One N Only Exclusive Cine Portal

ಕರ್ನಾಟಕದ ಪರ ಮಾತಾಡಿದರು ತಮಿಳು ನಟ ಸಿಂಬು!

ತಮಿಳುನಾಡು ಮತ್ತು ಕರ್ನಾಟಕದ ನಡುವೆ ಹೊತ್ತಿಕೊಂಡಿರುವ ಕಾವೇರಿ ಜಲವಿವಾದಕ್ಕೆ ಸುದೀರ್ಘವಾದೊಂದು ಇತಿಹಾಸವೇ ಇದೆ. ಪ್ರತೀ ವರ್ಷ ತಮಿಳುನಾಡು ನೀರಿಗಾಗಿ ಕ್ಯಾತೆ ತೆಗೆಯೋದಾಗಲಿ, ಒಡಲನ್ನೇ ಕಾವೇರಿಯನ್ನು ಕಂಡು ಕನ್ನಡಿಗರು ಹೋರಾಟಕ್ಕಿಳಿಯೋದಾಗಲಿ ಹೊಸತಲ್ಲ. ಆದರೆ ಈ ವರೆಗೂ ಎರಡೂ ಕಡೆಗಳ ಮಂದಿ ರಾಜಕೀಯ ದಾಳಗಳಾಗುತ್ತಿದ್ದಾರೇ ಹೊರತು, ವಿವೇಚನೆಯಿಂದ ಮುಂದಡಿ ಇಡುವ ಪ್ರಯತ್ನಗಳಾಗಿರಲಿಲ್ಲ. ಇದೀಗ ತಮಿಳು ಮೂಲದ ಬಹುಭಾಷಾ ನಟ ಸಿಲಂಬರಸನ್ ಅಂಥಾದ್ದೊಂದು ಮಾನವೀಯ ಹೆಜ್ಜೆಯಿಡುವ ಮೂಲಕ ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ. ಕಾವೇರಿ ವಿವಾದದಾಚೆಗೂ ಹೊಸಾ ಭರವಸೆಯೊಂದನ್ನು ಹುಟ್ಟುವಂತೆ ಮಾಡಿದ್ದಾರೆ!

ಅಸಲಿಗೆ, ಕಾವೇರಿ ವಿವಾದ ಮನುಷ್ಯತ್ವದ ನೆಲೆಗಟ್ಟಿನ ಮೂಲಕವೇ ಬಗೆಹರಿಸಿಕೊಳ್ಳುವ ಸೂಕ್ಷ್ಮ ವಿಚಾರ. ಅಕಸ್ಮಾತಾಗಿ ತಮಗಾಗಿ ಉಳಿಯುವಷ್ಟು ನೀರಿರದಿದ್ದರೂ ಇದ್ದುದರಲ್ಲೇ ಕೊಂಚ ಹಂಚಿಕೊಂಡು ತಮಿಳಿಗರ ಹಾಹಾಕಾರ ಆರಿಸುವ ಔದಾರ್ಯ ಕನ್ನಡಿಗರಿಗಿದೆ. ಇಲ್ಲಿನ ಜನರ ಕಷ್ಟ ಅರ್ಥೈಸಿಕೊಂಡು ಕಷ್ಟ ನುಂಗಿಕೊಳ್ಳುವ ಮನಸ್ಥಿತಿ ತಮಿಳಿಗರಿಗೂ ಇದೆ. ಆದರೆ ಇವರಿಬ್ಬರ ನಡುವೆ ಬೆಂಕಿ ಹಚ್ಚುತ್ತಾ ಸದಾ ತಂತಮ್ಮ ಬೇಳೆ ಬೇಯಿಸಿಕೊಂಡು ಉದ್ದಾರಾಗೋ ತೆವಲು ಎರಡೂ ಕಡೆಗಳ ರಾಜಕಾರಣಿಗಳದ್ದು. ಸಿನಿಮಾ ನಟರೂ ಕೂಡಾ ಭಾಷೆಯ ಚೌಕಟ್ಟಿನಲ್ಲಿಯೇ ಕಾವೇರಿ ವಿವಾದವನ್ನೂ ನೋಡುತ್ತಾ ರಾಜಕಾರಣಿಗಳಿಗೆ ಪರೋಕ್ಷವಾಗಿ ಸಪೋರ್ಟು ಮಾಡುತ್ತಾ ಬಂದಿದ್ದರು. ಇಂಥಾದ್ದರ ನಡುವೆ ತಮಿಳು ನಟ ಸಿಲಂಬರಸನ್ ತಮಿಳುನಾಡಿನ ತನ್ನ ಜನರ ನಡುವೆ ನಿಂತು ಕರ್ನಾಟಕದ ಪರವಾಗಿ ಮಾತಾಡುವ ಮೂಲಕ ಒಕ್ಕೂಟ ವ್ಯವಸ್ಥೆಯ ಘನತೆಯನ್ನು ಎತ್ತಿ ಹಿಡಿದಿದ್ದಾರೆ.

‘ಇದು ಗಾಂಧಿ ಹುಟ್ಟಿದ ನಾಡು. ಎಂಥಾ ಸಮಸ್ಯೆಯನ್ನೇ ಆದರೂ ಅಹಿಂಸಾ ಮಾರ್ಗದಿಂದಲೇ ಬಗೆಹರಿಸಿಕೊಳ್ಳಬೇಕು. ನಾವೆಲ್ಲ ಒಂದೇ ದೇಶದ ಪ್ರಜೆಗಳು. ಅಷ್ಟಕ್ಕೂ ಕನ್ನಡಿಗರೇನು ನೀರು ಕೊಡೋದಿಲ್ಲ ಅಂದಿಲ್ಲವಲ್ಲಾ? ಅವರಿಗೇ ನೀರಿಲ್ಲ ಅಂದ ಮೇಲೆ ನಮಗೆಲ್ಲಿಂದ ಕೊಡಲು ಸಾಧ್ಯ’? ಅನ್ನುವ ಮೂಲಕ ಸಿಂಬು ವಾಸ್ತವದ ನೆಲೆಯಲ್ಲಿ ಮಾತಾಡಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರವೂ ಕೂಡಾ ಈ ಸಮಸ್ಯೆಯನ್ನು ಬಗೆ ಹರಿಸದೆ ಜನ ಕಚ್ಚಾಡಲು ಬಿಟ್ಟು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುವ ಬುದ್ಧಿಗೂ ಸಿಂಬು ಸರಿಯಾಗಿಯೇ ಕುಟುಕಿದ್ದಾರೆ.

ನಾವೆಲ್ಲ ಭಾರತದಲ್ಲಿ ಹುಟ್ಟಿದ್ದೇವೆ. ರಾಜ್ಯ ಯಾವುದೇ ಇದ್ದರೂ ನಾವೆಲ್ಲ ಒಂದೇ. ಆದರೆ ಯಾರೋ ಅಧಿಕಾರ ಹಿಡಿಯಲೋಸ್ಕರ ಜಾತಿ, ಧರ್ಮಗಳ ನಡುವೆ ಕಿಚ್ಚು ಹತ್ತಿಸುತ್ತಿದ್ದಾರೆ. ಅದೇ ಕಾರಣದಿಂದ ಇಂಥಾ ಸಮಸ್ಯೆಗಳನ್ನು ಜೀವಂತವಾಗಿರುವಂತೆ ಮಾಡುತ್ತಿದ್ದಾರೆ. ನಾನು ಕರ್ನಾಟಕದಲ್ಲಿ ಹುಟ್ಟದೇ ಇರಬಹುದು. ಆದರೂ ಆ ತಾಯಿಯಲ್ಲಿ ಕೇಳಿಕೊಳ್ಳುತ್ತೇನೆ, ನೀವು ಬಳಸಿ ಉಳಿದ ನೀರನ್ನು ನಮಗೆ ಕೊಡಿ, ಅಷ್ಟು ಸಾಕು…

ಕರ್ನಾಟಕ ಮತ್ತು ತಮಿಳುನಾಡು ಬೇರೆ ಬೇರೆ ಭೂಭಾಗಗಳಲ್ಲ. ನಾವು ಶತ್ರುಗಳೂ ಅಲ್ಲ. ನಾವೆಲ್ಲ ಅಣ್ಣ ತಮ್ಮಂದಿರು, ಅಕ್ಕತಂಗಿಯರು. ಹಾಗಿರುವಾಗ ನಮಗೆ ನೀರು ಬೇಕೆಂಬ ಕಾರಣಕ್ಕೆ ಜಗಳವಾಡಬೇಕಾ? ಪ್ರೀತಿಯಿಂದ ಕೇಳಿದರೆ ಇಲ್ಲ ಅನ್ನುತ್ತಾರಾ? ನಿಜಕ್ಕೂ ನೀರಿಲ್ಲದೇ ಇದ್ದಾಗ ಇಲ್ಲ ಅಂದರೆ ಅದು ಅರ್ಥವಾಗದೇ ಇರುತ್ತದಾ?…

ಇದು ಸಿಂಬು ಆಡಿರೋ ಪ್ರೌಢ ಮಾತುಗಳ ಸಾರಾಂಶ. ಅವರ ಮಾತುಗಳನ್ನು ಮೇಲುಮೇಲಕ್ಕೆ ಅರ್ಥ ಮಾಡಿಕೊಂಡಿರುವ ಒಂದಷ್ಟು ಮಂದಿ ತಮಿಳರೇ ಅವರನ್ನು ವಿರೋಧಿಸಲಾರಂಭಿಸಿದ್ದಾರೆ. ಆದರೆ ಅವರಾಡಿರೋ ಮಾತುಗಳನ್ನು ಒಕ್ಕೂಟ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟಿರುವ ಎಲ್ಲರೂ ಒಪ್ಪಬೇಕಾದದ್ದೇ. ಕರ್ನಾಟಕದ ಕಡೆಯಿಂದಲೂ ಇಂಥಾ ಪ್ರೌಢ ವರ್ತನೆಗಳು ಕಂಡು ಬರುವ ಅವಶ್ಯಕತೆಯೂ ಇದೆ. ಆದರೆ ಇಲ್ಲಿನ ಮತ್ತು ತಮಿಳುನಾಡಿನ ರಾಜಕಾರಣಿಗಳು ಮಾತ್ರವೇ ಇಂಥಾ ಮಾನವೀಯ ಮಾತುಗಳು ಜನರನ್ನು ತಲುಪದಂತೆ ನೋಡಿಕೊಳ್ಳುತ್ತಾರೆ. ಯಾಕೆಂದರೆ ಎರಡು ರಾಜ್ಯದ ಜನ ರಾಜಿಯಾಗಿ ನೆಮ್ಮದಿಯಿಂದಿದ್ದರೆ ಇವರಿಗೆ ಅಸ್ತ್ರಗಳು ಸಿಗುವುದಿಲ್ಲ!

Leave a Reply

Your email address will not be published. Required fields are marked *


CAPTCHA Image
Reload Image