Connect with us

ರಿಯಾಕ್ಷನ್

ಯಜಮಾನನನ್ನು ಭೇಟಿ ಮಾಡಿದ ಟಕ್ಕರ್!

Published

on

ತೂಗುದೀಪ ಕುಟುಂಬದ ಮನೋಜ್ ನಾಯಕನಟನಾಗಿ ಎಂಟ್ರಿ ಕೊಡುತ್ತಿರುವ `ಟಕ್ಕರ್’ ಸಿನಿಮಾ ಶೂಟಿಂಗ್ ಸಮಯದಲ್ಲೇ ಸಖತ್ ಸೌಂಡ್ ಮಾಡುತ್ತಿದೆ. ನಾಗೇಶ್ ಕೋಗಿಲು ನಿರ್ಮಾಣದ `ಟಕ್ಕರ್’ ಸಿನಿಮಾ ಬಹುತೇಕ ಮೈಸೂರಿನಲ್ಲಿ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿನಲ್ಲಿ ಉಳಿದ ಭಾಗದ ಚಿತ್ರೀಕರಣವನ್ನು ಪೂರೈಸುತ್ತಿದೆ. ಆರಡಿ ಹೈಟು, ರಗಡ್ ಲುಕ್ಕು ಹೊಂದಿರುವ ಮನೋಜ್ ಜೊತೆ ಯಂಗ್ ಅಂಡ್ ಎನರ್ಜೆಟಿಕ್ ವಿಲನ್ ಆಗಿ ಭಜರಂಗಿ ಲೋಕಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಎಚ್ ಎಂ ಟಿಯಲ್ಲಿ ಡಿಫರೆಂಟ್ ಡ್ಯಾನಿ ಸಂಯೋಜಿಸಿದ್ದ ಫಯರ್ ಫೈಟ್ ಕೂಡಾ ಅದ್ಭುತವಾಗಿ ಚಿತ್ರೀಕರಣಗೊಂಡಿದೆಯಂತೆ. ಕಿರುತೆರೆಯ ವೀಕ್ಷಕರ ಪಾಲಿಗೆ ಪುಟ್ ಗೌರಿ ಎಂತಲೇ ಫೇಮಸ್ಸಾಗಿರುವ ರಂಜನಿ ರಾಘವನ್ ಟಕ್ಕರ್ ಸಿನಿಮಾದಲ್ಲಿ ಮನೋಜ್‌ಗೆ ಜೋಡಿಯಾಗಿದ್ದಾರೆ. ಇನ್ನು ಹಾಡುಗಳ ಚಿತ್ರೀಕರಣ ಮುಗಿದರೆ `ಟಕ್ಕರ್’ ಚಿತ್ರೀಕರಣ ಕಂಪ್ಲೀಟ್ ಆಗಲಿದೆ.
ವಿಶೇಷ ವಿಚಾರವೆಂದರೆ, ನೆನ್ನೆ ಟಕ್ಕರ್ ಚಿತ್ರದ ನಾಯಕನಟ ಮನೋಜ್, ನಿರ್ಮಾಪಕ ನಾಗೇಶ್ ಕೋಗಿಲು ಮತ್ತು ನಿರ್ದೇಶಕ ರಘು ಸಮೇತ ತಂಡದ ಪ್ರಮುಖರು `ಯಜಮಾನ’ ಚಿತ್ರದ ಚಿತ್ರೀಕರಣಕ್ಕೆ ಹೋಗಿ ದರ್ಶನ್ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ತನ್ನ ಸಿನಿಮಾದ ಕುರಿತಾದ ಆಗುಹೋಗುಗಳನ್ನು ಆಗಿದ್ದಾಂಗ್ಗೆ ದರ್ಶನ್ ಅವರಿಗೆ ವರದಿ ಒಪ್ಪಿಸೋದು ಮತ್ತು ತನ್ನ ಮಾವಂದಿರ ಬಳಿ ಗ್ರೀನ್ ಸಿಗ್ನಲ್ ಪಡೆದು ಮುಂದಡಿ ಇಡೋದು ಮನೋಜ್ ರೀತಿ. ಹಾಗೆ, `ಟಕ್ಕರ್’ ಸಿನಿಮಾದ ಈ ವರೆಗೆ ಯಾವೆಲ್ಲಾ ಹಂತ ಪೂರೈಸಿದೆ ಮತ್ತು ಮುಂದಿನ ಯೋಜನೆಗಳ ಕುರಿತಾಗಿ ಬಾಸ್‌ಗೆ ವರದಿ ಒಪ್ಪಿಸಿ ಬಂದಿದ್ದಾರಂತೆ. ಹಾಗೆಯೇ, ಚಿತ್ರದ ಕುರಿತಾದ ಎಲ್ಲ ಬೆಳವಣಿಗೆಗಳನ್ನೂ ಸೂಕ್ಷ್ಮವಾಗಿ ತಿಳಿದುಕೊಂಡ ದರ್ಶನ್ `ಟಕ್ಕರ್’ ಟೀಂಗೆ ಬೇಕಿರುವ ಎಲ್ಲ ಮಾರ್ಗದರ್ಶನವನ್ನೂ ನೀಡಿದ್ದಾರೆ ಅನ್ನೋದು ಸದ್ಯ ಕೇಳಿಬಂದಿರುವ ಸುದ್ದಿ. ಸದ್ಯ ಕನ್ನಡದ ಸೂಪರ್ ಸ್ಟಾರ್ ಆಗಿ ಒಂದರ ಹಿಂದೊಂದು ಸಿನಿಮಾಗಳನ್ನು ಮಾಡುತ್ತಾ ಬಿಡುವೇ ಇಲ್ಲದಿದ್ದರೂ ತಮ್ಮ ಕುಟುಂಬದ ಹುಡುಗನ ಸಿನಿಮಾಗೆ ಈ ಮಟ್ಟಿಗೆ ಸಪೋರ್ಟ್ ಮಾಡುತ್ತಿರುವುದು ನಿಜಕ್ಕೂ ಮೆಚ್ಚಬೇಕಾದ ವಿಚಾರ.
ದರ್ಶನ್ ಅವರ ಮನೆ ಹುಡುಗ ಹೀರೋ, ಕಿರುತೆರೆಯಲ್ಲಿ ದೊಡ್ಡ ಹೆಸರು ಮಾಡಿದ ಹುಡುಗಿ ಹೀರೋಯಿನ್ನು, ಡೇವಿಡ್ ವಿಲಿಯಮ್ಸ್ ರಂಥಾ ಕ್ರಿಯಾಶೀಲ ಛಾಯಾಗ್ರಾಹಕ, ಈಟಿವಿ ಶ್ರೀಧರ್, ಸುಮಿತ್ರಾ, ಭಜರಂಗಿ ಲೋಕಿ, ಸಾಧುಕೋಕಿಲಾ  ಸೇರಿದಂತೆ ಅದ್ಭುತ ತಾರಾಗಣದ ಜೊತೆಗೆ `ಒಡೆಯ’ನ ಗೈಡೆನ್ಸು… ಇಷ್ಟೆಲ್ಲಾ ತಮ್ಮ ಎರಡನೇ ಚಿತ್ರಕ್ಕೇ ಪಡೆದಿರೋದು ನಿರ್ಮಾಪಕ ನಾಗೇಶ್ ಕೋಗಿಲು ಪಾಲಿಗೆ ನೂರಾನೆ ಬಲ ಬಂದಂತಾಗಿದೆ.

ರಿಯಾಕ್ಷನ್

ಕನ್ನಡ ಸಿನಿಮಾವನ್ನು ತೆಲುಗು ನಟರು ಮೆಚ್ಚಿದ್ದು ಯಾಕೆ?

Published

on

ರಘುರಾಮ್ ನಿರ್ದೇಶನದ ಮಿಸ್ಸಿಂಗ್ ಬಾಯ್ ಚಿತ್ರ ಮನಮಿಡಿಯುವ ನೈಜ ಘಟನೆಯನ್ನಾಧರಿಸಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಮೊನ್ನೆಯಷ್ಟೇ ನಿರ್ದೇಶಕ ರಘುರಾಮ್ ಈ ಚಿತ್ರದ ಟೀಸರ್‌ಅನ್ನು ಬಿಡುಗಡೆಗೊಳಿಸಿದ್ದರು. ಖಡಕ್ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಅನಾವರಣಗೊಂಡ ಟೀಸರ್ ಯೂಟ್ಯೂಬ್‌ನಲ್ಲಿ ಟ್ರೆಂಡ್ ಸೆಟ್ ಮಾಡಿದೆ. ಇದೀಗ ರಾಜ್ಯದ ಗಡಿ ದಾಟಿ ಪರಭಾಷಾ ಚಿತ್ರರಂಗದ ನಟನಟಿಯರನ್ನೂ ಮೋಡಿಗೀಡುಮಾಡಿದೆ. ಕನ್ನಡದ ಮಿಸ್ಸಿಂಗ್ ಬಾಯ್ ಟೀಸರ್ ಬಗ್ಗೆ ತೆಲುಗು ನಟ ನಟಿಯರೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಟಾಲಿವುಡ್ ನಟಿ ಪ್ರಿಯಾ ರಾಧಾ ಕೃಷ್ಣನ್, ಆರ್ಯ, ಹಂಸ ನಂದಿನಿ, ಶ್ರೀಕಾಂತ್ ಸೇರಿದಂತೆ ಅನೇಕರು ಈ ಟೀಸರ್ ಅನ್ನು ಮೆಚ್ಚಿಕೊಂಡಿದ್ದಾರೆ. ಮಿಸ್ಸಿಂಗ್ ಬಾಯ್ ಚಿತ್ರ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಾಣಲಿದೆ ಎಂಬ ಭವಿಷ್ಯವನ್ನೂ ನುಡಿದಿದ್ದಾರೆ.

ಇನ್ನುಳಿದಂತೆ ಕನ್ನಡದಲ್ಲಿಯೂ ಕೂಡಾ ಈ ಟೀಸರ್ ನಟ ನಟಿಯರು ಮತ್ತು ನಿರ್ದೇಶಕರುಗಳ ಗಮನ ಸೆಳೆದಿದೆ. ಈ ಬಗ್ಗೆ ಕಿಚ್ಚಾ ಸುದೀಪ್ ಸೇರಿದಂತೆ ಅನೇಕರು ಒಳ್ಳೆ ಮಾತುಗಳನ್ನಾಡಿದ್ದಾರೆ. ಕಿಚ್ಚಾ ಸುದೀಪ್ ಕೂಡಾ ಈ ಟೀಸರ್ ಅನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡು ಶುಭ ಹಾರೈಸಿದ್ದಾರೆ. ನಿರ್ದೇಶಕ ಪವನ್ ಒಡೆಯರ್, ಗಣೇಶ್, ಶಿಲ್ಪಾ ಗಣೇಶ್, ರವಿಚಂದ್ರನ್ ಪುತ್ರ ಮನೋರಂಜನ್ ಮೊದಲಾದವರೂ ಟೀಸರ್ ಅನ್ನು ಶೇರ್ ಮಾಡಿಕೊಂಡು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಕರ್ನಾಟಕ ಪೊಲೀಸ್ ಇಲಾಖೆಯ ಹಿಸ್ಟರಿಯಲ್ಲಿಯೇ ಮನಮಿಡಿಯುವ ಘಟನೆಯಾಗಿ ಉಳಿದುಕೊಂಡಿರುವ ನೈಜ ಘಟನೆಯೊಂದನ್ನು ಆಧರಿಸಿದ ಚಿತ್ರ ಮಿಸ್ಸಿಂಗ್ ಬಾಯ್. ಈ ಕಥೆಯನ್ನು ಚಿತ್ರ ಮಾಡಿಯೇ ತೀರಬೇಕೆಂದು ಹೊರಟ ನಿರ್ದೇಶಕ ರಘುರಾಮ್ ಹಲವಾರು ಏಳು ಬೀಳುಗಳನ್ನು ಕಂಡಿದ್ದಾರೆ. ಬಿಡುಗಡೆ ತಡವಾದ ಸಂಕಟವನ್ನು ನುಂಗಿಕೊಂಡು ಮುಂದುವರೆದಿದ್ದಾರೆ. ಅದರಾಚೆಗೂ ಅವರಲ್ಲಿ ಒಂದೊಳ್ಳೆ ಚಿತ್ರ ಮಾಡಿದ ತೃಪ್ತಿ ಇದೆ. ಇನ್ನೇನು ಬಿಡುಗಡೆಯಾಗಲಿರೋ ಈ ಚಿತ್ರದ ಟೀಸರ್ ಬಗ್ಗೆ ಬರುತ್ತಿರೋ ಮೆಚ್ಚುಗೆಯ ಮಾತುಗಳೇ ರಘುರಾಮ್ ಅವರ ಎಲ್ಲ ಕಷ್ಟಗಳನ್ನೂ ಮರೆಸಿವೆ.

ಪರಭಾಷೆಯ ದಿಕ್ಕಿನಿಂದಲೂ ಕೇಳಿ ಬರುತ್ತಿರೋ ಉತ್ತಮ ಅಭಿಪ್ರಾಯ ಈ ಚಿತ್ರ ಬೇರೆ ಭಾಷೆಗಳಿಗೂ ರೀಮೇಕ್ ಆಗಲಿರೋ ಸೂಚನೆಯಂತೆಯೂ ಕಾಣಿಸುತ್ತಿದೆ.

Continue Reading

ರಿಯಾಕ್ಷನ್

ಜಾತಿವ್ಯಾಧಿಯ ಬಗ್ಗೆ ಕಟ್ಟಪ್ಪನ ಖಡಕ್ ಮಾತು!

Published

on

ಕಾವೇರಿ ವಿವಾದ ತಾರಕಕ್ಕೇರಿದ್ದ ಸಂದರ್ಭದಲ್ಲಿ ಉಗ್ರ ತಮಿಳನಂತೆ ಕನ್ನಡಿಗರ ವಿರುದ್ಧ ಕೆಂಡ ಕಾರಿದ್ದವರು ಕಟ್ಟಪ್ಪ ಖ್ಯಾತಿಯ ನಟ ಸತ್ಯರಾಜ್. ಕನ್ನಡಿಗರ ವಿರುದ್ಧ ಈತ ಮಾತಾಡಿದ್ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕನ್ನಡಿಗರೆಲ್ಲ ಈತನಿಗೆ ಉಗಿದಿದ್ದರು. ಆದರೆ ಉಗ್ರ ತಮಿಳು ಭಾಷಾಭಿಮಾನ ಹೊಂದಿರೋ ಕಟ್ಟಪ್ಪ ಈಗ ಭಾರತವನ್ನು ಕೊರೆದು ತಿನ್ನುತ್ತಿರೋ ಜಾತಿವಾದದ ಬಗ್ಗೆ ಸ್ಪಷ್ಟವಾದ ಮಾತಾಡಿದ್ದಾರೆ. ಜಾತಿ ವ್ಯವಸ್ಥೆಯ ಬಗೆಗಿನ ಸೂಕ್ಷ್ಮ ಒಳನೋಟಗಳಿರೋ ಸತ್ಯರಾಜ್ ಅವರ ಮಾತಿನ ವೀಡಿಯೋ ಕೂಡಾ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೂಲಕ ಕನ್ನಡ ವಿರೋಧಿಯೆಂದು ಬ್ರ್ಯಾಂಡ್ ಆಗಿದ್ದ ಸತ್ಯರಾಜ್ ಅವರ ಪ್ರೌಢಿಮೆಯ ಬಗೆಗೆ ವ್ಯಾಪಕ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ.

ಶೃತಿ ಟಿವಿ ಪ್ರಸಾರ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ. ಜಾತಿ ವ್ಯವಸ್ಥೆಯ ಕರಾಳತೆಯ ಬಗ್ಗೆ ಸತ್ಯರಾಜ್ ತಮ್ಮ ಮಾತುಗಳಲ್ಲಿ ಬಿಚ್ಚಿಟ್ಟಿದ್ದಾರೆ. `ಇಂಡಿಯಾ ದೇಶದಲ್ಲಿ ಜಾತಿ ಎನ್ನುವುದು ಇನ್ನೂ ಇದೆಯೇ ಎಂದು ಹಲವಾರು ಜನರು ಕೇಳುತ್ತಾರೆ. ಇವರಿಗೆ ನಾನು ಒಂದೇ ಒಂದು ಮಾತು ಹೇಳುತ್ತೇನೆ. ಲೈಲಾ-ಮಜ್ನು ಪ್ರೀತಿಯ ಕತೆ ಇದೆ, ಅದರಲ್ಲಿ ಲೈಲಾಳನ್ನು ಮಜ್ನು ಜೀವಕ್ಕಿಂತ ಪ್ರೀತಿಸುವ ದೃಶ್ಯ ಬರುತ್ತದೆ. ಅದಕ್ಕೆ ಹಲವಾರು ಬಿಲ್ಡಪ್ ಗಳನ್ನು ನೀಡಲಾಗುತ್ತದೆ. ಇದನ್ನು ನೋಡಿದವರು ಹೇಳುತ್ತಾರೆ, ಮಜ್ನು ಹೇಳಿದಷ್ಟು ಲೈಲಾ ಚೆನ್ನಾಗಿಲ್ವಲ್ಲಾ ಎಂದು. ನೀವು ಲೈಲಾಳ ಚಂದವನ್ನು ಮಜ್ನು ಕಣ್ಣಲ್ಲಿ ನೋಡಿದರೆ ಮಾತ್ರ ನಿಮಗೆ ಲೈಲಾಳ ಚಂದ ಕಾಣಿಸಲು ಸಾಧ್ಯ. ಹಾಗೆಯೇ ಇಂಡಿಯಾದಲ್ಲಿನ ಜಾತಿ ವ್ಯವಸ್ಥೆಯನ್ನು ತಿಳಿದುಕೊಳ್ಳುವುದಕ್ಕೆ, ಅನುಭವಿಸುವುದಕ್ಕೆ ನಿಮಗೆ ಅಂಬೇಡ್ಕರ್ ಅವರ ಕಣ್ಣಿನಿಂದ ನೋಡಿದರೆ ಮಾತ್ರ ಸಾಧ್ಯ. ನೀವು ನಿಮ್ಮ ಕಣ್ಣಿನಿಂದ ನೋಡಿದರೆ ನಿಮಗೆ ತಿಳಿಯಲು ಸಾಧ್ಯವಿಲ್ಲ. ಯಾಕೆಂದರೆ, ನೀವು ಆರಾಮದಲ್ಲಿರುತ್ತೀರಿ, ಇಂತಹದ್ದನ್ನು ನೀವು ಅನುಭವಿಸಿರುವುದಿಲ್ಲವಲ್ಲ’.

ನಾವು ಮಲ ಪರೀಕ್ಷೆಯನ್ನು ಮಾಡಬೇಕಾದರೆ, ಡಾಕ್ಟರ್ ಗೆ ಅದನ್ನು ಹೇಗೆ ನೀಡುವುದು ಎಂದು ಹಿಂದಿನ ದಿನವೇ ಬಹಳಷ್ಟು ಯೋಚನೆ ಮಾಡುತ್ತೇವೆ. ಹಾಗಿದ್ದರೆ, ಇನ್ನೊಬ್ಬರ ಮಲವನ್ನು ಹೊರಬೇಕಾದರೆ, ಅದು ಎಷ್ಟೊಂದು ಕಷ್ಟದ ಕೆಲಸ ಎನ್ನುವುದನ್ನು ನೀವೇ ಯೋಚಿಸಿ. ಶೌಚವನ್ನು ಕ್ಲೀನ್ ಮಾಡಲು ಮೆಶಿನ್ ಕಂಡು ಹಿಡಿಯ ಬೇಕು ಎಂದು ಹೇಳುತ್ತಲೇ ಇರುತ್ತಾರೆ. ಈ ಮೆಶಿನ್ ಸುಲಭವಾಗಿ ಕಂಡು ಹಿಡಿಯ ಬಹುದು. ಇದು ಯಾವಾಗ ಸಾಧ್ಯ ಎಂದರೆ, ಇದಕ್ಕೆ ಒಂದು ಕಾನೂನನ್ನು ತರಬೇಕು. ಒಂದೊಂದು ವಾರ, ಒಂದೊಂದು ಜಾತಿಯವರು ಮಲದ ಗುಂಡಿಗೆ ಇಳಿದು ಕ್ಲೀನ್ ಮಾಡಬೇಕು. ಇಂತಹದ್ದು ನಡೆದರೆ, ಆಗಲೇ ಸಾವಿರ ವಿಧದ ಮೆಶಿನನ್ನು ಕಂಡು ಹಿಡಿಯಬಹುದು’.

ಬೇರೆ ಗ್ರಹದಲ್ಲಿ ನೀರು ಇದೆಯೇ? ಮುಂದಿನ ದಿನಗಳಲ್ಲಿ ಅಲ್ಲಿಯೂ ಹೋಗಿ ಮನುಷ್ಯ ಬದುಕ ಬಹುದೇ? ಎನ್ನುವ ಕಾರಣಕ್ಕಾಗಿ ಅಲ್ಲಿನ ವಾತಾವರಣ ಸರಿ ಇದೆಯೇ ಎನ್ನುವುದನ್ನು ನೋಡಲು ವಿಜ್ಞಾನಿಗಳು ಹಲವು ಉಪಗ್ರಹಗಳನ್ನು ಕಳುಹಿಸಿದ್ದಾರೆ. ಆದರೆ, ಅದೇ ಸ್ಯಾಟ್ ಲೈಟ್ ಗಳನ್ನು ಭೂಮಿಯಲ್ಲಿಯೇ ಸಂಚರಿಸಲು ಬಿಟ್ಟು ಇಲ್ಲಿ ಮನುಷ್ಯ ಬದುಕುವ ವಾತಾವರಣ ಇದೆಯೇ ಎನ್ನುವುದನ್ನು ಮೊದಲು ನೋಡಿ, ಇಂಡಿಯಾದಲ್ಲಿ ಮನುಷ್ಯ ಬದುಕಲು ಸಾಧ್ಯ ಇದೆಯೇ ಎನ್ನುವುದನ್ನು ಮೊದಲು ನೋಡಿ. ಒಂದು ವೇಳೆ ಹಾಗೂ ಬೇರೆ ಗ್ರಹಕ್ಕೆ ಮನುಷ್ಯರನ್ನು ಕೊಂಡು ಹೋಗಿ ಬಿಟ್ಟರೂ, ನಮ್ಮವರನ್ನು ಮಾತ್ರ ಅಲ್ಲಿ ಬಿಡಬೇಡಿ. ಅಲ್ಲಿಯೂ ಈ ಜಾತಿಯನ್ನು ಕೊಂಡು ಹೋಗಿ ಬಿತ್ತುತ್ತಾರೆ. ಈ ಮೂಲಕ ದೇಶವನ್ನು ಕೆಡಿಸಿದ್ದೇ ಅಲ್ಲದೇ, ಯಾವೆಲ್ಲ ಗ್ರಹಗಳಿವೆಯೋ ಅವೆಲ್ಲವನ್ನೂ ಕೆಡಿಸಿಬಿಡುತ್ತಾರೆ’ ಎಂಬುದು ಸತ್ಯರಾಜ್ ಮಾತಿನ ಸಂಪೂರ್ಣ ಸಾರಾಂಶ!

ದೇಶದಲ್ಲಿ ಬಡತನವೇ ಇಲ್ಲ ಎಂಬಂಥಾ ಭ್ರಮೆ ಬಿತ್ತುವ ಡಿಜಿಟಲ್ ದೌಲಿನ ಕಣ್ಣುಗಳೇ ದೇಶದ ತುಂಬಾ ತುಂಬಿವೆ. ಇಂಥವರ ಪಾಲಿಗೆ ಜಾತಿ ವ್ಯವಸ್ಥೆ, ಆ ಅವಮಾನಗಳೆಲ್ಲ ಎಂದೋ ನಡೆದಿದ್ದವುಗಳು. ಈಗ ಜಾತಿ ವ್ಯವಸ್ಥೆ ಎಲ್ಲಿದೆ ಎಂಬ ಸಿನಿಕ ಎಲಿಮೆಂಟುಗಳಿಗೆ ಸತ್ಯರಾಜ್ ಅವರ ಸ್ಪಷ್ಟ ಮಾತುಗಳು ಸತ್ಯದರ್ಶನ ಮಾಡಿಸುವಂತಿವೆ.

 

ಅನುವಾದ ಭಾಗ : ಪಿ. ಆರಡಿಮಲ್ಲಯ್ಯ ಕಟ್ಟೇರ

 

Continue Reading

ರಿಯಾಕ್ಷನ್

ಪವರ್‌ಸ್ಟಾರ್ ಮಾಡಿದ ಮೊದಲ ಟ್ವೀಟ್ ಯಾವುದು?

Published

on

ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಹವಾ ಹೊಂದಿರುವ ಕನ್ನಡ ಸ್ಟಾರ್‌ಗಳಲ್ಲಿ ಪುನೀತ್ ರಾಜ್‌ಕುಮಾರ್ ಕೂಡಾ ಮುಂಚೂಣಿಯಲ್ಲಿದ್ದಾರೆ. ಅವರ ಫೇಸ್‌ಬುಕ್ ಅಕೌಂಟ್, ಫ್ಯಾನ್ ಪೇಜುಗಳ ಕ್ರೇಜ಼ು ಸಹ ಜೋರಾಗಿದೆ. ಆದರೆ ಅದೇಕೋ ಪುನೀತ್ ಟ್ವಿಟರ್ ಖಾತೆಯನ್ನು ಮಾತ್ರ ತೆರೆದಿರಲಿಲ್ಲ. ಇದೀಗ ಅದಕ್ಕೂ ಕಾಲ ಕೂಡಿ ಬಂದಿದೆ!

ಅಭಿಮಾನಿಗಳ ಅಭಿಲಾಶೆಯಂತೆ ಪುನೀತ್ ರಾಜ್‌ಕುಮಾರ್ ಅವರು ಟ್ವಿಟರ್ ಖಾತೆ ಆರಂಭಿಸಿದ್ದಾರೆ. ಅದಾಗಲೇ ಗಣನೀಯ ಸಂಖ್ಯೆಯಲ್ಲಿ ಅವರಿಗೆ ಫಾಲೋವರ್ಸ್ ಕೂಡಾ ಜಮೆಯಾಗಿದ್ದಾರೆ. ಪುನೀತ್ ಟ್ವಿಟರ್‌ಗೆ ಅಡಿಯಿರಿಸುತ್ತಲೇ ಅವರು ಯಾರನ್ನು ಫಾಲೋ ಮಾಡುತ್ತಾರೆ, ಅವರೇನು ಟ್ವೀಟ್ ಮಾಡುತ್ತಾರೆಂಬ ಬಗ್ಗೆ ಅಭಿಮಾನಿಗಳೆಲ್ಲ ಕುತೂಹಲಗೊಂಡಿದ್ದರು. ಆದರೆ ಖಾತೆ ತೆರೆದು ತಿಂಗಳಾಗುತ್ತಾ ಬಂದಿದ್ದರೂ ಒಂದೇ ಒಂದು ಟ್ವೀಟ್ ಕೂಡಾ ಜಮೆಯಾಗಿರಲಿಲ್ಲ. ಈಗ ಪವರ್ ಸ್ಟಾರ್ ಕಡೆಯಿಂದ ಮೊದಲ ಟ್ವೀಟ್ ಅನಾವರಣಗೊಂಡಿದೆ!

ಪುನೀತ್ ಮೊದಲ ಟ್ವೀಟ್ ಆಗಿ ಕವಲುದಾರಿ ಚಿತ್ರದ ಟೀಸರ್ ಅನ್ನು ಹಾಕಿಕೊಂಡಿದ್ದಾರೆ. ಅದಕ್ಕೆ ವ್ಯಾಪಕ ಪ್ರತಿಕ್ರಿಯೆಗಳೂ ಬಂದಿವೆ. ರಿಷಿ ಅಭಿನಯದ ಕವಲುದಾರಿ ಚಿತ್ರ ಪುನೀತ್ ಅವರ ಪಿಆರ್‌ಕೆ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗಿರೋ ಮೊದಲ ಚಿತ್ರ. ಆದ್ದರಿಂದ ಈ ಚಿತ್ರದ ಬಗ್ಗೆ ಗಂಭೀರವಾಗಿ ಗಮನ ಹರಿಸಿರುವ ಪುನೀತ್ ತಮ್ಮ ಟ್ವಿಟರ್ ಖಾತೆಯನ್ನೂ ಕೂಡಾ ಅಭಿಮಾನಿಗಳಿಗೆ ಅದರ ಅಪ್‌ಡೇಟ್ಸ್ ಕೊಡುವುದಕ್ಕಾಗಿಯೇ ಬಳಸಿಕೊಂಡಿದ್ದಾರೆ.

ಈಗಾಗಲೇ ಪುನೀತ್ ಅವರ ಪಿಆರ್‌ಕೆ ಆಡಿಯೋ ಕಂಪೆನಿ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಈ ಸಂಸ್ಥೆಯಿಂದ ಬಿಡುಗಡೆಯಾದ ಹಾಡುಗಳು ಹಿಟ್ ಆಗುತ್ತವೆ ಎಂಬ ನಂಬಿಕೆಯೂ ಬೆಳೆದುಕೊಂಡಿದೆ. ಪುನೀತ್ ಅವರ ಟ್ವಿಟರ್ ಅಕೌಂಟ್ ಕೂಡಾ ತಮ್ಮ ಬ್ಯಾನರಿನಡಿಯಲ್ಲಿ ಮೂಡಿ ಬರುವ ಚಿತ್ರಗಳ ಬಗ್ಗೆ ಮಾಹಿತಿ ನೀಡಲು ಬಳಸಿಕೊಳ್ಳು ಮನಸು ಮಾಡಿದಂತಿದೆ.

Continue Reading

Trending

Copyright © 2018 Cinibuzz