One N Only Exclusive Cine Portal

ಜೇನ್ದನಿಗೆ ಧರ್ಮ ದ್ವೇಷದ ವಿಷ ಬೆರೆಸಿದವರ‍್ಯಾರು?

ಬಾಲಿವುಡ್‌ನ ಖ್ಯಾತ ಗಾಯಕ ಸೋನು ನಿಗಮ್‌ಗೆ ಕೆಲ ಮತೀಯ ವಾದಿಗಳು ಜೀವ ಬೆದರಿಕೆ ಹಾಕಿದ್ದರ ಬಗ್ಗೆ ಇದೀಗ ದೇಶಾಧ್ಯಂತ ಸುದ್ದಿಯಾಗಿದೆ. ಸೋನು ನಿಗಮ್ ಈ ಹಿಂದೆ ಮಸೀದಿಗಳಲ್ಲಿ ಮೈಕ್ ಹಾಕಿಕೊಂಡು ಜೋರು ಧ್ವನಿಯಲ್ಲಿ ನಮಾಜ್ ಮಾಡೋದರ ವಿರುದ್ಧವಾಗಿ ಮಾತಾಡಿದ್ದೇ ಇದಕ್ಕೆಲ್ಲ ಕಾರಣ.

ಅಷ್ಟಕ್ಕೂ ಸೋನು ನಿಗಮ್ ಅವರ ಹಾಡುಗಳನ್ನು ಪ್ರೀತಿಸೋ ಮಂದಿ ಮುಸ್ಲಿಂ ಸಮುದಾಯದಲ್ಲಿಯೂ ಬಹುತೇಕರಿದ್ದಾರೆ. ತನ್ನ ಆರ್ಧ್ರ ಧ್ವನಿಯ ಮೂಲಕ ಎಲ್ಲರನ್ನೂ ಸೋಕಿರುವ ಸೋನು ಯಾಕಿಂಥಾ ಮಾತಾಡಿದರು ಅಂತೊಂದು ಕಸಿವಿಸಿ ಪ್ರಜ್ಞಾವಂತರನ್ನೆಲ್ಲ ಕಾಡಿತ್ತು. ಆದರೆ ಅವರ ಮಾತುಗಳ ಹಿಂದೆ ಯಾವ ಮತೀಯ ಭಾವನೆಗಳೂ ಇರಲಿಲ್ಲ. ಅದನ್ನು ಕೆಲ ಮತೀಯ ಸಂಘಟನೆಗಳು ತಮಗೆ ಬೇಕಾದಂತೆ ಬಳಸಿಕೊಂಡವು ಎಂಬುದು ಕಣ್ಮುಂದಿನ ಸತ್ಯ. ಇದನ್ನು ಮನಗಂಡೇ ಇದೀಗ ಬಾಲಿವುಡ್‌ನ ಖ್ಯಾತ ಸಾಹಿತಿ ಜಾವೇದ್ ಅಖ್ತರ್ ಜೀವ ಬೆದರಿಕೆಗೀಡಾಗಿರೋ ಸೋನು ನಿಗಮ್ ಪರವಾಗಿ ನಿಂತಿದ್ದಾರೆ.

ಜಾವೇದ್ ಅಖ್ತರ್ ಭಹಿರಂಗವಾಗಿಯೇ ಸೋನು ನಿಗಮ್ ಪರವಾಗಿ ಮಾತಾಡಿರೋದಲ್ಲದೇ ಈ ವಿಚಾರವಾಗಿ ತಾವು ಸದಾ ಸೋನು ಪರವಾಗಿರೋದಾಗಿಯೂ ಹೇಳಿಕೊಂಡಿದ್ದಾರೆ. ಸೋನು ನಿಗಮ್ ಮನುಷ್ಯ ಸಹಜವಾದೊಂದು ಅಸಹನೆಯಿಂದ ಮಸೀದಿಗಳಲ್ಲಿನ ಲೌಡ್ ಸ್ಪೀಕರ್ ಹಾವಳಿಯ ಬಗ್ಗೆ ಮಾತಾಡಿದ್ದಿರ ಬಹುದು. ಭಾರೀ ಪ್ರಸಿದ್ಧಿ ಪಡೆದಿರೋ ಅವರು ಇಂಥಾ ಮಾತುಗಳನ್ನಾಡುವ ಮುನ್ನ ಅದರ ಸಾಮಾಜಿಕ ಪರಿಣಾಮಗಳ ಬಗ್ಗೆ ಆಲೋಚಿಸಬೇಕಿತ್ತೆಂಬುದು ನಿರ್ವಿವಾದ. ಆದರೆ ಸೋನು ಯಾವುದೋ ಮೂಡಿನಲ್ಲಿ ಹೇಳಿದ್ದನ್ನೇ ಒಂದು ಸಮುದಾಯದ ಕೆಲ ಮಂದಿ ತಮ್ಮ ವಿರುದ್ಧದ ಅಸಹನೆ ಅಂದುಕೊಂಡರು. ಮತ್ತೊಂದು ವಲಯದ ಜನ ಅದನ್ನೇ ತಮ್ಮ ಅಜೆಂಡಾಗಳಿಗೆ ಬಳಸಿಕೊಂಡರು. ತನ್ನ ಪಾಡಿಗೆ ತಾನು ಹಾಡಿಕೊಂಡಿದ್ದ ಸೋನು ನಿಗಮ್ ಯಾರಿಗೋ ದಾಳವಾಗಿ ಇದೀಗ ಮತೀಯ ಮನಸುಗಳಿಂದ ಜೀವ ಭಯಕ್ಕೆ ತುತ್ತಾಗಿರೋದು ನಿಜವಾಗಿಯೂ ದುರಂತ. ಆದರೆ ಜಾವೇದ್ ಅಖ್ತರ್ ಅವರ ಪರವಾಗಿ ನಿಂತಿರೋದು ಭಾರತದ ಮಣ್ಣಿನ ಅಸಲೀ ಮನುಷ್ಯ ಪ್ರೇಮಕ್ಕೆ ತಾಜಾ ಉದಾಹರಣೆಯಂತೆ ನಿರಾಳವಾಗುವಂತೆ ಮಾಡಿದೆ.

ಸೋನು ನಿಗಮ್ ಮಸೀದಿಗಳ ನಮಾಜ್ ಬಗ್ಗೆ ಮಾತಾಡುತ್ತಲೇ ಸಂಸ್ಕೃತಿಯ ವಾರಸುದಾರರಂತೆ ಪೋಸು ಕೊಡುವ ಮಂದಿ ಏಕಾಏಕಿ ಅವರ ಸಪೋರ್ಟಿಗೆ ನಿಂತಿದ್ದರು. ಇಂಥಾದ್ದೇ ಮನಸ್ಥಿತಿಯ ಮುಸ್ಲಿಂ ಸಮುದಾಯದ ಕೆಲ ಮಂದಿ ಸೋನು ವಿರುದ್ಧ ಕುದ್ದು ಹೋದರು. ಕಡೆಗೂ ದುರಾದೃಷ್ಟವೆಂಬಂತೆ ಸೋನು ನಿಗಮ್‌ರ ಜೇನ್ದನಿಗೆ ಧರ್ಮದ್ವೇಷದ ವಿಷ ಬೆರೆಸಲಾಯಿತು. ಇಂಥಾದ್ದರಿಂದಾಗಿಯೇ ಇದೀಗ ಜೀವ ಬೆದರಿಕೆಗೆ ಈಡಾಗಿರೋ ಸೋನು ಈ ಹೊತ್ತಿನಲ್ಲಿಯಾದರೂ ತನ್ನ ನಡಾವಳಿಗಳ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ.

ಇಂಥಾ ಸೆಲೆಬ್ರಿಟಿಗಳು ಈ ಥರದ ಮಾತಾಡುವಾಗ ಎಚ್ಚರದಿಂದಿದ್ದು, ಸೂಕ್ಷ್ಮವಾಗಿ ಆಲೋಚಿಸಿ ಮುಂದಡಿ ಇಡಬೇಕೆಂಬುದಕ್ಕೆ ಸೋನು ನಿಗಮ್ ತಾಜಾ ಉದಾಹರಣೆಯಂತೆಯೇ ಕಾಣಿಸುತ್ತಾರೆ.

Leave a Reply

Your email address will not be published. Required fields are marked *


CAPTCHA Image
Reload Image