One N Only Exclusive Cine Portal

ಪೈನಾನ್ಷಿಯರ್ ರವಿಮಾಮ ಮತ್ತು ಚಿರು ಹಂಗಾಮ!

ರೀಮೇಕ್ ಚಿತ್ರಗಳ ಹಾವಳಿಯ ನಡುವೆಯೇ ಆಗಾಗ ತಂಗಾಳಿಯಂತೆ ಸ್ವಮೇಕ್ ಚಿತ್ರಗಳೂ ತಯಾರಾಗುತ್ತಿರುತ್ತವೆ. ಅದೇ ಸಾಲಿನಲ್ಲಿ ನಮ್ಮ ಸುತ್ತಲಿನದ್ದೇ ಒಂದು ಕಥಾ ಎಳೆಯನ್ನಿಟ್ಟುಕೊಂಡು ನಿರ್ಮಾಣಗೊಂಡಿರೋ ಚಿತ್ರ ಸೀಜರ್. ರವಿಚಂದ್ರನ್ ಮತ್ತು ಚಿರಂಜೀವಿ ಸರ್ಜಾ ಮುಖ್ಯಭೂಮಿಕೆಯಲ್ಲಿರೋ ಈ ಚಿತ್ರದ ಹಾಡುಗಳೀಗ ಲೋಕಾರ್ಪಣೆಗೊಂಡಿವೆ.
ಚಿತ್ರಸಂತೆಯ ಅಗಾಧ ಜನಸಾಗರ ಮತ್ತು ಸಂಭ್ರಮದ ಹಿಮ್ಮೇಳದಲ್ಲಿ ಅಶೋಕ ಹೋಟೆಲಿನಲ್ಲಿ ನಡೆದ ಅಚ್ಚುಕಟ್ಟಾದ ಕಾರ್ಯಕ್ರಮದಲ್ಲಿ ಈ ಚಿತ್ರದ ಹಾಡುಗಳು ಅನಾವರಣಗೊಂಡಿವೆ. ಟೈಟಲ್ಲಿನಲ್ಲಿಯೇ ರಗಡ್ ಟೋನ್ ಹೊಮ್ಮಿಸುತ್ತಾ ರವಿಚಂದ್ರನ್ ಇರುವಿಕೆಯ ಮೂಲಕ ಸದ್ದು ಮಾಡುತ್ತಾ ಬಂದಿರೋ ಈ ಚಿತ್ರ ಹಾಡುಗಳ ಮೂಲಕ ಇದೀಗ ಮತ್ತೆ ಪ್ರೇಕ್ಷಕರನ್ನು ತಲುಪಿಕೊಂಡಿದೆ. ಈಗಾಗಲೇ ಒಂದಷ್ಟು ಚಿತ್ರಗಳಲ್ಲಿ ನಾಯಕನಾಗಿ ನಟಿಸಿರೋ ಚಿರಂಜೀವಿ ಸರ್ಜಾಗೆ ರವಿಚಂದ್ರನ್ ಅವರ ಜೊತೆ ನಟಿಸೋ ದವಕಾಶ ಮೊದಲ ಬಾರಿ ಸೀಜರ್ ಮೂಲಕ ಕೂಡಿ ಬಂದಿದೆ. ಆ ಬಗೆಗಿನ ಖುಷಿ ಮತ್ತು ಹೆಮ್ಮೆ ಚಿರು ಮಾತುಗಳಲ್ಲಿ ಧ್ವನಿಸುತ್ತಿತ್ತು.


ಅಂದಹಾಗೆ ಈ ಚಿತ್ರವನ್ನು ನಿರ್ದೇಶನ ಮಾಡಿರುವವರು ವಿನಯ್ ಕೃಷ್ಣ. ಇದು ನಿರ್ದೇಶಕನಾಗಿ ಅವರಿಗೆ ಮೊದಲ ಅನುಭವ. ಚೊಚ್ಚಲ ನಿರ್ದೇಶನದಲ್ಲಿಯೇ ಈ ನೆಲದ ಸ್ವಮೇಕ್ ಕಥೆಯೊಂದರ ಮೂಲಕ ಪ್ರೇಕ್ಷಕರನ್ನು ಎದುರುಗೊಂಡಿರೋ ವಿನಯ್ ಬೆಂಗಳೂರಿನಂಥಾ ಮಹಾನಗರಗಳ ಪಾಲಿಗೆ ನಿತ್ಯದ ಸಾಥ್ ನೀಡೋ ವಾಹನಗಳ ಸೀಜಿಂಗ್ ಸುತ್ತಲಿನ ರೋಚಕವಾದೊಂದು ಕಥೆಯನ್ನು ಸೀಜರ್ ಚಿತ್ರದ ಮೂಲಕ ಹೇಳಿದ್ದಾರಂತೆ.
ಬೆಂಗಳೂರಿನಲ್ಲಿ ದಿನವೊಂದಕ್ಕೆ ಏನಿಲ್ಲವೆಂದರೂ ಐನೂರಕ್ಕೂ ಹೆಚ್ಚು ಸುಸ್ತಿದಾರರ ವಾಹನಗಳನ್ನು ಸೀಜ್ ಮಾಡಲಾಗುತ್ತದೆ. ವಿವಿಧ ಫೈನಾನ್ಸ್ ಕಂಪೆನಿಗಳು ಇದಕ್ಕೆಂದೇ ಖಾಸಗೀ ತಂಡಗಳನ್ನು ನೇಮಿಸಿರುತ್ತಾರೆ. ಹೀಗೆ ವಾಹನಗಳನ್ನು ಸೀಜ್ ಮಾಡುವಾಗ ಚಿತ್ರ ವಿಚಿತ್ರವಾದ ಘಟನೆಗಳೂ ನಡೆಯುತ್ತವೆ. ಇಂಥಾದ್ದೇ ಒಂದು ರಸವತ್ತಾದ ಕಥೆಯನ್ನು ಒಂದು ಕುಟುಂಬದ ಸುತ್ತಾ ಹೆಣೆದು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರಂತೆ ವಿನಯ್.


ಈ ಚಿತ್ರದಲ್ಲಿ ಪೈನಾನ್ಷಿಯರ್ ಪಾತ್ರದಲ್ಲಿ ಕನಸುಗಾರ ರವಿಚಂದ್ರನ್ ಕಾಣಿಸಿಕೊಂಡಿದ್ದಾರೆ. ಅವರದ್ದಿಲ್ಲಿ ತುಂಬಾ ಭಿನ್ನವಾದ ಪಾತ್ರವಂತೆ. ಅವರ ಸಹಾಯಕನ ಪಾತ್ರ ಚಿರಂಜೀವಿ ಸರ್ಜಾರದ್ದು. ಚಿರುಗೆ ನಾಯಕಿಯಾಗಿ ಪಾರುಲ್ ಯಾದವ್ ನಟಿಸಿದ್ದಾರೆ. ವಾಹನ ಸೀಜ್ ಮಾಡೋ ಕೆಲಸ ರೌಡಿಸಂನೊಂದಿಗೆ ಹೊಸೆದುಕೊಂಡಿರುತ್ತೆ. ಅಂದ ಮೇಲೆ ಸೀಜಿಂಗ್ ಕಥೆಯಲ್ಲಿ ಖಳನಟನ ಇರುವಿಕೆ ಇದ್ದೇ ಇರುತ್ತೆ. ಇಲ್ಲಿ ಖಳನಟನ ಪಾತ್ರದಲ್ಲಿ ಪ್ರಕಾಶ್ ರೈ ಕಾಣಿಸಿಕೊಂಡಿದ್ದಾರೆ. ಮರ್ಯಾದೆ ರಾಮಣ್ಣ ಖ್ಯಾತಿಯ ತೆಲುಗಿನ ಖಳನಟ ಪ್ರಕಾಶ್ ರೈ ಗ್ಯಾಂಗಿನ ಸದಸ್ಯನಾಗಿ ಬಹು ಮುಖ್ಯವಾದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರಂತೆ.
ಕೈಗಾರಿಕೋಧ್ಯಮಿ ತ್ರಿವಿಕ್ರಮ್ ಸಾಫಲ್ಯ ಕಥೆಗೆ ಮನಸೋತು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರಂತೆ. ನಿರ್ಮಾಪಕರು ಎಲ್ಲಿಯೂ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಇಡೀ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆಂಬ ಮಾತು ನಿರ್ದೇಶಕರು ಸೇರಿದಂತೆ ಚಿತ್ರ ತಂಡದ ಸದಸ್ಯರಿಂದ ಕೇಳಿ ಬಂತು. ಎಲ್ಲಾ ಕೆಲಸ ಕಾರ್ಯಗಳನ್ನೂ ಮುಗಿಸಿಕೊಂಡಿರೋ ಈ ಚಿತ್ರ ಸದ್ಯದಲ್ಲೇ ತೆರೆ ಕಾಣಲಿದೆ.

Leave a Reply

Your email address will not be published. Required fields are marked *


CAPTCHA Image
Reload Image