One N Only Exclusive Cine Portal

ಸಂಹಾರ : ರೋಚಕ ಹಾದಿಯ ಕತ್ತಲು ಬೆಳಕಿನಾಟ!

ಗುರುದೇಶಪಾಂಡೆ ಕೊಂಚ ಬಿಡುವಿನ ಬಳಿಕ ಮತ್ತೆ ನಿರ್ದೇಶನ ಮಾಡಿರುವ ಚಿತ್ರ ಸಂಹಾರ. ಟೈಟಲ್ಲಿನಲ್ಲಿಯೇ ಒಂಥರಾ ಖದರ್ ಹೊಂದಿರೋ ಈ ಚಿತ್ರ ಪಕ್ಕಾ ಗುರುದೇಶಪಾಂಡೆ ಶೈಲಿಯಲ್ಲಿಯೇ ಮೂಡಿ ಬಂದಿದೆ. ಅಚಾನಕ್ಕಾದ ಟ್ವಿಸ್ಟು, ಕೂತಲ್ಲಿಂದ ಕದಲದಂತೆ ಹಿಡಿದಿಡುವ ರೋಚಕತೆ… ಇದೆಲ್ಲದರಿಂದ ಸಂಹಾರ ಪ್ರೇಕ್ಷಕರನ್ನು ತೃಪ್ತಿ ಪಡಿಸುವಲ್ಲಿ ಆರಂಭಿಕವಾಗಿ ಗೆದ್ದಿದೆ.

ಈವರೆಗೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದರೂ ಸರಿಯಾದೊಂದು ಗೆಲುವಿಗಾಗಿ ಕಾತರಿಸುತ್ತಿದ್ದವರು ಚಿರು ಸರ್ಜಾ. ಅಂಥಾ ಚಿರು ಸಂಹಾರ ಚಿತ್ರದ ನಾಯಕ. ಈ ಚಿತ್ರದಲ್ಲಿ ನಾಯಕ ಆರಂಭದಲ್ಲಿ ಕುರುಡ. ಆತನಿಗೊಬ್ಬಳು ಪ್ರೇಯಸಿ. ಶ್ರೀಮಂತವಾದ ಕೌಟುಂಬಿಕ ಹಿನ್ನೆಲೆ ಹೊಂದಿರೋ ನಾಯಕ ತನ್ನ ಪ್ರೇಯಸಿಗಾಗಿ ಏನು ಮಾಡಲೂ ಸಿದ್ಧ ಎಂಬಂಥಾ ಮನಸ್ಥಿತಿಯವನು. ಪ್ರೇಯಸಿಯಾಗಿ ನಟಿಸಿರೋ ಹರಿಪ್ರಿಯಾ ತನ್ನ ಕಷ್ಟ ಕಾರ್ಪಣ್ಯಗಳಿಗೆಲ್ಲ ನಾಯಕನಿಂದಲೇ ಸಹಾಯ ಪಡೆಯುತ್ತಿರುತ್ತಾಳೆ.

ಹೀಗಿರೋ ನಾಯಕನಿಗೆ ತನಗೆ ಕಣ್ಣು ಬಂದು ಹೊಸಾ ಬೆಳಕಲ್ಲಿ ಜಗತ್ತನ್ನು ಕಣ್ತುಂಬಿಕೊಳ್ಳಬೇಕೆಂಬ ಬಯಕೆ. ಅದು ಕೈಗೂಡಿಯೂ ಬಿಡುತ್ತೆ. ಆದರೆ ಏಕಾಏಕಿ ಕತ್ತಲಿಂದ ಬೆಳಕು ಎದುರುಗೊಳ್ಳೋ ಆತನಿಗೆ ಎಲ್ಲವೂ ಅಯೋಮಯ. ತಾನು ಇನ್ನಿಲ್ಲದಂತೆ ಪ್ರೀತಿಸೋ ಹುಡುಗಿ ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತಾಳೆ. ಟೀವಿ ನೋಡಿದವನಿಗೆ ಮತ್ತೊಂದು ಶಾಕು. ತಾನು ಸತ್ತಿದ್ದಾನೆಂದುಕೊಂಡಿದ್ದ ತನ್ನ ಹುಡುಗಿಯ ಅಪ್ಪ ಮತ್ತೊಮ್ಮೆ ಸತ್ತಿರುತ್ತಾನೆ!

ಏನೋ ಮಿಸ್ ಹೊಡೆಯುತ್ತಿರೋ ವಾಸನೆ ಬಡಿದು, ತನ್ನ ಸುತ್ತ ತನಗೇ ಗೊತ್ತಿಲ್ಲದಂತೆ ವ್ಯೂಹವೊಂದು ಸುತ್ತಿಕೊಂಡಿರೋದರ ಬಗ್ಗೆ ಅನುಮಾನಗೊಂಡ ನಾಯಕ ಸೀದಾ ಅದರ ಜಾಡು ಹಿಡಿದು ಮಂಗಳೂರಿನತ್ತ ತೆರಳುತ್ತಾನೆ. ಆ ನಂತರವೇ ರಗಡ್ ಟಚ್ಚಿನ ಕುತೂಹಲಕರವಾದ ಕಥೆಯೊಂದು ಬಿಚ್ಚಿಕೊಳ್ಳುತ್ತೆ. ಆತನ ಸುತ್ತಾ ಸುತ್ತಿಕೊಂಡಿದ್ದ ವ್ಯೂಹ ಯಾವುದು, ಅದರ ಸೂತ್ರಧಾರರು ಯಾರು? ಕಳೆದು ಹೋದ ನಾಯಕಿ ಸಿಗುತ್ತಾಳಾ? ಅಷ್ಟಕ್ಕೂ ಆಕೆ ನಾಪತ್ತೆಯಾದದ್ದೇಕೆ? ಎಂಬ ಪ್ರಶ್ನೆಗಳಿಗೆಲ್ಲ ಥೇಟರಿನಲ್ಲೇ ಉತ್ತರ ಹುಡುಕಿದರೆ ಚೆನ್ನ.

ಇಲ್ಲಿ ಕಾವ್ಯಾ ಶೆಟ್ಟಿ ಮತ್ತು ಹರಿಪ್ರಿಯಾ ಸೇರಿದಂತೆ ಇಬ್ಬರು ನಾಯಕಿಯರಿದ್ದರೂ ಕಥೆಯ ಫೋಕಸ್ ಆಗಿರೋದು ಹರಿಪ್ರಿಯಾ ಪಾತ್ರದ ಮೇಲೆಯೇ. ಆ ಪಾತ್ರವನ್ನು ಹರಿಪ್ರಿಯಾ ನುಂಗಿಕೊಂಡಂತೆ ನಟಿಸಿದ್ದಾಳೆಂಬುದು ಈ ಚಿತ್ರದ ಅಸಲೀ ಪ್ಲಸ್ ಪಾಯಿಂಟು. ನಾಯಕಿಯಾಗಿದ್ದರೂ ನೆಗೆಟಿವ್ ಶೇಡಿನ ಆ ಪಾತ್ರದಲ್ಲಿ ಹರಿಪ್ರಿಯಾ ನೆನಪಿನಲ್ಲುಳಿಯುತ್ತಾರೆ. ಕಾವ್ಯಾ ಶೆಟ್ಟಿಯದ್ದು ಆವರೇಜ್ ನಟನೆ. ಇನ್ನು ಸಂಹಾರ ಚಿತ್ರದ ಮೂಲಕವಾದರೂ ಒಂದು ಭರಪೂರ ಯಶಸ್ಸಿನ ನಿರೀಕ್ಷೆಯಲ್ಲಿದ್ದ ನಾಯಕ ಚಿರಂಜೀವಿ ಸರ್ಜಾ, ಪರಿಪ್ರಿಯಾಳ ಅಬ್ಬರದ ನಟನೆಯ ಮುಂದೆ ಡಲ್ಲು ಹೊಡೆಯುತ್ತಾರೆ!

ಸಂಹಾರ ತಮಿಳು ಚಿತ್ರವೊಂದರ ರೀಮೇಕ್ ಅನ್ನಲಾಗುತ್ತಿದೆಯಾದರೂ ನಿರ್ದೇಶನದಲ್ಲಿ ಗುರುದೇಶಪಾಂಡೆಯ ಕಸುಬುದಾರಿಕೆ ಗಮನ ಸೆಳೆಯುತ್ತದೆ. ಒಂದು ಮುಖ್ಯವಾದ ಪಾತ್ರದಲ್ಲಿ ಚಿಕ್ಕಣ್ಣನೂ ಕೊಂಚ ಭಿನ್ನವಾಗಿ ನಟಿಸಿದ್ದಾನೆ; ಜೊತೆಗೆ ಪ್ರೇಕ್ಷಕರನ್ನು ನಗಿಸುವಲ್ಲೂ ಗೆದ್ದಿದ್ದಾನೆ. ಇನ್ನುಳಿದಂತೆ ಛಾಯಾಗ್ರಹಣ, ಕ್ಯಾಮೆರಾ, ಹಿನ್ನೆಲೆ ಸಂಗೀತ, ಹಾಡುಗಳು ಒಂದಕ್ಕೊಂದು ಪೂರಕವಾಗಿ ಮೂಡಿ ಬಂದಿವೆ.

Leave a Reply

Your email address will not be published. Required fields are marked *


CAPTCHA Image
Reload Image