One N Only Exclusive Cine Portal

ಎರಡು ಜಡೆಗಳ ನಡುವೆ ನಿರ್ಮಾಪಕರ ಸಂಹಾರ!

ಎರಡು ಜಡೆಗಳು ಸೇರಿದೆಡೆಯಲ್ಲಿ ಕದನ ಖಾಯಮ್ಮು ಎಂಬ ಪುರಾತನ ನಾನ್ಣುಡಿ ಬೇರೆ ಬೇರೆ ರೂಪದಲ್ಲಿ ಸತ್ಯವಾಗುತ್ತಲೇ ಸಾಗುತ್ತಿದೆ. ಅದರಲ್ಲಿಯೂ ಸಿನಿಮಾ ಲೋಕದಲ್ಲಿ ಎರಡು ಜಡೆಗಳು ಒಂದೇ ಚಿತ್ರದಲ್ಲಿ ಸೇರಿಕೊಂಡರೆ ಏನೇನಾಗುತ್ತೆ ಎಂಬುದಕ್ಕೆ ‘ಸಂಹಾರ’ ಎಂಬ ಸಿನಿಮಾ ಸಜೀವ ಉದಾಹರಣೆಯಾಗಿ ನಿಂತಿದೆ!

ವೆಂಕಟೇಶ್ ಮತ್ತು ಸುಂದರ್ ರಾಜ್ ನಿರ್ಮಾಣ ಮಾಡಿರುವ ಸಂಹಾರ ಚಿತ್ರಕ್ಕೆ ಚಿರಂಜೀವಿ ಸರ್ಜಾ ನಾಯಕ. ಇನ್ನೇನು ಬಿಡುಗಡೆಯಾಗಲಿರೋ ಈ ಚಿತ್ರದಲ್ಲಿ ಹರಿಪ್ರಿಯಾ ಮತ್ತು ಕಾವ್ಯಾ ಶೆಟ್ಟಿ ನಾಯಕಿಯರು. ಪಟ್ಟಾಗಿ ಚಿತ್ರೀಕರಣ ಮುಗಿಸಿಕೊಂಡು ಯಾವುದೇ ರಗಳೆ ರಾಮಾಯಣಗಳಿಲ್ಲದೆ ಪ್ರಮೋಷನ್ ಸ್ಟೇಜಿಗೆ ಬಂದು ನಿಂತಿರೋ ನಿರ್ಮಾಪಕರ ಪಾಲಿಗೆ ನಾಯಕಿಯರ ನಡುವಿನ ಶೀತಲ ಸಮರ ದೊಡ್ಡ ತಲೆ ನೋವಾಗಿ ಪರಿಣಮಿಸಿ ಬಿಟ್ಟಿದೆ!

ನಾಯಕಿಯರಲ್ಲೊಬ್ಬರಾದ ಹರಿಪ್ರಿಯಾ ಪ್ರಮೋಷನ್ ಆರಂಭವಾಗುತ್ತಲೇ ಪ್ರೆಸ್‌ಮೀಟಿಗೂ ಹಾಜರಾಗದೇ ಚಿತ್ರ ತಂಡಕ್ಕೆ ಶಾಕು ನೀಡಿದ್ದರು. ಈ ಬಗ್ಗೆ ವಿಚಾರಿಸಿದಾಗ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲೇ ಸದ್ದು ಮಾಡಿರೋ ತನಗೆ ಸಂಹಾರ ಚಿತ್ರದ ಪೋಸ್ಟರುಗಳಲ್ಲಿ ಸೂಕ್ತವಾದ ಸ್ಥಾನಮಾನ ನೀಡಿಲ್ಲ ಎಂಬ ತಕರಾರು ತೆಗೆದಿದ್ದರಂತೆ. ಕಡೆಗೂ ಹರಿಪ್ರಿಯಾಗೆಂದೇ ವಿಶೇಷವಾಗಿ ಸ್ಟ್ಯಾಂಡಿ ಹಾಕೋ ಭರವಸೆ ನೀಡಿದಾಗ ಆಕೆ ಪ್ರೆಸ್ ಮೀಟಿಗೆ ಹಾಜರಾಗಿದ್ದರು.

ಆದರೆ ಹರಿಪ್ರಿಯಾ ಬರೋ ವಿಚಾರ ಕೇಳಿ ಮುನಿಸಿಕೊಂಡು ಮನೆಯಲ್ಲೇ ಕುಂತವಳು ಮತ್ತೋರ್ವ ನಾಯಕಿ ಕಾವ್ಯಾ ಶೆಟ್ಟಿ. ತನ್ನ ಪಾತ್ರಕ್ಕೆ ಕಥೆಯಲ್ಲಿ ವಿಶೇಷವಾದ ಸ್ಥಾನವಿದೆ. ಆದರೆ ಪರಿಪ್ರಿಯಾಗೆ ಮಾತ್ರವೇ ವಿಶೇಷವಾಗಿ ಫೋಕಸ್ ಮಾಡಲಾಗುತ್ತಿದೆ ಎಂಬುದು ಕಾವ್ಯಾಳ ವರಾತ! ಹಾಗೆ ನೋಡಿದರೆ ಹರಿಪ್ರಿಯಾ ವರ್ಚಸ್ಸು ಹೊಂದಿರೋ ನಟಿ. ಕಾವ್ಯಾ ಶೆಟ್ಟಿಯ ಖಾತಗೆ ಇನ್ನೂ ಯಾವ ಗೆಲುವಿನ ಸಿನಿಮಾಗಳೂ ಜಮೆಯಾಗಿಲ್ಲ! ಹೀಗಿರುವಾಗ ಈಕೆ ಹರಿಪ್ರಿಯಾ ಮೇಲೇ ಜಿದ್ದಿಗೆ ಬಿದ್ದರೆ ಹೇಗೆ?!

ಈ ಸಿನಿಮಾವನ್ನು ದೊಡ್ಡ ಕನಸಿನಿಂದಿಗೆ ನಿರ್ಮಾಪಕರು ನಿರ್ಮಾಣ ಮಾಡಿದ್ದಾರೆ. ಆ ಶ್ರಮವೆಲ್ಲ ಸಾರ್ಥಕವಾಗುವ ಕಡೇ ಘಳಿಗೆಯಲ್ಲಿ ಹರಿಪ್ರಿಯಾ ಮತ್ತು ಕಾವ್ಯಾ ಶೆಟ್ಟಿಯ ತಗಾದೆಯಿಂದಾಗಿ ನಿರ್ಮಾಪಕರು ಕಂಗಾಲಾಗಿದ್ದಾರೆ ಎಂಬ ಮಾತು ಗಾಂಧಿನಗರದಲ್ಲಿ ಗಿರಕಿ ಹೊಡೆಯುತ್ತಿದೆ. ಆದರೆ ತಮ್ಮನ್ನೇ ನಂಬಿ ಹಣ ಸುರಿದು ಚಿತ್ರ ಮಾಡಿರೋ ನಿರ್ಮಾಪಕರಿಗೆ ಕಾಟ ಕೊಡುವ ಮೂಲಕ ಚಿತ್ರಕ್ಕೆ ತೊಂದರೆ ಮಾಡಬಾರದೆಂಬ ಕನಿಷ್ಠ ಕಾಳಜಿಯೂ ಈ ಇಬ್ಬರು ನಟಿಯರಿಗೆ ಇಲ್ಲದಿರೋದು ದುರಂತ. ಈ ವಿಚಾರವಾಗಿ ನಿರ್ಮಾಪಕರನ್ನು ‘ಹೌದಾ’ ಅಂತಾ ಪ್ರಶ್ನಿಸಿದರೆ ‘ನೋ ನೋ.. ಇಬ್ಬರೀ ಹೀರೋಯಿನ್ ಗಳು ನಮ್ಮ ಫ್ಯಾಮಿಲಿ ಮೆಂಬರ‍್ಸ್ ಥರಾ.. ಹಾಗೆಲ್ಲಾ ಏನಿಲ್ಲಾ..’ ಅಂತಾರೆ. ಎಲ್ಲಿ ವಿವಾದ ಉಂಟಾಗುತ್ತದೋ ಎಂದು ನಿರ್ಮಾಪಕರು ಹೀಗನ್ನುತ್ತಿರಬಹುದು. ಅಸಲೀ ವಿಚಾರ ಏನೆಂಬುದು ಊರಿಗೇ ಗೊತ್ತಾಗಿದೆ.

ಹರಿಪ್ರಿಯಾ, ಕಾವ್ಯಾ ಶೆಟ್ಟಿ ಸೇರಿದಂತೆ ಯಾರೇ ನಟಿಯರಿಗಾದರೂ ಇಂಥಾ ನಖರಾಗಳು ಶೋಭೆ ತರುವಂಥಾದ್ದಲ್ಲ. ಅದೇನೇ ತಕರಾರುಗಳಿದ್ದರೂ ಕೂತು ಮಾತಾಡಿ ಬಗೆಹರಿಸಿಕೊಳ್ಳುವಂಥವೇ. ಮುನಿಸು, ಸಿಡುಕಿನ ದಾರಿ ಹಿಡಿದು ಚಿತ್ರಕ್ಕೆ ತೊಂದರೆ ಮಾಡುವಂಥಾ ಮನಸ್ಥಿತಿ ಇನ್ನಾದರೂ ಬದಲಾಗಬೇಕಿದೆ.

Leave a Reply

Your email address will not be published. Required fields are marked *


CAPTCHA Image
Reload Image