One N Only Exclusive Cine Portal

ಸೆಟ್ಟಿಗೆ ನುಗ್ಗಿ ಸಲ್ಲು ಎದೆಗೆ ರಿವಾಲ್ವರಿಟ್ಟವನ್ಯಾರು?

ಸಲ್ಮಾನ್ ಖಾನ್ ಇದೀಗ ಹಿಂದಿ ಭಾಷೆಯ ಬಿಗ್‌ಬಾಸ್ ಶೋನ ಹನ್ನೊಂದನೇ ಆವೃತ್ತಿಯನ್ನು ಮುಗಿಸಿಕೊಂಡಿದ್ದಾರೆ. ಹಾಗೆ ಈ ರಿಯಾಲಿಟಿ ಶೋ ಮುಗಿಸಿಕೊಂಡಿರೋ ಸಲ್ಲು ೨೦೧೮ ಬಹು ನಿರೀಕ್ಷಿತ ಚಿತ್ರವಾದ ರೇಸ್-3 ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.


ಆದರೆ ಮೊನ್ನೆ ದಿನ ಮುಂಬೈನ ಫಿಲಂ ಸಿಟಿಯಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಸಲ್ಮಾನ್ ಖಾನ್ ಜೀವಕ್ಕೇ ಕಂಟಕ ಬಂದೊದಗಿತ್ತು. ರೀಲಿನಲ್ಲಿ ಎಂಥೇಂಥಾ ಫೈಟಿಂಗ್ ಸೀನುಗಳನ್ನು ಲೀಲಾಜಾಲವಾಗಿ ನಿಭಾಯಿಸಿರೋ ಸಲ್ಮಾನ್ ಖಾನ್ ಈ ಹಠಾತ್ ಸನ್ನಿವೇಶದಿಂದ ಅರೆಕ್ಷಣ ದಂಗು ಬಡಿದಂತಾಗಿದ್ದರು.


ಅಷ್ಟಕ್ಕೂ ಆವತ್ತು ನಡೆದದ್ದೇನು ಅಂತ ನೋಡ ಹೋದರೆ ಒಂದಷ್ಟು ಆತಂಕಕರವಾದ ವಿಚಾರಗಳು ಹೊರ ಬೀಳುತ್ತವೆ. ಸಲ್ಮಾನ್ ಖಾನ್ ಆವತ್ತಿನ ಚಿತ್ರೀಕರಣ ಮುಗಿಸಿ ಪ್ಯಾಕಪ್‌ಗೆ ಅಣಿಯಾಗಿದ್ದರು. ಇಡೀ ಚಿತ್ರ ತಂಡವೇ ಆ ದಿನದ ಶೂಟಿಂಗ್ ಮುಗಿಸಿಕೊಂಡು ಹೊರಡೋ ಗಡಬಿಡಿಯಲ್ಲಿತ್ತು. ಆ ಸಂದರ್ಭದಲ್ಲಿ ಏಕಾಏಕಿ ಆ ಸೆಟ್ಟಿಗೆ ನುಗ್ಗಿ ಅಬ್ಬರಿಸಲಾರಂಭಿಸಿದವನು ಲಾರೆನ್ಸ್ ಎಂಬಾತ!


ಸಲ್ಮಾನ್ ಖಾನ್ ಸುತ್ತಾ ಸದಾ ಅಂಗ ರಕ್ಷಕರಿದ್ದೇ ಇರುತ್ತಾರಲ್ಲಾ? ಅವರನ್ನೂ ಯಾಮಾರಿಸಿದ ಲಾರೆನ್ಸ್ ಸಲ್ಲು ಎದೆಗೆ ರಿವಾಲ್ವರಿನ ಗುರಿ ಇಟ್ಟಿದ್ದ. ಕೂಡಲೇ ಅಂಗರಕ್ಷಕರು ಆತನನ್ನು ತಡೆದು ಪೊಲೀಸರ ವಶಕೊಪ್ಪಿಸಿದ್ದಾರೆ. ಹಾಗೆ ನುಗ್ಗಿ ದಾಂಧಲೆ ಎಬ್ಬಿಸಿದ ಲಾರೆನ್ಸ್ ಯಾರು? ಸಲ್ಮಾನ್ ಖಾನ್ ಮೇಲೆ ಆತನಿಗೇನು ದ್ವೇಷವಿತ್ತು ಎಂಬೆಲ್ಲ ವಿಚಾರಗಳು ಇನ್ನಷ್ಟೇ ಹೊರ ಬೀಳ ಬೇಕಿದೆ. ಸದ್ಯ ಪೊಲೀಸರು ಈ ಬಗ್ಗೆ ಯಾವ ಮಾಹಿತಿಯನ್ನೂ ಹೊರ ಬಿಟ್ಟಿಲ್ಲ. ಆದರೆ ಈ ಲಾರೆನ್ಸ್ ಬಗ್ಗೆ ನಾನಾ ದಿಕ್ಕಿನಿಂದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಂತೂ ಸಲ್ಮಾನ್ ಖಾನ್ ಅಂಗ ರಕ್ಷಕರ ದೆಸೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image