Connect with us

ಕಲರ್ ಸ್ಟ್ರೀಟ್

‘ಸತ್ತಮೇಲೆ ನಿದ್ರಿಸೋದು ಇದ್ದಿದ್ದೇ, ಬದುಕಿರೋವಾಗ ಕೆಲಸ ಮಾಡೋಣ…’

Published

on

ಸಾಧಿಸುವ ಹಂಬಲ ಹೊಂದಿರುವವರಿಗೆಲ್ಲ ಟಾನಿಕ್ಕಿನಂತಿರುವ ಈ ಮಾತು ಹೇಳಿ, ಕಡೇ ಘಳಿಗೆಯವರೆಗೂ ಅದಕ್ಕೆ ತಕ್ಕುದಾಗಿ ಬದುಕಿದವರು ಶಂಕರ್ ನಾಗ್. ಅವರು ದೈಹಿಕವಾಗಿ ಮರೆಯಾಗಿ ಇಪ್ಪತ್ನಾರು ವರ್ಷಗಳೇ ಕಳೆದು ಹೋಗಿದ್ದರೂ ಅವರು ಜೀವಂತವಾಗಿರುವ ಥರಹೇವಾರಿ ರೀತಿಯನ್ನು ನೋಡಿದರೆ ಅಚ್ಚರಿಯಾಗುತ್ತದೆ. ಅಭಿಮಾನ ಇಮ್ಮಡಿಸುತ್ತದೆ. ಅಷ್ಟಕ್ಕೂ ಅವರ ನೆನಪಿಗೊಂದು ನೆಪವೇ ಬೇಕಿಲ್ಲ. ಆ ರೀತಿ ಕ್ರಿಯಾಶೀಲರಾಗಿ ಎಲ್ಲದರತ್ತಲೂ ಮಿಡಿಯುತ್ತಾ ಜೀವಿಸಿದ ಶಂಕರ್ ನಾಗ್ರ ಕಾರ್ಯಕ್ಷೇತ್ರ ಚಿತ್ರರಂಗ. ಆತ ಕನ್ನಡ ಚಿತ್ರರಂಗದ ಅಜರಾಮರ ನಕ್ಷತ್ರ. ಆದರೆ ಅವರ ಆಲೋಚನೆ, ವೃತ್ತಿ ಮತ್ತು ಕನಸುಗಾರಿಕೆಗೆ ಯಾವುದೇ ಪರಿಧಿರಲಿಲ್ಲ. ಅದಾಗಲೇ ಎರಡೂವರೆ ದಶಕಗಳಾದರೂ ಅವರನ್ನು ಇಂದಿಗೂ ಪ್ರಸ್ತುತವಾಗಿರಿಸಿರುವುದು ಅದೇ ಗುಣ!

ಅರುಣ್ ಕುಮಾರ್.ಜಿ

ಇದೀಗ ಕನ್ನಡದ ಪ್ರತೀ ಮನಸುಗಳ ಮೇಲೆಯೂ ಸಾರ್ವತ್ರಿಕವಾಗಿ ಶಂಕರ್ ನಾಗ್ ಅವರ ನೆನಪಿನ ಮೊಹರು ಪಡಿಮೂಡಿದೆ. `ಛೇ ಅವರು ಬದುಕಿರಬೇಕಿತ್ತು’ ಅಂತ ಅದೆಷ್ಟು ಮನಸುಗಳು ಏಕಕಾಲದಲ್ಲಿಯೇ ಲೊಚಗುಟ್ಟುತ್ತಿವೆಯೋ. ಅವರೀಗ ಬದುಕಿದ್ದಿದ್ದರೆ ಹೇಗಿರುತ್ತಿದ್ದರು ಎಂಬುದೂ ಸಹ ಮಧುರ ಕಲ್ಪನೆಯೇ. ಅಕಸ್ಮಾತು ಶಂಕರ್ ಬದುಕಿದ್ದಿದ್ದರೆ ಈ ತಿಂಗಳ ಒಂಭತ್ತನೇ ತಾರೀಕಿಗೆ ಅವರಿಗೆ ಭರ್ತಿ ಅರವತ್ತು ವರ್ಷ ತುಂಬುತ್ತಿತ್ತು. ಬಹುಶಃ ಅವರ ಖಾತೆಗೆ ಮತ್ತಷ್ಟು ದೊಡ್ಡದಾದ ಸಾಧನೆಗಳೇ ಜಮಾವಣೆಯಾಗಿರುತ್ತಿದ್ದವು. ಈ ಅರವತ್ತೆರಡರ ವಯಸ್ಸಿಗೆ ಯುವಕರೇ ನಾಚುವಂಥಾದ್ದೊಂದು ಯೋಜನೆ ಹಾಕಿಕೊಂಡು ಒರಟು ಮೀಸೆಯ ಮೊನೆಯಲ್ಲೇ ತುಂಟ ನಗೆ ಚಿಮ್ಮಿಸುತ್ತಿದ್ದರೋ ಏನೋ…

ಇಂಥಾ ಸಾವಿರ ಕಲ್ಪನೆಗಳಿಗೆ ಕಾರಣವಾಗಿರುವುದು ಶಂಕರ್ ನಾಗ್ ಬದುಕಿದ ರೀತಿ. ಇರುವಾಗಲೇ ಸತ್ತಂತೆ ಬದುಕುವವರ ನಡುವೆ ಸತ್ತೂ ಬದುಕಿರುವ ಶಂಕರ್ ನಾಗ್ ಜೀವಿಸಿದ ಜೀವನ್ಮುಖಿ ಶೈಲಿಯೇ ಅವರ ಪ್ರಭಾವವನ್ನು ದಶಕಗಳಾಚೆಗೂ ದಾಟಿಸಿಕೊಂಡು ಬಂದಿದೆ. ಶಂಕರ್ ನಾಗ್ ಬದುಕಿದ್ದು ಕೇವಲ ಮೂವತ್ತೂಚಿಲ್ಲರೆ ವರ್ಷ ಮಾತ್ರ. ಆದರೆ ಆ ಅಲ್ಪ ಅವಧಿಯಲ್ಲಿಯೇ ಅವರು ಮಾಡಿದ ಸಾಧನೆ ಮಾತ್ರ್ರ ಅಗಾಧ. ಶಂಕರ್ ತನ್ನ ಹನ್ನೆರಡು ವರ್ಷಗಳ ವೃತ್ತಿ ಜೀವನದಲ್ಲಿ ೫೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ೧೯೮೪ರ ಸುಮಾರಿನಲ್ಲಿ ಒಂದೇ ವರ್ಷದಲ್ಲಿ ಬರೋಬ್ಬರಿ ಹದಿನಾಲ್ಕು ಚಿತ್ರಗಳಲ್ಲಿ ಮತ್ತು ನಂತರದ ಎರಡು ವರ್ಷಗಳಲ್ಲಿ ಇಪ್ಪತ್ನಾಲ್ಕು ಸಿನಿಮಾಗಳಲ್ಲಿ ಶಂಕರ್ ನಟಿಸಿದ್ದರು ಎಂದರೆ ಅವರು ಅದೆಷ್ಟು ಪಾಳಿಗಳಲ್ಲಿ ದುಡಿದಿರಬಹುದು, ಯಾವ ಮಟ್ಟಕ್ಕೆ ನಿದ್ರೆಯನ್ನು ಸುಟ್ಟಿರಬಹುದು ಲೆಕ್ಕಹಾಕಿ. ಶಂಕರ್ ನಾಗ್ ನಿರ್ದೇಶಕನಾಗಿ ಗುರುತಿಸಿಕೊಂಡು, ರಂಗಭೂಮಿಯಲ್ಲಿಯೂ ಹೊಸಾ ಅಲೆ ಎಬ್ಬಿಸಿ, ಕಿರುತೆರೆಯನ್ನೂ ಆವರಿಸಿಕೊಂಡ ಪರಿ ಅದ್ಭುತವಾದದ್ದು.

ಶಂಕರ್ನಾಗ್ ಅವರಿಗೆ ಸಿನಿಮಾ ಮುಂತಾದ ಯಾವ ಹಿನ್ನೆಲೆಯೂ ಇರಲಿಲ್ಲ. ಆರ್ಥಿಕವಾಗಿಯೂ ಅಂಥಾ ಶಕ್ತಿ ಇರಲೂ ಇಲ್ಲ. ಆದರೆ ಆರಂಭದಿಂದಲೂ ಏನಾದರೊಂದು ಸಾಧಿಸಿಯೇ ತೀರಬೇಕೆಂಬ ಆಳವಾದ ಹಂಬಲವಿತ್ತು. ಉತ್ತರ ಕನ್ನಡ ಜಿಲ್ಲೆಯ ಚೆಂದದ ಊರು ಹೊನ್ನಾವರದಲ್ಲಿ ೯ನೇ ನವಂಬರ್ ೧೯೫೪ರಂದು ಜನಿಸಿದ ಶಂಕರ್ ಮನೆಯ ಭಾಷೆ ಕೊಂಕಣಿ. ಶಾಲಾ ದಿನಗಳಲ್ಲಿಯೇ ಬಣ್ಣದ ಜಗತ್ತಿನ ಕನಸು ಕಂಡಿದ್ದ ಅವರು ಅನ್ನ ಅರಸಿ ಕುಟುಂಬ ಸಮೇತರಾಗಿ ಹೊರಟದ್ದು ಹೊನ್ನಾವರದಿಂದ ಮುಂಬೈಗೆ. ಮುಂಬೈನ ಇಂಗ್ಲೀಷ್ ನಾಟಕವೊಂದರಲ್ಲಿ ಅಮೋಘವಾಗಿ ಅಭಿನುಸಿದ ಶಂಕರ್ ನಾಗ್ ಖ್ಯಾತ ನಾಟಕಕಾರ ಗಿರೀಶ್ ಕಾರ್ನಾಡ್ ವರ ಗಮನ ಸೆಳೆದರು. ನಂತರ ಕಾರ್ನಾಡ್ ತಮ್ಮ `ಒಂದಾನೊಂದು ಕಾಲದಲ್ಲಿ’ ಚಿತ್ರಕ್ಕೆ ನಾಯಕನನ್ನಾಗಿ ಮಾಡಲು ಬೆಂಗಳೂರಿಗೆ ಶಂಕರನ್ನು ಕರೆತಂದರು. ನಂತರ ಶಂಕರ್ ಮತ್ತೆ ನಮ್ಮವರಾಗಿ ಹೋದರು. ಬಹುಬೇಗ ಕನ್ನಡ ಕಲಿತರು. ಹಿಂದಿ ಚಿತ್ರರಂಗ, ಕನ್ನಡ ಚಿತ್ರರಂಗ, ಮರಾಠಿ ಹಾಗೂ ಕನ್ನಡ ರಂಗಭೂಮಿ ಸೇರಿದಂತೆ ಕನ್ನಡ ಚಿತ್ರರಂಗದ ಎಲ್ಲ ವಿಭಾಗಗಳಲ್ಲೂ ಕೈಯಾಡಿಸಿದರು. ನಿರ್ಮಾಪಕ ಅಬ್ಬಾಯಿ ನಾಯ್ಡು ಅವರ ಸಾಥ್ನಿಂದ ಕರ್ಮಯಲ್ ಹೀರೋ ಆಗಿ ಭರ್ಜರಿಯಾಗಿ ಮಿಂಚಿದರು.

ಅವರು ಚಿತ್ರ ಬದುಕು ನಡೆಸಿದ್ದು ಕೇವಲ ಹತ್ತನ್ನೆರಡು ವರ್ಷ ಮಾತ್ರ. ಆದರೆ ಈ ಪುಟ್ಟ ಅವಧಿಯಲ್ಲಿ  ಮಾಡಿದ ಸಾಧನೆ ಅಪೂರ್ವವಾದದ್ದು. ಹಾಗಂತ ಅವರೇನು ಹೂವಿನ ಹಾಸಿಗೆಯ ಮೇಲೆ ನಡೆಯಲಿಲ್ಲ. ಹೊಸಾ ಆಲೋಚನೆ, ಪ್ರಯತ್ನಗಳು ಸೋಲಿನ ಕಪ್ಪ ಕೇಳಿದವು. ಸಾಲದ ಸಂಕೋಲೆ ತಂತಾನೇ ಸುತ್ತಿಕೊಂಡಿತ್ತು. ಆದರೆ ಶಂಕರ್ರ ಗಟ್ಟಿತನ ಅದ್ಯಾವುದಕ್ಕೂ ಜಗ್ಗುವಂಥಾದ್ದಾಗಿರಲಿಲ್ಲ. ಇಂಥಾ ಹಿನ್ನಡೆ ಮತ್ತು ಸಂಕಟಗಳನ್ನೇ ಸೃಜನಾತ್ಮಕವಾಗಿ ಬಳಸಿಕೊಳ್ಳುವ ಕಲೆ ಅವರಿಗೆ ಸಿದ್ಧಿಸಿತ್ತು. ಅಂಥಾ ಕನಸುಗಾರಿಕೆ ಮತ್ತು ಪ್ರಯೋಗಾತ್ಮಕ ಮನಸ್ಥಿತಿಯ ಫಲವೇ ಭಾರತೀಯ ಧಾರಾವಾಹಿ ಕ್ಷೇತ್ರದಲ್ಲೊಂದು ಕ್ರಾಂತಿಯ ಅಲೆ ಎಬ್ಬಿಸಿದ ಮಾಲ್ಗುಡಿ ಡೇಸ್ ಧಾರಾವಾಹಿ. ನಾರಾಯಣ್ ಅವರ ಮಾಲ್ಗುಡಿ ಡೇಸ್ ಕೃತಿಯನ್ನು ಅದೇ ಹೆಸರಿನಲ್ಲಿ ಧಾರಾವಾಹಿಯಾಗಿ ಮಾಡಿ ಡಿಡಿ೧ರ ಮೂಲಕ ಭಾರತದಾದ್ಯಂತ ಪ್ರಸಾರ ಮಾಡಿ ಜನಮೆಚ್ಚುಗೆ ಗಳಿಸಿದ ಶಂಕರ್ನಾಗ್ ಕನ್ನಡ, ಮರಾಠಿ, ಹಿಂದಿ ಭಾಷೆ ಸೇರಿದಂತೆ ಪ್ರತಿ ಭಾರತೀಯರ ಹೃದಯದಲ್ಲೂ ವಿರಾಜಮಾನರಾದರು. ಈಗಲೂ ಈ ಮಾಲ್ಗುಡಿಯ ಮೋಡಿ ಹಾಗೆಯೇ ಇರುವುದು ಶಂಕರ್ ಅವರ ಕೆಲಸದ ಚಾತುರ್ಯಕ್ಕಿರುವ ಜೀವಂತ ಸಾಕ್ಷಿ

ಶಂಕರ್ ಅಂದರೇನೇ ಚೈತನ್ಯದ ಚಿಲುಮೆ. ಇದು ಇಷ್ಟೇ ಎಂಬಂತೆ ಗೆರೆ ಹಾಕಿಕೊಂಡು ಯಾವುದೇ ಸವಾಲುಗಳಿಲ್ಲದೇ ಬದುಕುವುದು ಶಂಕರ್ ಜಾಯಮಾನವಾಗಿರಲಿಲ್ಲ. ಸರಿಯಾದ ದಿಕ್ಕಿನಲ್ಲಿ ಕನಸು ಕಂಡು ಅದನ್ನು ಸಾಕಾರಗೊಳಿಸಲು ಎಂಥಾ ಸವಾಲಿಗಾದರೂ ಎದೆಗೊಡುವ ಛಲ ಅವರಲ್ಲಿತ್ತು. ಆ ಕಾಲದಲ್ಲಿಯೇ ಒಂದು ಸುಸಜ್ಜಿತ ಸ್ಟುಡಿಯೋ ಕಟ್ಟಬೇಕೆಂದು ಕನಸು ಕಂಡ ಅವರು ತನ್ನಣ್ಣ ಅನಂತ್ ನಾಗ್ ಜೊತೆ ಸೇರಿಕೊಂಡು ಸಂಕೇತ್ ಎಂಬ ಸ್ಟುಡಿಯೋವನ್ನು ಬೆಂಗಳೂರಲ್ಲೇ ಸ್ಥಾಪಿಸಿದರು. ಆ ದಿನಗಳಲ್ಲಿ ಶಂಕರ್ ಅವರಿಗೆ ಆರ್ಥಿಕವಾಗಿ ಸಂಕಷ್ಟಗಳಿದ್ದವು. ಆದರೆ ತನ್ನ ಕನಸು ಗಟ್ಟಿಯಾಗಿದೆ ಎಂಬ ಭರವಸೆಯಿಂದಲೇ ಈ ಸ್ಟುಡಿಯೋ ಸ್ಥಾಪಿಸಿದ್ದರು. ಅದೂ ಅವರಿವರ ಬಳಿ ಸಾಲ ಮಾಡಿ! ಆ ಕಾಲಕ್ಕಿದು ಮಹಾ ದುಸ್ಸಾಹಸ. ಅದನ್ನು ಲೀಲಾಜಾಲವಾಗಿ ಮಾಡಿದ ಶಂಕರ್ ಅವರನ್ನು ಬಹಳಷ್ಟು ಮಂದಿ ಕುಹಕವಾಡಿದ್ದೂ ಇದೆ. ಅದಕ್ಕೆಲ್ಲ ತಲೆಕೆಡಿಸಿಕೊಳ್ಳದ ಅವರು ಸಂಕೇತ್ ಎಂಬ ತಳಹದಿಯ ಮೇಲೆ ಮತ್ತಷ್ಟು ಕನಸುಗಳನ್ನು ಪೇರಿಸುತ್ತಾ ಮುನ್ನಡೆದರು. ಮುಂದೆ ಸಂಕೇತ್ ಎಂಬ ನಾಟಕ ತಂಡವನ್ನೂ ಕಟ್ಟಿದರು. ಆ ಮೂಲಕ ಹಲವಾರು ನಾಟಕಗಳನ್ನೂ ನೀಡಿ ಕನ್ನಡ ರಂಗಭೂಮಿಯಲ್ಲೂ ಕ್ರಿಯಾಶೀಲರಾದರು.

ಹಾಗೆಂದು ಶಂಕರ್ ಕ್ರಿಯಾಶೀಲತೆ ಕೇವಲ ಸಿನಿಮಾ, ನಟನೆಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಒಂದು ಕ್ಷಣವನ್ನೂ ವ್ಯರ್ಥವಾಗಿಸಲು ಬಿಡದ ಅವರು ಈ ಸಮಾಜಕ್ಕೆ ಉಪಯೋಗವಾಗುವ ನಿಟ್ಟಿನಲ್ಲಿಯೂ ಆಲೋಚಿಸುತ್ತಿದ್ದರು. ಎರಡ್ಮೂರು ದಶಕಗಳಾಚೆ ನಿಂತು ಯೋಚಿಸುವ ಅಭೂತಪೂರ್ವ ದೂರದೃಷ್ಟಿ ಹೊಂದಿದ್ದ ಶಂಕರ್, ಆಗಿನ ಕಾಲಕ್ಕೇ ಭವಿಷ್ಯದ ಬೆಂಗಳೂರಿಗೆ ಕನಸಿನ ಭಾಷ್ಯ ಬರೆದಿದ್ದರು. ಬೆಂಗಳೂರಿಗೊಂದು ಮೆಟ್ರೋ, ನಂದಿ ಬೆಟ್ಟಕ್ಕೆ ರೋಪ್ ವೇ, ಜನಸಾಮಾನ್ಯನ ಅಗ್ಗದ ಮನೆ ಕನಸಿಗೆ ಹೊಸ ತಂತ್ರಜ್ಞಾನ, ಸಿನಿಮಾಕ್ಕಾಗಿ ಮಲ್ಟಿಪ್ಲೆಕ್ಸ್ ಹೀಗೆ ಅವರ ಕನಸುಗಳು ರೋಚಕ. ಕಡಿಮೆ ವೆಚ್ಚದಲ್ಲಿ ನಾಟಕಗಳ ಪ್ರದರ್ಶನ ನಡೆಸಲು ರಂಗಭೂಮಿ ಕಲಾವಿದರಿಗೆ ನೆರವಾಗುವಂತೆ ನಾಟಕಮಂದಿರವೊಂದನ್ನು ನಿರ್ಮಿಸುವ ಕನಸು ಹೊತ್ತಿದ್ದರು. ಬರೀ ಕನಸು ಕಾಣದೆ ಆ ಯೋಜನೆಗಳಿಗೆ ತಾವೇ ನೀಲ ನಕ್ಷೆಯನ್ನೂ ಸಿದ್ಧಪಡಿಸಿದ್ದ ಶಂಕರ್ ನಾಗ್ರ ಕ್ರಿಯಾಶೀಲತೆಗೆ ಸಾಟಿಲ್ಲ.

ಶಂಕರ್ ನಾಗ್ರ ಬದುಕು ಸಾಧಿಸುವ ಹಂಬಲವಿರುವ ಅನೇಕರಂತೆಯೇ ಡೋಲಾಯಮಾನವಾಗಿತ್ತು. ಪ್ರಯಾಸಪಟ್ಟು ವಿದ್ಯಾಭ್ಯಾಸ ಮುಗಿಸಿದ ಅವರಿಗೆ ಮುಂಬೈ ನಗರದಲ್ಲಿ ಬ್ಯಾಂಕ್ ಒಂದರ ಗುಮಾಸ್ತರಾಗಿ ಕೆಲಸ ಸಿಕ್ಕಿತ್ತು. ಆದರೆ ಅವರ ಕ್ರಿಯಾಶೀಲ ಮನಸು ಕಡತಗಳ ಕಮಟು ವಾಸನೆಯ ನಡುವೆ ಉಸಿರುಗಟ್ಟಲಾರಂಭಿಸಿತ್ತು. ಆ ಸಮಯದಲ್ಲೇ ಅವರಿಗೆ ಮರಾಠಿ ರಂಗಭೂಮಿಯ ಗೀಳು ಅಂಟಿಕೊಂಡದ್ದು. ಹೀಗಾಗಿ ಶಂಕರ್ ಅವರ ರಂಗಭೂಮಿ ಪ್ರವೇಶವಾದದ್ದು ಮರಾಠಿ ಭಾಷೆಯ ಮೂಲಕ. ಇದೇ ಸಮಯದಲ್ಲಿ ಅಲ್ಲಿನ ಗೆಳೆಯರೊಡನೆ ಸೇರಿ ಶಂಕರ್ ಅವರು ಚಿತ್ರಕತೆ ರಚಿಸಿದ ಮರಾಠಿ ಚಲನಚಿತ್ರ `೨೨ ಜೂನ್ ೧9೯೭’ಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ದೊರಕಿತು.

ಸದಾ ಪ್ರಯೋಗಗಳಿಗೆ ಹಾತೊರೆಯುತ್ತಿದ್ದ ಶಂಕರ್ ನಾಗ್ ೮೦ಕ್ಕೂ ಹೆಚ್ಚಿನ ಕನ್ನಡ ಮತ್ತು ೨ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ, ನಿರ್ದೇಶಿಸಿದ್ದು ಸುಮಾರು ೧೦ ಕನ್ನಡ ಚಲನಚಿತ್ರ ಹಾಗೂ ೨ ಕಿರುತೆರೆ ಧಾರವಾಹಿಗಳನ್ನು. `ಇದು ಸಾಧ್ಯ’ ಎಂಬ ಕನ್ನಡ ಚಲನಚಿತ್ರದ ಸಂಪೂರ್ಣ ಚಿತ್ರೀಕರಣವನ್ನು ಕೇವಲ ೪೮ ಗಂಟೆಗಳಲ್ಲಿ ಮುಗಿಸಿದ ದಾಖಲೆಯಲ್ಲಿ ಶಂಕರ್ ಅವರ ಕೊಡುಗೆ ಇಲ್ಲದಿಲ್ಲ. ‘ಆಟೋ ರಾಜ’ ಚಿತ್ರದ ಅವರ ಅಭಿನಯವು ಇಂದಿಗೂ ಶಂಕರ್ ನಾಗ್ ಅವರಿಗೆ ಆಟೋ ಚಾಲಕರ ನೆಚ್ಚಿನ ನಾಯಕನ ಸ್ಥಾನ ಒದಗಿಸಿಕೊಟ್ಟಿದೆ. ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಶಂಕರ್ ಇನ್ನೂ ಜೀವಂತವಾಗಿದ್ದಾರೆ. ಸಣ್ಣದೊಂದು ಗೆಲುವಿಗೂ ಇಡೀ ದೇಹವನ್ನೇ ಉಬ್ಬರಿಸಿಕೊಂಡು ಓಡಾಡುವ ಈಗಿನ ಪೀಳಿಗೆಯ ಕೆಲ ಮಂದಿಯ ಅಬ್ಬರಾಟದ ನಡುವೆ ಶಂಕರ್ ಸದಾ ಪ್ರಸ್ತುತವೆನಿಸುತ್ತಾರೆ. ಸಾಧಿಸುವ ಛಲಕ್ಕೆ ಎಲ್ಲಾ ಕ್ಷೇತ್ರದವರಿಗೂ ಸ್ಫೂರ್ತಿಯಾಗಿದ್ದಾರೆ. ಇದು ಅವರ ಬದುಕಿನ ನಿಜವಾದ ಸಾರ್ಥಕ್ಯ.

ಅರುಣ್ ಕುಮಾರ್.ಜಿ

ಕೃಪೆ : avadhimag.com

#

Advertisement
Click to comment

Leave a Reply

Your email address will not be published. Required fields are marked *

ಕಲರ್ ಸ್ಟ್ರೀಟ್

ಮೆಣಸಿನಕಾಯಿಯ ಮಗ್ಗುಲಲ್ಲಿ ಸಿಕ್ಕಿಬಿದ್ದಳು ಮಳೆಹುಡುಗಿ!

Published

on


ಮುಂಗಾರು ಮಳೆ ಚಿತ್ರದ ಮೂಲಕವೇ ಚಿಗುರಿಕೊಂಡವಳು ನಟಿ ಪೂಜಾಗಾಂಧಿ. ಆ ನಂತರದಲ್ಲಿ ಈಕೆ ಸಿನಿಮಾಗಳ ಮೂಲಕ ಸದ್ದು ಮಾಡಿದ್ದಕ್ಕಿಂತಲೂ ಹೆಚ್ಚಾಗಿ ದೋಖಾ ಬಾಜಿಗಳ ಮೂಲಕ ವಿವಾದವೆಬ್ಬಿಸಿದ್ದೇ ಹೆಚ್ಚು. ಇಂಥಾ ಪೂಜಾ ಕಂಡೋರಿಗೆಲ್ಲ ಮುಂಡಾಯಿಸಿ ಮುಖ ಮುಚ್ಚಿಕೊಂಡು ಓಡಾಡುವ ಸ್ಥಿತಿ ಬಂದಿತ್ತು. ಈಕೆ ತನ್ನ ತವರಾದ ಉತ್ತರ ಭಾರತದ ಕಡೆ ವಲಸೆ ಹೋಗಿದ್ದಾಳೆಂದೂ ರೂಮರುಗಳು ಹಬ್ಬಿದ್ದವು. ಈಗೊಂದು ವರ್ಷದಿಂದ ಸಂಪೂರ್ಣ ಕಣ್ಮರೆಯಾಗಿ ಬಿಟ್ಟಿದ್ದ ಪೂಜಾ ಇದೀಗ ಮತ್ತೊಂದು ರಂಖಲಿನೊಂದಿಗೆ ಮತ್ತೆ ಸುದ್ದಿಯಾಗಿದ್ದಾಳೆ. ಈ ಮೂಲಕ ನಾಯಿಯ ಬಾಲ ಮುಂಗಾರು ಮಳೆಯಲ್ಲಿ ನೆನೆಬಿದ್ದರೂ ನೆಟ್ಟಗಾಗೋದಿಲ್ಲ ಅನ್ನೋದೂ ಸಾಬೀತಾಗಿದೆ!

ಒಂದು ವರ್ಷದಿಂದ ಈ ಪೂಜಾ ಅದೆಲ್ಲಿ ಹೋಗಿದ್ದಳು ಅನ್ನೋ ಪ್ರಶ್ನೆಗೆ ಈ ವಿವಾದದ ಮೂಲಕ ಉತ್ತರ ಸಿಕ್ಕಿದೆ. ಅದ್ಯಾರೋ ಅನಿಲ್ ಮೆಣಸಿನಕಾಯಿ ಎಂಬ ಬಿಜೆಪಿ ಮುಖಂಡನ ಜೊತೆ ಲಲಿತ್ ಅಶೋಕ್ ಹೊಟೆಲ್ಲಿನಲ್ಲಿ ಒಂದು ವರ್ಷದಿಂದ ಪೂಜಾ ಸುದೀರ್ಘವಾಗಿ ಮೀಟಿಂಗು ನಡೆಸುತ್ತಿದ್ದ ಸೋಜಿಗವೂ ಅನಾವರಣಗೊಂಡಿದೆ. ರಾಜಕಾರಣ ಮತ್ತು ಜನರ ಬಗ್ಗೆ ಅಪಾರ ಕಾಳಜಿ ಹೊಂದಿರೋ ಪೂಜಾ ವರ್ಷದಿಂದೀಚೆಗೆ ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿದ್ದ ಸಮಾಜಮುಖಿ ವಿಚಾರವೂ ಈಗ ಜಾಹೀರಾಗಿದೆ. ಬಹುಶಃ ಈ ಜೋಡಿ ಲೋಕೋದ್ಧಾರದ ಚರ್ಚೆಯಲ್ಲಿ ಹೊಟೆಲ್ ಬಿಲ್ಲು ಕೊಡೋದನ್ನೇ ಮರೆಯದಿದ್ದರೆ, ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಷರ್ ಸಾಧಿಕ್ ಪಾಷಾ ವರೆಗೂ ಈ ಸುದ್ದಿ ಹೋಗದಿದ್ದರೆ ಅನ್ಯಾಯವಾಗಿ ಪೂಜಾ ಗಾಂಧಿಯ ಸಮಾಜಸೇವೆ ಮರೆಯಾಗಿ ಬಿಡುತ್ತಿತ್ತು!

ಈ ಪ್ರಕರಣದ ಒಟ್ಟಾರೆ ಡೀಟೇಲುಗಳೇ ಪೂಜಾಗಾಂಧಿಯ ಅಸಲೀ ಕಸುಬಿಗೆ ಕನ್ನಡಿ ಹಿಡಿಯುವಂತಿದೆ. ಹೋಟೆಲ್ ಲಲಿತ್ ಅಶೋಕ್ ಆಡಳಿತವರ್ಗ ನೀಡಿರೋ ದೂರು ಮತ್ತು ಪೊಲೀಸ್ ಫೈಲುಗಳು ಅದನ್ನು ಖುಲ್ಲಂಖುಲ್ಲ ಬಿಚ್ಚಿಡುತ್ತವೆ. ಈ ಪ್ರಕಾರವಾಗಿ ನೋಡ ಹೋದರೆ ಬಿಜೆಪಿ ಮುಖಂಡ ಅನ್ನಿಸಿಕೊಂಡಿರೋ ಅನಿಲ್ ಮೆಣಸಿನಕಾಯಿ ಮತ್ತು ಪೂಜಾ ಗಾಂಧಿ ಈಗೊಂದು ವರ್ಷದ ಹಿಂದೆಯೇ ಅಶೋಕ್ ಹೋಟೆಲಿನಲ್ಲಿ ರೂಂ ಬುಕ್ ಮಾಡಿದ್ದರು. ಬರೋಬ್ಬರಿ ಒಂದು ವರ್ಷಗಳ ಕಾಲ ಇವರಿಬ್ಬರೂ ಅದೇನು ಮಾಡುತ್ತಿದ್ದರೋ ಭಗವಂತನೇ ಬಲ್ಲ. ಆದರೆ ಹೊಟೇಲಿನ ಸಕಲ ಸೌಕರ್ಯಗಳನ್ನೂ ಪಡೆದುಕೊಂಡಿದ್ದರು.

ಆದರೆ ಈ ಸುದೀರ್ಘಾವಧಿ ಪವಡಿಸಿದ ಒಟ್ಟು ರೂಂ ಬಿಲ್ 26.22ಲಕ್ಷ ಆಗಿ ಹೋಗಿತ್ತು. ಹೇಳಿಕೇಳಿ ಅನಿಲ್ ಮೆಣಸಿನಕಾಯಿ ಬಿಜೆಪಿ ಮುಖಂಡ. ಈ ಮುಲಾಜಿಗೆ ಬಿದ್ದು ಸುಮ್ಮನಿದ್ದ ಹೊಟೆಲ್ ಆಡಳಿತ ವರ್ಗ ಕಡೆಗೂ ಎಚ್ಚರಿಕೆ ನೀಡಿದಾಗ ಅನಿಲ್ 22.80 ಲಕ್ಷ ಪಾವತಿಸಿದ್ದ. ಅಲ್ಲಿಗೆ 3.50 ಲಕ್ಷ ಬಾಕಿ ಉಳಿದುಕೊಂಡಿತ್ತಲ್ಲಾ? ಸಿಬ್ಬಂದಿ ಒತ್ತಾಯ ಮಾಡಿದಾಗ ಅದರಲ್ಲಿ ೨.೨೫ ಲಕ್ಷವನ್ನು ಮತ್ತೆ ಕೊಸರಾಡಿ ಕಟ್ಟಿದ್ದ. ಆದರೂ 1.25ಲಕ್ಷ ಬಾಕಿ ಉಳಿದುಕೊಂಡು ಬಿಟ್ಟಿತ್ತು. ಇದೀಗ ಇನ್ಸ್ ಪೆಕ್ಟರ್ ಸಾದಿಕ್ ಪಾಷಾ ಅವಾಜು ಹಾಕುತ್ತಲೇ ಉಳಿಕೆ ಮೊತ್ತ ಪಾವತಿಸಿ ಬಚಾವಾಗಿದ್ದಾನೆ.

ಆದರೆ ಹೊಟೇಲು ಬಿಲ್ಲ ಪಾವತಿಸಿಯಾದ ಮೇಲೂ ಅನಿಲ್ ಮೆಣಸಿನಕಾಯಿ ಬೆತ್ತಲಾಗಿದ್ದಾನೆ. ಪೂಜಾ ಗಾಂಧಿ ಕೂಡಾ ಪೇಚಿಗೆ ಬಿದ್ದಿದ್ದಾಳೆ. ಆರಂಭದಲ್ಲಿ ಈ ಅನಿಲ್ ಮಾಧ್ಯಮಗಳ ಮುಂದೆ ಕೊಸರಾಡುತ್ತಾ ಏನೇನೋ ಕಥೆ ಹೇಳಿ ತಾನು ಸಾಚಾ ಅಂತ ಬಿಂಬಿಸಿಕೊಳ್ಳಲು ಪ್ರಯತ್ನಿಸಿದ್ದ. ನನಗೂ ಪೂಜಾಗೂ ಯಾವ ವ್ಯಾವಹಾರಿಕ ಸಂಬಧವೂ ಇರಲಿಲ್ಲ. ನಾನು ಹೋಟೆಲ್ ಲಲಿತ್ ಅಶೋಕದಲ್ಲಿ ಯಾವ ರೂಮನ್ನೂ ಮಾಡಿಲ್ಲ. ಆದರೂ ನನ್ನ ಹೆಸರು ಇಲ್ಯಾಕೆ ಸೇರಿಕೊಂಡಿತೋ… ಅಂತ ಮಳ್ಳನಂತಾಡಿ ಆಕಾಶ ನೋಡಿದ್ದ. ಆದರೆ ಇದರ ಹಿಂದಿರೋ ಅಸಲೀ ವಿಚಾರ ಏನನ್ನೋದು ಜನಸಾಮಾನ್ಯರಿಗೂ ಅರ್ಥವಾಗಿದೆ. ಯಾವ ಸಂಬಂಧವೂ ಇಲ್ಲದೇ ಪೂಜಾ ಗಾಂಧಿ ಮತ್ತು ಅನಿಲ್ ಮೆಣಸಿನ ಕಾಯಿ ಒಂದು ವರ್ಷಗಳ ಕಾಲ ಭಜನೆ ಮಾಡುತ್ತಿದ್ದರೆಂದು ನಂಬುವಷು ಇಲ್ಯಾರೂ ಮುಠ್ಠಾಳರಿಲ್ಲ. ಇಂಥಾ ಕಥೆ ಹೇಳಿದರೆ ಪೂಜಾ ಗಾಂಧಿಯ ಹಿಸ್ಟರಿ ಗೊತ್ತಿರೋ ಯಾರೇ ಯಾದರೂ ಎದೆಗೆ ಬಂದೂಕು ತಿವಿದರೂ ನಂಬುವುದಿಲ್ಲ!

ಈ ಪೂಜಾಗಾಂಧಿ ಎಂಬ ಸವಕಲು ನಟಿಯ ಜಾಯಮಾನವೇ ಇಂಥಾದ್ದು. ರಾಜಕೀಯ ಪುಢಾರಿಗಳು, ಹಣವಂತರನ್ನು ಹುಡುಕಿ ಬಲೆಗೆ ಕೆಡವಿಕೊಳ್ಳೋದರಲ್ಲಿ ಈಕೆ ಮಾಸ್ಟರ್ ಪೀಸು. ನಂತರ ಹೀಗೆ ರೂಮುಗಳಲ್ಲಿ ಸುದೀರ್ಘವಾಗಿ ಮೀಟಿಂಗು ನಡೆಸಿ, ಆ ಅವಧಿಯಲ್ಲಿ ಮಿಕಗಳನ್ನು ಪಳಗಿಸಿಕೊಂಡು ಕಾಸು ಗುಂಜಿಕೊಳ್ಳೋದು ಇವಳ ಜಾಯಮಾನ. ರೀಸೆಂಟಾಗಿ ಹೀಗೆಯೇ ಇವಳಿಂದ ವಂಚನೆಗೀಡಾಗಿದ್ದ ಬಿಲ್ಡರ್ ಒಬ್ಬ ತಾನೇ ಕೊಟ್ಟಿದ್ದ ಫಾರ್ಚುನರ್ ಗಾಡಿ ಕಸಿದುಕೊಂಡು ಪೂಜಾಳ ಮುಖಕ್ಕುಗಿದು ಕಳಿಸಿದ್ದನಂತೆ. ಹಾಗೆ ಖಾಲಿ ಕೈಲಿ ನಿಂತಿದ್ದ ಪೂಜಾ ಇವನ್ಯಾರೋ ಉತ್ತರಕರ್ನಾಟಕದ ಮೆಣಸಿನಕಾಯಿಯ ಮೈ ನೀವಿ ಪಳಗಿಸಿಕೊಂಡಿದ್ದಾಳೆ. ಎಲ್ಲ ಕಾಲದಲ್ಲಿಯೂ ಟೈಂ ಸರಿಯಾಗೇ ಇರೋದಿಲ್ಲವಲ್ಲಾ? ಈ ಬಾರಿ ಪೂಜಾ ಗಾಂಧಿಯ ನಸೀಬು ಕೆಟ್ಟಿದೆ. ಆದ್ದರಿಂದಲೇ ಮಗ್ಗುಲಲ್ಲಿದ್ದ ಮೆಣಸಿನಕಾಯಿಯ ಸಮೇತ ಸಿಕ್ಕಿಬಿದ್ದಿದ್ದಾಳೆ!

Continue Reading

ಕಲರ್ ಸ್ಟ್ರೀಟ್

ಇದು ಕಿರುತೆರೆ ನಟ ಅನಿಲ್ ಕುಮಾರ್ ಆಕ್ರಂದನ!

Published

on


ಅದೆಷ್ಟೋ ಧಾರಾವಾಹಿಗಳ ಥರ ಥರದ ಪಾತ್ರಗಳ ಮೂಲಕ ಕಿರುತೆರೆ ಪ್ರೇಕ್ಷಕರ ಮನೆ ಮಾತಾಗಿರುವವರು ಅನಿಲ್ ಕುಮಾರ್. ಇತ್ತೀಚಿನವರೆಗೂ ಅದೇ ಲವಲವಿಕೆಯಿಂದ ಬಣ್ಣ ಹಚ್ಚುತ್ತಿದ್ದ ಅನಿಲ್ ಇದೀಗ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀರಾ ಮಾತೂ ಆಡಲಾಗದ ಸ್ಥಿತಿಯಲ್ಲಿರುವ ಅವರೀಗ ಚಿಕೆತ್ಸೆಯ ವೆಚ್ಚ ಸೇರಿದಂತೆ ಯಾವುದನ್ನು ಭರಿಸಲಾಗದ ಶೋಚನೀಯ ಸ್ಥಿತಿ ತಲುಪಿದ್ದಾರೆ.ಮುಖ್ಯವಾದ ವಿಚಾರವೆಂದರೆ ಈ ಅನಿಲ್ ಕುಮಾರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಹಪಾಠಿ. ರಂಗಭೂಮಿಯ ನಟನೆಯನ್ನೇ ಕಸುವಾಗಿಸಿಕೊಂಡು, ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾಗಲೂ ರಂಗದ ನಂಟು ಮರೆಯದ ರಂಗಪ್ರೇಮಿ ಅನಿಲ್. ಇಂಥಾ ಅನಿಲ್ ಇದೀಗ ಏಕಾಏಕಿ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆ ಸೇರಿಕೊಂಡಿದ್ದಾರೆ. ಯಾವುದಕ್ಕೂ ಸ್ಪಂದಿಸದಂಥಾ ಸ್ಥಿತಿ ತಲುಪಿಕೊಂಡಿದ್ದಾರೆ.

ನಟರಾಜ್ ಹೊನ್ನವಳ್ಳಿ ಸೇರಿದಂತೆ ಅನೇಕ ರಂಗತಜ್ಞರ ನಾಟಕಗಳಲ್ಲಿ ಅಭಿನಯಿಸಿದ್ದ ಅನಿಲ್ ಪೃಥ್ವಿ, ಕರಿಯ ಕಣ್ ಬಿಟ್ಟ, ಪಲ್ಲಟ ಸೇರಿದಂತೆ ಹತ್ತಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೂಡಲಮನೆ ಧಾರಾವಾಹಿಯಿಂದ ಆರಂಭಿಸಿ ಭ್ರಹ್ಮಗಂಟು ತನಕ ಸಾಕಷ್ಟು ಧಾರಾವಾಹಿಗಳ ಲೀಡ್ ಪಾತ್ರಗಳಲ್ಲಿ ಅನಿಲ್ ಮನೋಜ್ಞವಾಗಿ ಅಭಿನಯಿಸುತ್ತಾ ಬಂದಿದ್ದಾರೆ. ಇಂಥಾ ಅನಿಲ್ ಮೊನ್ನೆ ದಿನ ಹಾಸನಕ್ಕೆ ತೆರಳಿದ್ದಾಗ ಅಲ್ಲಿ ಅನಾರೋಗ್ಯಕ್ಕೀಡಾಗಿ ಅಸ್ವಸ್ಥರಾಗಿದ್ದರು. ಈಗವರನ್ನು ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಐಸಿಯೂನಲ್ಲಿರುವ ಅನಿಲ್ ಅವರ ಚಿಕಿತ್ಸೆಗಾಗಿ ದಿನಕ್ಕೆ ನಲವತ್ತೈದು ಸಾವಿರಕ್ಕೂ ಅಧಿಕ ಹಣ ವ್ಯಯವಾಗುತ್ತಿದೆ. ಆದರೆ ಅವರ ಕುಟುಂಬದವರಿಗೆ ಮಾತ್ರ ಇಷ್ಟು ದೊಡ್ಡ ಮೊತ್ತವನ್ನು ಖರ್ಚು ಮಾಡುವ ಶಕ್ತಿ ಇಲ್ಲದಂತಾಗಿದೆ.

ಹಳೇಯ ದಿನಗಳನ್ನು, ಆ ಕಾಲದ ಗೆಳೆಯರನ್ನು ಸದಾ ಸ್ಮರಿಸುವ ದರ್ಶನ್ ಅವರಿಗೆ ಖಂಡಿತಾ ಅನಿಲ್ ಕುಮಾರ್ ಅವರ ಗುರುತು ಇದ್ದೇ ಇರುತ್ತದೆ. ಯಾಕೆಂದರೆ 1995ರ ಸಮಯದಲ್ಲಿ ದರ್ಶನ್ ನೀನಾಸಂಗೆ ನಟನೆ ಕಲಿಯಲು ಹೋದಾಗ ಅವರ ಸಹಪಾಠಿಯಾಗಿದ್ದವರು ಅನಿಲ್ ಕುಮಾರ್. ಆದರೆ ಅವರೀಗ ಅನಾರೋಗ್ಯಕ್ಕೀಡಾಗಿದ್ದಾರೆಂಬ ಸುದ್ದಿ ಅವರಿಗೆ ತಲುಪಬೇಕಿದೆ. ಅನಿಲ್ ಅಂದರೆ ಕಿರುತೆರೆ ಪ್ರೇಕ್ಷಕರ ಪಾಲಿನ ಫೇವರಿಟ್ ನಟ. ಕೆಲ ವಾಹಿನಿಗಳ ಬಹುತೇಕ ಧಾರಾವಾಹಿಗಳಲ್ಲಿ ಇವರದ್ದೊಂದು ಪಾತ್ರ ಇದ್ದೇ ಇರುತ್ತದೆ.

0425101039839
Canara Bank
Hebbala branch
Bengaluru-560024
IFS Code-CNRB 0000425
W/0
Anilkumar B.R

ರಂಗಭೂಮಿಯ ನಂಟಿನೊಂದಿಗೇ ಕಿರುತೆರೆಯಲ್ಲಿಯೂ ಸಕ್ರಿಯರಾಗಿದ್ದ ಅನಿಲ್ ಸ್ವಾಭಿಮಾನಿ. ಎಲ್ಲರ ಪ್ರೀತಿಪಾತ್ರರಾಗಿದ್ದ ಈ ಸ್ನೇಹಜೀವಿಗೀಗ ಒಂದು ಕಾಲದ ಸಹಪಾಠಿ ದರ್ಶನ್ ಅವರ ಸಹಾಯದ ಅಗತ್ಯವಿದೆ. ಇದೀಗ ಸುಮಲತಾ ಅಂಬರೀಶ್ ಅವರ ಪರವಾಗಿ ಮಂಡ್ಯದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರೋ ದರ್ಶನ್ ಆದಷ್ಟು ಬೇಗನೆ ಸಹಪಾಠಿ ಗೆಳೆಯನ ನೋವಿಗೆ ಕಿವಿಗೊಡಬಹುದೇ?

Continue Reading

ಕಲರ್ ಸ್ಟ್ರೀಟ್

ಪಡ್ಡೆಹುಲಿ ಹಿಟ್ ಹಾಡುಗಳ ಜ್ಯೂಕ್ ಬಾಕ್ಸ್ ಅನಾವರಣ!

Published

on


ಕೆ. ಮಂಜು ಅವರ ಪುತ್ರ ಶ್ರೇಯಸ್ ನಾಯಕನಾಗಿ ಎಂಟ್ರಿ ಕೊಡುತ್ತಿರುವ ಚಿತ್ರ ಪಡ್ಡೆಹುಲಿ. ಗುರುದೇಶಪಾಂಡೆ ನಿರ್ದೇಶನದ ಈ ಚಿತ್ರ ಈಗಾಗಲೇ ಹಾಡುಗಳ ಮೂಲಕ ಎಂಥವರೂ ಅಚ್ಚರಿಗೊಳ್ಳುವಂಥಾ ಕ್ರೇಜ್ ಸೃಷ್ಟಿಸಿದೆ. ಶ್ರೇಯಸ್ ಸಂಪೂರ್ಣ ತಯಾರಿಯೊಂದಿಗೇ ಅಡಿಯಿರಿಸಿರೋದರ ಬಗ್ಗೆ ಬೆರಗು, ಓರ್ವ ಎನರ್ಜಿಟಿಕ್ ಹೀರೋ ಕನ್ನಡಕ್ಕೆ ಪಾದಾರ್ಪಣೆ ಮಾಡಿದ ಸ್ಪಷ್ಟ ಸೂಚನೆಗಳೆಲ್ಲವೂ ಪಡ್ಡೆಹುಲಿಯ ಸುತ್ತ ಮಿರುತ್ತಿವೆ!

ಇದೆಲ್ಲವೂ ಸಾಧ್ಯವಾಗಿದ್ದು ಒಂದರ ಹಿಂದೊಂದರಂತೆ ಅನಾವರಣಗೊಂಡಿದ್ದ ಚೆಂದದ ಹಾಡುಗಳಿಂದ. ಈಗಾಗಲೇ ಭರತ್ ಬಿಜೆ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರೋ ಎಲ್ಲ ಹಾಡುಗಳೂ ಹಿಟ್ ಆಗಿವೆ. ಇದೀಗ ಪಿಆರ‍್ಕೆ ಸಂಸ್ಥೆಯ ಮೂಲಕ ಈ ಎಲ್ಲ ಹಾಡುಗಳ ಜ್ಯೂಕ್ ಬಾಕ್ಸ್ ಅನ್ನು ಅನಾವರಣಗೊಳಿಸಲಾಗಿದೆ. ಈ ಮೂಲಕ ಪಡ್ಡೆಹುಲಿ ಚಿತ್ರದ ಅಷ್ಟೂ ಚೆಂದದ ಹಾಡುಗಳನ್ನು ಒಟ್ಟಾಗಿ ಕೇಳಿಸಿಕೊಳ್ಳುವ ಸದಾವಕಾಶ ಪ್ರೇಕ್ಷಕರಿಗೆ ಸಿಕ್ಕಿದೆ. ಒಂದು ಚಿತ್ರದಲ್ಲಿ ಐದಾರು ಹಾಡುಗಳಿರೋದು ಸಾಮಾನ್ಯ. ಕೆಲ ಬಾರಿ ಈ ಸಂಖ್ಯೆ ಇನ್ನೂ ಇಳಿಕೆಯಾಗೋದೂ ಇದೆ. ಆದರೆ, ಪಡ್ಡೆಹುಲಿ ಚಿತ್ರದಲ್ಲಿ ಮಾತ್ರ ಹತ್ತು ಹಾಡುಗಳಿವೆ. ಒಂದಕ್ಕಿಂತ ಒಂದು ಚೆಂದವೆಂಬಂತೆ ಮೂಡಿ ಬಂದಿರೋ ಈ ಹಾಡುಗಳೆಲ್ಲವೂ ಜನಮಾನಸ ಗೆದ್ದಿವೆ. ಇದೀಗ ಬಿಡುಗಡೆಯಾಗಿರೋ ಜ್ಯೂಕ್ ಬಾಕ್ಸ್ ಗೂ ಒಳ್ಳೆ ಅಭಿಪ್ರಾಯಗಳೇ ಕೇಳಿ ಬರುತ್ತಿವೆ.

ಎಮ್ ರಮೇಶ್ ರೆಡ್ಡಿ ನಿರ್ಮಾಣ ಮಾಡಿರೋ ಪಡ್ಡೆಹುಲಿ ಇನ್ನೇನು ಬಿಡುಗಡೆಯ ಹೊಸ್ತಿಲಲ್ಲಿದೆ. ಚಿತ್ರೀಕರಣದ ಹಂತದಲ್ಲಿಯೇ ನಾಯಕ ಶ್ರೇಯಸ್ ಭರವಸೆ ಹುಟ್ಟಿಸಿ ಬಿಟ್ಟಿದ್ದಾರೆ. ಹಾಡುಗಳಂತೂ ಅವರ ಪೂರ್ವ ತಯಾರಿ, ಶ್ರಮಗಳನ್ನು ಪ್ರತಿಫಲಿಸುವಂತಿವೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಶ್ರೇಯಸ್ ಶ್ರಮವನ್ನು ಮೆಚ್ಚಿಕೊಂಡಿದ್ದಾರೆಂದ ಮೇಲೆ ಹೆಚ್ಚೇನು ಹೇಳೋ ಅಗತ್ಯವಿಲ್ಲ. ಇದೀಗ ಬಿಡುಗಡೆಯಾಗಿರೋ ಜ್ಯೂಕ್ ಬಾಕ್ಸ್ ಮೂಲಕ ಪಡ್ಡೆಹುಲಿಯ ಬಗೆಗಿನ ನಿರೀಕ್ಷೆ ನೂರ್ಮಡಿಸೋದಂತೂ ಖಂಡಿತ!

Continue Reading

Trending