One N Only Exclusive Cine Portal

ನೀರಿರೋ ಜಾಗದಲ್ಲಿ ಮನೆ ಕಟ್ಟಬೇಕು; ಮನೆ ಕಟ್ಟಿರೋ ಜಾಗದಲ್ಲಿ ನೀರು ಹುಡುಕಬಾರದು.

“ರಂಗ ಎಸೆಸೆಲ್ಸಿವರೆಗೂ ಸ್ಕ್ರಿಪ್ಟ್ ಡೈಲಾಗ್ ಬರೆಯುತ್ತ ಇದ್ದ ನಾನು ಅದಾದ ನಂತರ ಮಾಡಿದ್ರೆ ಫಿಲ್ಮ್ ಡೈರೆಕ್ಷನ್ ಮಾಡಬೇಕು ಅಂತ ಬಲವಾಗಿ ಅಂದುಕೊಂಡಿದ್ದೆ. ಹೊಟ್ಟೆ ಹೊರೆಯೋಕೆ ಸಂಭಾಷಣೆ ಬರೆಯೋ ಕೆಲಸ ಇದ್ದೇ ಇತ್ತು. ಅದ್ರಲ್ಲೇ ಬದುಕೋಕೂ ಸಹ ಆಸ್ಪದವಿತ್ತು. ನನ್ನದೇ ಫಿಲ್ಮ್ ಮಾಡಬೇಕು ಅಂತ ಅಂದುಕೊಂಡಾಗ ಕಥೆ ಬಗ್ಗೆ ಯೋಚನೆ ಶುರುವಾಯಿತು. ನಾನು ಬೆಳೆದದ್ದು, ಓದಿದ್ದು ಎಲ್ಲ ಸ್ಲಂನಲ್ಲೇ. ಅಲ್ಲಿನ ಪರಿಸರವೇ, ಲಿವಿಂಗ್ ಸ್ಟೈಲೇ ಬೇರೆ. ಎಲ್ಲಾ ಭಾಷೆಗಳ ಜನಗಳೂ ಅಲ್ಲಿದ್ರು, ಅವರ ಬದುಕು, ಬವಣೆ, ದುಡಿಮೆ, ತಮಾಷೆ, ಜೂಜು, ಪೊಲೀಸು ಎಲ್ಲವೂ ಮಿಕ್ಸ್ ಆದ ಮಿನಿ ಇಂಡಿಯಾ ಥರ ಇದ್ದ ಪ್ರದೇಶ ಅದು. ದುನಿಯಾಗೆ ಕಥೆ ಹುಟ್ಟಿದ್ದೇ ಅಲ್ಲಿಂದ. ಚಿತ್ರದ ತುಂಬ ಗ್ರೇ ಕ್ಯಾರೆಕ್ಟರ‍್ಸ್ ಇಟ್ಟುಕೊಂಡು ಅದರ ಜೊತೆಗೆ ಎರಡು ಅಮಾಯಕ ಪಾತ್ರಗಳನ್ನ ಕಲ್ಪನೆ ಮಾಡ್ಕೊಂಡು ಬರೆದ ಕಥೆ ದುನಿಯಾ ಆಯ್ತು. ನನ್ನ ಪ್ರಕಾರ ಫಿಲ್ಮ್ ಮಾಡೋದು ಅಂದ್ರೆ ಥಿಯೇಟರ್ ಒಳಗೆ ಬಂದು ಕುಳಿತ 600 ಮಂದಿ ನೋಡುಗರೆದುರು ಒಬ್ಬ ಡೈರೆಕ್ಟರ್ ಬೆತ್ತಲಾಗೋದು. ಡೈರೆಕ್ಟರ್ ಒಬ್ಬನ ತಪ್ಪು-ಒಪ್ಪುಗಳು ಮೊದಲು ಗೊತ್ತಾಗೋದೇ ಮಾರ‍್ನಿಂಗ್ ಶೋ ನೋಡ್ಕೊಂಡು ಬಂದ ಪ್ರೇಕ್ಷಕರಿಗೆ. ಅಷ್ಟು ಮಂದಿ ಎದುರುಗಡೆ ನಿಲ್ಲಬೇಕು ಅಂದ್ರೆ ತಪ್ಪಾಗದಂತೆ ನನ್ನ ಫಿಲ್ಮನ್ನ ಡೈರೆಕ್ಟ್ ಮಾಡಿರಬೇಕು. ಮೂಲತಃ ಚಿತ್ರಕಲೆಯಿಂದ ಬಂದ ನನಗೆ ಪ್ರತಿ ಫ್ರೇಮಿನೊಳಗೆ ಇರುವ ಬಣ್ಣ ಮುಖ್ಯ ಅನ್ಸತ್ತೆ. ಆ ಕಾರಣಕ್ಕೇ ಬಹಳಷ್ಟು ಸಲ ಪ್ರೊಡ್ಯೂಸರ‍್ಸ್ ಹತ್ರ ಹಠ ಮಾಡಿಕೊಂಡು ನನಗೆ ಇಂಥದ್ದೇ ಕಲರ್ ವ್ಯಾನ್ ಬೇಕು, ಇಂಥದ್ದೇ ಕಲರ್ ಕಾರ್ ಬೇಕು ಅಂತ ಚಿತ್ರದೊಳಗೆ ಬಳಸಿಕೊಳ್ತೀನಿ.”

ಇದು ನಿರ್ದೇಶಕ ಸೂರಿ ಅವರ ಸಿನಿಮಾ ಮಾತು!

ಸದ್ಯ ಸೂರಿ ಟಗರು ಚಿತ್ರದ ಬಿಡುಗಡೆಯ ಓಡಾಟದಲ್ಲಿದ್ದಾರೆ. ಸೂರಿ ಅನ್ನೋ ವ್ಯಕ್ತಿತ್ವವೇ ಒಂಥರಾ ವಿಚಿತ್ರ. ಮಾತಾಡುವುದಿಲ್ಲ. ಮಾತಾಡಿದರೆ ಮನಸ್ಸಲ್ಲಿರೋದನ್ನೆಲ್ಲಾ ಒದರದೆ ಬಿಡುವುದಿಲ್ಲ. ಹಗಲೂ ರಾತ್ರಿ ಸಿನಿಮಾವನ್ನೇ ಧ್ಯಾನಿಸುವ ಸೂರಿಯ ಮಾತು ಕೂಡಾ ಅವರ ಸಿನಿಮಾದಂಥೆ ಸಖತ್ ರ್ರಾ!

“ಇದು ಫಾಸ್ಟ್ ಜಮಾನ ಮಾರ‍್ನಿಂಗ್‌ಶೋ ಪಿಚ್ಚರ್ ನೋಡಿದೋನು ರಪ್ ಅಂತ ಪ್ರಶ್ನೆ ಕೇಳ್ತಾನೆ ನೆಕ್ಸ್ಟ್ ಪಿಚ್ಚರ್ ಯಾವ್ದು ಅಂತ. ಅಡ್ವಾನ್ಸ್ಡ್ ಆಗಿದಾರೆ ಇವತ್ತಿನ ಪ್ರೇಕ್ಷಕರು. ಹಾಗಾಗಿ ಈ ಸ್ಪೀಡ್ ಆಡಿಯೆನ್ಸ್‌ಗೆ ಕಥೆ ಹೊಸೆಯೋದು ಚಾಲೆಂಜಿಂಗ್ ಜಾಬ್. ಕಥೆ ನಮ್ಮದೇ ಆದ್ರೆ ಪ್ರತಿಯೊಂದು ಡೀಟೈಲ್‌ಗೂ ನಾವೇ ಶ್ರಮ ಹಾಕೋದ್ರಿಂದ ಟೈಂ ಹೆಚ್ಚು ಬೇಕಾಗತ್ತೆ. ಇದು ನನ್ನ ಅನುಭವ. ಒಳ್ಳೆ ಕಥೆ ರೆಡಿಯಾಗಿರೋದೇ ಸಿಕ್ರೆ ಆ ಟೈಂ ಉಳಿಯುತ್ತೆ. ಪಾತ್ರ ಮತ್ತು ಪರಿಸರಕ್ಕೆ ಬಣ್ಣ ಕಟ್ಟೋ ಕೆಲಸ ಅಷ್ಟೇ ಇರುತ್ತೆ. ಏನೇ ಮಾತಾಡಿದ್ರೂ ಕಥೆ ಈಸ್ ದಿ ಅಲ್ಟಿಮೇಟ್ ಎಲಿಮೆಂಟ್. ನೀರಿರೋ ಜಾಗದಲ್ಲಿ ಮನೆ ಕಟ್ಟಬೇಕು. ಮನೆ ಕಟ್ಟಿರೋ ಜಾಗದಲ್ಲಿ ನೀರು ಹುಡುಕಬಾರದು. ಇದು ಫಿಲ್ಮ್‌ಗಳ ಕಥೆಗೂ ಅನ್ವಯಿಸುತ್ತೆ. ನನ್ನದು ಒಂದಷ್ಟು ಹುಡುಗರ ಟೀಂ ಇದೆ. ಸಬ್ಜೆಕ್ಟ್ ಸೆಲೆಕ್ಟ್ ಮಾಡಿ ಅದರ ಸುತ್ತ ವರ್ಕ್ ಮಾಡೋಕೆ ಬಿಡ್ತೀನಿ. ಮೊದಲು ಕಥೆಯ ವಿಷಯಕ್ಕೆ ಸಂಬಂಧಪಟ್ಟಂತೆ ಡೈಲಾಗ್, ಸ್ಕ್ರಿಪ್ಟ್ ಎಲ್ಲವನ್ನೂ ನಾನೇ ಮಾಡಬೇಕು ಅಂತ ಮಾಡಿದ್ದು. ಬೇರೆಯವರನ್ನ ಇಂಟರ್‌ಫಿಯರ್ ಮಾಡ್ತಿರಲಿಲ್ಲ. ಒಂದೆರಡು ಫಿಲ್ಮ್ ಮಾಡ್ತಿದ್ದ ಹಾಗೆ ನಮ್ಮೊಳಗಿದ್ದ ನಾನು ನನ್ನದು ಅನ್ನೋ ಪೊಸೆಸಿವ್‌ನೆಸ್ ಹೊರಟೋಗತ್ತೆ. ಕಡ್ಡಿಪುಡಿ ಪಿಚ್ಚರ್ರಲ್ಲಿ ಡೈಲಾಗ್ ಸಮೇತ ಬೇರೆಯವರ ಜೊತೆ ಶೇರ್ ಮಾಡ್ತ ಇದೀನಿ. ಸ್ಕ್ರಿಪ್ಟು, ಸ್ಕ್ರೀನ್ ಪ್ಲೇ-ಕಥೆ ಮೂರೇ ಇಲ್ಲಿ ಇಂಪಾರ್ಟೆಂಟು. ಡೈರೆಕ್ಷನ್ ಅನ್ನೋದು ಓದಿಕೊಂಡು ಮಾಡೋ ಕೆಲಸ ಅಲ್ಲ. ಅಲ್ಲಿ ಸೌಂಡ್, ಬಣ್ಣ, ಮಾತು ಎಲ್ಲವೂ ಸೇರಿಯೇ ಪ್ರತೀ ಶಾಟ್ ಕಂಪೋಸ್ ಮಾಡಬೇಕಾಗುತ್ತೆ. ಇವೆಲ್ಲವೂ ಒಂದು ಡಿಸಿಪ್ಲೀನ್ಡ್ ಮ್ಯಾನರ್ರೊಳಗೆ ಕಲೆತಾಗ ಮಾತ್ರ ಶಾಟ್ ಮತ್ತು ಸೀನ್ ಚೆನ್ನಾಗಿ ಬರುತ್ತೆ. ನನಗೆ ಸಿನಿಮಾ ಮಾಡೋದಕ್ಕಿಂತ ನೋಡೋದು ತುಂಬ ಇಷ್ಟ. ಕಾಸರವಳ್ಳಿಯವರ ಮನೆ, ಆಕ್ರಮಣ ಚಿತ್ರಗಳು ಇವತ್ತಿಗೂ ನನಗೆ ಇಷ್ಟ. ಬಾಲಾ ಅವರ ಸಿನಿಮಾಗಳನ್ನು ನೋಡೋಕೆ ಕಾಯ್ತಾ ಇರ್ತೀನಿ. ಒಂದು ಫಿಲ್ಮ್ ನೋಡಿದ ಮೇಲೆ ಕೊನೆಯಲ್ಲಿ ನಮ್ಮೊಳಗೆ ಒಂದು ಫೀಲ್ ಉಳಿಯಬೇಕು. ಅಂಥ ಸಿನಿಮಾಗಳು ನನಗೆ ಇಷ್ಟ ಆಗ್ತವೆ. ಒಂದ್ವೇಳೆ ಅವರ ಟೆನ್ಷನ್ ಫಿಲ್ಮ್ ನೋಡಿದ ನಂತ್ರಾನೂ ಕಂಟಿನ್ಯೂ ಆದ್ರೆ ಫಿಲ್ಮ್ ಅವನಿಗೆ ಎಲ್ಲೂ ತಟ್ಟಿಲ್ಲ ಮುಟ್ಟಿಲ್ಲ.. ಸೋಲ್ತು ಅಂತ. ನೋಡುಗನಿಗೆ ಕೋಪ ಬರಿಸಬಾರದು. ಅವರಿಗೆ ಸಿಟ್ಟು ಬಂದ ದಿನ ನಾವು ನಾಶ ಆಗ್ತೀವಿ. ಅದೇ ಎಚ್ಚರಿಕೆಯಲ್ಲೇ ಈಗ ಡೈರೆಕ್ಷನ್ ಮಾಡ್ತಿದೇನೆ. ಮುಂದಿಂದು ನೋಡುಗರಿಗೆ ಬಿಟ್ಟಿದ್ದು.”

ಸೂರಿ ಮಾತು ಸೂರ್ಯನಷ್ಟೇ ನಿಜ. ಪ್ರೇಕ್ಷಕನ ಸಿಟ್ಟು ಸಾಮಾನ್ಯವಾದ್ದಲ್ಲ. ಅದು ಯಾವ ಸ್ಟಾರ್‌ಗಳನ್ನೂ ಬಿಟ್ಟಿಲ್ಲ. ಯಾವತ್ತಿಗೂ ಪ್ರೇಕ್ಷಕನನ್ನು ಸಂತೃಪ್ತವಾಗಿಡಬೇಕಾದ್ದು ಸಿನಿಮಾ ನಿರ್ಮಾತೃಗಳ ಮಹತ್ತರ ಜವಾಬ್ದಾರಿ. ಇದನ್ನು ಚಿತ್ರೋದ್ಯಮದಲ್ಲಿರುವವರು ಅರಿತುಕೊಳ್ಳಬೇಕಷ್ಟೇ.

Leave a Reply

Your email address will not be published. Required fields are marked *


CAPTCHA Image
Reload Image