One N Only Exclusive Cine Portal

ಟಗರು ಎಫೆಕ್ಟ್!

‘ಹೆಸರು ಬದಲಿಸಿಕೊಂಡರೆ ಅದೃಷ್ಟ ಬದಲಾಗುತ್ತೆ’ ಅನ್ನೋದು ಚಿತ್ರರಂಗದವರ ಹಳೇ ನಂಬಿಕೆ. ಕಾಕತಾಳೀಯವೆನ್ನುವಂತೆ ಒಂದುಷ್ಟು ಜನ ಅಪ್ಪಾಮ್ಮ ಇಟ್ಟ ಹೆಸರನ್ನು ಬದಲಿಸಿಕೊಳ್ಳುತ್ತಲೇ ಅವರ ನಸೀಬೂ ಬದಲಾಗಿಹೋಗುತ್ತದೆ.

ಸಿನಿಮಾಗಳಲ್ಲಂತೂ ಕೆಲವರು ನಿಭಾಯಿಸುವ ಪಾತ್ರದ ಹೆಸರೇ ಪರ್ಮನೆಂಟಾಗಿ ಅವರ ನಾಮಧೇಯವಾಗಿಬಿಡುತ್ತದೆ. ಯೋಗಿ ಅಂದರೆ ಎಷ್ಟು ಜನಕ್ಕೆ ಅರ್ಥವಾಗುತ್ತದೋ ಇಲ್ಲವೋ, ಆದರೆ ‘ಲೂಸ್ ಮಾದ’ ಅಂದಾಕ್ಷಣ ಎಂಥವರಿಗೂ ಗೊತ್ತಾಗಿಬಿಡುತ್ತದೆ! ಯಾವುದೇ ಹಿಟ್ ಸಿನಿಮಾದ ಪಾತ್ರಗಳ ಹೆಸರು ಆಯಾ ನಟರುಗಳ ಹೆಸರಿನ ಜೊತೆಗೆ ಅಂಟಿಕೊಳ್ಳೋದು ಮಾಮೂಲು.

ಇಲ್ಲೊಬ್ಬ ಹುಡುಗನಿದ್ದಾನೆ ನೋಡಿ. ಹೆಸರು ಸುಧೀ. ಮೂಲತಃ ಕಲಾವಿದ. ಜಾಕಿ ಸಿನಿಮಾದಿಂದ ಮೊದಲ್ಗೊಂಡು ಇತ್ತೀಚಿಗೆ ಬರುವ ಬಹುತೇಕ ಸ್ಟಾರ್ ಸಿನಿಮಾಗಳಲ್ಲಿ ಬರುವ ಚಿತ್ರವಿಚಿತ್ರ ಬೈಕುಗಳನ್ನು ವಿನ್ಯಾಸಗೊಳಿಸೋದು ಈತನ ಕಾಯಕ. ಸಿನಿಮಾ ಸೆಟ್‌ಗಳಲ್ಲಿ ತಾನು ರೂಪಿಸಿದ ಬೈಕು ತಂದು ನಿಲ್ಲಿಸುವ ಸೈಕಲ್ ಗ್ಯಾಪಲ್ಲೇ ಸಣ್ಣ ಪುಟ್ಟ ಪಾತ್ರಗಳಲ್ಲೋ, ದೂರದಲ್ಲೆಲ್ಲೋ ನಿಲ್ಲುವ ಕ್ಯಾರೆಕ್ಟರುಗಳಲ್ಲೋ ಕಾಣಿಸಿಕೊಳ್ಳುತ್ತಿದ್ದ ಸುಧೀಗೆ ‘ಮಾಮು ಟೀ ಅಂಗಡಿ’ ಎನ್ನುವ ಸಿನಿಮಾದಿಂದ ವಿಲನ್ ಪಾತ್ರಗಳು ಬಂದೊದಗಿದವು.

ಇಂಥ ಸುಧೀ ಸರಿಸುಮಾರು ಒಂದೂವರೆ ವರ್ಷಗಳ ಹಿಂದೆ ನಿರ್ದೇಶಕ ಎ.ಪಿ. ಅರ್ಜುನ್ ಅವರ ಆಫೀಸಿಗೆ ‘ಕಿಸ್’ ಸಿನಿಮಾದ ಮಾತುಕತೆಗೆ ಹೋಗಿದ್ದರಂತೆ. ಅಲ್ಲಿದ್ದ ಅರ್ಜುನ್ ಸ್ನೇಹಿತರೊಬ್ಬರು ‘ಒಂಚೂರ್ ನಿನ್ ಪೂರ್ತಿ ಹೆಸ್ರು, ಡೇಟಾಫ್ ಬರ್ತ್ ಹೇಳು’ ಅಂತಾ ಕೇಳಿಕೊಂಡು, ‘ನೋಡಯ್ಯಾ ನಿನಗೆ ಸಿನಿಮಾ ಫೀಲ್ಡಲ್ಲಿ ಒಳ್ಳೇಯೋಗ ಇದೆ ಟ್ರೈ ಮಾಡು. ಆದ್ರೆ ನಿನ್ ಹೆಸ್ರು ಬಲ ಸರಿ ಇಲ್ಲ. ನಿನ್ನ ಹೆಸರೊಂದನ್ನು ಬದಲಾಯಿಸಿಕೊಂಡ್ರೆ ನೀನು ಎಲ್ಲೋ ಹೊಂಟೋಯ್ತಿಯ’ ಅಂದಿದ್ರಂತೆ. ಅದನ್ನು ಕೇಳಿಸಿಕೊಂಡ ಅರ್ಜುನ್ ಸರಿ ಹೆಸರು ಚೇಂಜ್ ಮಾಡಿಕೊಂಬುಡು ಅಂದಿದ್ರಂತೆ. ಅದಕ್ಕೆ ಸುಧೀ ‘ಸೂರಿ ಅಣ್ಣ ಯಾವ್ ಹೆಸ್ರು ಇಟ್ರೂ ಇಟ್ಕಂಬುಡ್ತೀನಿ’ ಅಂತೇಳಿ ಎದ್ದುಬಂದಿದ್ದರಂತೆ. ಅದಾದ ಕೆಲವೇ ದಿನಗಳಲ್ಲಿ ಡಬ್ಬಿಂಗ್ ಸ್ಟುಡಿಯೋದಲ್ಲಿ ಎದುರುಗೊಂಡ ಸೂರಿ ಬಳಿ “ಅಣ್ಣಾ.. ಎ.ಪಿ. ಅರ್ಜುನ್ ಸರ್ ಹೆಸ್ರು ಚೇಂಜ್ ಮಾಡ್ಕೋ ಒಳ್ಳೇದಾಯ್ತದೆ ಅಂದವ್ರೆ.” ಅಂದಿದ್ದಕ್ಕೆ “ಅದಕ್ಕೇನ್ ಬಿಡೋ ರಾತ್ರಿ ಹೆಸ್ರು ಛೇಂಜ್ ಮಾಡ್ಕೊ. ಬೆಳ್ಗೆ ಹೊತ್ಗೆ ಸ್ಟಾರ್ ಆಗ್ಬುಡ್ತಿಯಾ…” ಅಂದರಂತೆ. ಅಲ್ಲಿಗೂ ಬಿಡದ ಸುಧೀ “ಅಣ್ಣಾ ನೀವೇ ಒಂದು ಹೆಸರಿಟ್ರೆ ಚೆಂದ” ಅಂದಾಗ ಸೂರಿ ನಗುತ್ತಾ ಹೊರಟುಬಿಟ್ರಂತೆ. ಸ್ವಲ್ಪ ದಿನದ ಬಳಿಕ ಕರೆಸಿಕೊಂಡ ಸೂರಿ “ಟಗರು ಸಿನಿಮಾದಲ್ಲಿ ನಿನಗೊಂದು ಪಾತ್ರ ಇದೆ. ಹೆಸ್ರು ಕಾಕ್ರೋಜ್ ಅಂತಾ.. ಓಕೆನಾ?” ಅಂದರಂತೆ. ಅದಕ್ಕೆ ಸುಧೀ “ನೀವೇನಿಟ್ರೂ ಓಕೆ ಅಣ್ಣ” ಅಂದಾಗ “ನೋಡೋ ಈ ಸಿನಿಮಾ ರಿಲೀಸಾಗ್ತಿದ್ದಂಗೇ ನಿನ್ ಹೆಸ್ರು ಸುಧೀ ಅನ್ನೋದನ್ನ ಜನ ಮರೆತುಬಿಡ್ತಾರೆ. ಕಾಕ್ರೋಜ್ ಅಂತಾನೇ ಫಿಕ್ಸ್ ಆಗ್ಬುಡತ್ತೆ..” ಅಂತಾ ಸುಧೀ ಬೆನ್ನ ಮೇಲೆ ಕೈಯಿಟ್ಟು ಸೂರಿ ಆಶೀರ್ವಾದ ಮಾಡಿ ಕಳಿಸಿದ್ದಷ್ಟೇ.

ಆನಂತರ ಟಗರು ಶುರುವಾಯ್ತು. ಸುಧೀ ನಟಿಸಿಬಂದಿದ್ದೂ ಆಯ್ತು. ಈಗ ಸಿನಿಮಾ ರಿಲೀಸೂ ಆಗಿದೆ. ಸುಧೀ ಪಾಲಿಗೆ ಯಾವ ಮಟ್ಟಿಗೆ ಯೋಗ ಬಂದಿದೆಯೆಂದರೆ, ಅಕ್ಷರಶಃ ಏರಿಯಾದಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಓಡಾಡುವಂತಾ ಪರಿಸ್ಥಿತಿ ಬಂದಿದೆಯಂತೆ. ಹೋದಲ್ಲಿ ಬಂದಲ್ಲೆಲ್ಲಾ ಜನ ಕಾಕ್ರೋಜ್ ಅಂಥಾ ಕೂಗುತ್ತಿದ್ದಾರಂತೆ.

ಇದೇ ಸಿನಿಮಾದಲ್ಲಿ ‘ಡಾನ್ ಅಂಕಲ್’ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರ ಕಲಾವಿದ ಸಚ್ಚಿ ಅವರದ್ದೂ ಇದೇ ಪಾಡಂತೆ. ಇಷ್ಟು ವರ್ಷ ಕ್ಯಾನ್ವಾಸು, ಪೇಂಟಿಂಗು ಅಂತಾ ಹೆಸರು ಮಾಡಿದ್ದರೂ ಹೊರಜಗತ್ತಿನಲ್ಲಿ ಜನ ಇವರನ್ನು ಗುರುತಿಸುತ್ತಿರಲಿಲ್ಲ. ಹೀಗಾಗಿ ಸಚ್ಚಿ ಅವರು ಸ್ಕೂಟರ್ರು, ಸೈಕಲ್ಲು ಯಾವುದು ಸಿಕ್ಕರೂ ಅದರಲ್ಲಿ ಓಡಾಡುತ್ತಾ ಮೈಸೂರಿನಲ್ಲಿ ಸ್ವತಂತ್ರವಾಗಿದ್ದವರು. ಈಗ ಜನ ದೂರದಿಂದಲೇ ‘ಅಂಕಲ್… ರೀ ಅಂಕಲ್’ ಅಂತಾ ಕೂಗಲು ಶುರು ಮಾಡಿದ್ದಾರಂತೆ… ಇನ್ನು ಧನಂಜಯ ಅವರನ್ನು ಎಲ್ಲರೂ ಡಾಲಿ ಅಂತಲೇ ಬಿಗಿದಪ್ಪುತ್ತಿದ್ದಾರೆ. ಒಂದು ಸಿನಿಮಾ ಒಳ್ಳೇ ರೀತಿಯಲ್ಲಿ ರೂಪುಗೊಂಡು, ಅದು ಜನರಿಗೆ ತಲುಪಿಕೊಳ್ಳುವಂತಾದರೆ ಏನೆಲ್ಲಾ ಆಗಿಬಿಡುತ್ತದೆ ನೋಡಿ..!

 

Leave a Reply

Your email address will not be published. Required fields are marked *


CAPTCHA Image
Reload Image