One N Only Exclusive Cine Portal

ಜೆಡಿಎಸ್‌ನಿಂದ ಕಣಕ್ಕಿಳಿಯುತ್ತಾರಾ ಸುದೀಪ್?

ಕಿಚ್ಚ ಸುದೀಪ್ ಜೆಡಿಎಸ್ ನಿಂದ ಸ್ಪರ್ಧಿಸುತ್ತಾರಾ… ಹೀಗೊಂದು ಪ್ರಶ್ನೆ ಅಭಿಮಾನಿಗಳೂ ಸೇರಿದಂತೆ ಒಂದಷ್ಟು ಮಂದಿಯನ್ನು ಆಗಾಗ ಕಾಡುತ್ತಲೇ ಇತ್ತು. ಆದರೆ ಸುದೀಪ್ ಯಾವತ್ತೂ ಚಿತ್ರರಂಗದಾಚೆಗೆ ರಾಜಕೀಯ ಅಂತೆಲ್ಲ ಮೂಗು ತೂರಿಸಿದವರೇ ಅಲ್ಲ. ಬಣ್ಣದ ಹೊರತಾಗಿ ಬೇರ್‍ಯಾವ ಉಸಾಬರಿಯೂ ಬೇಡ ಎಂಬಂತೆ ತಮ್ಮ ಪಾಡಿಗೆ ತಾವಿದ್ದವರು ಕಿಚ್ಚಾ ಸುದೀಪ್. ಆದರೀಗ ಇಡೀ ಕರ್ನಾಟಕ ವಿಧಾನಸಭಾ ಚುನಾವಣೆಯ ಬಿಸಿಯೇರಿಸಿಕೊಂಡಿದೆ. ಇಂಥಾ ವಾತಾವರಣದಲ್ಲಿ ರಾಜಕೀಯ ವಲಯದಲ್ಲಿ ಬಿರುಸಿನ ವಾತಾವರಣ ಇರೋದು ಸಹಜವೇ. ಆದರೆ ಈ ಸಲ ಚಿತ್ರರಂಗದಲ್ಲಿಯೂ ಚುನಾವಣಾ ಪ್ರಭಾವ ಬಲು ಜೋರಾಗಿದೆ. ಆ ಸ್ಟಾರ್ ರಾಜಕೀಯಕ್ಕಿಳೀತಾರೆ, ಮತ್ಯಾರಿಗೋ ಟಿಕೆಟು ಪಕ್ಕಾ ಆಗಿದೆ ಎಂಬೆಲ್ಲ ರೂಮರ್ ಮಾಮೂಲಿ. ಆದರೆ ಈ ಸಲ ಈ ರೇಸಿನಲ್ಲಿ ಕಿಚ್ಚಾ ಸುದೀಪ್ ಅವರ ಹೆಸರೂ ಚಾಲ್ತಿಯಲ್ಲಿರೋದು ನಿಜವಾದ ವಿಶೇಷ. ಅದಕ್ಕೆ ಸರಿಯಾಗಿ ಸುದೀಪ್ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತರಾಗಿರುವ ಕುಮಾರಸ್ವಾಮಿಯವರನ್ನು ಭೇಟಿಯಾಗಿದ್ದೇ ನಾನಾ ಥರದ ವಿಚಾರಗಳು ಹರಿದಾಡಲಾರಂಭಿಸಿವೆ. ದೇಶ ವಿದೇಶಗಳಲ್ಲಿಯೂ ಅಭಿಮಾನಿಗಳನ್ನು ಹೊಂದಿರುವ ಹೆಬ್ಬುಲಿ ತೆನೆ ಹೊರಲು ಮುಂದಾಗಿದೆಯಾ ಅಂತೊಂದು ಪ್ರಶ್ನೆಯೂ ರಾಜಕೀಯ ರಂಗದಲ್ಲಿ ಹುಟ್ಟಿಕೊಂಡಿದೆ!

ಸುದೀಪ್ ರಾಜಕೀಯಕ್ಕೆ ಬರುತ್ತಾರೆಂಬ ಅಂತೆ ಕಂತೆಯಾಗಲಿ, ಅವರನ್ನು ಸೆಳೆದುಕೊಳ್ಳಲು ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಒಳಗೊಳಗೇ ಕಸರತ್ತು ನಡೆಸೋದಾಗಲಿ ಹೊಸದೇನೂ ಅಲ್ಲ. ಆದರೆ ಅದ್ಯಾವುದಕ್ಕೂ ಕೂಡಾ ಸುದೀಪ್ ಈ ವರೆಗೂ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಒಂದು ಮೂಲದ ಪ್ರಕಾರ ಈ ಸಲ ರಾಜಕೀಯಕ್ಕೆ ಅಡಿಯಿರಿಸಲು ತೀರ್ಮಾನ ಮಾಡಿಕೊಂಡಿರೋ ಸುದೀಪ್ ಅದಕ್ಕಾಗಿ ತಯಾರಾಗಲಾರಂಭಿಸಿದ್ದಾರಂತೆ. ಅದರ ಭಾಗವಾಗಿಯೇ ಇದೀಗ ಕುಮಾರಸ್ವಾಮಿಯವರನ್ನು ಮನೆಗೇ ತೆರಳಿ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಸುಧೀರ್ಘವಾದೊಂದು ಮಾತುಕತೆಯೂ ನಡೆದಿದೆ. ಅದರ ಸಾರಾಂಶ ನಿಜಕ್ಕೂ ಇಂಟರೆಸ್ಟಿಂಗ್ ಆಗಿದೆ.

ಈಗೊಂದಷ್ಟು ತಿಂಗಳ ಹಿಂದೆ ಸುದೀಪ್ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯುತ್ತಾರೆಂಬ ಗುಲ್ಲೆದ್ದಿತ್ತು. ಅದಕ್ಕೆ ಕಾರಣವಾಗಿದ್ದು ಕಿಚ್ಚ ಮತ್ತು ಸಿಎಂ ಸಿದ್ದರಾಮಯ್ಯ ಭೇಟಿ. ಟೆಕೆಟ್ ಬಗ್ಗೆ ಚರ್ಚೆ ನಡೆಸಲೋಸ್ಕರವೇ ಕಿಚ್ಚ ಸಿಎಂರನ್ನು ಭೇಟಿ ಮಾಡಿದ್ದಾರೆಂಬ ಬಗ್ಗೆ ಎದ್ದಿದ್ದ ರೂಮರುಗಳು ಒಂದೆರಡಲ್ಲ. ಮೊಳಕಾಲ್ಮೂರು ಕ್ಷೇತ್ರದಿಂದ ಸ್ಫರ್ಧಿಸಲು ಸ್ವತಃ ಸುದೀಪ್ ಇಚ್ಛೆ ಹೊಂದಿದ್ದಾರೆ ಎಂಬ ಮಾತೂ ಕೇಳಿಬಂದಿತ್ತು. ಸುದೀಪ್ ಅವರ ರಾಜಕೀಯ ಎಂಟ್ರಿ ಮತ್ತು ಅವರು ಬಯಸೋ ಕ್ಷೇತ್ರವನ್ನು ನೀಡಲು ರಾಹುಲ್ ಗಾಂಧಿಯನ್ನು ಒಪ್ಪಿಸೋ ಜವಾಬ್ದಾರಿಯನ್ನು ನಟಿ ರಮ್ಯಾ ವಹಿಸಿಕೊಂಡಿದ್ದಾರಂತೆ ಎಂಬೆಲ್ಲಾ ಅಂತೆಕಂತೆಗಳೂ ಹರಿದಾಡಿದ್ದವು. ಆದರೆ ಕಿಚ್ಚ ಸಿದ್ದುವನ್ನು ಭೇಟಿಯಾಗಿದ್ದರ ಅಸಲೀ ಉದ್ದೇಶವೇ ಬೇರೆಯದ್ದಿತ್ತು. ಸಾಹಸ ಸಿಂಹ ವಿಷ್ಣುವರ್ಧನ್ ಸಮಾಧಿ ವಿವಾದವನ್ನು ಬೇಗನೆ ಪರಿಹರಿಸುವಂತೆ ಕೇಳಿಕೊಳ್ಳುವುದಷ್ಟೇ ಸುದೀಪ್ ಅವರ ಉದ್ದೇಶವಾಗಿತ್ತು. ಅಸಲಿಗೆ ಅಲ್ಲಿ ರಾಜಕೀಯ ಸಂಬಂಧಿತವಾದ ಯಾವ ಮಾತುಕತೆಗಳೂ ನಡೆದಿರಲಿಲ್ಲ. ಆ ಭೇಟಿಯ ಭೂಮಿಕೆಯಲ್ಲಿ ಹರಡಿಕೊಂಡಿದ್ದ ರೂಮರುಗಳೆಲ್ಲವೂ ಸುದೀಪ್ ಮತ್ತು ಕುಮಾರಣ್ಣನ ಭೇಟಿಯ ಮೂಲಕ ತಾರ್ಕಿಕ ಅಂತ್ಯ ಕಂಡಿವೆ.

ಸುದೀಪ್ ದಿಢೀರ್ ಅಂತ ಕಳೆದ ವಾರ ಬೆಳಬೆಳಿಗ್ಗೆಯೇ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರನ್ನು ಸ್ವತಃ ಕುಮಾರಣ್ಣನ ಮನೆಯಲ್ಲೇ ಭೇಡಿ ಮಾಡಿ ಸರಿಸುಮಾರು ಎರಡು ಗಂಟೆಗಳ ಕಾಲ ಮಾತುಕತೆ ನಡೆಸಿರೋದು ರಾಜಕೀಯ ಪಂಡಿತರ ತಲೆ ಕೆಡಿಸಿದೆ. ಈ ಸಂದರ್ಭದಲ್ಲಿ ನಿಖಿಲ್ ಕುಮಾರಸ್ವಾಮಿ, ಮೇಡಂ ಅನಿತಾ ಮತ್ತು ಶಾಸಕ ಸಾರಾ ಮಹೇಶ್ ಮುಂತಾದವರು ಹಾಜರಿದ್ದರು. ಈ ಹಂತದಲ್ಲಿ ಪಕ್ಕಾ ರಾಜಕೀಯ ನಡಾವಳಿಗಳ ಬಗ್ಗೆಯೇ ಮಾತುಕತೆಗಳು ನಡೆದಿವೆ. ಆದರೆ ಸುದೀಪ್ ಅವರು ಜೆಡಿಎಸ್‌ನಿಂದ ಕಣಕ್ಕಿಳಿಯುವ ಬಗ್ಗೆ ಅಷ್ಟಾಗಿ ಆಸಕ್ತಿ ತೋರಿಸಿಲ್ಲ. ಬದಲಾಗಿ ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಪರವಾಗಿ ಪ್ರಚಾರದಲ್ಲಿ ಪಾಲ್ಗೊಳ್ಳುವ ಭರವಸೆ ನೀಡಿದ್ದಾರೆ. ಸುದೀಪ್ ಸುಮ್ಮನೆ ಪ್ರಚಾರಕ್ಕೆ ಬಂದರೂ ಜೆಡಿಎಸ್ ಬಲ ಮತ್ತಷ್ಟು ಹೆಚ್ಚೋದರಲ್ಲಿ ಯಾವ ಸಂದೇಹವೂ ಇಲ್ಲ. ಯಾಕೆಂದರೆ ಕರ್ನಾಟಕದ ಎಲ್ಲ ಪ್ರದೇಶಗಳಲ್ಲಿಯೂ ಸುದೀಪ್ ಅಭಿಮಾನಿಗಳಿದ್ದಾರೆ. ಅಭಿಮಾನದಾಚೆಗೆ ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವವರೂ ಇದ್ದಾರೆ. ಜಾತಿ ಆಧಾರಿತವಾಗಿ ವಿಶ್ಲೇಶಿಸಿದರೂ ಸುದೀಪ್ ಸಾಥ್‌ನಿಂದ ಜೆಡಿಎಸ್‌ಗೆ ಉಪಕಾರವಾಗುತ್ತದೆ. ಚಿತ್ರದುರ್ಗ, ಬಳ್ಳಾರಿ ಸೇರಿದಂತೆ ನಾಯಕ ಸಮುದಾಯದ ಮತಗಳೆಲ್ಲವೂ ಜೆಡಿಎಸ್ ಪಾಲಾಗೋದರಲ್ಲಿ ಯಾವ ಸಂದೇಹವೂ ಇಲ್ಲ.

ಅಷ್ಟಕ್ಕೂ ಕುಮಾರಸ್ವಾಮಿ ಮತ್ತು ಸುದೀಪ್ ಅವರ ಗೆಳೆತನ ಇಂದು ನಿನ್ನೆಯದ್ದಲ್ಲ. ಅದು ಬರೀ ರಾಜಕೀಯಕ್ಕೆ ಮಾತ್ರವೇ ಸೀಮಿತ ಅಂದುಕೊಳ್ಳುವಂತೆಯೂ ಇಲ್ಲ. ಈ ಹಿಂದೆ ಅನೇಕ ಸಲ ಕುಮಾರಸ್ವಾಮಿಯವರೇ ಕಿಚ್ಚನ ಮನೆಗೆ ಭೇಟಿ ಕೊಟ್ಟಿದ್ದಾರೆ. ಸ್ವತಃ ಸುದೀಪ್ ಅವರೇ ಕೈಯಾರೆ ಅಡುಗೆ ಮಾಡಿ ಕುಮಾರಣ್ಣನಿಗೆ ಆತಿಥ್ಯ ನೀಡಿದ್ದೂ ಕೂಡಾ ಆಗಾಗ ಸುದ್ದಿಯಾಗಿದ್ದನ್ನಿಲ್ಲಿ ಸ್ಮರಿಸಿಕೊಳ್ಳಬಹುದು. ಇನ್ನೂ ಒಂದಷ್ಟು ಹಿಂದೆ ಹೋಗಿ ನೋಡಿದರೆ ಸುದೀಪ್ ಅವರ ಕುಟುಂಬಸ್ಥರೂ ಕೂಡಾ ಲಾಗಾಯ್ತಿನಿಂದಲೂ ಜನತಾ ಪರಿವಾರದ ಸಾಹಚರ್ಯ ಹೊಂದಿರುವ ವಿಚಾರವೂ ಗೊತ್ತಿರುವಂಥಾದ್ದೇ. ಸುದೀಪ್ ಅವರ ತಂದೆ ಸರೋವರ್ ಸಂಜೀವ್ ಜೀವರಾಜ್ ಆಳ್ವಾರಿಗೂ ಆಪ್ತರಾಗಿದ್ದವರು. ಸುದೀಪ್ ಚಿಕ್ಕಪ್ಪ ಶ್ರೀನಿವಾಸ್ ಈ ಹಿಂದೆ ಇದೇ ಜೆಡಿಎಸ್ ಪಕ್ಷದಿಂದ ಎಂಎಲ್‌ಸಿಯಾಗಿದ್ದರು. ಇದೀಗ ಅವರು ಸಿಎಂ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರೂ ಅದರ ಹಿಂದಿರೋದು ಜನತಾ ಪರಿವಾರದ ಸೆಂಟಿಮೆಂಟು!

ಹಾಗಾದರೆ ಕಿಚ್ಚಾ ಸುದೀಪ್ ಅವರಿಗೆ ಚುನಾವಣಾ ಅಖಾಡಕ್ಕಿಳಿದು ಜನನಾಯಕನಾಗುವ ಇರಾದೆ ಇಲ್ಲವಾ ಎಂಬ ಕುತೂಹಲ ಕಾಡೋದು ಸಹಜವೇ. ಹುಟ್ಟಿನಿಂದಲೇ ಬಣ್ಣದ ಜಗತ್ತಿನ ಜೊತೆಗೆ ರಾಜಕೀಯ ವಾತಾವರಣವನ್ನೂ ಕಂಡು ಬೆಳೆದವರು ಸುದೀಪ್. ಆದರೆ ಅವರಿಗೆ ಆರಂಭ ಕಾಲದಿಂದಲೂ ರಾಜಕೀಯದೆಡೆಗಿನ ಆಸಕ್ತಿ ಅಷ್ಟಕ್ಕಷ್ಟೇ. ತನ್ನ ಸಹ ನಟರೆಲ್ಲ ರಾಜಕೀಯದ ಬಗ್ಗೆ ಆಸಕ್ತಿ ಹೊಂದಿದ್ದಾಗಲೂ ಬರೀ ಸಿನಿಮಾವನ್ನೇ ಮೋಹಿಸಿದ್ದವರು ಸುದೀಪ್. ಈ ಹಿಂದೆ ಮುಕುಂದ ಮುರಾರಿ ಚಿತ್ರದ ಸಂದರ್ಭದಲ್ಲಿ ಖಾಸಗೀ ವಾಹಿನಿಯಲ್ಲಿ ರಾಜಕೀಯ ಪ್ರವೇಶದ ಬಗ್ಗೆ ಪ್ರಶ್ನಿಸಿದಾಗಲೂ ಕೂಡಾ ತಟಸ್ಥ ನಿಲುವನ್ನೇ ಅವರು ಪ್ರದರ್ಶಿಸಿದ್ದರು. ಆದರೆ, ರಾಜಕೀಯವೂ ಸೇರಿದಂತೆ ಪ್ಸ್ತುತ ವಿದ್ಯಮಾನಗಳ ಬಗ್ಗೆ ಅಧಿಕಾರ ಯುತವಾಗಿ ಮಾತಾಡುವ, ಶ್ರೀಸಾಮಾನ್ಯನ ಹಿತದೃಷ್ಟಿಯಿಂದ ಮಾತಾಡಬಲ್ಲ ಒಳದೃಷ್ಟಿ ಅವರಿಗಿದ್ದೇ ಇದೆ. ಅದಕ್ಕೆ ಈ ಹಿಂದೆ ಅವರು ಕೇಂದ್ರ ಸರ್ಕಾರದ ಜಿಎಸ್‌ಟಿ ಕಾಯ್ದೆಯ ಲೂಪ್‌ಹೋಲ್‌ಗಳ ಬಗ್ಗೆ ಸಾರ್ವಜನಿಕವಾಗಿ ಅಭಿಪ್ರಾಯ ಹಂಚಿಕೊಂಡಿದ್ದೇ ಸ್ಪಷ್ಟ ಉದಾಹರಣೆ. ಅದಾದೇಟಿಗೆ ಮೋದಿ ಭಕ್ತರು ಅವರಿಗೆ ಮೋದಿ ವಿರೋಧಿ ಎಂಬ ಹಣೆ ಪಟ್ಟಿ ಕಟ್ಟಿದಾಗಲೂ ಅದರ ಬಗ್ಗೆ ತಲೆಕೆಡಿಸಿಕೊಂಡಿರದಿದ್ದ ಸುದೀಪ್ ಇದೀಗ ಸ್ಪಷ್ಟ ರಾಜಕೀಯ ನಡೆಯನ್ನು ಜಾಹೀರು ಮಾಡಿದ್ದಾರೆ.

ಹಾಗಂತ ಸುದೀಪ್ ಬರೀ ಜೆಡಿಎಸ್ ಪರವಾಗಿ ಪ್ರಚಾರಕ್ಕೆ ಮಾತ್ರವೇ ಸೀಮಿತವಾಗುತ್ತಾರೆ ಅಂದುಕೊಳ್ಳುವಂತಿಲ್ಲ. ಯಾಕೆಂದರೆ ಖುದ್ದು ಕುಮಾರಸ್ವಾಮಿ ಮತ್ತು ದೇವೇಗೌಡರೇ ಸುದೀಪ್ ತಮ್ಮ ಪಕ್ಷದಿಂದ ಕಣಕ್ಕಿಳಿದು ಗೆದ್ದು ಬರಬೇಕೆಂದು ಆಶಿಸುತ್ತಿದ್ದಾರೆ. ಈ ಬಗ್ಗೆ ಸುದೀಪ್ ಅವರೆದುರು ಪ್ರಸ್ತಾಪವನ್ನೂ ಇಟ್ಟಿದ್ದಾರೆ. ಅನಿತಾ ಕುಮಾರಸ್ವಾಮಿ ಸೇರಿದಂತೆ ಬೇರೆ ನಾಯಕರೂ ಕೂಡಾ ಸುದೀಪ್ ಮನ ಒಲಿಸಲು ಪ್ರಯತ್ನಿಸಿದ್ದಾರೆ. ಹಾಗೊಂದು ವೇಳೆ ಸುದೀಪ್ ಚುನಾವಣಾ ಕಣಕ್ಕಿಳಿಯಲು ಒಪ್ಪಿಕೊಂಡರೆ ಯಾವ ಕ್ಷೇತ್ರದಿಂದ ಅಖಾಡಕ್ಕಿಳಿಯುತ್ತಾರೆ ಎಂಬ ಪ್ರಶ್ನೆ ಸಹಜ. ಆ ನಿಟ್ಟಿನಲ್ಲಿ ಹುಡುಕ ಹೋದರೆ ಇಂಟರೆಸ್ಟಿಂಗ್ ಮಾಹಿತಿಗಳು ಹೊರ ಬೀಳುತ್ತವೆ!

ಸುದೀಪ್ ಎಂಟ್ರಿಗೆ ಜೆಡಿಎಸ್ ಪ್ರಶಸ್ತ ಸ್ಥಳವೆಂದು ಗೊತ್ತು ಮಾಡಿರೋದು ಚಿತ್ರದುರ್ಗದ ಮೊಳಕಾಲ್ಮೂರು ಕ್ಷೇತ್ರವನ್ನು. ಈ ಕ್ಷೇತ್ರದಲ್ಲಿ ತೊಂಬತ್ತು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ನಾಯಕ ಸಮಾಜದ ಮತದಾರರಿದ್ದಾರೆ. ಇದೂ ಕೂಡಾ ಸುದೀಪ್ ಗೆಲುವಿಗೆ ಸಹಕಾರಿಯಾಗುತ್ತದೆ ಎಂಬ ಲೆಕ್ಕಾಚಾರ ಜೆಡಿಎಸ್ ಪಾಳೆಯದಲ್ಲಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮೂಲದ ನೇರಳಗುಂಟೆ ತಿಪ್ಪೇಸ್ವಾಮಿ ಕಳೆದ ಬಾರಿ ಬಿಎಸ್‌ಆರ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈ ಬಾರಿ ಯೂಥ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಹಾಲಿ ಜಿಲ್ಲಾ ಪಂಚಾಯತ್ ಸದಸ್ಯರೋರ್ವರು ಈ ಬಾರಿ ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈ ಕ್ಷೇತ್ರಕ್ಕೆ ಅನೇಕರು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಅದರಲ್ಲಿ ಮಾಜಿ ಎಂಪಿ ನಟ ಶಶಿಕುಮಾರ್ ಕೂಡಾ ಒಬ್ಬರು. ಅವರೂ ಕೂಡಾ ಈ ಬಾರಿ ಹೇಗಾದರೂ ಮಾಡಿ ಕಾಂಗ್ರೆಸ್ ಟಿಕೆಟ್ ಪಡೆದು ಶಾಸಕನಾಗೋ ಹಂಬಲ ಹೊಂದಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಚಳ್ಳಕೆರೆ ಕ್ಷೇತ್ರದಿಂದ ಶಶಿಕುಮಾರ್ ಟಿಕೆಟ್ ಬಯಸಿದ್ದರಾದರೂ ಸಿಕ್ಕಿರಲಿಲ್ಲ. ಆಗ ಟಿಕೆಟ್ ರಘುಮೂರ್ತಿ ಪಾಲಾಗಿತ್ತು. ಹೀಗಾಗಿ ಕಿಚ್ಚ ಸುದೀಪ್ ಈ ಕ್ಷೇತ್ರದಿಂದ ಜೆಡಿಎಸ್ ನಿಂದ ಸ್ಪರ್ಧಿಸಿದರೆ ಗೆಲ್ಲುವ ಎಲ್ಲ ವಾತಾವರಣವೂ ಇದೆ.

ಇನ್ನು ಇದೇ ಚಿರ್ತದುರ್ಗದಿಂದ ಮೊಗವೀರ ಸಮುದಾಯದ ನಟಿ ಭಾವನಾ ಕೂಡಾ ಆಕಾಂಕ್ಷಿಯಾಗಿದ್ದಾರಂತೆ. ಆದರೆ ಬೇರೆಲ್ಲರ ಕಥೆ ಏನೋ ಹೇಳಲು ಬರೋದಿಲ್ಲ. ಕಿಚ್ಚಾ ಸುದೀಪ್ ಮನಸು ಬದಲಾವಣೆ ಮಾಡಿಕೊಳ್ಳದೆ ರಾಜಕೀಯಕ್ಕಿಳಿದರೆ ಅವರು ಮೊಳಕಾಲ್ಮೂರು ಕ್ಷೇತ್ರದಿಂದಲೇ ಕಣಕ್ಕಿಳಿಯೋದು ಖಚಿತ ಎಂಬುದು ಕೆಲವರ ಅಭಿಪ್ರಾಯ. ಸುದೀಪ್ ಯಾವುದೇ ವಿಚಾರವನ್ನಾದರೂ ಒಂದೇ ಏಟಿಗೆ ನಿರ್ಧಾರ ತೆಗೆದುಕೊಳ್ಳಲು ಒಗ್ಗಿಸಿಕೊಳ್ಳುವವರಲ್ಲ. ಈ ಬಗ್ಗೆ ಆಲೋಚಿಸಿ ಅವರ ನಿರ್ಧಾರವನ್ನು ಇಷ್ಟರಲ್ಲೇ ಕುಮಾರಸ್ವಾಮಿ ಅವರಿಗೆ ಒಪ್ಪಿಸುವ ಸಾಧ್ಯತೆ ಇದೆ. ಹಾಗೊಂದು ವೇಳೆ ಅವರು ಕಣಕ್ಕಿಳಿಯಲು ಒಪ್ಪಿಕೊಂಡರೆ ಮೊಳಕಾಲ್ಮೂರು ಕ್ಷೇತ್ರವೇ ಫಿಕ್ಸ್. ಹಾಗೇನಾದರೂ ಸಕ್ರಿಯ ರಾಜಕೀಯ ಬೇಡವೇ ಬೇಡ ಎಂಬ ನಿರ್ಧಾರಕ್ಕೇನಾದರೂ ಸುದೀಪ್ ಬಂದರೂ ಜೆಡಿಎಸ್ ಪರವಾಗಿ ಪ್ರಚಾರ ಮಾಡೋದಂತೂ ಖರೇ. ಇದುವರೆಗೂ ಯಾವುದೇ ವಿವಾದ, ವಿನಾ ಕಾರಣ ಮಾತುಗಳಿಂದ ದೂರವಿರುವ ಸುದೀಪ್ ಬಗ್ಗೆ ಕರ್ನಾಟಕದ ತುಂಬಾ ಗೌರವಾಧರಗಳಿವೆ. ಅದುವೇ ಎಲ್ಲ ಕ್ಷೇತ್ರಗಳಲ್ಲಿಯೂ ಜೆಡಿಎಸ್ ಅಭ್ಯರ್ಥಿಗಳಿಗೆ ಶ್ರೀರಕ್ಷೆಯಾಗಲಿದೆ!

Leave a Reply

Your email address will not be published. Required fields are marked *


CAPTCHA Image
Reload Image