One N Only Exclusive Cine Portal

ಸೂಜಿದಾರದ ಮೂಲಕ ಎಂಟ್ರಿ ಕೊಟ್ಟ ಯುವ ನಿರ್ಮಾಪಕರು!

ಸದ್ಯ ಕನ್ನಡ ಚಿತ್ರರಂಗದಲ್ಲಿ ಎಲ್ಲರ ಗಮನ ಸೆಳೆದುಕೊಂಡಿರುವ ಚಿತ್ರ ಸೂಜಿದಾರ. ಖ್ಯಾತ ಕತೆಗಾರ, ರಂಗಕರ್ಮಿ ಮೌನೇಶ್ ಬಡಿಗೇರ್ ನಿರ್ದೇಶನದ ಈ ಚಿತ್ರ ಭಿನ್ನವಾದೊಂದು ಕಥಾ ಹಂದರ ಮತ್ತು ಕನ್ನಡಕ್ಕೆ ಹೊಸಾ ಹೊಳಹು ನೀಡುವಂಥಾ ಪ್ರಯೋಗಗಳ ಕಾರಣದಿಂದ ಪ್ರೇಕ್ಷಕರಲ್ಲೊಂದು ನಿರೀಕ್ಷೆ ಮೂಡಿಸಿದೆ. ಆದರೆ ಇಂಥಾ ಚಿತ್ರಗಳು ತಯಾರಾಗಬೇಕೆಂದರೆ ಸಿನಿಮಾ ವ್ಯಾಮೋಹ ಹೊಂದಿರುವ ನಿರ್ಮಾಪಕರು ಇರಲೇ ಬೇಕು. ಅಂಥಾ ತೀವ್ರ ಸಿನಿಮಾ ಪ್ರೇಮ, ಕನ್ನಡ ಚಿತ್ರರಂಗದಲ್ಲಿಯೇ ಮೈಲಿಗಲ್ಲಾಗುವಂಥಾದ್ದೊಂದು ಸಿನಿಮಾ ಮಾಡಬೇಕೆಂಬ ಕನಸು ಹೊಂದಿದ್ದ ಅಭಿಜಿತ್ ಕೋಟೆಕಾರ್ ಮತ್ತು ಸುಚೀಂದ್ರನಾಥ ನಾಯಕ್ ಎಂಬಿಬ್ಬರು ಯುವ ನಿರ್ಮಾಪಕರು ಸೂಜಿದಾರ ಚಿತ್ರದ ಮೂಲಕವೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಅಭಿಜಿತ್ ಕೋಟೆಕಾರ್ ಮತ್ತು ಸುಚೀಂದ್ರನಾಯಕ್ ಮೂಲರ್ತ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿಯವರು. ಜೊತೆಗೇ ಆಡಿ ಬೆಳೆದ ಕುಚಿಕ್ಕೂ ಗೆಳೆಯರೂ ಹೌದು. ಅಭಿಜಿತ್ ಸತ್ಯಾದ್ರಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪೂರೈಸಿ ಸದ್ಯ ಉಡುಪಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಚೀಂದ್ರ ನಾಯಕ್ ಬೆಳ್ತಂಗಡಿ ಭಾಗದಲ್ಲಿ ಸ್ನೇಹ ಗ್ರೂಪ್ಸ್ ಹೆಸರಿನಲ್ಲಿ ಯುವ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.

ಅಭಿಜಿತ್ ಕೋಟೆಕಾರ್ ಅವರಿಗೆ ಶಾಲಾ ಕಾಲೇಜು ದಿನಗಳಿಂದಲೂ ನಿರ್ದೇಶಕನಾಗೋ ಹಂಬಲ. ಕಾಲೇಜು ದಿನಗಳಲ್ಲಿಯೇ ಸಮಾನ ಮನಸ್ಕರದ್ದೊಂದು ತಂಡ ಕಟ್ಟಿಕೊಂಡು ಕಿರು ಚಿತ್ರವೊಂದನ್ನು ತಯಾರು ಮಾಡಿದ್ದರು. ನಂತರ ಓದು, ವೃತ್ತಿ ಅಂತ ಕಳೆದು ಹೋಗಿದ್ದರೂ ಕನಸನ್ನು ಹಾಗೆಯೇ ಕಾಯ್ದಿಟ್ಟುಕೊಂಡಿದ್ದ ಅಭಿಜಿತ್ ಇತ್ತೀಚೆಗೆ ಕಥೆಯೊಂದನ್ನು ರೆಡಿ ಮಾಡಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಕಾಲ್‌ಶೀಟನ್ನೂ ಪಡೆದಿದ್ದರಂತೆ. ಅದನ್ನು ಕ್ರಿಯಾಶೀಲ ನಿರ್ದೇಶಕರ ಕೈನಿಂದ ನಿರ್ದೇಶನ ಮಾಡಿಸಬೇಕೆಂದು ಅವರು ಭೇಟಿಯಾಗಿದ್ದು ಮೌನೇಶ್ ಬಡಿಗೇರ್ ಅವರನ್ನು. ಆದರೆ ಮೌನೇಶ್ ಅಭಿಜಿತ್ ಅವರ ಸಿನಿಮಾ ಪ್ರೇಮ ಗಮನಿಸಿ ಸದರಿ ಕಥೆಯನ್ನು ಹೇಳಿದ್ದರಂತೆ. ಅದನ್ನು ಕೇಳಿದಾಕ್ಷಣವೇ ತಮ್ಮ ಕಥೆಯನ್ನು ಸೈಡಿಗಿಟ್ಟ ಅಭಿಜಿತ್ ಹೇಗಾದರೂ ಈ ಚಿತ್ರವನ್ನು ತಾವೇ ನಿರ್ಮಾಣ ಮಾಡ ಬೇಕೆಂಬ ಹಠಕ್ಕೆ ಬಿದ್ದಿದ್ದರಂತೆ.

ಆದರೆ ಈ ಚಿತ್ರವನ್ನು ನಿರ್ಮಾಣ ಮಾಡೋದು ತಮ್ಮೊಬ್ಬರಿಂದ ಮಾತ್ರವೇ ಸಾಧ್ಯವಾಗೋದಿಲ್ಲ ಎಂಬ ವಿಚಾರವೂ ಅಭಿಜಿತ್ ಅವರಿಗೆ ಅರ್ಥವಾಗಿತ್ತು. ಆದರೆ ಸೂಜಿದಾರದ ಕಥೆಯನ್ನು ಬೇರ‍್ಯಾರ ಕೈಗೂ ಹೋಗದಂತೆ ಅವರು ವರ್ಷಾಂತರಗಳ ಕಾಲ ಕಾಪಿಟ್ಟುಕೊಂಡಿದ್ದರಂತೆ. ನಂತರ ಮತ್ತೋರ್ವ ನಿರ್ಮಾಪಕರಿಗಾಗಿ ಹುಡುಕಾಟ ಆರಂಭಿಸಿದ್ದ ಅಭಿಶೇಕ್ ತಮ್ಮ ಉದ್ಯಮಿ ಗೆಳೆಯ ಸುಚೀಂದ್ರನಾಥ್ ಅವರ ಬಳಿ ಪ್ರಸ್ತಾಪ ಇಟ್ಟಿದ್ದರಂತೆ. ಸಿನಿಮಾ ಬಗ್ಗೆ ಭಾರೀ ಪ್ಯಾಷನ್ ಹೊಂದಿದ್ದ ಸುಚೀಂದ್ರ ಆರಂಭದಲ್ಲಿ ಅಭಿಜಿತ್ ಅವರ ಅಪ್ರೋಚ್ ಕಂಡು ನಕ್ಕಿದ್ದರಂತೆ. ಸಿನಿಮಾ ಮಾಡುವ ಎಲ್ಲರೂ ಮಾತಾಡೋ ಮಾಮೂಲಿ ವರಸೆಯಲ್ಲಿಯೇ ನೀನೂ ಮಾತಾಡುತ್ತಿದ್ದೀಯ ಎಂಬರ್ಥದಲ್ಲಿ ಕಿಚಾಯಿಸಿದ್ದರಂತೆ. ಆದರೆ ಆ ನಂತರ ಅಭಿಜಿತ್ ಅಸೋಸಿಯೇಟ್ ಒಬ್ಬರನ್ನು ಕಳಿಸಿ ಈ ಕಥೆ ಹೇಳಿದೇಟಿಗೆ ಫಿದಾ ಆದ ಸುಚೀಂದ್ರನಾಥ್ ತಾವೇ ನಿರ್ಮಾಣದಲ್ಲಿ ಕೈ ಜೋಡಿಸಲು ಮುಂದೆ ಬಂದರಂತೆ. ಆ ಬಳಿಕ ಸೂಜಿದಾರ ಕಥೆಯ ಬಗ್ಗೆ ಅಭಿಜಿತ್ ಹೇಳಿದಂಥಾದ್ದೇ ಮಾತುಗಳನ್ನು ಬೇರೆಯವರ ಮುಂದೆ ಸುಚೀಂದ್ರ ಕೂಡಾ ಹೇಳಲಾರಂಭಿಸಿದ್ದರಂತೆ.

ಸುಚೀಂದ್ರ ಕೂಡಾ ಸೂಜಿದಾರ ಚಿತ್ರದ ಬಗ್ಗೆ ಭಾರೀ ಭರವಸೆ ಹೊಂದಿದ್ದಾರೆ. ರೀಮೇಕ್ ಹಾವಳಿಯಿಂದ ಕನ್ನಡ ಚಿತ್ರವೆಂದರೆ ಮೂಗು ಮುರಿಯುವಂಥಾ ವಾತಾವರಣವನ್ನು ಸೂಜಿದಾರ ಚಿತ್ರ ಖಂಡಿತಾ ಬ್ರೇಕ್ ಮಾಡಿ ಇಂಥಾ ಚಿತ್ರ ಗಳನ್ನೂ ಮಾಡಲು ಸಾಧ್ಯವಿದೆ ಎಂಬ ಫೀಲ್ ಹುಟ್ಟಿಸುತ್ತದೆ ಎಂಬ ಭರವಸೆ ಅಭಿಜಿತ್ ಮತ್ತು ಸುಚೀಂದ್ರ ಅವರಿಗಿದೆ. ಸೂಜಿದಾರವೆಂಬ ಚೆಂದದ ಚಿತ್ರ ಮಾಡಿರುವ ಇವರಿಬ್ಬರೂ ಮುಂದೆಯೂ ಚಿತ್ರ ನಿರ್ಮಾಣ ಮಾಡುವ ಕನಸು ಹೊಂದಿದ್ದಾರೆ. ಆದರೆ ಅದಕ್ಕೆ ಸೂಜಿದಾರದಂಥಾದ್ದೇ ಭಿನ್ನವಾದ ಕಥೆಯೇ ಬೇಕು ಮತ್ತು ಅದು ಅಪ್ಪಟ ಸ್ವಮೇಕ್ ಆಗಿರಬೇಕೆಂಬುದು ಈ ಯುವ ನಿರ್ಮಾಪಕರುಗಳ ಕಂಡೀಷನ್ನು!

 

Leave a Reply

Your email address will not be published. Required fields are marked *


CAPTCHA Image
Reload Image