದೃಷ್ಟಿಯಿಂದ ನೋಡುವ ಮನಸ್ಥಿತಿ ಸದಾ ಆರೋಗ್ಯಪೂರ್ಣ. ಆದರೆ ಹೆಚ್ಚಿನ ಸಂದರ್ಭದಲ್ಲಿ ಅಧಿಕಾರದ ಕಕ್ಷೆಯಲ್ಲಿಯೇ ಸುತ್ತಲಿಚ್ಚಿಸುತ್ತಾ, ಅದರಿಂದಲೇ ಫಾಯಿದೆ ಗಿಟ್ಟಿಸಿಕೊಳ್ಳುವ ಮನಸ್ಥಿತಿಗಳೇ ವಿಜೃಂಭಿಸುತ್ತವೆ. ನಟಿ, ನಿರ್ದೇಶಕಿಯಾಗಿ ಗುರುತಿಸಿಕೊಂಡಿರುವ ರೂಪಾ ಅಯ್ಯರ್ ಕೂಡಾ ಅಂಥಾದ್ದೇ ಹಾದಿ ಹಿಡಿದರಾ ಅಂತೊಂದು ಗುಮಾನಿ ಇದೀಗ ಎಲ್ಲರನ್ನೂ ಕಾಡಲಾರಂಭಿಸಿದೆ.

ರೂಪಾ ಅಯ್ಯರ್ `ನಮೋ- ಟ್ರೂ ಇಂಡಿಯನ್’ ಅಂತೊಂದು ಚಿತ್ರವನ್ನು ನಿರ್ದೇಶನ ಮಾಡಲಿದ್ದಾರಂತೆ. ಈ ಬಗ್ಗೆ ಪತ್ರಿಕಾಗೋಷ್ಠಿ ಕರೆದು ಅವರೇ ಸವಿವರವಾದ ಮಾಹಿತಿ ಹಂಚಿಕೊಂಡಿದ್ದಾರೆ. ಅಂದಹಾಗೆ ಇದು ಪ್ರಧಾನಿ ನರೇಂದ್ರ ಮೋದಿಯನ್ನು ಕೇಂದ್ರವಾಗಿಸಿಕೊಂಡಿರೋ ಕಥಾ ಹಂದರ ಹೊಂದಿದೆಯಂತೆ. ಅಮೆರಿಕಾದಲ್ಲಿರುವ ಅನಿವಾಸಿ ಸ್ನೇಹಿತೆಯರು ಸೇರಿ ನಿರ್ಮಾಣ ಮಾಡುತ್ತಿರುವ ಈ ಚಿತ್ರದ ಚಿತ್ರಕಥೆಗೆ ಮಠ ಗುರುಪ್ರಸಾದ್ ಅವರೂ ಸಾಥ್ ನೀಡುತ್ತಿದ್ದಾರಂತೆ. ಸದ್ಯ ಸ್ಕ್ರಿಪ್ಟ್ ಕೆಲಸ ಚಾಲ್ತಿಯಲ್ಲಿದೆ. ಇದೇ ಸಂದರ್ಭದಲ್ಲಿ ಗಾಂಧೀಜಿಯನ್ನು ಬಿಟ್ಟರೆ ತಮ್ಮನ್ನು ಅತ್ಯಂತ ಪ್ರಭಾವಿಸಿದ ವ್ಯಕ್ತಿ ನರೇಂದ್ರ ಮೋದಿ ಅಂತೆಲ್ಲ ರೂಪಾ ಅಯ್ಯರ್ ಪ್ರಧಾನ ಸೇವಕನನ್ನು ಹೊಗಳಿದ್ದಾರೆ. ಇರಲಿ, ಸಿನಿಮಾ ಮಾಡೋದು, ಬೇಕೆಂದವರನ್ನು ಹೊಗಳೋದು ಅವರ ಸ್ವಾತಂತ್ರ್ಯ. ಆದರೆ ಪ್ರಶ್ನೆಗಳೆದ್ದಿರೋದು ರೂಪಾರ ಅಸಲೀ ಉದ್ದೇಶಗಳ ಬಗ್ಗೆ!

ರೂಪಾ ಅಯ್ಯರ್ ಉಪೇಂದ್ರ ಅವರ ಪಕ್ಷದಿಂದ ಮೈಸೂರು ಭಾಗದಿಂದ ಈ ಬಾರಿ ವಿಧಾನಸಭಾ ಚುನಾವಣಾ ಕಣಕ್ಕಿಳಿಯಲಿದ್ದಾರೆಂಬ ಬಗ್ಗೆ ಈ ಹಿಂದೆ ಸುದ್ದಿಯಾಗಿತ್ತು. ಆದರೆ ಈ ಸುದ್ದಿ ಹೊರ ಬಂದು ವಾರ ಕಳೆಯುವಷ್ಟರಲ್ಲಿ ಉಪೇಂದ್ರ ಸ್ವತಃ ಆ ಪಕ್ಷದಿಂದ ಹೊರ ಬಿದ್ದಿದ್ದಾರೆ. ಇಂಥಾ ಹೊತ್ತಿನಲ್ಲಿ ನರೇಂದ್ರ ಮೋದಿ ಬಗ್ಗೆ ಒಂದು ಚಿತ್ರ ಮಾಡಿ ಗಮನ ಸೆಳೆದರೆ ಯಾವುದಾದರೊಂದು ಕ್ಷೇತ್ರದಿಂದ ಬಿಜೆಪಿ ಟಿಕೆಟು ಪಡೆಯೋದು ಸಲೀಸಾಗುತ್ತದೆಂಬುದೇ ರೂಪಾ ಉದ್ದೇಶ ಅಂತಲೂ ಗಾಂಧಿನಗರದಲ್ಲಿ ಪುಕಾರೆದ್ದಿದೆ.
ಅಂತೂ ಈ ಚಿತ್ರ ಸದ್ಯದಲ್ಲೇ ಚಿತ್ರೀಕರಣ ಆರಂಭಿಸಿ ಚುನಾವಣೆಯ ಹೊಸ್ತಿಲಿನಲ್ಲಿ ಕೊಂಚ ಸೌಂಡ್ ಮಾಡಲು ಅಣಿಯಾಗುತ್ತಿದೆ!

Leave a Reply

Your email address will not be published. Required fields are marked *


CAPTCHA Image
Reload Image