One N Only Exclusive Cine Portal

ಟಕ್ಕರ್ ಮನೋಜ್‌ಗೆ ಇಂದು ಹುಟ್ಟುಹಬ್ಬ!

ಕಂಡ ಕನಸು, ಸವೆಸಿದ ಹಾದಿಯೆಲ್ಲ ಸಾರ್ಥಕ ಅನ್ನಿಸೋ ಘಳಿಗೆಯಲ್ಲೇ ಹುಟ್ಟಿದ ದಿನವನ್ನು ಎದುರುಗೊಳ್ಳೋದಿದೆಯಲ್ಲಾ? ಹುಟ್ಟಿದ ದಿನವೆಂಬುದು ಹಬ್ಬ ಅನ್ನಿಸೋದು ಅಂಥಾ ಘಳಿಗೆಯಲ್ಲಿಯೇ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುಟುಂಬದ ಮನೋಜ್ ಪಾಲಿಗಿದು ಅಕ್ಷರಶಃ ಹುಟ್ಟಿದ ಹಬ್ಬ!

ತಮ್ಮ ಮಾವ ದರ್ಶನ್ ಅವರ ಪ್ರಭಾವದಿಂದಲೇ ಬೆಳೆದು ಬಂದು ಓರ್ವ ಸಾಮಾನ್ಯ ಹುಡುಗನಂತೆಯೇ ಬಣ್ಣದ ಲೋಕದ ಕನಸು ಹೊತ್ತು ಅಡ್ಡಾಡಿದವರು ಮನೋಜ್. ಅಖಂಡ ಎಂಟು ವರ್ಷಗಳಿಂದ ನಾಯಕ ನಟನಾಗೋ ಆಕಾಂಕ್ಷೆಯಿಂದ ಆ ಹಾದಿಯಲ್ಲಿ ಛಲ ಬಿಡದೇ ಪ್ರಯತ್ನದಲ್ಲಿದ್ದ ಅವರು ಸಿಕ್ಕ ಅವಕಾಶಗಳನ್ನೆಲ್ಲ ಚೆಂದಗೆ ಬಳಸಿಕೊಳ್ಳುತ್ತಾ ಇದೀಗ ಹುಟ್ಟು ಹಬ್ಬದ ಘಳಿಗೆಯಲ್ಲಿ ಪೂರ್ಣಪ್ರಮಾಣದ ನಾಯಕನಾಗಿ ಹೊರ ಹೊಮ್ಮೋ ಘಳಿಗೆಗೆ ಮುಹೂರ್ತ ಫಿಕ್ಸಾಗಿದೆ.


ದರ್ಶನ್ ಅವರ ಸೋದರಳಿಯ ಮನೋಜ್ ಸಿನಿಮಾ ಇಷ್ಟರಲ್ಲೇ ಲಾಂಚ್ ಆಗುತ್ತೆ ಅಂತೊಂದು ಸುದ್ದಿ ತಿಂಗಳೊಪ್ಪತ್ತಿನಿಂದ ಗಾಂಧಿನಗರದ ತುಂಬಾ ಹರಿದಾಡುತ್ತಿತ್ತು. ಈ ಚಿತ್ರದ ನಿರ್ದೇಶಕರು ಯಾರು ಅನ್ನೋದನ್ನು ನಾವೇ ತಿಳಿಸಿದ್ದೆವು. ಇದೀಗ ಆ ಚಿತ್ರದ ಟೈಟಲ್ ಸೇರಿದಂತೆ ಎಲ್ಲವೂ ಪಕ್ಕಾ ಆಗಿದೆ!


ಅಂದಹಾಗೆ ಮನೋಜ್ ಅವರ ಮೊದಲ ಚಿತ್ರ ರನ್ ಆಂಟನಿ ಸಿನಿಮಾ ನಿರ್ದೇಶನ ಮಾಡಿದ್ದ ರಘು ಶಾಸ್ತ್ರಿ ನಿರ್ದೇಶನದಲ್ಲಿ ಮೂಡಿ ಬರಲಿದೆ. ಈ ಚಿತ್ರಕ್ಕೆ ‘ಟಕ್ಕರ್ ಎಂಬ ಶೀರ್ಷಿಕೆಯನ್ನೂ ಅಂತಿಮಗೊಳಿಸಲಾಗಿದೆ. ನಾಯಕ ಮನೋಜ್ ಹುಟ್ಟುಹಬ್ಬಕ್ಕೆ ಚಿತ್ರ ತಂಡ ಇದಿಷ್ಟು ಮಾಹಿತಿಯನ್ನು ಬಿಟ್ಟುಕೊಟ್ಟಿದೆ. ಉಳಿಕೆ ತಾರಾಂಗಣ, ತಾಂತ್ರಿ ವರ್ಗದ ವಿವರ ಇಷ್ಟರಲ್ಲೇ ಜಾಹೀರಾಗಲಿದೆ!


ಈ ಮೂಲಕ ಈ ಸಲದ ಹುಟ್ಟುಹಬ್ಬ ಮನೋಜ್ ಪಾಲಿಗೆ ವಿಶೇಷ. ಬಹು ಕಾಲದ ಕನಸು ನನಸಾದ ಖುಷಿಯಲ್ಲಿರೋ ಮನೋಜ್ ಅವರಿಗೆ ಭರ್ಜರಿಯಾದ ಗೆಲುವು ಸಿಕ್ಕಿ, ಕನ್ನಡ ಚಿತ್ರರಂಗದಲ್ಲಿ ಮುಖ್ಯ ನಾಯಕರ ಸಾಲಿನಲ್ಲಿ ನೆಲೆಗೊಳ್ಳುವಂತಾಗಲೆಂಬುದು ನಮ್ಮ ಹಾರೈಕೆ…

Leave a Reply

Your email address will not be published. Required fields are marked *


CAPTCHA Image
Reload Image