One N Only Exclusive Cine Portal

ಬಾಲಿವುಡ್‌ನಲ್ಲಿ ಮೆರೆದ ದಕ್ಷಿಣದ ಚೆಲುವೆ…


ದಕ್ಷಿಣ ಭಾರತದ ಸಹಜ ಚೆಲುವಿನ ಶ್ರೀದೇವಿ ೧೯೮೦ ಮತ್ತು ೯೦ರ ದಶಕದಲ್ಲಿ ಬಾಲಿವುಡ್‌ನ ನಂಬರ್ ಒನ್ ಹೀರೋಯಿನ್ ಪಟ್ಟಿ ಅಲಂಕರಿಸಿ ಮೆರೆದಿದ್ದಳು. ನಾಲ್ಕು ವರ್ಷದ ಬಾಲೆಯಾಗಿದ್ದಾಗಲೇ ಶ್ರೀದೇವಿಯ ಸಿನಿಮಾ ಜೀವನ ಶುರುವಾಗಿತ್ತು. ತಮಿಳಿನಿ ಕಂದನ್ ಕರುಣೈ ಚಿತ್ರದಲ್ಲಿ ಬಾಲನಟಿಯಾಗಿ ಅಭಿನಯಿಸಿ ತನ್ನ ನಟನಾ ಸಾಮರ್ಥ್ಯವನ್ನು ಶ್ರೀದೇವಿ ತೋರಿಸಿದ್ದಳು…

ಆದರೆ ಶ್ರೀದೇವಿಗೆ ಸಿನಿಮಾದಲ್ಲಿ ಪರ್ಫೆಕ್ಟ್ ಆದ ಬ್ರೇಕ್ ಅಂತ ಸಿಕ್ಕಿದ್ದು ತಮಿಳಿನ ಖ್ಯಾತ ನಿರ್ದೇಶಕ ಕೆ ಬಾಲಚಂದರ್ ಅವರಿಂದ. ಕಮಲಹಾಸನ್, ರಜಿನಿಕಾಂತ್‌ರಂತಹ ಪ್ರತಿಭೆಗಳನ್ನು ಬೆಳಕಿಗೆ ತಂದ ಬಾಲಚಂದರ್ ಶ್ರೀದೇವಿಗೂ ಒಂದು ಬ್ರೇಕ್ ನೀಡಿದರು. ಬಾಲಚಂದರ್ ಅವರ ಮೂಂಡ್ರು ಮುಡಿಚ್ಚು (೧೯೭೬) ಚಿತ್ರದಲ್ಲಿ ಶ್ರೀದೇವಿ ನಾಯಕಿಯಾಗಿ ಅಭಿನಯಿಸಿದ್ದಳು. ಈ ಚಿತ್ರದಲ್ಲಿ ಶ್ರೀದೇವಿಯ ಎದುರು ಕಮಲಹಾಸ್ ಮತ್ತು ರಜಿನೀಕಾಂತ್ ಅಭಿನಯಿಸಿದ್ದರು. ಹಾಗೆ ನೋಡಿದರೆ ಇವರಿಬ್ಬರಿಗೂ ಕೂಡಾ ಈ ಚಿತ್ರ ಹೊಸ ಬ್ರೇಕ್ ನೀಡಿತ್ತು.

ನಂತರ ತಮಿಳಿನಲ್ಲಿ ಸಾಕಷ್ಟು ಜನಪ್ರಿಯ ಚಿತ್ರಗಳಲ್ಲಿ ನಟಿಸಿದ ಶ್ರೀದೇವಿಗೆ ಹಿಂದಿ ಚಿತ್ರರಂಗ ಮನಬಿಚ್ಚಿ ಕರೆಯಿತು. ಸೋಲವಾ ಸಾವನ್ ಆಕೆಯ ಮೊದಲ ಹಿಂದಿಚಿತ್ರ. ಅದು ತಮಿಳಿನ ಪದಿನಾರು ವಯದಿನಿಲೆಯ ರೀಮೇಕ್ ಆಗಿತ್ತು. ಹೀಗೆ ೧೯೭೮ರಲ್ಲಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಶ್ರೀದೇವಿ ಬರೋಬ್ಬರಿ ಎರಡು ದಶಕಗಳ ಕಾಲ ನಾಯಕಿಯಾಗಿ ಆಳಿದಳು. ಶ್ರೀದೇವಿಗಾಗಿಯೇ ನೂರಾರು ಚಿತ್ರಕತೆಗಳು ರೆಡಿಯಾದವು. ಶ್ರೀದೇವಿಯ ಬಲದಿಂದಲೇ ನೂರಾರು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಅಪಾರ ದುಡ್ಡು ಗಳಿಸಿದವು.

೧೯೮೩ರಲ್ಲಿ `ಹಿಮ್ಮತ್‌ವಾಲಾ’ ಚಿತ್ರದಲ್ಲಿ ನಟಿಸುವ ಮೂಲಕ ಬಾಲಿವುಡ್‌ನಲ್ಲಿ ಪ್ರಖರ ಮಿಂಚು ಹರಿಸಿದಳು ಶ್ರೀದೇವಿ. ಜಿತೇಂದ್ರ ಈ ಚಿತ್ರದ ನಾಯಕ. ಮುಂದೆ ಜಿತೇಂದ್ರ-ಶ್ರೀದೇವಿ ಜೋಡಿ ಮವಾಲಿ, ಜಸ್ಟೀಸ್ ಚೌಧರಿ, ತೋಫಾಗಳಂತಹ ಹಲವಾರು ಹಿಟ್ ಚಿತ್ರಗಳನ್ನು ನೀಡಿತು. ಅಷ್ಟೊತ್ತಿಗೆ ಶ್ರೀದೇವಿ ಬಾಲಿವುಡ್‌ನ ರಾಣಿಯಾಗಿಬಿಟ್ಟಿದ್ದಳು.

ಶ್ರೀದೇವಿಯ ನಟನಾ ಪ್ರತಿಭೆಯ ಪ್ರದರ್ಶನಕ್ಕೆ ಸವಾಲಿನ ಪಾತ್ರ ಸಿಕ್ಕಿದ್ದು `ಸಡ್ಮಾ’ದಲ್ಲಿ. ತಾನು ಬರೀ ಚೆಲ್ಲಾಟದ, ಚಮಕ್ ಪಾತ್ರಗಳಲ್ಲಷ್ಟೇ ಮಿಂಚುವವಳಲ್ಲ; ಬದಲಾಗಿ ಸೀರಿಯಸ್ ರೋಲ್‌ಗಳನ್ನು ನಿರ್ವಹಿಸಬಲ್ಲೆ ಎಂಬುದನ್ನು `ಸಡ್ಮಾ’ದಲ್ಲಿ ಶ್ರೀದೇವಿ ತೋರಿಸಿಕೊಟ್ಟಳು.

ಹೀಗೆ ಭಾವಪೂರ್ಣ ಅಭಿನಯ ಮತ್ತು ಮೋಹಕ ನಟನೆ ಎರಡನ್ನೂ ನಿಭಾಯಿಸುತ್ತಾ ಬಂದವಳು ಶ್ರೀದೇವಿ. ಶ್ರೀದೇವಿಯ ಇನ್ನೊಂದು ಪ್ಲಸ್ ಪಾಯಿಂಟ್ ಎಂದರೆ ಆಕೆಯ ನೃತ್ಯಕಲೆ. ಯಾವುದೇ ಶಾಸ್ತ್ರೀಯ ನೃತ್ಯ ಪ್ರಕಾರವನ್ನು ಕಲಿಯದೇ ಇದ್ದರೂ ನೃತ್ಯದಲ್ಲಿ ಶ್ರೀದೇವಿ ಮೇಲುಗೈ ಸಾಧಿಸಿದಳು. ೧೯೮೬ರಲ್ಲಿ ತೆರೆಕಂಡ ನಗೀನಾ ಚಿತ್ರದಲ್ಲಿ ನಾಗಕನ್ಯೆಯಾಗಿ ಅಭಿನಯಿಸಿದ ಶ್ರೀದೇವಿ ತನ್ನ ಆಕರ್ಷಕ ನೃತ್ಯ ಭಂಗಿಗಳನ್ನು ಪ್ರದರ್ಶಿಸಿ ಜನರ ಮನಸೂರೆಗೊಂಡಳು. ಈ ಚಿತ್ರದ ಮೈ ತೇರಿ ದುಷ್ಮನ್ ಹಾಡು ಸಾರ್ವಕಾಲಿಕ ಹಿಟ್ ಆಯಿತು. ಇಡೀ ಹಾಡಿನ ತುಂಬಾ ಶ್ರೀದೇವಿಯೇ ಆವರಿಸಿಕೊಂಡಿದ್ದು ಆಕೆಯ ನೃತ್ಯ ಕೌಶಲ್ಯಗಳಿಗೆ ಇದು ಸಾಕ್ಷಿಯಾಯಿತು.

೧೯೮೭ರಲ್ಲಿ ಬಂದ ‘ಮಿಸ್ಟರ್ ಇಂಡಿಯಾ’ದಲ್ಲಿ ಶ್ರೀದೇವಿಯ ಸಕಲ ಅಭಿನಯ ಕಲೆಗಳೆಲ್ಲವೂ ಅಭಿವ್ಯಕ್ತಗೊಂಡವು. ಹಾಸ್ಯ, ಕಿಲಾಡಿತನ, ಶೃಂಗಾರಭಾವಗಳಲ್ಲಿ ಮಿಂಚಿದ ಶ್ರೀದೇವಿ ಕಾಟೆ ನಹೀ ಕಾಟೆ ಎಂಬ ಮಳೆ ಹಾಡಿನಲ್ಲಿ ಸೆಕ್ಸಿ ನೃತ್ಯದ ಮೂಲಕ ಪಡ್ಡೆಗಳ ಹೃದಯ ಗೆದ್ದಳು. ಹವಾ ಹವಾಯಿ ಎಂಬ ಹಾಡಂತೂ ಶ್ರೀದೇವಿಯ ಒಳಗಿನ ಚಾರ್ಲಿ ಚಾಪ್ಲಿನ್‌ನನ್ನು ಹೊರತಂದಿತ್ತು.

ಹೀಗೆ ೮೦ ಮತ್ತು ೯೦ರ ದಶಕವನ್ನು ಆಳಿದಳು ಶ್ರೀದೇವಿ. ಅದರಲ್ಲೂ ಶ್ರೀದೇವಿಯದೇ ಹವಾ… ಶ್ರೀದೇವಿಯದೇ ಪವಾಡ… ೧೯೮೮ರಲ್ಲಿ ಮಾಧುರಿ ದೀಕ್ಷಿತ್ ಶ್ರೀದೇವಿ ನಂಬರ್ ಒನ್ ಸ್ಥಾನಕ್ಕೆ ಸವಾಲು ಎಸೆದಿದ್ದಳು. ವಯಸೆಂಬುದು ಎಂಥಾ ನಟಿಯರನ್ನಾದರೂ ಸಹಜವಾಗಿಯೇ ಮೂಲೆ ಸೇರುವಂತೆ ಮಾಡುತ್ತೆ. ಆದರೆ ಶ್ರೀದೇವಿಯೊಳಗಿದ್ದ ನಿಜವಾದ ಕಲಾವಿದೆ ಮಾತ್ರ ಅದಕ್ಕೆ ಆಸ್ಪದ ಕೊಡಲಿಲ್ಲ. ಶ್ರೀದೇವಿ ಮಾಜಿ ನಟಿಯಾದಳು ಅನ್ನೋ ಹೊತ್ತಿಗೆಲ್ಲಾ ಮತ್ತೊಂದು ಅವತಾರದಲ್ಲಿ ಮತ್ತೆ ಪ್ರೇಕ್ಷಕರೆದುರು ನಿಲ್ಲುತ್ತಿದ್ದದ್ದು ಆಕೆಯ ವೃತ್ತಿ ಜೀವಿತದ ನಿಜವಾದ ಅಚ್ಚರಿ.

ಮಾಧುರಿಯೂ ಪ್ರತಿಭಾವಂತ ನಟಿ ಎಂಬುದರಲ್ಲಿ ಎರಡು ಮಾತಿಲ್ಲ. ಇಂತಹ ಸವಾಲಿನ ಎದುರು ದಕ್ಷಿಣದ ಶ್ರೀದೇವಿ ಈಜಿ ಗೆದ್ದಳು. ೧೯೮೯ರಲ್ಲಿ ರಿಲೀಸ್ ಆದ ಚಾಲ್‌ಬಾಜ್ ಮತ್ತು ಚಾಂದಿನಿ ಚಿತ್ರಗಳು ಭರ್ಜರಿ ಯಶಸ್ಸನ್ನು ಕಂಡವು… ಮಾಧುರಿ ದೀಕ್ಷಿತ್ ಮುಂದೆ ಹಲವು ವರ್ಷಗಳ ಕಾಲ ಹೀರೋಯಿನ್ ಪಟ್ಟದಲ್ಲಿ ಮೆರೆದಳು. ಇದರಿಂದ ಶ್ರೀದೇವಿಯ ಕೆರಿಯರ್‌ಗೇನೂ ಧಕ್ಕೆಯಾಗಲಿಲ್ಲ. ಈಗಾಗಲೇ ಮಾಧುರಿ ಬಾಲಿವುಡ್‌ಗೆ ರೀ ಎಂಟ್ರಿ ಮಾಡಿದಳು; ಈಗಲೂ ಮಾಡುತ್ತಲೇ ಇದ್ದಾಳೆ… ಆದರೆ ಅಂತಹ ಹೇಳಿಕೊಳ್ಳುವ ಯಶಸ್ಸೇನೂ ಮಾಧುರಿಗೆ ಸಿಗುತ್ತಿಲ್ಲ. ಆದರೆ ಮಾಧುರಿಗಿಂತ ಹಿರಿಯಳಾದ ಶ್ರೀದೇವಿ ಈಗ ಭರ್ಜರಿ ರೀ ಎಂಟ್ರಿ ಕೊಟ್ಟಿದ್ದಳು.

೧೯೯೬ರಲ್ಲಿ ಖ್ಯಾತ ಸಿನಿಮಾ ನಿರ್ಮಾಪಕ ಬೋನಿ ಕಪೂರ್‌ನನ್ನು (ಅನಿಲ್ ಕಪೂರ್ ಸಹೋದರ) ಮದುವೆಯಾದ ಶ್ರೀದೇವಿ ಆಗಿನಿಂದ ಬಾಲಿವುಡ್ ಸಂಪರ್ಕ ಕಳೆದುಕೊಂಡಿದ್ದಳು… ನಂತರದ ಒಂದೆರಡು ವರ್ಷಗಳಲ್ಲಿ ಸಕ್ರಿಯಳಾದರೂ ಕೂಡಾ ಅಷ್ಟೇನೂ ಯಶಸ್ಸು ಸಿಕ್ಕಿರಲಿಲ್ಲ. ಈಗ ಸುಮಾರು ೧೫ ವರ್ಷಗಳ ಬಳಿಕ ಸೌಂದರ್ಯದ ಸಿರಿದೇವಿ ಮತ್ತೆ ಮಿರಿಮಿರಿ ಮಿಂಚುತ್ತಾ ಆಕೆ ಪ್ರೇಕ್ಷಕರೆದುರು ನಿಂತಿದ್ದಳು; ಇಂಗ್ಲಿಷ್ ವಿಂಗ್ಲೀಷ್ ಚಿತ್ರದ ಮೂಲಕ!

ಈ ಚಿತ್ರದ ಮೂಲಕ ಅರೆಬರೆ ಇಂಗ್ಲಿಷ್ ಮಾತಾಡುತ್ತ ಸೌಂದರ್‍ಯದ ಸಿರಿದೇವಿ ಮತ್ತೆ ಬಣ್ಣ ಹಚ್ಚಿಕೊಂಡು ಮತ್ತೆ ಹವಾ ಎಬ್ಬಿಸಿದ್ದಳು. ೧೫ ವರ್ಷಗಳ ಸುದೀರ್ಘ ಅವಧಿಯ ನಂತರ ಶ್ರೀದೇವಿ. ಮತ್ತೆ ನಟನೆಗೆ ಇಳಿದಿದ್ದಳು. ತನ್ನ ಸಹಜ ಸೌಂದರ್ಯ, ವಿಶಿಷ್ಟ ಹಾವಭಾವ, ಕಣ್ಣುಗಳಲ್ಲೇ `ಆಟ’ ಆಡಿಸುವ ಕಲೆ, ಮತ್ತೆ ಮತ್ತೆ ನೋಡಬೇಕೆನ್ನಿಸುವ ಮೈಮಾಟ, ಕುಣಿಯುವ-ನಲಿಯುವ ಸೊಬಗುಗಳಿಂದ ಭಾರತದ ಸಿನಿಮಾ ಅಭಿಮಾನಿಗಳ ಆರಾಧ್ಯ ಎನಿಸಿದ್ದ ಶ್ರೀದೇವಿ `ಇಂಗ್ಲಿಷ್ ವಿಂಗ್ಲಿಷ್’ ಎಂಬ ಹಿಂದಿ ಮತ್ತು ತಮಿಳು ಚಿತ್ರದ ಮೂಲಕ ಮತ್ತೆ ಹಳೇ ಕ್ರೇಜನ್ನೆ ಮುಂದುವರೆಸಿದ್ದಳು.

ಈ ಮೂಲಕ ಶ್ರೀದೇವಿ ಆಶ್ಚರ್ಯಕರ ರೀತಿಯಲ್ಲಿ ದೇಶದ ಎದುರು ಮುಖಾಮುಖಿಯಾಗಿದ್ದಳು. ಅಮೀರ್‌ಖಾನ್ ನಡೆಸಿಕೊಡುತ್ತಿರುವ ಮಾನವೀಯ ಮನಸ್ಸಿನ ಸತ್ಯಮೇವ ಜಯತೆ ಕಾರ್ಯಕ್ರಮದಲ್ಲಿ ಶ್ರೀದೇವಿ ಒಬ್ಬ ಸಂದರ್ಶನಕಾರಳಾಗಿ ಭಾಗವಹಿಸಿದ್ದಳು. ಚಿಕ್ಕವಳಿದ್ದಾಗ (ಮಗುವಾಗಿದ್ದಾಗ) ಲೈಂಗಿಕ ಪೀಡನೆಗೆ ಒಳಗಾದ ಮಹಿಳೆಯೊಬ್ಬಳನ್ನು ಶ್ರೀದೇವಿ ಸಂದರ್ಶಿಸಿದ್ದಳು… ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಯಲು ತುರ್ತಾಗಿ ಕಠಿಣ ಕಾನೂನು ರೂಪಿಸಬೇಕೆಂದು ಶ್ರೀದೇವಿ ಒತ್ತಾಯಿಸಿದ್ದಳು.

ಇಂತಹ ಸಿರಿದೇವಿ ಇಂಗ್ಲಿಷ್-ವಿಂಗ್ಲಿಷ್ ಮೂಲಕ ಮತ್ತೆ ಆವರಿಸಿಕೊಂಡ ಪರಿಯೇನು ಸಣ್ಣದಲ. ಶ್ರೀದೇವಿಯ ಕಾಮಿಡಿ ಮೋಡಿ ಮೊದಲಿನಿಂದಲೂ ಜನಪ್ರಿಯ. ಶ್ರೀದೇವಿಯ ಅಭಿನಯದಲ್ಲಿ ಹಾಸ್ಯರಸ ಉಕ್ಕೇ ಇರುತ್ತಿತ್ತು. ಇದಕ್ಕೆ ಮಿ. ಇಂಡಿಯಾ ಮತ್ತು ಕ್ಷಣ ಕ್ಷಣಂ ಚಿತ್ರಗಳನ್ನು ಉದಾಹರಣೆಯಾಗಿ ನೀಡಬಹುದು. ಇಂಗ್ಲಿಷ್-ವಿಂಗ್ಲಿಷ್ ಪರಿಶುದ್ಧ ಕಾಮಿಡಿ ಪಿಕ್ಚರ್ರು. ಶ್ರೀದೇವಿಯೇ ಚಿತ್ರದ ಹೀರೋಯಿನ್ ಆಗಿದ್ದಳು. ಚಿತ್ರದ ಕಥಾವಸ್ತು ಕೂಡಾ ಶ್ರೀದೇವಿಯ ಪಾತ್ರದ ಸುತ್ತವೇ ಕೇಂದ್ರಿಕೃತಗೊಂಡಿತ್ತು.

ತನ್ನ ಗಂಡ ಮತ್ತು ಆತನ ಮನೆಯವರ ಮೆಚ್ಚುಗೆ ಗಳಿಸಲು ಶ್ರೀದೇವಿ ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್‌ಗೆ ಸೇರುತ್ತಾಳೆ… ಇಂಗ್ಲಿಷ್ ಕಲಿಯುವ ಅಕೆಯ ಹುಮ್ಮಸ್ಸು, ಅಲ್ಲಿ ಎದುರಾಗುವ ತೊಡರುಗಳು… ಹೀಗೆ ಸಿನಿಮಾ ಪೂರ್ತಿ ಶ್ರೀದೇವಿ ಜನರನ್ನು ನಗಿಸುತ್ತ, ತನ್ನಲ್ಲಿ ಬಂಧಿಸುತ್ತ ಹೋಗಿದ್ದಳು.

ಆ ನಂತರದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿ ಕೇಂದ್ರದಲ್ಲಿದ್ದ ಶ್ರೀದೇವಿಯ ಅಗಲಿಕೆ ಪ್ರೇಕ್ಷಕರ ಪಾಲಿಗೆ ಅನಿರೀಕ್ಷಿತ ಆಘಾತ ತಂದೊಡ್ಡಿದೆ. ಆದರೆ ಇಷ್ಟು ವರ್ಷಗಳಲ್ಲಿನ ಥರ ಥರದ ಪಾತ್ರಗಳ ಮೂಲಕ ಶ್ರೀದೇವಿ ಸದಾ ಜೀವಂತವಾಗಿರುತ್ತಾಳೆ.

Leave a Reply

Your email address will not be published. Required fields are marked *


CAPTCHA Image
Reload Image