One N Only Exclusive Cine Portal

ಶ್ರೀದೇವಿ ಪಂಜರದ ಹಕ್ಕಿಯಾಗಿದ್ದಳು ಅಂದರು ವರ್ಮಾ!

ತನ್ನ ನಟನೆ, ಮಾದಕ ಸೌಂದರ್ಯದಿಂದ ಭಾರತೀಯ ಚಿತ್ರರಂಗವನ್ನು ಆಳಿದ ನಟಿ ಶ್ರೀದೇವಿ ಇನ್ನು ನೆನಪು ಮಾತ್ರ. ದೂರದ ದುಬೈನಲ್ಲಿ ಇದ್ದಕ್ಕಿದ್ದಂತೆ ಇಲ್ಲವಾದ ಈಕೆಯ ಸಾವಿನ ಸಂಭಾವ್ಯತೆಯ ಬಗೆಗೇ ನಾನಾ ವಿಚಾರಗಳು ಹರಿದಾಡುತ್ತಿದೆ. ಇದು ಸಹಜ ಸಾವಲ್ಲ ಅಂತ ಒಂದಷ್ಟು ಮಂದಿ ಹೇಳಿದರೆ, ಇದು ಕೊಲೆ ಅಂತ ಹುಯಿಲೆಬ್ಬಿಸಿದವರೂ ಇದ್ದಾರೆ. ಆಕೆ ವಿಪರೀತ ಕುಡಿಯುತ್ತಿದ್ದಳು, ಸೌಂದರ್ಯವರ್ಧಕ ಇಂಜೆಕ್ಷನ್ನುಗಳೇ ಆಕೆಯ ಬಲಿ ಪಡೆದಿವೆ… ಹೀಗೆ ಸತ್ತ ನಂತರವೂ ಶ್ರೀದೇವಿಯನ್ನು ರೂಮರುಗಳು ಹಿಂಬಾಲಿಸಿವೆ.

ಈಕೆ ಹೀಗೆ ಅಕಾಲಿಕವಾಗಿ ಮರಣ ಹೊಂದಲು ಅದೇನು ಕಾರಣಗಳಿವೆಯೋ ಗೊತ್ತಿಲ್ಲ. ಆದರೆ ಬದುಕಿರೋವಷ್ಟೂ ದಿನ ಶ್ರೀದೇವಿ ಹೇಗಿದ್ದಳು? ಆಕೆ ಖುಷಿ ಖುಷಿಯಾಗಿದ್ದಳಾ? ಶ್ರೀದೇವಿಯ ಮನಸ್ಥಿತಿ ಹೇಗಿತ್ತು? ಇಂಥಾ ಸಾವಿರ ಪ್ರಶ್ನೆಗಳು ಈ ಅದ್ಬುತ ನಟಿಯನ್ನು ಇದ್ದಲ್ಲಿಂದಲೇ ಆರಾಧಿಸಿದ ಕೋಟ್ಯಂತರ ಜನರೆದೆಯಲ್ಲಿ ನಗಾರಿ ಬಾರಿಸುತ್ತಲೇ ಇದ್ದಾವೆ. ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬಿಚ್ಚಿಟ್ಟಿರುವ ಸತ್ಯಕ್ಕೆ ಹತ್ತಿರಾಗಿರೋ ಸಂಗತಿಗಳು ಶ್ರೀದೇವಿ ಎಂಬ ಸೂಪರ್ ಸ್ಟಾರ್ ನಟಿ ಅದೆಂಥಾ ಮಾನಸಿಕ ತಲ್ಲಣಗಳನ್ನು ಅನುಭವಿಸುತ್ತಿದ್ದಳೆಂಬ ಭಯಾನಕ ಅಂಶಗಳನ್ನು ಜಾಹೀರು ಮಾಡಿವೆ.

ವರ್ಮಾ ಮಾತಿನ ಪ್ರಕಾರವೇ ಹೇಳೋದಾದರೆ ಆಕೆಯ ಖಾಸಗಿ ಬದುಕು ತೀರಾ ಅಶಾಂತಿಯಿಂದ ಕೂಡಿರುತ್ತಿತ್ತು. ಆಕೆ ನಿಜವಾಗಿಯೂ ಶಾಂತವಾಗಿ ನಿಲ್ಲುತ್ತಿದ್ದದ್ದು ಕ್ಯಾಮೆರಾ ಮುಂದೆ ಮಾತ್ರ. ಆಕ್ಷನ್ ಕಟ್ಟಿಂದ ಆಚೆ ಬಂದಳೆಂದರೆ ಅದೆಂಥಾದ್ದೋ ಶಥಪಥ, ಕುದಿತದಿಂದ ಶ್ರೀದೇವಿ ಕಂಗಾಲಾಗುತ್ತಿದ್ದಳು. ಅದು ಬಿಟ್ಟರೆ ತಾನೇ ಸೃಷ್ಟಿಸಿಕೊಂಡಿದ್ದ ಫ್ಯಾಂಟಸಿ ಜಗತ್ತಿನಲ್ಲಿ ಸುತ್ತ ಯಾರಿದ್ದಾರೆಂಬುದನ್ನೇ ಮರೆತಂತೆ ಕಳೆದು ಹೋಗುತ್ತಿದ್ದಳು.

ಚಂದನದ ಬೊಂಬೆಯಂತಿದ್ದ ಶ್ರೀದೇವಿ ಅದೆಷ್ಟು ಕೋಟಿ ಹೃದಯಗಳಿಗೆ ಲಗ್ಗೆ ಹಾಕಿದ್ದಳೋ… ಅಂಥಾ ಶ್ರೀದೇವಿ ಬೋನಿ ಕಪೂರ್ ಎಂಬಾತನನ್ನು ಮದುವೆಯಾದಾಗ ಎಲ್ಲರೂ ಬೆಚ್ಚಿ ಬಿದ್ದಿದ್ದರು. ಈ ಮದುವೆಯ ಹಿಂದೆ ಅದೇನೇನು ಕಿಸುರಿತ್ತೋ ಭಗವಂತನೇ ಬಲ್ಲ. ಆದರೆ ಬೋನಿ ಕಪೂರನನ್ನು ಮದುವೆಯಾದ ವರ್ಷಾಂತರಗಳ ಬಳಿಕ ಶ್ರೀದೇವಿ ಮೊದಲಿನಂತಿರಲಿಲ್ಲ. ಆಕೆಗೆ ಬೋನಿ ಮಾನಸಿಕ ಹಿಂಸೆ ಕೊಡುತ್ತಿದ್ದ ಅನ್ನುವವರೂ ಇದ್ದಾರೆ. ಅಂತೂ ಶ್ರೀದೇವಿ ಬೋನಿ ಕಪೂರ್ ಕೈ ಹಿಡಿದ ನಂತರ ಪಂಜರದ ಗಿಣಿಯಂತಾಗಿದ್ದಳು. ಆದರೆ ಅದೇಕೋ ಆಕೆ ತನ್ನ ಸಂಸಾರದ ಕಿಸುರುಗಳನ್ನು ಹೊರ ಜಗತ್ತಿಗೆ ಜಾಹೀರು ಮಾಡಲು ಇಚ್ಚಿಸಲೇ ಇಲ್ಲ. ಗಂಡನೊಂದಿಗೆ ಹೊರ ಬಂದಾಗ ಅದನ್ನೂ ಒಂದು ನಟನೆ ಅಂತಲೇ ಪರಿಭಾವಿಸಿದವಳಂತೆ ಆತನ ಪಕ್ಕ ನಿಂತು ಪ್ರಾಂಜಲ ನಗೆ ಬೀರುತ್ತಿದ್ದ ಶ್ರೀದೇವಿ ಅಸಲೀ ಸಂಸಾರ ನಡೆಸುತ್ತಿದ್ದದ್ದು ತನ್ನ ಕಲ್ಪನಾ ಲೋಕದಲ್ಲಿ!

ಶ್ರೀದೇವಿ ಸುಂದರ ಮುಖದ, ಮಾದಕ ನೋದ ಅದ್ಭುತ ನಟಿ. ಆಕೆ ಗಂಡ ಮತ್ತು ಹೆಣ್ಣುಮಕ್ಕಳ ಜೊತೆ ಸುಖ ಸಂಸಾರ ನಡೆಸುತ್ತಿದ್ದಾಳೆ ಎಂಬಂತೆಯೇ ಹೊರ ಜಗತ್ತಿನಲ್ಲಿ ನಂಬಿಕೆ ಹುಟ್ಟಿಸುತ್ತಿದ್ದಳು. ಆದರೆ ತನ್ನ ಖಾಸಗಿ ಬದುಕಿನ ಸಾವಿರ ಸಂಕಟದ ನಡುವೆಯೂ ಆಕೆಗೆ ನಿರಾಳ ಅಂತಿದ್ದದ್ದು ಅವಳ ತಂದೆ ಮಾತ್ರ. ಆದರೆ ತಂದೆಯೂ ಸತ್ತ ನಂತರ ಆಕೆ ಪಂಜರದ ಗಿಣಿಯಾಗಿದ್ದಳು. ಏನನ್ನೋ ಕಳೆದುಕೊಂಡ ಭಾವ ಸದಾ ಆಕೆಯನ್ನು ಕಾಡುತ್ತಲೇ ಇತ್ತು.

ಹಾಗಂತ ಬೋನಿ ಕಪೂರ್ ಈಕೆಗೆ ಕಾಟ ಕೊಡುತ್ತಿದ್ದಾನೆಂದು ಹಬ್ಬಿದ್ದ ರೂಮರುಗಳನ್ನೇ ಸತ್ಯ ಅಂದುಕೊಳ್ಳಬೇಕಿಲ್ಲ. ಬಹುಶಃ ಆತ ಈಕೆಯ ಪಾಲಿಗೆ ಒಳ್ಳೆ ಗಂಡ, ಒಳ್ಳೆ ಸ್ನೇಹಿತ. ಶ್ರೀದೇವಿಯ ತಂದೆ ಸತ್ತ ನಂತರ ಆತನ ಸ್ನೇಹಿತರು ಮತ್ತು ಸಂಬಂಧಿಕರೇ ತಿರುಗಿ ಬಿದ್ದು ಶ್ರೀದೇವಿಯನ್ನು ಒಬ್ಬಂಟಿ ಮಾಡಿ ಹಾಕಿದ್ದರು. ಬರ ಬೇಕಿದ್ದ ಆಸ್ತಿಯೂ ಬಂದಿರಲಿಲ್ಲ. ಈಕೆ ಅಂಥಾದ್ದೊಂದು ಸಂಕಷ್ಟದಲ್ಲಿದ್ದಾಗಲೇ ಹತ್ತಿರಾದವನು ಬೋನಿ ಕಪೂರ್. ಈಕೆ ಹಣದ ಮುಗ್ಗಟ್ಟಿನ ಕಾರಣದಿಂದಲೇ ಬೋನಿ ಜೊತೆ ಸಂಬಂಧ ಬೆಳೆಸಿಕೊಂಡಳಾ? ಆ ನಂತರ ತನ್ನ ಆಯ್ಕೆ ಸರಿಯಿಲ್ಲ ಅಂತ ಗಿಲ್ಟಿಗೆ ಬಿದ್ದಳಾ ಎಂಬ ವಿಚಾರವೆಲ್ಲ ಆಕೆಯ ಜೊತೆಗೇ ಇಲ್ಲವಾಗಿವೆ.

Leave a Reply

Your email address will not be published. Required fields are marked *


CAPTCHA Image
Reload Image