One N Only Exclusive Cine Portal

ಟಗರಿನ ಪೊಗರಿಗೆ ಪ್ರೇಕ್ಷಕರು ಫಿದಾ!

ಸೂರಿ ಮತ್ತು ಶಿವರಾಜ್‌ಕುಮಾರ್ ಕಾಂಬಿನೇಷನ್ನಿನ `ಟಗರು’ ಭರಪೂರ ಆರ್ಭಟದೊಂದಿಗೇ ಥೇಟರಿಗೆ ಲಗ್ಗೆಯಿಟ್ಟಿದೆ. ಈ ಚಿತ್ರ ಹಂತ ಹಂತವಾಗಿ ಕುತೂಹಲದ ಜ್ವರವೇರಿಸಿಕೊಂಡು ಸಾಗಿ ಬಂದಿತ್ತಲ್ಲಾ? ಅದರಿಂದಾಗಿಯೇ ಹುಟ್ಟಿಕೊಂಡಿದ್ದ ಅಗಾಧ ನಿರೀಕ್ಷೆಗಳೆಲ್ಲವೂ ಪ್ರೇಕ್ಷಕರ ಶಿಳ್ಳೆ, ಕೇಕೆ ಮತ್ತು ತೃಪ್ತಿಯ ಮಂದಹಾಸದ ಮೂಲಕ ಸಾರ್ಥಕ್ಯ ಪಡೆದುಕೊಂಡಿದೆ. ಅಷ್ಟರ ಮಟ್ಟಿಗೆ ಟಗರಿನ ಪೊಗರಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ!

ಸಾದಾ ಸೀದಾ ಕಥೆಯೊಂದನ್ನು ಪಳಗಿಸಿಕೊಂಡು ಪಾಂಗಿತವಾಗಿ ದೃಷ್ಯ ಕಟ್ಟುವ ಅಪರೂಪದ ಮಂತ್ರದಂಡವೊಂದರ ಮಾಲೀಕನಂತೆ ಅಚ್ಚರಿ ಹುಟ್ಟಿಸುವವರು ದುನಿಯಾ ಸೂರಿ. ಮಳೆ ಸುರಿಸಿಯೂ ಬಿಸಿಯೇರಿಸುವ, ರಾ ಸೀನುಗಳಲ್ಲೂ ಕಣ್ಣಾಲಿಗಳನ್ನು ತೇವಗೊಳಿಸುವ, ನೆತ್ತರನ್ನೂ ಕಾವ್ಯವಾಗಿಸೋದು ಸೂರಿ ಟ್ರೇಡ್ ಮಾರ್ಕು. ಅದೆಲ್ಲವುಗಳ ಸಂಗಮದಂತೆ ಮೂಡಿ ಬಂದಿರೋ ಚೇತೋಹಾರಿ ಚಿತ್ರ ಟಗರು.

ಅದ್ಯಾವನೇ ಡಾನ್ ಆಗಿದ್ದರೂ, ಅದೆಂಥಾದ್ದೇ ಮಾಫಿಯಾ ಆಗಿದ್ದರೂ ಸಮಾಜದ ಒಳಿತಿಗಾಗಿ ನುಗ್ಗಿ ಮಟ್ಟ ಹಾಕುವ ಖಡಕ್ಕು ಪೊಲೀಸ್ ಆಫೀಸರ್, ಹೆಣ್ಮಕ್ಕಳನ್ನು ಹೇಗೇಗೋ ಬಲೆಗೆ ಬೀಳಿಸಿಕೊಂಡು ಸಾವಿನ ಶೂಲಕ್ಕೇರಿಸುವ ಮಾಫಿಯಾ, ಚಿತ್ರ ವಿಚಿತ್ರ ರೌಡಿ ಎಲಿಮೆಂಟುಗಳು, ರಾಜಕೀಯ, ಖಾಕಿಯೊಳಗಿನ ಕಳ್ಳಾಟ… ಎಲ್ಲವನ್ನೂ ಒಳಗಿಟ್ಟುಕೊಂಡೇ ಯಾವ ಪರಿಧಿಗೂ ಸಿಕ್ಕದ ಸಂಕೀರ್ಣ ಕಥೆಯೊಂದನ್ನು ಸಿಕ್ಕುಗಳೇ ಇಲ್ಲದಂತೆ ನಿರೂಪಣೆ ಮಾಡಿರೋದು ಸೂರಿಯವರ ಅಸಲೀ ಕಸುಬುದಾರಿಕೆ. ಅದುವೇ ಇಡೀ ಚಿತ್ರದ ಗೆಲುವಿನ ಸೂತ್ರವೂ ಹೌದು.

ಶಿವಣ್ಣನನ್ನು ಇದುವರೆಗಿನ ಅಷ್ಟೂ ಪಾತ್ರಗಳಿಗಿಂತ ಪಕ್ಕಾ ಭಿನ್ನವಾಗಿ ಅನಾವರಣಗೊಳಿಸಲಾಗಿದೆ. ಯಥಾ ಪ್ರಕಾರ ಆ ಭಿನ್ನ ಪಾತ್ರವನ್ನು ನುಂಗಿಕೊಂಡು ನಟಿಸಿರೋ ಶಿವಣ್ಣ ಅಭಿಮಾನದಾಚೆಗೂ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತಾರೆ. ಇಡೀ ಚಿತ್ರದಲ್ಲಿ ಮುಖ್ಯ ಆಕರ್ಷಣೆ ಮತ್ತು ಅಚ್ಚರಿಯಂತೆ ಕಾಣಿಸೋದು ಧನಂಜಯ್ ನಿರ್ವಹಿಸಿರೋ ನೆಗೆಟಿವ್ ರೋಲ್. ನಿಜವಾಗಿಯೂ ಧನಂಜಯ್ ಅವರ ಅಸಲೀ ನಟನಾ ಶಕ್ತಿ ಈ ಪಾತ್ರದ ಮೂಲಕ ಸ್ಪಷ್ಟವಾಗಿ ಅನಾವರಣಗೊಂಡಿದೆ. ಈ ಪಾತ್ರದ ಮೂಲಕವೇ ಧನಂಜಯ್ ವೃತ್ತಿ ಜೀವನಕ್ಕೆ ಹೊಸಾ ತಿರುವು, ಓಘ ಸಿಗುವ ಎಲ್ಲ ಲಕ್ಷಣಗಳೂ ಇವೆ. ರಂಗಭೂಮಿ ನಟ ಸಚ್ಚು ಇನ್ನು ಸಿನಿಮಾರಂಗದಲ್ಲಿ ಫುಲ್ ಬ್ಯುಸಿಯಾಗೋದು ಪಕ್ಕಾ.

ಇನ್ನು ಇಡೀ ಚಿತ್ರದಲ್ಲಿ ಪ್ರಧಾನವಾಗಿ ಗಮನ ಸೆಳೆಯೋದು ಸೂರಿ ಅವರ ಪಾತ್ರ ಕಟ್ಟುವ ಸೂಕ್ಷ್ಮವಂತಿಕೆ. ಮುಖ್ಯ ಖಳ ಪಾತ್ರವಾದ ಡಾಲಿ, ಕವಿತೆ ಬರೆಯುತ್ತಲೇ ಅಚಾನಕ್ಕಾಗಿ ರೌಡಿಸಂಗೆ ಬಂದು ಒಬ್ಬಳೇ ಹುಡುಗಿಯನ್ನು ಆರಾಧಿಸುವ ಚಿಟ್ಟೆ, ಕೊಳಕು ಮತ್ತು ಕ್ರೌರ್ಯದ ಸಂಗಮದಂತಿರೋ ಕಾಕ್ರೋಚ್ ಮುಂತಾದ ಪಾತ್ರಗಳನ್ನು ಮಾತ್ರವಲ್ಲದೆ ಪ್ರತೀ ಕ್ಯಾರೆಕ್ಟರುಗಳನ್ನೂ ನೆನಪಲ್ಲುಳಿಯುವಂತೆ ರೂಪಿಸಲಾಗಿದೆ.

ರಕ್ತ ಮೆತ್ತಿದ ಕ್ಯಾನ್ವಾಸೊಂದರಲ್ಲಿ ಸುಂದರ ಕವಿತೆ ಬರೆದಂತೆ ಕಾಣಿಸೋ ಪ್ರೇಮ ಸನ್ನಿವೇಶಗಳು ಅದಕ್ಕೆ ಪೂರಕವಾದ ಹಾಡು… ಪಕ್ಕಾ ಟ್ರಿಕ್ಕಿ ಮೆಥೆಡ್ಡಿನ ಹೊಸತನದ ನಿರೂಪಣಾ ಸೂತ್ರ ಹಿಡಿದರೂ ಸೂರಿ ಎಲ್ಲಿಯೂ ಲಯ ತಪ್ಪದಂತೆ ನೋಡಿಕೊಂಡಿದ್ದಾರೆ. ಒಂದು ಕಲಾತ್ಮಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ಛಾಯಾಗ್ರಾಹಕ ಮಹೇನ್ ಸಿಂಹ ಅವರ ಕಮರ್ಷಿಯಲ್ ಕ್ಯಾಮೆರಾ ಕುಸುರಿಯೂ ಮನಸೆಳೆಯುವಂತಿದೆ. ಈ ಚಿತ್ರದ ಮತ್ತೊಂದು ಶಕ್ತಿ ಹಿನ್ನೆಲೆ ಸಂಗೀತ. ಕಥೆಗೆ ಬೇಕಾದಂಥಾ ಭಿನ್ನವಾದ ಸೌಂಡಿಂಗ್ ಮೂಲಕ ಸಂಗೀತ ನಿರ್ದೇಶಕ ಚರಣ್ ರಾಜ್ ಕೆಲಸ ಬೆರಗು ಹುಟ್ಟಿಸುತ್ತೆ. ಜಾಲಿಬಾಸ್ಟಿನ್ ಸೃಷ್ಟಿಸಿರುವ ಕ್ಲೈಮ್ಯಾಕ್ಸ್ ಸಾಹಸದೃಶ್ಯ, ಟಗರು ಟೈಟಲ್ ಸಾಂಗಿನ ಕೊರಿಯೋಗ್ರಫಿ, ನಾಗೇಂದ್ರ ಪ್ರಸಾದ್ ಅವರ ಲಿರಿಕ್ಕು ಎಷ್ಟು ಬೇಕೋ ಅಷ್ಟೂ ಕಿಕ್ಕು ಕೊಡುತ್ತದೆ.

ಇಡೀ ವ್ಯವಸ್ಥೆಯನ್ನು ಸೀಮಿತ ಅವಧಿಯಲ್ಲಿ ಕಣ್ಮುಂದೆ ಸರಿಸುವಂಥಾ ಟಗರು ಚಿತ್ರದಲ್ಲಿ ಬಾಸ್ ಅಂತ ಕರೆಸಿಕೊಳ್ಳೋ ತೆವಲಿನ ಬೂಸಾ ಡಾನ್‌ಗಿರಿ, ದುಷ್ಟರನ್ನು ಮಟ್ಟ ಹಾಕಬೇಕಾದ ವ್ಯಸ್ಥೆಯೊಳಗಿನ ಹುಳುಕು, ಯುವ ಸಮೂಹದ ತಲ್ಲಣ ಸೇರಿದಂತೆ ಎಲ್ಲವೂ ಇವೆ. ಅಲ್ಲಲ್ಲಿ ಕೆಲ ಮಾಫಿ ಮಾಡಬಹುದಾದ ಕೆಲ ತಪ್ಪುಗಳಾಚೆಗೆ ಇಡೀ ಚಿತ್ರವನ್ನು ಕುತೂಹಲದಿಂದ ನೋಡಿಸಿಕೊಳ್ಳುವಂತೆ ರೂಪಿಸುವಲ್ಲಿ ಸೂರಿ ಗೆದ್ದಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image