One N Only Exclusive Cine Portal

ಬೆಂಗಳೂರಿನ ಬಗ್ಗೆ ಏನಂದಳು ಗೊತ್ತಾ ಸೀರತ್ ಕಪೂರ್?


ಬೆಂಗಳೂರಿನ ಟ್ರಾಫಿಕ್ಕು, ಧೂಳು, ಕಸ ಮುಂತಾದವುಗಳಿಂದ ರೇಜಿಗೆ ಪಟ್ಟುಕೊಳ್ಳೋ ಬೆಂಗಳೂರು ವಾಸಿಗಳು ಸದಾ ಬೈದುಕೊಂಡು ಓಡಾಡೋದು ಮಾಮೂಲು. ದೂರದ ಊರುಗಳನ್ನು ನೋಡಿ ಅದೆಷ್ಟು ಚೆನ್ನಾಗಿದೆ ಅಂತ ಹೊಟ್ಟೆ ಉರಿಸಿಕೊಳ್ಳೋದೂ ಇದ್ದಿದ್ದೇ. ಆದರೆ ಅದೆಷ್ಟೇ ತಕರಾರುಗಳಿದ್ದರೂ ಬೆಂಗಳೂರಿನಂಥಾ ಚೆಂದದ ನಗರ ಮತ್ತೊಂದಿಲ್ಲ ಎಂಬುದು ಯಾರಾದರೂ ಒಪ್ಪಿಕೊಳ್ಳಲೇ ಬೇಕಾದ ಸತ್ಯ!
ಬಾಲಿವುಡ್‌ನಲ್ಲಿ ಹೆಸರು ಮಾಡಿ ಬಹುಭಾಷಾ ತಾರೆಯಾಗಿ ಮಿಂಚುತ್ತಿರೋ ಸೀರತ್ ಕಪೂರ್ ಬೆಂಗಳೂರಿನ ಬಗ್ಗೆ ಆಡಿರೋ ಮಾತುಗಳು ಐಟಿ ಸಿಟಿಯ ಅಸಲೀ ಗುಣಲಕ್ಷಣಗಳನ್ನು ಎತ್ತಿ ತೋರಿಸುವಂತಿದೆ.


ಇದೀಗ ಚಿತ್ರವೊಂದರ ಚಿತ್ರೀಕರಣಕ್ಕಾಗಿ ಬೆಂಗಳೂರಿಗೆ ಬಂದಿರೋ ಸೀರತ್ ಬೆಂಗಳೂರನ್ನು ಹಾಡಿ ಹೊಗಳಿದ್ದಾಳೆ. ಟ್ರಾಫಿಕ್ ಕಿರಿಕಿರಿ ಇಂಥಾ ಮಹಾ ನಗರಗಳಲ್ಲಿ ಇದ್ದೇ ಇರುತ್ತದೆ. ಆದರೆ ಅದನ್ನೂ ಕೂಡಾ ಬೇರೆ ಸಿಟಿಗಳಿಗೆ ಹೋಲಿಸಿದರೆ ಬೆಂಗಳೂರಲ್ಲಿ ನಿಯಂತ್ರಣದಲ್ಲಿಡಲಾಗಿದೆ. ಬೆಂಗಳೂರು ಚೆಂದದ ಪ್ಲಾನಿಂಗ್ ಮೂಲಕ ಗಮನ ಸೆಳೆಯೋ ನಗರ. ಇದು ಇಲ್ಲೇ ಶಾಶ್ವತವಾಗಿ ಉಳಿದು ಬಿಡಬೇಕೆಂಬ ಫೀಲ್ ಹುಟ್ಟಿಸುವಂಥಾ ನಗರ. ಇಲ್ಲಿನ ಕನ್ನಡಿಗ ಜನ ಕೂಡಾ ಎಲ್ಲರನ್ನೂ ಪ್ರೀತಿಸುವವರು. ಎಂಬುದು ಸೀರತ್ ಕಪೂರ್ ಅಭಿಮಾನದ ಮಾತಿನ ಸಾರಾಂಶ.


ಅಂದಹಾಗೆ ಸೀರತ್ ಕಪೂರ್ ಇದೀಗ ಚಿತ್ರವೊಂದರ ಚಿತ್ರೀಕರಣಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದಾಳೆ. ವಾರದಿಂದೀಚೆಗೆ ನಿರಂತರವಾಗಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾಳೆ. ಇದರ ನಡುವೆ ಬೆಂಗಳೂರಿನ ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂಬ ಕೊರಗನ್ನೂ ಸೀರತ್ ಕಪೂರ್ ಹೊರ ಹಾಕಿದ್ದಾಳೆ.


ಅಂದಹಾಗೆ ಈ ಚಿತ್ರದ ಚಿತ್ರೀಕರಣ ಮುಗಿದ ನಂತರ ಮತ್ತೊಂದು ತೆಲುಗು ಚಿತ್ರದಲ್ಲಿ ಸೀರತ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾಳಂತೆ. ವಿಶೇಷವೆಂದರೆ ಆ ಚಿತ್ರದಲ್ಲಿ ಕನ್ನಡದ ಇಬ್ಬರು ನಾಯಕಿಯರೂ ಕೂಡಾ ಈಕೆಗೆ ಜೊತೆಯಾಗಿ ನಟಿಸಲಿದ್ದಾರೆ. ಶ್ರದ್ಧಾ ಶ್ರೀನಾಥ್ ಮತ್ತು ಸಂಯುಕ್ತಾ ಹೊರನಾಡು ಈ ಚಿತ್ರದಲ್ಲಿ ಸೀರತ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರಂತೆ.

ಅಂತೂ ಸೀರತ್ ಕಪೂರ್ ಬೆಂಗಳೂರಿನ ಬಗ್ಗೆ ಮತ್ತು ಇಲ್ಲಿನ ಜನರ ಬಗ್ಗೆ ಒಳ್ಳೆ ಮಾತುಗಳನ್ನು ಆಡುವ ಮೂಲ ಬೆಂಗಳೂರಿಗರಿಗೆ ಬೆಂಗಳೂರಿನ ಸಹನಾಶೀಲ ಗುಣವನ್ನು ಮತ್ತೆ ಪರಿಚಯಿಸಿದ್ದಾಳೆ!

Leave a Reply

Your email address will not be published. Required fields are marked *


CAPTCHA Image
Reload Image