One N Only Exclusive Cine Portal

ನಂಜುಂಡಿ ಕಲ್ಯಾಣದ ಹುಡುಗ ನಡೆದುಬಂದ ಹಾದಿ…

ಯಾವ ಪಾತ್ರವಾದರೂ ಸರಿ, ತಾನು ನಟನಾಗಿ ರೂಪುಗೊಳ್ಳಬೇಕೆಂಬ ಹಂಬಲದಿಂದ ಮುಂದುವರೆಯುತ್ತಲೇ ಹೀರೋ ಆದವರು ತನುಷ್. ಈ ವಾರ ತೆರೆ ಕಾಣಲಿರುವ ನಂಜುಂಡಿ ಕಲ್ಯಾಣ ಚಿತ್ರದ ನಾಯಕ ಪಾತ್ರದಲ್ಲಿ ಮಿಂಚಿರುವ ತನುಷ್ ನಾಯಕ ನಟನಾಗಿ ನೆಲೆ ನಿಲ್ಲಲು ಬೇಕಾದ ಪ್ರತಿಭೆ, ವಿನಯಗಳನ್ನೆಲ್ಲ ಮೈಗೂಡಿಸಿಕೊಂಡಿರುವವರು.

ಈ ಹಿಂದೆ ತೆರೆ ಮೇಲೆ ಅನೇಕ ಸಲ ಕಾಣಿಸಿಕೊಂಡಿದ್ದರೂ ತನುಷ್ ಪ್ರವರ್ಧಮಾನಕ್ಕೆ ಬಂದಿದ್ದ ಮಡಮಕ್ಕಿ ಚಿತ್ರದ ಮೂಲಕ. ಮಡಮಕ್ಕಿ ಚಿತ್ರದ ರಗಡ್ ಲುಕ್ಕಿನ ಪಾತ್ರದಲ್ಲಿ ಅಭಿನಯದ ಮೂಲಕವೇ ಗಮನ ಸೆಳೆದಿದ್ದ ಈ ಹುಡುಗ ಚಿತ್ರರಂಗದಲ್ಲಿ ನೆಲೆ ನಿಲ್ಲುತ್ತಾನೆಂದು ಸಾಮಾನ್ಯ ಪ್ರೇಕ್ಷಕರೂ ಮಾತಾಡಿಕೊಂಡಿದ್ದರು. ಆ ನಿರೀಕ್ಷೆಯನ್ನು ನಿಜವಾಗಿಸುವಂತೆ ತನುಷ್ ಇದೀಗ ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರನ್ನು ಮುಖಾಮುಖಿಯಾಗೋ ಖುಷಿಯಲ್ಲಿದ್ದಾರೆ.

ಬೆಂಗಳೂರಿನ ಭಾಗವಾಗಿರುವ ದಾಸನಪುರದವರಾದ ತನುಷ್ ಕಾಲೇಜು ದಿನಗಳಲ್ಲಿಯೇ ನಟನಾಗಬೇಕೆಂಬ ಸ್ಪಷ್ಟ ಗುರಿ ಹೊಂದಿದ್ದವರು. ಆಚಾರ್ಯ ಕಾಲೇಜಿನಲ್ಲಿ ೨೦೦೯ರಲ್ಲಿ ಡಿಗ್ರಿ ಮುಗಿಸಿಕೊಂಡ ಅವರು ಬೇರ‍್ಯಾವ ಆಲೋಚನೆಯನ್ನೂ ಮಾಡದೆ ಸೀದಾ ಬಾಂಬೆಗೆ ಹೋಗಿ ರೋಷನ್ ಖನೋಜಾದಲ್ಲಿ ನಟನಾ ತರಬೇತಿಯ ಡಿಪ್ಲಮೋಗೆ ಸೇರಿಕೊಂಡಿದ್ದರು. ಹಾಗೆ ನಟನೆ ಕಲಿಯುತ್ತಿರುವಾಗಲೇ ಸಿನಿಮಾ ಒಂದರಲ್ಲಿನ ಆಫರಿಗೆ ಓಗೊಟ್ಟು ತನುಷ್ ಬೆಂಗಳೂರಿಗೆ ಬಂದರಾದರೂ ಆ ಪ್ರಾಜೆಕ್ಟು ಟೇಕಾಫ್ ಆಗಲೇ ಇಲ್ಲ.

ಹಾಗಂತ, ತನುಷ್ ದೃತಿಗೆಡಲಿಲ್ಲ. ಸಣ್ಣ ಪುಟ್ಟ ಪಾತ್ರಗಳ ಮೂಲಕವೇ ನಟನಾಗಿ ಪಳಗುವ ನಿರ್ಧಾರ ಕೈಗೊಂಡು ಅದಕ್ಕಾಗಿ ಪ್ರಯತ್ನಿಸಲಾರಂಭಿಸಿದ್ದರು. ತಿಪಟೂರು ರಘು ಅವರ ಬಳಿಯಲ್ಲಿಯೂ ನಟನಾ ತರಬೇತಿ ಕ್ಲಾಸಿಗೆ ಹೋಗುತ್ತಿದ್ದಾಗಲೇ ತನುಷ್‌ಗೆ ಮತ್ತೆ ಮುಂಗಾರು ಚಿತ್ರದ ಪುಟ್ಟ ಪಾತ್ರವೊಂದು ಸಿಕ್ಕಿತ್ತು. ಅದು ಅವರು ಬಣ್ಣ ಹಚ್ಚಿದ ಮೊದಲ ಚಿತ್ರ!

ಆ ಬಳಿಕ ಅಯೋಧ್ಯಾಪುರ, ನಮಸ್ಕಾರಂ ಮುಂತಾದ ಚಿತ್ರಗಳಲ್ಲಿ ತನುಷ್ ಅವರಿಗೆ ಸಣ್ಣಪುಟ್ಟ ಪಾತ್ರಗಳು ಸಿಕ್ಕಿದ್ದವು. ಆ ನಂತರದಲ್ಲಿ ಅಲೆ ಚಿತ್ರದಲ್ಲಿ ಮೇನ್ ಲೀಡ್ ರೋಲ್ ಅವರನ್ನು ಅರಸಿ ಬಂದಿತ್ತು. ನಮಕ್ ಹರಾಮ್ ಚಿತ್ರದಲ್ಲಿ ಅತಿಥಿ ಪಾತ್ರವೂ ಸಿಕ್ಕಿತ್ತು. ಹೀಗೆ ಹಂತ ಹಂತವಾಗಿ ಬೆಳೆದು ಬಂದ ತನುಷ್ ಮಡಮಕ್ಕಿ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಹೊರ ಹೊಮ್ಮಿದರು. ನಂಜುಂಡಿ ಕಲ್ಯಾಣ ಚಿತ್ರ ಹುಟ್ಟಿಕೊಂಡಿದ್ದೂ ಕೂಡಾ ಮಡಮಕ್ಕಿ ಚಿತ್ರದ ಮೂಲಕವೇ ಎಂಬುದು ಅಸಲೀ ವಿಶೇಷ.

ಮಡಮಕ್ಕಿ ಚಿತ್ರದಲ್ಲಿ ರಾಜೇಂದ್ರ ಕಾರಂತ್ ಅವರೂ ಒಂದು ಪಾತ್ರ ಮಾಡಿದ್ದರಲ್ಲಾ? ಆ ಸಂದರ್ಭದಲ್ಲಿ ತನುಷ್‌ಗೆ ಅವರ ಪರಿಚಯವಾಗಿತ್ತು. ಮಡಮಕ್ಕಿ ಚಿತ್ರದ ನಂತರವೂ ರಾಜೇಂದ್ರ ಕಾರಂತ್ ಅವರ ಜೊತೆ ಹಲವಾರು ನಾಟಕಗಳಲ್ಲಿ ತನುಷ್ ಅಭಿನಯಿಸಿದ್ದರಂತೆ. ಆ ಹಂತದಲ್ಲಿಯೇ ನಂಜುಂಡಿ ಕಲ್ಯಾಣ ಕಥೆ ಹುಟ್ಟಿಕೊಂಡು ರಾಜೇಂದ್ರ ಕಾರಂತ್ ನಿರ್ದೇಶಕರಾಗಿದ್ದಾರೆ. ತನುಷ್ ಕಾಮಿಡಿ ಟಚ್ಚಿನ ನಾನಾ ಶೇಡುಗಳಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ.

ಇಂಥಾದ್ದೇ ಪಾತ್ರ ಬೇಕೆಂಬ ಯಾವ ಬೇಡಿಕೆಯೂ ಇಲ್ಲದ ತನುಷ್ ಅವರದ್ದು ಪರಿಪೂರ್ಣ ನಟನಾಗಿ ರೂಪುಗೊಳ್ಳಬೇಕೆಂಬ ಉತ್ಕಟ ಹಂಬಲ. ಆ ಕಾರಣದಿಂದಲೇ ಅವರು ಗಮನ ಸೆಳೆಯುತ್ತಾರೆ. ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಅವರಿಗೆ ಮತ್ತಷ್ಟು ಅವಕಾಶಗಳು ಸಿಗುವಂತಾಗಲೆಂಬ ಹಾರೈಕೆ ನಮ್ಮದು…

Leave a Reply

Your email address will not be published. Required fields are marked *


CAPTCHA Image
Reload Image