One N Only Exclusive Cine Portal

ಸೀಜರ್ ಚಿತ್ರವೀಗ ವಿವಾದದ ಕೇಂದ್ರಬಿಂದು!

ಕ್ರೇಜಿಸ್ಟಾರ್ ರವಿಚಂದ್ರನ್ ಅಂದರೇನೇ ನೇರಾನೇರ ವ್ಯಕ್ತಿತ್ವಕ್ಕೆ ಹೆಸರಾದವರು. ಅನ್ನಿಸಿದ್ದನ್ನು ಯಾವ ಮುಲಾಜೂ ಇಲ್ಲದೆ ಹೇಳಿ ಬಿಡುವ ಅವರು ಆ ವ್ಯಕ್ತಿತ್ವದಾಚೆಗೂ ಆಜಾತಶತ್ರುವಾಗಿಯೇ ಉಳಿದುಕೊಂಡಿರುವವರು. ಅವರ ರೆಕಾರ್ಡಿನಲ್ಲಿ ಅದ್ದೂರಿ ಗೆಲುವುಗಳಿವೆ, ಕಂಗಾಲಾಗುವಂಥಾ ಸೋಲುಗಳಿವೆ. ಆದರೆ ಹುಡುಕಿದರೂ ವಿನಾಕಾರಣ ವಿವಾದವೆಬ್ಬಿಸಿದ ವಿಚಾರಗಳು ಸಿಗುವುದು ಕಷ್ಟ.

ಇಂಥಾ ರವಿಚಂದ್ರನ್ ಇದೀಗ ಸೀಜರ್ ಚಿತ್ರದ ಡೈಲಾಗ್ ಒಂದರ ಸಂಬಂಧವಾಗಿ ಮುಸ್ಲಿಂ ಸಮುದಾಯದವರ ವಿರೋಧ ಎದುರಿಸುವಂತಾಗಿದೆ!
ಚಿರಂಜೀವಿ ಸರ್ಜಾ ಮತ್ತು ರವಿಚಂದ್ರನ್ ಒಟ್ಟಾಗಿ ನಟಿಸಿರೋ ಚಿತ್ರ ಸೀಜರ್. ಈ ಚಿತ್ರದ ಟ್ರೈಲರ್ ಒಂದು ತಿಂಗಳ ಹಿಂದೆ ಬಿಡುಗಡೆಯಾಗಿತ್ತು. ಅದರಲ್ಲಿ ರವಿಚಂದ್ರನ್ ಮಾಸ್ ಲುಕ್ಕಿನಲ್ಲಿ ಹೇಳಿದ್ದೊಂದು ಡೈಲಾಗ್ ಇದೀಗ ವಿವಾದಕ್ಕೆ ಕಾರಣವಾಗಿದೆ. `ಹಸುವಿನ ಕತ್ತು ಕಡಿಯೋದೂ ಒಂದೆ, ತಾಯಿಯ ತಲೆ ಹಿಡಿಯೋದೂ ಒಂದೆ’ ಎಂಬ ಡೈಲಾಗ್ ವಿರುದ್ಧ ಮುಸ್ಲಿಂ ಸಂಘಟನೆಗಳು ಕೆಂಡ ಕಾರಿವೆ.

ಎಸ್‌ಡಿಪಿಐ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮುಜೀದ್ ಈ ಡೈಲಾಗನ್ನು ಚಿತ್ರದಿಂದ ತೆಗೆದು ಹಾಕುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಸಲ್ಲಿಸಲೂ ಮುಂದಾಗಿದ್ದಾರೆ. ಇದರ ಜೊತೆ ಜೊತೆಗೇ ಸೀಜರ್ ಚಿತ್ರದ ವಿರುದ್ಧ ರಾಜ್ಯದ ಅಲ್ಲಲ್ಲಿ   ಪ್ರತಿಭಟನೆಗಳು ನಡೆಯೋ ಸಾಧ್ಯತೆಗಳೂ ಇವೆ.

ಅಷ್ಟಕ್ಕೂ ಗೋ ಪ್ರೇಮ ಮತ್ತು ಗೋವನ್ನೇ ಆಹಾರಪದ್ಧತಿಯಾಗಿಸಿಕೊಂಡ ಸಮುದಾಯಗಳ ಬಗೆಗಿನದ್ದು ಅತ್ಯಂತ ಸೂಕ್ಷ್ಮ ವಿಚಾರ. ಹಿಂದೂಗಳಿಗೆ ಗೋವು ಪವಿತ್ರವಾದರೆ, ಮುಸಲ್ಮಾನರಿಗೆ ಅದು ಆಹಾರದ ಮೂಲವೂ ಹೌದು. ಆದರೆ ಈ ವಿಚಾರ ಅನಾದಿ ಕಾಲದಿಂದ ನಡೆದು ಬಂದಿದ್ದರೂ ನಮ್ಮ ಸಾಮಾಜಿಕ ರಚನೆಯಲ್ಲಿ ಒಡಕುಂಟು ಮಾಡುವಂಥಾ ಸನ್ನಿವೇಶಗಳು ಸೃಷ್ಟಿಯಾಗಿರಲಿಲ್ಲ. ಆದರೆ ಧರ್ಮಾಧಾರಿತ ರಾಜಕೀಯದ ಹುಚ್ಚಿಗೆ ಬಿದ್ದವರು ಗೋಹತ್ಯೆಯನ್ನು ರಾಜಕೀಯಗೊಳಿಸಿ ಎರಡು ಧರ್ಮಗಳ ನಡುವೆ ಬೆಂಕಿ ಹೊತ್ತಿಸೋ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಅಂಥಾ ಸೂಕ್ಷ್ಮ ವಿಚಾರವನ್ನು ಪಬ್ಲಿಸಿಟಿಯ ಆಸೆಯಿಂದಲೇ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆಯಾ ಅನ್ನೋ ಅನುಮಾನವೂ ಮೂಡುತ್ತದೆ.

ಈಗ ಆ ವಿವಾದಾತ್ಮಕ ಡೈಲಾಗನ್ನು ಚಿತ್ರ ತಂಡ ತೆಗೆದು ಹಾಕುತ್ತಾ ಅಥವಾ ಮತ್ತೊಂದಷ್ಟು ರಾಡಿ ಎಬ್ಬಿಸಲು ಅನುವು ಮಾಡಿಕೊಡುತ್ತದಾ ಎಂಬುದನ್ನು ಕಾದು ನೋಡ ಬೇಕಿದೆ!

Leave a Reply

Your email address will not be published. Required fields are marked *


CAPTCHA Image
Reload Image