One N Only Exclusive Cine Portal

ಡಾ. ರಾಜ್‌ಕುಮಾರ್ ಕುಟುಂಬದ ಮತ್ತೊಂದು ಕುಡಿ

ಡಾ. ರಾಜ್‌ಕುಮಾರ್ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಕಾಲ ಸನ್ನಿಹಿತವಾಗಿದೆ. ಪಾರ್ವತಮ್ಮ ರಾಜ್ ಕುಮಾರ್ ಅವರ ತಮ್ಮನ ಮಗ ಸೂರಜ್ ನಟನಾಗಲು ಸಾಕಷ್ಟು ವರ್ಷಗಳಿಂದ ಎಲ್ಲಾ ತಯಾರಿಗಳನ್ನು ಮುಗಿಸಿಕೊಂಡು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಅವರ ಮೊದಲ ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿ ಜಾಹೀರಾಗಲಿದೆ.

ಸೂರಜ್ ಪಾರ್ವತಮ್ಮನವರ ಸೋದರಳಿಯ. ಚಿನ್ನೇಗೌಡರ ಸಹೋದರ ಶ್ರೀನಿವಾಸ ರಾಜು ಪುತ್ರನಾದ ಸೂರಜ್ ತರಾತುರಿ ಮಾಡಿದ್ದರೆ ಬಹುಶಃ ಹೀರೋ ಆಗಿ ಇದೀಗ ಬಹು ಕಾಲವೇ ಕಳೆದಿರುತ್ತಿತ್ತೇನೋ. ಆದರೆ ಹೀರೋ ಆಗಲು ಸಿನಿಮಾ ಜಗತ್ತಿನ ಸಕಲ ಪಟ್ಟುಗಳನ್ನೂ ಕಲಿಯೋದೇ ಮಾನದಂಡ ಅಂದುಕೊಂಡಿರೋ ಅವರು ಎಲ್ಲವನ್ನೂ ಶ್ರದ್ಧೆಯಿಂದ ಕಲಿಯುತ್ತಾ ಬಂದಿದ್ದಾರೆ. ಇಪ್ಪೇತ್ತೇಳು ವರ್ಷದ ಸೂರಜ್ ಇದೀಗ ಹೀರೋ ಆಗಿ ಲಾಂಚ್ ಆಗಲು ತಯಾರಾಗಿದ್ದಾರೆ.

ಸಿನಿಮಾ ಕುಟುಂಬದಿಂದಲೇ ಬಂದಿದ್ದರೂ ಕೂಡಾ ಸೂರಜ್ ಸಂಸಾರದ ಮಟ್ಟಿಗೆ ಯಾರೂ ಕಲಾವಿದರಿಲ್ಲ. ಅಕ್ಕಂದಿರಿಬ್ಬರಿಗೂ ಮದುವೆಯಾಗಿದೆ. ಮೈಸೂರಿನಲ್ಲಿ ಡಿಗ್ರಿವರೆಗಿನ ಓದು ಮುಗಿಸಿಕೊಂಡಿದ್ದ ಸೂರಜ್ ಅವರಿಗೆ ಆರಂಭ ಕಾಲದಿಂದಲೂ ನಟನಾಗಬೇಕೆಂಬ ಕನಸು. ಈ ಬಗ್ಗೆ ಮನೆಯಲ್ಲಿ ಹೇಳಿದಾಗ ಅದಕ್ಕಾಗಿ ಸಂಪೂರ್ಣ ತಯಾರಿ ಮಾಡಿಕೊಂಡ ನಂತರವೇ ಹೀರೋ ಆಗಿ ಲಾಂಚ್ ಆಗುವಂತೆ ಸಲಹೆ ನೀಡಿದ್ದರು. ಅಲ್ಲಿಂದ ಸೂರಜ್ ಅವರ ಕಲಿಕೆಯ ಯಾನ ಶುರುವಾಗಿತ್ತು.  ಒಂದಷ್ಟು ಕಾಲ ರಂಗಾಯಣದಲ್ಲಿ ನಟನೆಯ ವಿಧ್ಯೆ ಕಲಿತು ಚೆನೈಗೆ ತೆರಳಿದ ಸೂರಜ್ ಅಲ್ಲಿಯೇ ನಟನೆಯ ವಿವಿಧ ಹಂತಗಳ ತರಬೇತಿ ಕಲಿತಿದ್ದಾರೆ. ಆ ನಂತರ ಪಾಂಡ್ಯನ್ ಮಾಸ್ಟರ್ ಗರಡಿಯಲ್ಲಿ ವರ್ಷಾಂತರಗಳ ಕಾಲ ಸಾಹಸದ ಪಟ್ಟುಗಳನ್ನು ಕರಗತ ಮಾಡಿಕೊಂಡು ಕಲೈ ಮಾಸ್ಟರ್ ಬಳಿ ನೃತ್ಯಾಭ್ಯಾಸವನ್ನೂ ಮುಗಿಸಿಕೊಂಡಿದ್ದಾರೆ. ನಟನಾಗಬೇಕೆಂಬ ಆಸೆ ಇದ್ದರೂ ಚಿತ್ರ ರಂಗದ ಬೇರೆ ಬೇರೆ ವಿಭಾಗಗಳಲ್ಲಿ ಅತೀವ ಆಸಕ್ತಿ ಇರುವ ಸೂರಜ್ ತಾರಕ್ ಮತ್ತು ಐರಾವತ ಚಿತ್ರಗಳಲ್ಲಿಯೂ ಬೇರೆ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ಇಷ್ಟೆಲ್ಲಾ ತಯಾರಿಯಾದ ಬಳಿಕ ಇದೀಗ ಸೂರಜ್ ಹೀರೋ ಆಗಿ ಲಾಂಚ್ ಆಗಲು ಒಂದೊಳ್ಳೆ ಕಥೆಗಾಗಿ ತಯಾರಾಗುತ್ತಿದ್ದಾರೆ. ಬಂದ ಸ್ಕ್ರಿಪ್ಟುಗಳನ್ನೆಲ್ಲ ಪರಿಶೀಲಿಸುತ್ತಿದ್ದಾರೆ. ಒಂದು ನಿರ್ದಿಷ್ಟ ಜಾನರಿನ ಸಿನಿಮಾವೇ ಆಗಬೇಕೆಂಬ ಮನಸ್ಥಿತಿಯಾಚೆಗೆ ಸೂರಜ್ ಒಂದೊಳ್ಳೆ ಕಥೆ, ನಟನೆಗೆ ಅವಕಾಶವಿರುವ ಚೆಂದದ ಸಿನಿಮಾದಲ್ಲಿಯೇ ಮೊದಲು ನಟಿಸಬೇಕೆಂಬ ಇರಾದೆ ಹೊಂದಿದ್ದಾರೆ.

ಇನ್ನೇನು ಕೆಲವೇ ದಿನಗಳಲ್ಲಿ ಕಥೆ ಫೈನಲ್ ಆದಾಕ್ಷಣವೇ ಪಾರ್ವತಮ್ಮನವರ ಸೋದರಳಿಯ ಸೂರಜ್ ಹೊಸಾ ಚಿತ್ರದ ಸಂಪೂರ್ಣ ಮಾಹಿತಿ ಸಿಗಲಿದೆ.

Leave a Reply

Your email address will not be published. Required fields are marked *


CAPTCHA Image
Reload Image