One N Only Exclusive Cine Portal

ಗುಳ್ಟು ಹುಡುಗಿ ಸೋನುಗೌಡ!

ವಾರದ ಹಿಂದೆ ತೆರೆ ಕಂಡಿದ್ದ ಗುಳ್ಟು ಚಿತ್ರ ರಾಜ್ಯಾಧ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬೇರೆ ಭಾಷೆಗಳಿಗೆ ರೀಮೇಕ್ ಆಗಲೂ ತಯಾರಾಗಿದೆ. ಇಂಥಾದ್ದೊಂದು ಭರಪೂರ ಗೆಲುವಿಗೆ ಷರಾ ಬರೆದಿರುವ ಈ ಚಿತ್ರದ ನಾಯಕಿಯಾಗಿ ಗಮನಾರ್ಹವಾದ ನಟನೆಯ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿರುವವರು ಸೋನು ಗೌಡ!

ಬಹುಶಃ ಕನ್ನಡ ಚಿತ್ರರಂಗದಲ್ಲಿ ಗುಳ್ಟು ಚಿತ್ರದ ಮೂಲಕ ಸೋನು ಗೌಡ ಮರುಹುಟ್ಟು ಪಡೆದಿದ್ದಾರೆ. ಒಂದಷ್ಟು ಗ್ಯಾಪಿನ ನಂತರ ಈ ಚಿತ್ರದ ಮೂಲಕ ಮೇಲೆದ್ದು ನಿಂತಿರೋ ಸೋನು, ಇದೀಗ ಎಲ್ಲೆಡೆಯಿಂದ ಪ್ರಶಂಸೆಗೆ ಪಾತ್ರವಾಗುತ್ತಿರೋದರ ಜೊತೆಗೆ ಕೈ ತುಂಬಾ ಅವಕಾಶಗಳನ್ನೂ ಬಾಚಿಕೊಂಡಿದ್ದಾರೆ. ಅಪ್ಪಟ ಕನ್ನಡದ ಹುಡುಗಿಯಾದ ಈಕೆ ಸದ್ಯ ಪಡೆದುಕೊಂಡಿರೋ ಅವಕಾಶಗಳು ಮತ್ತು ಬ್ಯುಸಿಯಾಗಿರೋ ರೀತಿ ಕಂಡು ಎಲ್ಲರೂ ಅಚ್ಚರಿಗೊಂಡಿದ್ದಾರೆ!

ಅಷ್ಟಕ್ಕೂ ಸೋನು ಗೌಡ ಎಂಬ ರಂಗಭೂಮಿಯ ಪ್ರತಿಭೆಯನ್ನು ಚಿತ್ರರಂಗಕ್ಕೆ ಮೊದಲು ಪರಿಚಯಿಸಿದ್ದ ನಿರ್ದೇಶಕ ದುನಿಯಾ ಸೂರಿ. ಅವರ ಇಂತಿ ನಿನ್ನ ಪ್ರೀತಿಯ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಸೋನು ಮೊದಲ ಚಿತ್ರದಲ್ಲಿಯೇ ಭರವಸೆ ಮೂಡಿಸಿದ್ದರು. ಬಹುಶಃ ಆ ಚಿತ್ರದಲ್ಲಿನ ಸೋನು ಪಾತ್ರ ಅದರ ಚೆಂದದ ಹಾಡುಗಳಂತೆಯೇ ಈ ಕ್ಷಣಕ್ಕೂ ಕನ್ನಡದ ಪ್ರೇಕ್ಷಕರನ್ನು ಕಾಡುತ್ತಲೇ ಇದೆ. ಸೋನು ಅವರ ತಂದೆ ಮೇಕಪ್ ರಾಮಕೃಷ್ಣ ಕನ್ನಡ ಚಿತ್ರರಂಗದಲ್ಲಿ ಮೇಕಪ್ ಕಲಾವಿದರಾಗಿ ದೊಡ್ಡ ಹೆಸರು ಮಾಡಿದವರು. ಕಲಾವಿದರಾಗಿಯೂ ಹಲವಾರು ಸಿನಿಮಾಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ.

ಅದಾದ ನಂತರ ಪರಮೇಶ ಪಾನ್ ವಾಲಾ, ಗುಲಾಮ, ಪೊಲೀಸ್ ಕ್ವಾರ್ಟಸ್, ಕಿರಗೂರಿನ ಗಯ್ಯಾಳಿಗಳು ಸೇರಿದಂತೆ ಒಂದಷ್ಟು ಚಿತ್ರಗಳಲ್ಲಿ ನಟಿಸಿದ್ದ ಸೋನು ಒಂದು ದೊಡ್ಡ ಬ್ರೇಕ್‌ಗಾಗಿ ಕಾದಿದ್ದರು. ಆದರೆ ಅಷ್ಟರಲ್ಲಿಯೇ ತಮಿಳು ಮತ್ತು ಮಲೆಯಾಳದಲ್ಲಿ ಈ ಹುಡುಗಿಗೆ ಎಲ್ಲರೂ ಹುಬ್ಬೇರಿಸುವಂಥಾ ಅವಕಾಶಗಳು ಸಿಕ್ಕಿದ್ದವು. ಮಲೆಯಾಳಂನಲ್ಲಿ ಸೋನು ಬೆಸ್ಟ್ ಆಕ್ಟರ್ ಎಂಬ ಚಿತ್ರದಲ್ಲಿ ಮಮ್ಮೂಟಿ ಅವರ ಜೊತೆ ನಟಿಸಿದ್ದರು. ತಮಿಳಿನಲ್ಲಿ 144 ಎಂಬ ಚಿತ್ರದಲ್ಲಿಯೂ ಅವಕಾಶ ಗಿಟ್ಟಿಸಿಕೊಂಡಿದ್ದರು.

ಹೀಗೆ ವೃತ್ತಿ ಜೀವನದ ಒಂದೊಂದೇ ಹಂತಗಳನ್ನು ಮೇಲೇರಿ ಬಂದು ಗುಳ್ಟು ಚಿತ್ರದ ಮೂಲಕ ಭರ್ಜರಿ ಗೆಲುವಿನ ಖುಷಿಯಲ್ಲಿರುವ ಸೋನು ಗೌಡ ಮೂಲತಃ ಬೆಂಗಳೂರಿನ ಹುಡುಗಿ. ಅಪ್ಪಟ ಕನ್ನಡತಿ. ಈಕೆ ಓದಿದ್ದು ಸುರಾನಾ ಮತ್ತು ಜೈನ್ ಕಾಲೇಜಿನಲ್ಲಿ. ಆ ಕಾಲದಲ್ಲಿಯೇ ನಟನೆಯ ಬಗ್ಗೆ ಒಲವು ಹೊಂದಿದ್ದ ಸೋನು ಬೆನಕ ಮತ್ತು ರಂಗ ಸಂಪದ ತಂಡಗಳಲ್ಲಿ ಸಕ್ರಿಯರಾಗಿದ್ದರು. ಬಹುಶಃ ಸೋನು ಗೌಡ ನಟನೆಯಲ್ಲಿ ಪರಿಪೂರ್ಣತೆ ಪಡೆದುಕೊಂಡಿದ್ದೇ ರಂಗಭೂಮಿಯ ಕಾರಣದಿಂದ. ಆದ್ದರಿಂದಲೇ ಅವರು ಬಹು ಬೇಡಿಕೆಯ ಸಿನಿಮಾ ನಟಿಯಾಗಿರುವ ಈ ಕ್ಷಣದಲ್ಲಿಯೂ ರಂಗಭೂಮಿಯ ನಂಟು ಬಿಡದೆ ಸಕ್ರಿಯರಾಗಿದ್ದಾರೆ.

ಗುಳ್ಟು ಚಿತ್ರದಲ್ಲಿನ ಸೋನು ಅವರ ನಟನೆ ಕಂಡು ಪ್ರೇಕ್ಷಕರು ಮಾತ್ರವಲ್ಲದೆ ಚಿತ್ರರಂಗದ ಮಂದಿಯೂ ಅವರತ್ತ ಕಣ್ಣರಳಿಸಿ ನೋಡಲಾರಂಭಿಸಿದ್ದಾರೆ. ಅವರ ಮುಂದೀಗ ಸಾಲು ಸಾಲು ಅವಕಾಶಗಳಿವೆ. ಆದರೆ ರಂಗಭೂಮಿಯ ಮನಸ್ಥಿತಿಯಂತೆ ಸವಾಲಿನ ಪಾತ್ರಗಳನ್ನೇ ಆರಿಸಿಕೊಂಡು ಒಪ್ಪಿಕೊಳ್ಳುತ್ತಿರುವ ಸೋನು ಹವಾ ಕನ್ನಡದಲ್ಲಿನ್ನು ನಿರಂತರ!

Leave a Reply

Your email address will not be published. Required fields are marked *


CAPTCHA Image
Reload Image