One N Only Exclusive Cine Portal

ಭ್ರಷ್ಟಾಚಾರ ವಿರೋಧಿ ಹಜಾರೆ ಉಪ್ಪಿಯನ್ನು ಭೇಟಿಯಾಗಿದ್ದೇಕೆ?

ರಿಯಲ್ ಸ್ಟಾರ್ ಉಪೇಂದ್ರ ಸ್ಥಾಪಿಸಿರುವ ಪ್ರಜಾಕೀಯ ಪಕ್ಷ ಕರ್ನಾಟಕದಾಚೆಗೂ ಸದ್ದು ಮಾಡುತ್ತಿದೆ. ಉಪ್ಪಿಯ ಆಲೋಚನೆಗಳು ಅವರ ಸಿನಿಮಾ ಸ್ಕ್ರಿಪ್ಟಿನಂತೆಯೇ ಆಕರ್ಷಕವಾಗಿದೆ. ಆದರೆ, ಅದನ್ನು ವಾಸ್ತವವಾಗಿ ಒಪ್ಪಿಕೊಳ್ಳೋದು ಕಷ್ಟ ಎಂಬಂಥಾ ವಿರೋಧಾಭಾಸಗಳ ನಡುವೆಯೂ ಪ್ರಜಾಕೀಯ ಒಂದಷ್ಟು ಸಂಚಲನ ಸೃಷ್ಟಿಸಿರೋದಂತೂ ಸತ್ಯ. ಇದೀಗ ಖುದ್ದು ಅಣ್ಣಾ ಹಜಾರೆಯವರೇ ಉಪೇಂದ್ರನ್ನು ಭೇಟಿಯಾಗಿ ಬೆನ್ನು ತಟ್ಟುವ ಮೂಲಕ ಪ್ರಜಾಕೀಯದ ಕೆಲಸ ಕಾರ್ಯಗಳಿಗೆ ಮತ್ತಷ್ಟು ಹುಮ್ಮಸ್ಸು ಬಂದಂತಾಗಿದೆ!

ಭ್ರಷ್ಟಾಚಾರ ವಿರೋಧಿ ಹೋರಾಟ ಹುಟ್ಟು ಹಾಕುವ ಮೂಲಕ ಸದ್ದು ಮಾಡಿ, ನರೇಂದ್ರ ಮೋದಿಯವರು ಪ್ರಧಾನಿಯಾಗುತ್ತಲೇ ವಯೋಸಹಜ ದಣಿವು ನೀಗಿಕೊಂಡು ರಿಲ್ಯಾಕ್ಸ್ ಮೂಡಿನಲ್ಲಿದ್ದವರು ಅಣ್ಣಾ ಹಜಾರೆ. ಅವರೀಗ ಏಕಾಏಕಿ ಉಪೇಂದ್ರ ಅವರನ್ನು ಭೇಟಿಯಾಗಿದ್ದಾರೆ. ಜಾತಿ ಧರ್ಮ ಮುಂತಾದ ಸಿದ್ಧ ಸೂತ್ರಗಳಾಚೆಗೆ ಹೊಸದೇನನ್ನೋ ಅರಸಿ ಹೊರಟಂತಿರೋ ಪ್ರಜಾಕೀಯದ ಅಜೆಂಡಾಗಳನ್ನು ಮೆಚ್ಚಿಕೊಂಡು ಮಾತಾಡಿದ್ದಾರೆ. ಜೊತೆಗೆ ಪ್ರಜಾಕೀಯದ ಚುನಾವಣಾ ನಡಾವಳಿಯಲ್ಲಿಯೂ ಸಲಹೆ ಸಹಕಾರ ನೀಡುತ್ತಾ ಜೊತೆಗಿರೋ ಭರವಸೆಯನ್ನೂ ಕೂಡಾ ನೀಡಿದ್ದಾರಂತೆ.

ಅಣ್ಣಾ ಹಜಾರೆ ಮತ್ತು ಉಪೇಂದ್ರ ಅವರ ನಡುವೆ ಸುದೀರ್ಘವಾದೊಂದು ಚರ್ಚೆ ನಡೆದಿದೆ. ಈ ಸಂದರ್ಭದಲ್ಲಿ ಅಣ್ಣ ಉಪ್ಪಿಗೆ ಹಲವಾರು ಆದರ್ಶಗಳನ್ನು ಬೋಧಿಸಿದ್ದಾರೆ. ಈಗ ಚಾಲ್ತಿಯಲ್ಲಿರುವ ರಾಜಕೀಯ ಪಕ್ಷಗಳ ಪಟ್ಟುಗಳನ್ನು ಪ್ರದರ್ಶಿಸದೇ ಭಿನ್ನವಾದ ಹಾದಿಯಲ್ಲಿಯೇ ಮುಂದುವರೆಯುವಂತೆಯೂ ಸಲಹೆ ನೀಡಿದ್ದಾರೆ. ಅದೇನೇ ಬಂದರೂ ಬದಲಾಗದೆ ಪ್ರಜಾಪ್ರಭುತ್ವದ ಆಶಯದಂತೆ ಪ್ರಜೆಗಳ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುವಂತೆ ಕಿವಿಮಾತು ಹೇಳಿದ್ದಾರೆ. ಪ್ರಜಾಕೀಯದ ಮೂಲಕ ಸಚ್ಚಾರಿತ್ರ್ಯ ಹೊಂದಿರುವವರೇ ಆಯ್ಕೆಯಾಗುವಂತಾಗಲಿ ಎಂದು ಹಾರೈಸಿರುವ ಅಣ್ಣಾ ಹಜಾರೆಯವರು ಕರ್ನಾಟಕದಿಂದ ಪ್ರಜಾಕೀಯ ಪಕ್ಷದಿಂದ ಕಣಕ್ಕಿಳಿಯಲಿರೋ ಅಭ್ಯರ್ಥಿಗಳಿಗೆ ತಾವೇ ಸ್ವಯಂಪ್ರೇರಣೆಯಿಂದ ಮಾರ್ಗದರ್ಶನ ನೀಡೋದಾಗಿಯೂ ಭರವಸೆ ನೀಡಿದ್ದಾರೆ.

ಅದೇನೇ ತಕರಾರುಗಳಿದ್ದರೂ ಎಲ್ಲಾ ಮಾಮೂಲೆಂಬ ಮತಿಭ್ರಮಣೆಯ ಸ್ಥಿತಿಯಲ್ಲಿ ಮರೆತು ನಿಂತಿದ್ದ ಭಾರತೀಯ ಮನಸುಗಳನ್ನು ಒಂದು ಹಂತದಲ್ಲಿ ಭ್ರಷ್ಟಾಚಾರದ ವಿರುದ್ಧ ಬಂಡೇಳುವಂತೆ ಪ್ರೇರೇಪಿಸಿದ್ದವರು ಅಣ್ಣಾ ಹಜಾರೆ. ಆದರೆ ಅಣ್ಣ ಆ ನಂತರದ ವಿದ್ಯಮಾನಗಳಲ್ಲಿ ತೀರಾ ಗೊಂದಲದಲ್ಲಿ ಮಿಂದೆದ್ದಿದ್ದರು. ರಾಮ್‌ಲೀಲಾ ಮೈದಾನದಲ್ಲಿ ಭ್ರಷ್ಟಾಚಾರದ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸಿದ್ದ ಅಣ್ಣ ನಿತ್ರಾಣವಾಗಿ ಮಲಗಿರುವಾಗಲೇ ಮೆಲ್ಲಗೆ ಎದ್ದು ಹೋದ ಕೇಜ್ರಿವಾಲ್ ದೆಹಲಿ ಸಿಎಂ ಆಗುವಲ್ಲಿಗೆ ಭ್ರಷ್ಟಾಚಾರದ ವಿರುದ್ಧದ ರಣಕಹಳೆ ಸೌಂಡು ಕಳೆದುಕೊಂಡಿತ್ತು. ಹಾಗೆ ಮಲಗಿದ್ದಲ್ಲಿಯೇ ತಾವು ಕಟ್ಟಿದ್ದ ಹೋರಾಟದ ಸೂತ್ರ ಕೈತಪ್ಪಿಸಿಕೊಂಡ ಅಣ್ಣಾ ಇತ್ತೀಚಿನ ದಿನಗಳಲ್ಲಿ ಅವರ ಕರ್ಮಭೂಮಿಯಾದ ರಾಳೇಗಣ್‌ಸಿದ್ದಿ ಗ್ರಾಮದಲ್ಲಿ ಕಳೆದು ಹೋಗಿದ್ದರು.

ಅಂಥಾ ಅಣ್ಣ ಇಂದು ಬುದ್ಧಿವಂತನ ಸನ್ನಿಧಾನದಲ್ಲಿ ಕಾಣಿಸಿಕೊಂಡಿರುವುದು ರಾಷ್ಟ್ರಮಟ್ಟದ ರಾಜಕೀಯ ರಂಗದಲ್ಲೊಂದು ಸಂಚಲನಕ್ಕೆ ಕಾರಣವಾಗಿದೆ. ಉಪೇಂದ್ರ ಪಕ್ಷದಿಂದ ಎಂತೆಂಥವರು ಕಣಕ್ಕಿಳಿಯುತ್ತಾರೆ, ಅವರಿಗೆಲ್ಲ ಅಣ್ಣ ಯಾವ ಥರದಲ್ಲಿ ಮಾರ್ಗದರ್ಶನ ನೀಡಲಿದ್ದಾರೆಂಬ ಕುತೂಹಲವಿದ್ದರೆ ಇನ್ನೊಂದೆರಡ್ಮೂರು ತಿಂಗಳು ತಡೆದುಕೊಳ್ಳುವ ಹೊರತು ಬೇರೆ ದಾರಿಗಳಿಲ್ಲ!

Leave a Reply

Your email address will not be published. Required fields are marked *


CAPTCHA Image
Reload Image