Connect with us

ಅಭಿಮಾನಿ ದೇವ್ರು

ಇದು ಕನ್ನಡ ಚಿತ್ರರಂಗದ ಖದರ್!

Published

on

ಕನ್ನಡ ಚಿತ್ರಗಳ ಗುಣಮಟ್ಟವನ್ನು ಆಡಿಕೊಳ್ಳೋದು, ಯಾವ ಚಿತ್ರಗಳು ತೆರೆ ಕಂಡರೂ ಅದಕ್ಕೆ ಬಾಲಿವುಡ್ ಸೇರಿದಂತೆ ಬೇರೆ ಭಾಷೆಗಳ ಚಿತ್ರಗಳನ್ನು ಹೋಲಿಸಿ ಮೂದಲಿಸೋದು ಕೆಲವರ ಖಯಾಲಿ. ಆದರೆ ಕನ್ನಡ ಚಿತ್ರರಂಗದ ಖದರ್ ಮಾತ್ರ ಇದ್ಯಾವುದರ ಗೊಡವೆಯೂ ಇಲ್ಲದೆ ಗಡಿ ದಾಟಿಕೊಂಡು ಬೇರೆ ಭಾಷೆಗಳಿಗೂ ಪಸರಿಸಿದೆ. ಅಲ್ಲಿನವರನ್ನೂ ಪ್ರಭಾವಿಸಿದೆ!

 

ಈ ಮಾತಿಗೆ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಬಾಲಿವುಡ್ ಯುವ ನಟ ಶ್ರೇಯಸ್ ತಲ್ಪಡೆ ಹಂಚಿಕೊಂಡಿರೋ ವಿಚಾರಗಳಿಗಿಂತಲೂ ಬೇರೆ ಸಾಕ್ಷಿ ಬೇಕಿಲ್ಲ!

ಶ್ರೇಯಸ್ ಡಾ. ರಾಜ್‌ಕುಮಾರ್ ಅವರ ಅಭಿಮಾನಿ. ಇದುವರೆಗೂ ರಾಜ್‌ಕುಮಾರ್ ಅವರು ನಟಿಸಿರೋ ಅದೆಷ್ಟೋ ಚಿತ್ರಗಳನ್ನು ಶ್ರೇಯಸ್ ನೋಡಿದ್ದಾರಂತೆ. ಈ ಮೂಲಕ ರಾಜಣ್ಣನ ನಟನೆಯಿಂದ ಯಾವ ಪರಿಯಾಗಿ ಶ್ರೇಯಸ್ ಪ್ರಭಾವಿತರಾಗಿದ್ದಾರೆಂದರೆ, ಯಾವಾಗಲೇ ಬಿಡುವು ಸಿಕ್ಕರೂ ಅಣ್ಣವ್ರ ಸಿನಿಮಾಗಳನ್ನು ನೋಡೋ ಹವ್ಯಾಸ ಬೆಳೆಸಿಕೊಂಡಿದ್ದಾರಂತೆ. ಅವರೊಬ್ಬ ಮೇರು ನಟ ಎಂದಿರುವ ಶ್ರೇಯಸ್ ತಾನು ಅವರ ಅಭಿಮಾನಿ ಅಂತ ಹೆಮ್ಮೆಯಿಂದಲೇ ಹೇಳಿಕೊಂಡಿದ್ದಾರೆ.

ಇದಲ್ಲದೇ ಕನ್ನಡ ಚಿತ್ರರಂಗದ ಆಗು ಹೋಗುಗಳತ್ತಲೂ ಗಮನ ನೆಟ್ಟಿರೋ ಶ್ರೇಯಸ್‌ಗೆ ರಾಕಿಂಗ್ ಸ್ಟಾರ್ ಯಶ್ ಸ್ಟೈಲ್ ಅಂದರೂ ಇಷ್ಟವಂತೆ. ಇದೇ ಸಂದರ್ಭದಲ್ಲಿ ತನಗೇನಾದರೂ ಕನ್ನಡದಲ್ಲಿ ನಟಿಸೋ ಆಫರ್ ಬಂದರೆ ಖಂಡಿತಾ ಒಪ್ಪಿಕೊಳ್ಳುವುದಾಗಿಯೂ ಹೇಳಿಕೊಂಡಿದ್ದಾರೆ.

ಶ್ರೇಯಸ್‌ಗೆ ಕನ್ನಡ ಚಿತ್ರಗಳು ಮಾತ್ರವಲ್ಲದೆ ಕನ್ನಡಿಗರೆಂದರೂ ಅಚ್ಚುಮೆಚ್ಚು. ಬೆಂಗಳೂರು ಅಂದರಂತೂ ಭಾರತದ ಮತ್ಯಾವ ನಗರಕ್ಕಿಂತಲೂ ಹೆಚ್ಚೇ ಇಷ್ಟ ಅಂದಿದ್ದಾರೆ ಶ್ರೇಯಸ್. ಅವರಿಗೆ ಅತೀ ಹೆಚ್ಚಿನ ಸ್ನೇಹ ವಲಯ ಇರೋದೂ ಕೂಡಾ ಬೆಂಗಳೂರಿನಲ್ಲಿಯೇ. ಆದ್ದರಿಂದಲೇ ಈ ನಗರದ ಜೊತೆಗೆ ನಂಟು ಹೊಂದಿರೋ ಶ್ರೇಯಸ್ ರಾಜಣ್ಣನ ಅಭಿಮಾನಿ ಎಂಬುದಕ್ಕಿಂತ ಖುಷಿಯ ವಿಚಾರ ಮತ್ತೇನಿದೆ?

Advertisement
Click to comment

Leave a Reply

Your email address will not be published. Required fields are marked *

ಅಭಿಮಾನಿ ದೇವ್ರು

ಕೋಟಿಗೊಬ್ಬ ನಮ್ಮ ವಿಷ್ಣು ಕ್ಯಾಲೆಂಡರ್: ಸಾಹಸಸಿಂಹನ ಅಭಿಮಾನಿಗಳಿಗೆ ವಿಷ್ಣುಸೇನಾ ಸಮಿತಿ ಉಡುಗೊರೆ!

Published

on

ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಆದರ್ಶಗಳನ್ನು ಅಜರಾಮರವಾಗಿಸುವ ನಿಟ್ಟಿನಲ್ಲಿ ವಿಷ್ಣುಸೇನಾ ಸಮಿತಿಯದ್ದು ಸಿಂಹನಡೆ. ವಿಷ್ಣು ಹೆಸರಲ್ಲಿ ನಾನಾ ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡಿಕೊಂಡುಬಂದಿರುವ ಈ ಸಮಿತಿ ಪ್ರತೀ ವರ್ಷವೂ ಕೋಟಿಗೊಬ್ಬ ನಮ್ಮ ವಿಷ್ಣು ಎಂಬ ಶೀರ್ಷಿಕೆಯಲ್ಲಿ ಆಕರ್ಷಕವಾದ ಕ್ಯಾಲೆಂಡರ್ ಒಂದನ್ನು ಹೊರತರುತ್ತಿದೆ. ಪ್ರತೀ ವರ್ಷದ ಕಡೇ ಘಳಿಗೆಯಲ್ಲಿ ವಿಷ್ಣು ಅಭಿಮಾನಿ ಪಡೆ ಕಾತರದಿಂದ ಈ ಕ್ಯಾಲೆಂಡರಿಗಾಗಿ ಕಾಯುತ್ತದೆ. ವೀರಕಪುತ್ರ ಶ್ರೀನಿವಾಸ್ ಪರಿಕಲ್ಪನೆಯಲ್ಲಿ ಮೂಡಿ ಬರುತ್ತಿರೋ ಈ ಚಿತ್ರದ ಸೊಗಸೇ ಅಂಥಾದ್ದಿದೆ!

ಡಾ.ವಿಷ್ಣುವರ್ಧನ ಅವರ ನೆನಪನ್ನು ಮನೆ ಮನಗಳಲ್ಲಿ ಹಸಿರಾಗಿಡುವ ಸಲುವಾಗಿ ಕಳೆದ ೭ ವರ್ಷಗಳಂತೆ ಈ ವರ್ಷವೂ ಕೋಟಿಗೊಬ್ಬ ಕ್ಯಾಲೆಂಡರ್ ಅನ್ನು ಡಾ.ವಿಷ್ಣು ಸೇನಾ ಸಮಿತಿ ಹೊರ ತರುತ್ತಿದೆ. ಪ್ರತಿ ವರ್ಷವೂ ಹೊಸ ರೀತಿಯ ಪರಿಕಲ್ಪನೆ ಮತ್ತು ವಿನ್ಯಾಸಗಳಿಂದ ಮನಸೂರೆಗೊಳ್ಳುತ್ತಿರುವ ಕೋಟಿಗೊಬ್ಬ ಕ್ಯಾಲೆಂಡರ್ ಈ ಸಲ ಸಿಂಹಸ್ವರೂಪಿ ಡಾ.ವಿಷ್ಣುವರ್ಧನ ಎಂಬ ಪರಿಕಲ್ಪನೆ ಅಡಿಯಲ್ಲಿ ಮೂಡಿದೆ. ೧೨ ಪುಟಗಳ ಜೊತೆಗೆ ಇನ್ನೆರೆಡು ವಿಶೇಷ ಪುಟಗಳಿವೆ.

ಈ ಕ್ಯಾಲೆಂಡರ್ ಡಾ.ವಿಷ್ಣುವರ್ಧನ ಅವರ ವಿಶೇಷ ಫೋಟೋಗಳು ಮತ್ತು ಅವರು ನುಡಿದಿದ್ದ ಕೆಲವು ಸುಪ್ರಸಿದ್ಧ ಹೇಳಿಕೆಗಳನ್ನು ಒಳಗೊಂಡಿದೆ. ಜೊತೆಗೆ ಡಾ.ವಿಷ್ಣುವರ್ಧನ್ ಅವರು ಸಿಂಹಸ್ವರೂಪಿ ಹೇಗೆ ಎಂಬುದರ ಬಗ್ಗೆ ಡಾ.ವಿ.ನಾಗೇಂದ್ರ ಪ್ರಸಾದ್, ಕೆ.ಕಲ್ಯಾಣ್ ಮತ್ತು ರವಿ ಶ್ರೀವತ್ಸ ಮುಂತಾದವರು ಮಾತನಾಡಿದ್ದಾರೆ. ಒಂದು ವೃತ್ತಿಪರ ಕ್ಯಾಲೆಂಡರ್ ನಲ್ಲಿ ಇರುವಂತಹ, ರಜೆ ದಿನಗಳು, ರಾಹುಕಾಲ, ಗುಳಿಕಕಾಲ, ಅಮಾವಾಸೆ, ಹುಣ್ಣಿಮೆ ಇತ್ಯಾದಿಗಳೆಲ್ಲವೂ ಈ ಕ್ಯಾಲೆಂಡರ್ ನಲ್ಲಿ ಕಾಣಬಹುದು. ವಿಷ್ಣು ಅವರ ಕ್ಯಾಲೆಂಡರ್ ಎಂದ ಮಾತ್ರಕ್ಕೆ ಬರೀ ಫೋಟೋಗಳಿಗೆ ಅಥವಾ ಅಭಿಮಾನಿಗಳಿಗೆ ಮಾತ್ರ ಸೀಮಿತವಾಗದೆ ಇಡೀ ಕುಟುಂಬದವರಿಗೆ ಅನುಕೂಲವಾಗುವಂತೆ ರೂಪುಗೊಂಡಿದೆ.

ಸಿಂಹವೊಂದು ಮನೆಯ ಗೋಡೆ ಮೇಲೆ ನಡೆದು ಹೋಗುವ ಅನುಭವವನ್ನು ಕಟ್ಟಿಕೊಡುವಂತಹ ಆಕರ್ಷಕ ವಿನ್ಯಾಸ ಮತ್ತು ಸಾಮಾನ್ಯ ಕ್ಯಾಲೆಂಡರ್ ಗಿಂತ ದುಪ್ಟಟ್ಟು ಗಾತ್ರ ಹೊಂದಿರುವುದು ಈ ಕ್ಯಾಲೆಂಡರ್‌ನ ಮತ್ತೆರೆಡು ವಿಶೇಷಗಳಾಗಿವೆ. ಇಷ್ಟೆಲ್ಲಾ ವಿಶೇಷತೆಗಳ ಕ್ಯಾಲೆಂಡರ್‌ನ ಮುದ್ರಣ ಹತ್ತಿರಹತ್ತಿರ ನೂರು ರೂಪಾಯಿ ಇದ್ದರೂ, ಅದನ್ನು ಅಭಿಮಾನಿಗಳಿಗಾಗಿ ವೀರಕಪುತ್ರ ಶ್ರೀನಿವಾಸ್ ಮತ್ತವರ ಸ್ನೇಹಿತರು ಕೇವಲ ರೂ.೫೦/_ರೂಪಾಯಿಗಳಿಗೆ ನೀಡುತ್ತಿದ್ದಾರೆ. ಏಕೆಂದರೆ ಈ ಕ್ಯಾಲೆಂಡರ್ ಪ್ರತಿಯೊಬ್ಬ ಅಭಿಮಾನಿಯ ಮನೆಯಲ್ಲಿರಬೇಕೆಂಬುದು ಅವರ ಉದ್ದೇಶ. ಈ ಕ್ಯಾಲೆಂಡರ್ ಎಲ್ಲಾ ಜಿಲ್ಲೆ ಮತ್ತು ತಾಲೂಕುಗಳ ಬಸ್ ಸ್ಟ್ಯಾಂಡ್ ಬಳಿಯ ಪುಸ್ತಕದ ಅಂಗಡಿಗಳಲ್ಲಿ ಲಭ್ಯವಿದೆ.

Continue Reading

ಅಭಿಮಾನಿ ದೇವ್ರು

ಕೆ.ಜಿ.ಎಫ್. : ಚಿನ್ನದ ನೆಲದಲ್ಲಿ ಬದುಕು ಕಳೆದುಕೊಂಡವರ ದನಿಯಾದ ರಾಕಿ!

Published

on

ಇಪ್ಪತ್ತೆರಡು ಸಾವಿರ ಜನ ಜೀತಕ್ಕೆ ಬೀಳಿಸಿಕೊಂಡ ಚಿನ್ನದ ಗಣಿ ಮಾಲೀಕ. ಬರೋಬ್ಬರಿ ಒಂಭೈನೂರೈವತ್ತು ಅಡಿ ಆಳದಲ್ಲಿ ಜೀವದ ಹಂಗು ತೊರೆದು ಕ್ರೂರ ರಾಕ್ಷಸರ ಕಣ್ಗಾವಲಿನಲ್ಲಿ ದುಡಿಮೆಗೆ ನಿಂತ ಬಡ ಜೀವಗಳು. ಆ ಚಿನ್ನದ ಗಣಿಯ ಒಡೆತನಕ್ಕಾಗಿ ರಣಹದ್ದುಗಳಂತೆ ಕಾದು ಕುಂತ ಕೇಡಿಗರು. ತನ್ನ ಅಧಿಪತ್ಯವನ್ನು ಅಲ್ಲಾಡಿಸಲು ಯಾರಿಂದಲೂ ಸಾಧ್ಯವಾಗದಂತೆ ತನ್ನ ಸುತ್ತ ಭದ್ರ ಕೋಟೆ ನಿರ್ಮಿಸಿಕೊಂಡವನು ಒಬ್ಬ ಸೈತಾನ. ಗಣಿ ಕಾರ್ಮಿಕರು ಕೂಡಾ ಮನುಷ್ಯರು ಅನ್ನೋದನ್ನು ಮರೆತ ಆತನ ಪಿಶಾಚಿ ಪಡೆ. ಗೆರೆ ದಾಟಿ ಒಂದು ಹೆಜ್ಜೆ ಮುಂದಿಟ್ಟರೆ ಆಡುವ ಮಗುವಾದರೂ ಸರಿಯೇ, ರಾಕ್ಷಸರ ತುಪಾಕಿ ಗುಂಡು ಅದರ ಗುಂಡಿಗೆಯನ್ನು ಛಿತ್ರವಾಗಿಸುತ್ತದೆ. ಇಂಥ ನರಕಕ್ಕೆ ಗಣಿ ಧಣಿ ಇಟ್ಟ ಹೆಸಡರು ಅಕ್ಕಸಾಲಿಗನ ತಕ್ಕಡಿ (ನಾರಾಚಿ)!

ಅದೊಂದು ದಿನ ಕೆ.ಜಿ.ಎಫ್ ಎನ್ನುವ ಕಡುದಾರಿದ್ರ್ಯದ ನೆಲದಲ್ಲಿ ಚಿನ್ನದ ನಿಕ್ಷೇಪ ಸಿಗುತ್ತದೆ. ಅದೇ ಘಳಿಗೆಯಲ್ಲಿ ಮತ್ತೊಂದು ಜೀವ ಕೂಡಾ ಜನ್ಮವೆತ್ತುತ್ತದೆ. ಅವನು ಲೋಕಿ. ಅಪ್ಪ ಯಾರೋ ಗೊತ್ತಿಲ್ಲ. ಹತ್ತನ್ನೆರಡು ವರ್ಷದ ಹುಡುಗ ಜಗತ್ತು ನೋಡೋ ಹೊತ್ತಿಗೆ ಅನಾರೋಗ್ಯದಿಂದ ಅಮ್ಮ ಕೂಡಾ ಉಸಿರು ಚೆಲ್ಲುತ್ತಾಳೆ. ಕೆಟ್ಟ ಬಡತನದಲ್ಲಿ ಯಾರು ಬೇಕಾದರೂ ಹುಟ್ಟಬಹುದು. ಆದರೆ ಸಾಯುವಾಗ ಬಡತನವಿರಬಾರದು ಅನ್ನೋದು ತಾಯಿಯ ಬಯಕೆ. `ನಾನು ದೊಡ್ಡ ಶ್ರೀಮಂತನಾಗೇ ತೀರುತ್ತೇನೆಂದು’ ತಾಯಿಗೆ ಭಾಷೆ ಕೊಡೋ ಹುಡುಗ ಲೋಕಿ ಹೋಗಿ ಸೇರೋದು ಮುಂಬೈ ಅನ್ನೋ ಮಾಯೆಯ ಮಡಿಲನ್ನು. ಬೂಟ್ ಪಾಲೀಷ್ ಮಾಡಿ ಬದುಕು ಆರಂಭಿಸೋ ಹುಡುಗ ಒಂದು ಕಾಲಕ್ಕೆ ಇಡೀ ಬಾಂಬೆಯನ್ನು ಆಳುವಂತಾಗುತ್ತಾನೆ. ಲೋಕಿ ರಾಕಿಯಾಗಿ ಮಾರ್ಪಡುತ್ತಾನೆ. ಇಂತಾ ರಾಕಿ ಭಾಯ್ ಕೈಗೆ ಒಂದು ದೈತ್ಯ ಆನೆಯನ್ನು ಹೊಡೆಯೋ ಡೀಲು ಬರುತ್ತದೆ. ಅದು ಅದೇ ಚಿನ್ನದ ಗಣಿ ಮಾಲೀಕನ ಮಗ ಗರುಡನದ್ದು. ತಾನು ಎಲ್ಲಿಗೆ ಹೋಗುತ್ತಿದ್ದೇನೆ, ಹೊಡೆದುರುಳಿಸಬೇಕಿರೋ ಕೀಚಕನೆ ಚರಿತ್ರೆ ಏನು? ಆತ ರಕ್ತಹರಿಸುತ್ತಿರೋ ಮಣ್ಣಿಗೂ ಅಲ್ಲಿನ ಮಣ್ಣಿನ ಮಕ್ಕಳಿಗೂ ಇರುವ ನಂಟಿನ ಇತಿಹಾಸವೇನು? ಉಹೂಂ… ಯಾವುದೂ ಗೊತ್ತಿಲ್ಲದೇ ಹೊಡೆಯೋದಷ್ಟನ್ನೇ ಗುರಿಯಾಗಿಸಿಕೊಂಡು ನರಕದ ಗೇಟಿನೊಳಗೆ ಎಂಟ್ರಿ ಕೊಡೋ ರಾಕಿಯ ಮುಂದೆ ತೆರೆದುಕೊಳ್ಳುವ ದೃಶ್ಯಗಳು, ಆ ಕೋಟೆಯ ಒಂದೊಂದೇ ಬಾಗಿಲನ್ನು ಬೇಧಿಸುತ್ತಾ ಮುನ್ನುಗ್ಗುವ ರಾಕಿ ಕಡೆಗೆ ಆ ಕಿರಾತನಕ ಕೊರಳಿಗೆ ಕೊಡಲಿಯಿಡುತ್ತಾನಾ? ಅಥವಾ ಅವರ ಕಪಿಮುಷ್ಟಿಗೆ ಸಿಲುಕಿ ಕುತ್ತಿಗೆ ತಗ್ಗಿಸಿ ಮಣಿಯುತ್ತಾನಾ ಅನ್ನೋದು ಸಿನಿಮಾದ ಒಟ್ಟಾರೆ ಸಾರಾಂಶ.

`ಕೆ.ಜಿ.ಎಫ್’ ಕಾಲ್ಪನಿಕ ಕತೆಯಂತೆ ಕಂಡರೂ ಇದು ಚಿನ್ನದ ನೆಲದಲ್ಲಿ ಉಸಿರು ಚೆಲ್ಲಿದ ಜೀವದನಿಯಂತೆ ಕಾಣುತ್ತದೆ. ಹೊರ ಜಗತ್ತಿಗೆ ಅದು ತಮ್ಮ ಆಡಂಬರ ಹೆಚ್ಚಿಸೋ ಚಿನ್ನದ ಕೊಪ್ಪರಿಗೆ. ಆದರೆ ಆ ಚಿನ್ನದ ಗಣಿಯೊಳಗೆ ಅದೆಂತೆಂಥಾ ನಿಗೂಢಗಳಿವೆ, ಅದೆಷ್ಟು ಜೀವಗಳು ಸಾವಿರಾರು ಅಡಿ ಆಳದಲ್ಲಿ ನರಳಾಡಿ ಜೀವ ಬಿಟ್ಟಿವೆ ಮತ್ತು ಚಿನ್ನದ ಮಣ್ಣಾಳದಲ್ಲಿ ಅದೆಷ್ಟು ಬಡಪಾಯಿಗಳ ನೆತ್ತರು ಇಂಗಿದೆಯೆಂಬುದು ಜಗತ್ತಿಗೆ ಬೇಡವಾದ ಸತ್ಯ. ಕೆಜಿಎಫ್ ಒಂದು ಚಿತ್ರವಾದರೂ ಕೂಡಾ ನಮ್ಮದೇ ನಡುವಿನ ಭೀಕರ ಸತ್ಯವೊಂದನ್ನು ಮುಖ್ಯವಾಹಿನಿಗೆ ತೇಲಿಸಿ ಬಿಟ್ಟಂತೆ ಭಾಸವಾಗುತ್ತೆ. ನಾವೇ ಕೇಳಿಸಿಕೊಳ್ಳದ ನಮ್ಮವರದ್ದೇ ಆಕ್ರಂದನವೊಂದು ಎದೆಗೆ ನಾಟಿದಂಥಾ ತಲ್ಲಣವನ್ನು ಪ್ರತೀ ದೃಷ್ಯಗಳೂ ಹುಟ್ಟಿಸುತ್ತವೆ. ಅದು ಚಿತ್ರವೊಂದು ಪರಿಣಾಮಕಾರಿಯಾಗೋ ಸಂಕೇತ. ಅದು ಗೆಲುವಿನ ಸೂಚನೆಯೂ ಹೌದು.

ಸಾವಿರಾರು ಅಡಿ ಆಳದಲ್ಲಿ ನಡೆಯೋ ಚಿನ್ನದ ಗಣಿಗಾರಿಕೆಯಲ್ಲಿ ಮನುಷ್ಯರನ್ನೇ ಬಲಿ ಕೊಡುತ್ತಾರೆಂಬುದು ಯಾವ ಕಾಲದಿಂದಲೋ ಹಬ್ಬಿಕೊಂಡಿರುವ ಭೀಕರ ಸತ್ಯ. ಆದರೆ ಅಲ್ಲಿ ಅದಕ್ಕಿಂತಲೂ ಭರ್ಭರವಾದುದ್ದೇ ನಡೆಯುತ್ತದೆಂಬುದಕ್ಕೆ ಈ ಚಿತ್ರದಲ್ಲಿ ವಾಸ್ತವಕ್ಕೆ ಹತ್ತಿರಾದ ಅನೇಕ ವಿಚಾರಗಳಿದ್ದಾವೆ. ಡಾನ್ ರಾಕಿ ಆನೆಯನ್ನು ಹೊಡೆಯೋ ಡೀಲು ಪಡೆದು ಕೆಜಿಎಫ್‌ಗೆ ಎಂಟ್ರಿ ಕೊಡುವಾಗ ಆತನಿಗೂ ಆ ಬಗ್ಗೆ ಏನೆಂದರೆ ಏನೂ ಗೊತ್ತಿರೋದಿಲ್ಲ. ಆದರೆ ಆ ನಂತರ ತೆರೆದುಕೊಳ್ಳೋದು ಭೀಭತ್ಸ ಸನ್ನಿವೇಶ. ತಲೆ ಎತ್ತಿ ನೋಡಿದರೂ ಕಾರ್ಮಿಕರ ರುಂಡ ಚೆಂಡಾಡೋ ಚಂಡ ಪಡೆ, ದುಡಿಯೋ ಶಕ್ತಿ ಇಲ್ಲದವರನ್ನು ಕೊಂದು ಬಿಸಾಡೋ ಕ್ರೌರ್ಯ, ಹೆಣ್ಣು ಹುಟ್ಟಿದರೆ ಹೆತ್ತವರೇ ಕತ್ತು ಹಿಸುಕಿ ಸಾಯಿಸಬೇಕಾದ ಅನಿವಾರ್ಯತೆ. ಇದೆಲ್ಲದಕ್ಕೂ ಚಿನ್ನಕ್ಕೂ ನಂಟಿದೆ. ಅದನ್ನು ಯಾವ್ಯಾವುದಕ್ಕೋ ಅಂಟದಂತೆ ಜಾಗ್ರತೆ ವಹಿಸಿ ಇಡೀ ಚಿತ್ರವನ್ನು ಪಟಕ್ಕಿಟ್ಟ ಚಿನ್ನದಂತೆಯೇ ರೂಪಿಸಿರೋದು ಚಿತ್ರತಂಡದ ವರ್ಷಾಂತರಗಳ ಶ್ರಮದ ಫಲ.

ನಿಜದ ಇತಿಹಾಸವಿರುವ ಯಾವ ಕೃತಿಗೂ ಆಳುವ ಸರ್ಕಾರಗಳು ಉಳಿಗಾಲವಿರಿಸೋದಿಲ್ಲ ಎನ್ನುವ ಸೂಕ್ಷ್ಮತೆಯೊಂದಿಗೆ ಕೆಜಿಎಫ್ ಅನ್ನು ರೂಪಿಸಲಾಗಿದೆ. ಪತ್ರಕರ್ತನೊಬ್ಬ ಬರೆದ ನಿಷೇಧಿತ ಪುಸ್ತಕದ ಮೂಲಕ ಸಿನಿಮಾವನ್ನು ನಿರೂಪಿಸಲಾಗಿದೆ. ಕಥೆ ಕಟ್ಟುವ ಮತ್ತು ಅದನ್ನು ಎಳೆಎಳೆಯಾಗಿ ಹೇಳುತ್ತಾ ಸಾಗುವ ಕಲೆ ನಿರ್ದೇಶಕ ಪ್ರಶಾಂತ್ ನೀಲ್’ಗೆ ಸಿದ್ಧಿಸಿದೆ. ದೇಶಾಧ್ಯಂತ ಕೆಜಿಎಫ್ ಬಗ್ಗೆ ಹುಟ್ಟಿಕೊಂಡಿತ್ತಲ್ಲಾ ಕ್ರೇಜ್ ಅದಕ್ಕಿಂತಲೂ ಒಂದು ಮುಟಿಗೆ ಹೆಚ್ಚೇ ರೋಚಕವಾಗಿ ನೀಲ್ ಇಡೀ ಚಿತ್ರವನ್ನು ರೂಪಿಸಿದ್ದಾರೆ. ಚಿನ್ನದ ಗಣಿಯ ಕ್ರೌರ್ಯ ಬಗೆಯುತ್ತಲೇ ಹೊಸಕಲ್ಪಟ್ಟ ಜೀವಗಳ ಕಥೆ ಹೇಳೋ ರಾಕಿ ಭಾಯ್ ಇಷ್ಟವಾಗದಿರಲು ಯಾವ ಕಾರಣಗಳೂ ಇಲ್ಲ!

ಇಷ್ಟೆಲ್ಲದರ ನಡುವೆಯೂ ಒಂದು ಕೊರಗಿದೆ. ಇನ್ನೊಂದಿಷ್ಟು ನಿಮಿಷಗಳನ್ನು ವೃದ್ಧಿಸಿ ಉಳಿದಿರೋ ಕಥೆಯನ್ನು ಒಂದೇ ಗುಕ್ಕಿನಲ್ಲಿ ಹೇಳಿಬಿಡಬೇಕಿತ್ತು. ಎಲ್ಲ ಮುಗಿದ ಮೇಲೂ ಇನ್ನೊಂಚೂರಿರಬಹುದಿತ್ತು ಎನ್ನುವ ಅತೃಪ್ತಿ ಪ್ರೇಕ್ಷಕರಿಗೆ ಉಳಿದೇ ಉಳಿಯುತ್ತದೆ. ಈ ಕಾರಣಕ್ಕಾದರೂ ಎರಡನೇ ಅಧ್ಯಾಯದ ಗೊಡವೆಗೆ ಹೋಗದೆ ಒಂದೇ ಚಾಪ್ಟರಿನಲ್ಲಿ ಹೇಳಿ ಮುಗಿಸಿಬಿಟ್ಟಿದ್ದರೆ ನೋಡುಗರ ಆತ್ಮಸಂತೃಪ್ತಿಯಾಗುತ್ತಿತ್ತು!!

Continue Reading

ಅಭಿಮಾನಿ ದೇವ್ರು

ಟಿಪ್ಸೋ ಟಿಪ್ಸು!

Published

on

ಒಮ್ಮೆ ಅಂಬರೀಶ್ ಒಂದು ರೆಸ್ಟೋರೆಂಟ್‌ಗೆ ಹೋಗಿ ಗುಂಡು ಹಾಕಿಬಂದಿದ್ದರು. ಸಾಮಾನ್ಯವಾಗಿ ಅಂಬರೀಶ್ ಒಂದು ಹೊಟೇಲ್‌ಗೆ ಹೋದರೆಂದರೆ, ಅಲ್ಲಿರುವ ಅಷ್ಟೂ ಜನ ಹೊಟೇಲ್ ಸಿಬ್ಬಂದಿಗೆ ಹಬ್ಬೋಹಬ್ಬ. ಯಾಕೆಂದರೆ ಅಂಬರೀಶ್ ಹೊರಡುವಾಗ ಅಲ್ಲಿನ ಎಲ್ಲ ಕೆಲಸಗಾರರ ಕೈಗೂ ನೂರಾರು ರುಪಾಯಿಗಳ ಟಿಪ್ಸು ಗ್ಯಾರೆಂಟಿ.


ಅದೊಮ್ಮೆ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮುಗಿಸಿದ ಅಂಬಿ ತನ್ನ ಸಹಾಯಕನನ್ನು ಕರೆದು `ಎಲ್ಲರಿಗೂ ಟಿಪ್ಸು ಕೊಡು ಎಂದು ಹತ್ತು ಸಾವಿರ ರುಪಾಯಿ ಕೊಟ್ಟು ಹೊರಟಿದ್ದಾರೆ. ಅಂಬಿಯ ಬಳಿ ಹಣ ಪಡೆದ ಅವರ ಅಸಿಸ್ಟೆಂಟು ರೆಸ್ಟೋರೆಂಟ್‌ನ ಹುಡುಗರಿಗೆಲ್ಲಾ ಸೇರಿ ಒಂದು ಸಾವಿರದ ಟಿಪ್ಸು ಕೊಟ್ಟು ಮಿಕ್ಕ ಒಂಭತ್ತು ಸಾವಿರವನ್ನು ತನ್ನ ಕಿಸೆಗಿಳಿಸಿಕೊಂಡು ಹೊರಟು ಹೊರಟುಬಿಟ್ಟಿದ್ದ.


ಅಂಬಿಗೆ ಅದೇನು ಮನಸ್ಸಾಯಿತೋ ಮತ್ತೆ ಹಿಂತಿರುಗಿ ರೆಸ್ಟೋರೆಂಟ್‌ಗೆ ಬಂದಿದ್ದಾರೆ. ಬಂದವರೇ `ಏನ್ರೋ ಹತ್ ಸಾವ್ರಾನ ಎಲ್ರೂ ಕರೆಕ್ಟಾಗಿ ಹಂಚ್‌ಕೊಂಡ್ರಾ? ಎಂದಿದ್ದಾರೆ. ಅಲ್ಲಿದ್ದ ಹುಡುಗರು `ಅಣ್ಣಾ… ನಿಮ್ಮವರು ಕೊಟ್ಟಿದ್ದು ಒಂದೇ ಸಾವಿರ ಎಂದು ಹೇಳಿಬಿಟ್ಟಿದ್ದಾರೆ. ತಕ್ಷಣ ವ್ಯಘ್ರಗೊಂಡ ಅಂಬಿ ತನ್ನ ಸಹಾಯಕನನ್ನು ಕರೆಸಿ, ಆ ಹುಡುಗರ ಮುಂದೆಯೇ ಕೆಟ್ಟಾ ಕೊಳಕಾ ಬೈದಿದ್ದಾರೆ `ಬೋ.. ಮಗನೇ ನೀನು ಕಾಸು ಕೇಳಿದ್ದರೆ ಎಷ್ಟು ಬೇಕಾದ್ರೂ ಕೊಡ್ತಿದ್ದೆ.. ಹೋಗಿ ಹೋಗಿ ಆ ಬಡಪಾಯಿ ಹುಡುಗ್ರಿಗೆ ಸೇರ್‌ಬೇಕಿದ್ದ ದುಡ್ಡು ಹೊಡೆದಿದ್ದಿಯಾ? ಹಾಗೆ, ಹೀಗೆ ಮಕಾಮಕಾ ಉಗಿದು ಉಪ್ಪಾಕಿದ್ದಾರೆ.
ಅಂಬಿಯ ಇಂಥ ಟಿಪ್ಸುಗಳನ್ನು ಪಡೆದ ಅವರ ಅಸಿಸ್ಟೆಂಟು ಸುಸ್ತಾಗಿ ಎಸ್ಕೇಪ್ ಆಗಿದ್ದ…
ಅರುಣ್.ಜಿ

Continue Reading

Trending

Copyright © 2018 Cinibuzz