One N Only Exclusive Cine Portal

ಕಾರ್ ಸೀಜ಼ಿಂಗ್, ಕೊಲೆ ಮತ್ತು ಪ್ರೇಮದ ಬಲೆ!

ಅದು ಒನ್ ಅಂಡ್ ಓನ್ಲಿ ಫೈನಾನ್ಸ್ ಕಂಪೆನಿ. ವಾಹನಗಳಿಗೆ ಸಾಲ ನೀಡೋ ಸಂಸ್ಥೆ. ಅದಕ್ಕೊಬ್ಬ ಯಜಮಾನ. ಅವರು ರವಿಚಂದ್ರನ್! ಸಾಲ ಪಡೆದು ಕಾರು ಖರೀದಿಸಿ ಹಣ ವಾಪಾಸು ಮಾಡದೇ ಇರೋರನ್ನು ಹಿಡಿದು ಕಾರು ಜಪ್ತಿ ಮಾಡಿಕೊಂಡು ಬರೋ ಕೆಲಸ ಹೀರೋ ಸೀಜ಼ರ್‌ದು. ಸಾಲ ತೀರಿಸದವರು ಅದ್ಯಾವ ಘಟಾರದಲ್ಲಿ ಅವಿತಿದ್ದರೂ, ಕಾರಿನ ಜಾಡು ಹಿಡಿದು ಸೀಜ಼ು ಮಾಡಿ ಎತ್ತಾಕಿಕೊಂಡು ಬರೋದರಲ್ಲಿ ಸೀಜ಼ರ್ ನಿಸ್ಸೀಮ. ತನ್ನ ಧಣಿ ಸೂಚಿಸಿದ ವಾಹನ ಕಾರಾಗಲಿ, ಆಂಬುಲೆನ್ಸಾಗಲಿ ಅಥವಾ ಪೊಲೀಸ್ ವಾಹನವೇ ಆಗಲಿ ಅದನ್ನು ತಂದು ಬಾಸ್ ಸುಪರ್ದಿಗೊಪ್ಪಿಸೋದು ಈತನ ನಿಯತ್ತು. ಲೋನಿನಲ್ಲಿ ಪಡೆದ ಕಾರುಗಳನ್ನು ತನ್ನ ಕುಕೃತ್ಯಕ್ಕೆ ಬಳಸಿಕೊಳ್ಳೋದು ಪ್ರಕಾಶ್ ರೈ ಕೆಲಸ. ಸೀಜ಼ು ಮಾಡಿಕೊಂಡು ಬರುವುದರ ಜೊತೆಗೆ ಒಂದಾದ ಮೇಲೊಂದರಂತೆ ಕೊಲೆ ಮಾಡೋದು ಹೀರೋ ಚಿರಂಜೀವಿ ಸರ್ಜಾ ಜವಾಬ್ದಾರಿ. ಎರಡು ಕೊಲೆಗಳನ್ನು ಮಾಡಿದರೂ ತಾನು ಯಾತಕ್ಕಾಗಿ ಆ ಜೀವಗಳನ್ನು ತೆಗೆ ಅನ್ನೋದು ಸ್ವತಃ ಆತನಿಗೇ ಗೊತ್ತಿಲ್ಲ ಸತ್ಯವಾಗಿರುತ್ತದೆ. ಮೂರನೇ ಕೊಲೆ ಮಾಡೋ ಹೊತ್ತಿಗೆ ತಾನು ಮಾಡುತ್ತಿರುವ ಕೊಲೆಗೆ ನಿಖರವಾದ ಕಾರಣವೂ ಗೊತ್ತಾಗಿರುತ್ತದೆ. ಹಾಗಾದರೆ ಆ ಕೊಲೆಗಳು ನಡೆಯಲು ಏನಂಥಾ ಘನವಾದ ಕಾರಣವಿರುತ್ತದೆ ಅನ್ನೋದು ಸಿನಿಮಾ ಕೊನೆಕೊನೆಯಲ್ಲಿ ಗೊತ್ತಾಗುತ್ತದೆ.

ಈ ಸಿನಿಮಾವನ್ನು ನೋಡನೋಡುತ್ತಲೇ ತೀರಾ ಕಾಡುವ ಪ್ರಶ್ನೆಯೆಂದರೆ `ಸ್ವತಃ ಈ ಚಿತ್ರದ ಡೈರೆಕ್ಟರ್ರು ಗಾಂಧಿನಗರಕ್ಕೆ ಬರೋ ಮುಂದೆ ಕಾರ್ ಸೀಜ಼ು ಮಾಡೋ ಕಸುಬು ಮಾಡುತ್ತಿದ್ದರಾ? ಅಥವಾ ಫೈನಾನ್ಸ್ ಸಂಸ್ಥೆಯನ್ನೇನಾದರೂ ತೆರೆದು ಕೂತಿದ್ದರಾ?’ ಅನ್ನೋದು! ಯಾಕೆಂದರೆ ವಾಹನ ಜಪ್ತಿ ಮಾಡೋದರ ಕುರಿತು ಸಣ್ಣ ಸಣ್ಣ ವಿವರವನ್ನೂ ಚಿತ್ರಕತೆಯಲ್ಲಿ ಸೇರಿಸಿದ್ದಾರೆ. ಸಿನಿಮಾದ ಮೊದಲರ್ಧ ಮುಗಿದು ಎರಡನೇ ಭಾಗದಲ್ಲಿ ಕೂಡಾ ಕಾರು ಲಿಫ್ಟ್ ಮಾಡುವ ದೃಶ್ಯಗಳು ಹಾಗೇ ಮುಂದುವರೆಯುತ್ತದೆ. ಸಾಮಾನ್ಯಕ್ಕೆ ರೌಡಿ ಎಲಿಮೆಂಟುಗಳು ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಶಬರಿಮಲೆಗೆ ಹೋಗೋದು ತಮ್ಮ ಮನಃಪರಿವರ್ತನೆಗೆ ಅನ್ನೋದು ಸಾಕಷ್ಟು ಜನರ ನಂಬುಗೆ. ಆದರೆ ಸೀಜ಼ರ್ ಸಿನಿಮಾದಲ್ಲಿ ಅದಕ್ಕೂ ಹೊಸದೊಂದು ಕಾರಣ ತೋರಿಸಲಾಗಿದೆ. ಅದು ಏನಂತಾ ತಿಳಿದುಕೊಳ್ಳಲಾದರೂ ಸೀಜರನ್ನೊಮ್ಮೆ ನೋಡಿ ಕೃತಾರ್ಥರಾಗಬೇಕು!

ಚಿರಂಜೀವಿ ಸರ್ಜಾ ಸ್ಕ್ರೀನನ್ನು ಆವರಿಸಿಕೊಳ್ಳುವಷ್ಟು ವಿಶಾಲವಾಗಿ ಕಾಣಿಸಿಕೊಂಡಿರೋದರ ಜೊತೆ ವಿಶೇಷ ಗಡ್ಡದೊಂದಿಗೆ ಮಿಂಚಿದ್ದಾರೆ. ಪ್ರೇಮಲೋಕವನ್ನು ಕಟ್ಟಿದ್ದ ರವಿಚಂದ್ರನ್ ಫೈನಾನ್ಸ್ ಕಂಪೆನಿಯ ಮೂಲಕ ಯಮಲೋಕವನ್ನೂ ತೆರೆಯಬಹುದು ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ. ತನ್ನ ಹುಡುಗ ಸುಳ್ಳು ಹೇಳಿ ಬಲೆಗೆ ಬೀಳಿಸಿಕೊಂಡಿದ್ದಾನೆ ಅನ್ನೋದನ್ನು ಮನ್ನಿಸಿ ಪ್ರೀತಿಗೆ ಜಾರುವ ನಾಯಕಿ ಪಾರುಲ್ ಪಾತ್ರ ಮೆಚ್ಚಬೇಕಾದ್ದೇ. ಇನ್ನು ಇಡೀ ಸಿನಿಮಾದಲ್ಲಿ ಅಬ್ಬರಿಸುತ್ತಲೇ ಭಯ ಹುಟ್ಟಿಸೋದು ಡಾನ್ ಪ್ರಕಾಶ್ ರೈ.
ಕಾರ್ ಸೀಜ಼್ ಮಾಡುವ ಸೀನುಗಳು ಅಗತ್ಯಕ್ಕಿಂತಾ ಹೆಚ್ಚಿರುವುದರಿಂದ ಸೀಜ಼ರ್ ಶೀರ್ಷಿಕೆಗೆ ನ್ಯಾಯ ಸಿಕ್ಕಂತಾಗಿದೆ. ಕಾರ್ ಫೈನಾನ್ಸ್ ಕಂಪೆನಿಯ ಕ್ಯಾಬಿನ್ನು ಸೇರಿದಂತೆ ಅಲ್ಲಲ್ಲಿ ಕುಸುರಿ ಕೆಲಸ ಮಾಡಿರುವ ಕಲಾ ನಿರ್ದೇಶಕ ಹೊಸ್ಮನೆ ಮೂರ್ತಿ ಅವರ ಕೈಚಳಕ ಗಮನ ಸೆಳೆಯುತ್ತದೆ. ಕಾರುಗಳನ್ನೂ ಪಾತ್ರಗಳಂತೆ ಪಳಗಿಸಿಕೊಂಡ ಸಾಹಸನಿರ್ದೇಶಕ ಜಾಲಿ ಬಾಸ್ಟಿನ್ ಕೆಲಸ ಕೂಡಾ ಮೆಚ್ಚಬೇಕು. ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಅವರ ಮ್ಯೂಸಿಕ್ಕು ತುಂಬಾ ಅಬ್ಬರ ಹಿನ್ನೆಲೆ ಸಂಗೀತ ಗೊಬ್ಬರ. ಇನ್ನೊಂಚೂರು ಸೂಕ್ಷ್ಮತೆಯಿಂದ ಕೆಲಸ ಮಾಡಿದ್ದಿದ್ದರೆ ನಿರ್ದೇಶಕ ವಿನಯ್ ಕೃಷ್ಣ ಕಮರ್ಷಿಯಲ್ ಡೈರೆಕ್ಟರ್ ಅನ್ನಿಸಿಕೊಳ್ಳುತ್ತಿದ್ದರೇನೋ.

Leave a Reply

Your email address will not be published. Required fields are marked *


CAPTCHA Image
Reload Image