One N Only Exclusive Cine Portal

ಇದು ರಿಯಲ್ ಸ್ಟಾರ್ ಉಪೇಂದ್ರ ಪೊಲಿಟಿಕಲ್ ಹಿಕ್ಮತ್!

ರಿಯಲ್ ಸ್ಟಾರ್ ಉಪೇಂದ್ರರ ಅಸಲೀ ವರಸೆ ಬಯಲಾಗಿದೆ. ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ಅನ್ನೋ ಪಕ್ಷ ಸ್ಥಾಪಿಸಿ ಥೇಟು ಒಂದು ಸಿನಿಮಾ ಸ್ಕ್ರಿಪ್ಟಿನಂಥಾ ರಂಗು ರಂಗಾದ ಐಡಿಯಾಗಳ ಮೂಲಕ ಹೊಸತೇನನ್ನೋ ಸೃಷ್ಟಿಸುವ ಭ್ರಮೆ ಬಿತ್ತಿದ್ದವರು ಉಪೇಂದ್ರ. ಭ್ರಷ್ಟಾಚಾರವನ್ನೆಲ್ಲ ನೀಟಾಗಿ ಗುಡಿಸಿ ಸ್ವಚ್ಛವಾದ ಕರ್ನಾಟಕ ಕಟ್ಟುತ್ತೇನೆಂಬಂತೆ ಪ್ರಚಾರ ನಡೆಸಿದ್ದ ಉಪೇಂದ್ರ ಇದೀಗ ತನ್ನ ಪಕ್ಷದಿಂದಲೇ ಹೊರ ಬಿದ್ದಿದ್ದಾರೆ. ಇನ್ನೊಂದಷ್ಟು ದಿನ ಥರ ಥರದ ನಾಟಕವಾಡುತ್ತಾ ಕಡೇ ಕ್ಷಣದಲ್ಲಿ ಬಿಜೆಪಿ ಸೇರೋ ಪ್ಲಾನು ಪಕ್ಕಾ ಮಾಡಿಕೊಂಡೇ ಮತ್ತೇನೋ ಕಮಾಲ್ ಸೃಷ್ಟಿಸುವ ಹುಳ ಬಿಟ್ಟಿದ್ದಾರೆ!

ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷಕ್ಕೆ ನಾನೇ ಅಪ್ಪ ಎಂಬಂತೆ ಪೋಸು ಕೊಟ್ಟಿದ್ದ ಉಪೇಂದ್ರ ಅಪ್ಪಿ ತಪ್ಪಿಯೂ ಅದಕ್ಕೆ ಬೇರೊಬ್ಬ ಅಪ್ಪ ಇದ್ದಾನೆಂಬ ವಿಚಾರವನ್ನು ಹೇಳಿರಲಿಲ್ಲ. ಉಪ್ಪಿ ಬಿತ್ತಿದ ಭ್ರಮೆ ಒಂದಾ ಎರಡಾ? ಆದರೆ ಅಪ್ಪಿತಪ್ಪಿಯೂ ತನ್ನ ಕನಸಿನ ಪಕ್ಷ ಮತ್ತೊಬ್ಬನ ಮಾಲೀಕತ್ವದಲ್ಲಿದೆ ಅಂತ ಹೇಳಿಕೊಂಡಿರಲಿಲ್ಲ. ಆದರೀಗ ಈ ಪಕ್ಷದ ಸಂಸ್ಥಾಪಕ ಮಹೇಶ್ ಗೌಡನ ಮೇಲೆ ಹೀನಾಮಾನ ಕಂಪ್ಲೇಂಟು ಹೇಳುತ್ತಾ, ತನ್ನ ಸಿನಿಮಾ ಶೈಲಿಯಲ್ಲಿಯೇ ನಿಗೂಢವಾಗಿ ಕಣ್ಣೀರು ಹಾಕುತ್ತಾ ಸಿಂಪಥಿ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ತಾನೊಬ್ಬನೇ ಮಹಾ ಬುದ್ಧಿವಂತ, ತನ್ನ ಐಲಾಟಗಳು ಬೆಪ್ಪುತಕ್ಕಡಿ ಜನರಿಗೆ ಅರ್ಥವಾಗೋದಿಲ್ಲ ಅಂತಲೇ ಅಂದುಕೊಂಡಿರುವವರು ಉಪೇಂದ್ರ. ಆದರೆ ಆರಂಭಿಕವಾಗಿ ಅದೇನೋ ಮಾಡುತ್ತಾನೆಂಬ ಚೂರುಪಾರು ನಂಬಿಕೆ ಇಟ್ಟುಕೊಂಡಿದ್ದವರೂ ಈಗ ಉಪೇಂದ್ರರ ಮಹಾ ನಾಟಕ ಕಂಡು ಹಾದಿ ಬೀದಿಗಳಲ್ಲಿ ಉಗಿಯಲಾರಂಭಿಸಿದ್ದಾರೆ.

ಅಷ್ಟಕ್ಕೂ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಸಂಸ್ಥಾಪಕ. ಮೂಲತಃ ಬೆಂಗಳೂರಿನವನೇ ಆದ ಮಹೇಶ್ ಗೌಡ ೨೦೧೫ರಲ್ಲಿ ಯಾವುದಕ್ಕೂ ಇರಲಿ ಅಂತ ಇಂಥಾದ್ದೊಂದು ಪಕ್ಷವನ್ನು ಹುಟ್ಟು ಹಾಕಿ ತನ್ನ ಹೆಸರಿಗೆ ರಿಜಿಸ್ಟರು ಮಾಡಿಕೊಂಡಿದ್ದ. ಹಾಗಂತ ಈ ಮಹೇಶ್ ಗೌಡನಿಗೆ ಒಂದು ಪಕ್ಷವನ್ನು ಮುನ್ನಡೆಸಿಕೊಂಡು ಹೋಗುವ ಯಾವ ಸೀಮೆಯ ಲೀಡರಿಕೆಯೂ ಇಲ್ಲ. ರಾಜಕೀಯವಾಗಿ ಬೆಳೆಯ ಬೇಕು, ಅಧಿಕಾರ ಹಿಡಿಯ ಬೇಕು ಎಂಬಂಥ ಏಕ ಮಾತ್ರ ಉದ್ದೇಶ ಹೊಂದಿದ್ದ ಈತ ಈ ಹಿಂದೆ ಬಿಬಿಎಂಪಿ ಚುನಾವಣೆಯಲ್ಲಿ ತನ್ನ ಮಡದಿಯನ್ನೇ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದ. ಆದರೆ ಈ ವಾರ್ಡಿನ ಜನ ಆಕೆಯನ್ನು ಗೆಲ್ಲಿಸಿಕೊಳ್ಳುವ ಸಾಹಸ ಮಾಡಿರಲಿಲ್ಲ. ಇಂತಾ ಮಹೇಶ್ ಗೌಡ ಪಕ್ಷವನ್ನು ತನ್ನ ಹೆಸರಿಗೆ ನೋಂದಣಿ ಮಾಡಿಸಿಕೊಂಡು ನೊಣ ಹೊಡೆಯುತ್ತಿದ್ದನಲ್ಲಾ? ಈ ಸಂದರ್ಭದಲ್ಲಿಯೇ ಉಪೇಂದ್ರ ಪಕ್ಷ ಕಟ್ಟುವ ವಿಚಾರ ತಿಳಿದು ಅವರನ್ನು ಸಂಪರ್ಕಿಸಿದ್ದಾನೆ.

ಆ ಘಳಿಗೆಯಲ್ಲಿ ಪಕ್ಷ ಕಟ್ಟಲು ರೆಡಿಯಾಗಿದ್ದ ಉಪೇಂದ್ರ ಮುಂದೆ ಖಾಲಿ ಆರು ತಿಂಗಳು ಮಾತ್ರ ಬಾಕಿ ಉಳಿದಿತ್ತು. ಈ ಹಂತದಲ್ಲಿ ಹೊಸಾ ಪಕ್ಷವನ್ನು ತನ್ನ ಹೆಸರಿಗೆ ನೋಂದಣಿ ಮಾಡೋದೆಲ್ಲ ಗೋಜಲಿನ ಕೆಲಸ ಅಂತ ಉಪ್ಪಿಗೆ ಅರ್ಥವಾಗಿತ್ತು. ಆದ್ದರಿಂದಲೇ ತನ್ನ ಅಜೆಂಡಾಗೆ ಈ ಪಕ್ಷದ ಹೆಸರು ಸೂಟ್ ಆಗುತ್ತಿದ್ದುದರಿಂದ ಅದರ ಸಾರಥ್ಯ ವಹಿಸಿಕೊಳ್ಳಲು ಒಪ್ಪಿಕೊಂಡಿದ್ದರು. ಆದರೆ ಆ ನಂತರ ಉಪ್ಪಿ ಮಹೇಶ್ ಗೌಡನನ್ನು ಟಿಕೆಟು ಹಂಚಿಕೆ ಸೇರಿದಂತೆ ಯಾವುದರಲ್ಲಿಯೂ ಲೆಕ್ಕಕ್ಕಿಟ್ಟುಕೊಳ್ಳಲಿಲ್ಲ. ಈ ಮಹೇಶ್‌ಗೆ ರಾಜಕೀಯವಾಗಿ ಪ್ರಭಾವಿಯಾಗಬೇಕೆಂಬ ತಲುಬು. ಆದರೆ ತಾನೇ ಹುಟ್ಟಿಸಿದ ಪಕ್ಷಕ್ಕೆ ಉಪ್ಪಿಯೇ ಅಪ್ಪನಾಗಿ ಮೆರೆಯೋದನ್ನು ಕಂಡು, ತನ್ನ ಕಡೆಯವರಿಗೆ ಟಿಕೆಟು ಕೊಡಲು ಉಪ್ಪಿ ಮನಸು ಮಾಡದ್ದರಿಂದ ಆತ ವರಾತ ಶುರುವಿಟ್ಟುಕೊಂಡಿದ್ದಾನೆ.

ಸರಿಯಾಗಿ ಈ ಹೊತ್ತಿಗೆಲ್ಲ ಉಪ್ಪಿಗೂ ವಾಸ್ತವದ ಅರಿವಾಗಿತ್ತು. ತನ್ನ ರಂಗು ರಂಗಿನ ಸಿನಿಮಾ ಸ್ಕ್ರಿಪ್ಟಾದರೆ ಒಂದೆರಡು ಕೋಟಿಯಲ್ಲಿ ಮುಗಿಯುತ್ತದೆ. ಆದರೆ ಈ ರಾಜಕೀಯದ ರಿಯಲ್ ಆಟ ಹಣ ಚೆಲ್ಲದೆ ಗೆಲ್ಲುವಂಥಾದ್ದಲ್ಲ, ತನ್ನ ಇಮೇಜು ಮಾತ್ರ ನಂಬಿಕೊಂಡರೆ ತಾನೇ ಗೆಲ್ಲೋದು ಕಷ್ಟ ಎಂಬ ಅರಿವೂ ಆತನಿಗಾಗಿದೆ. ಹಾಗಂತ ಸೀದಾ ಈ ಪಕ್ಷ ಬಿಟ್ಟು ಹೊರ ಬಂದು ಬಿಜೆಪಿ ಸೇರಿಕೊಂಡರೆ ಜನ ಕ್ಯಾಕರಿಸಿ ಉಗಿಯುತ್ತಾರಲ್ಲಾ? ಅದಕ್ಕೆಂದೇ ತನ್ನ ಕಾರ್ಯ ಯೋಜನೆಗಳಿಗೆ ತನ್ನ ಪಕ್ಷದಲ್ಲಿಯೇ ಬೆಲೆ ಸಿಗುತ್ತಿಲ್ಲ ಅಂತೆಲ್ಲ ನಾಟಕವಾಡುತ್ತಾ ಮೆತ್ತಗೆ ಹೊರ ಬಂದು ನಿಂತಿದ್ದಾರೆ. ಮತ್ತದೇ ಮಾತುಗಾರಿಕೆಯಿಂದ ಸಿಂಪಥಿ ಗಿಟ್ಟಿಸಿಕೊಳ್ಳುವ ಪ್ರಯತ್ನವನ್ನೂ ನಡೆಸಿದ್ದಾರೆ.

ಉಪೇಂದ್ರ ಆರಂಭ ಕಾಲದಿಂದಲೂ ಬಿಜೆಪಿ ಅಜೆಂಡಾದ ಆಜುಬಾಜಿನಲ್ಲಿಯೇ ತಮ್ಮ ಬುದ್ದಿವಂತಿಕೆಯ ವಿಚಾರಗಳನ್ನು ಹರಿ ಬಿಡುತ್ತಾ ಬಂದಿದ್ದವರು. ಇಂಥಾ ಉಪ್ಪಿ ರಾಜಕೀಯ ಸೇರುತ್ತಾರೆಂಬ ಮಾತು ಕೇಳಿ ಬಂದಾಕ್ಷಣ ಬಹುತೇಕರು ಬಿಜೆಪಿ ಸೇರುತ್ತಾರೆಂದೇ ಅಂದುಕೊಂಡಿದ್ದರು. ಆದರೆ ಅಚಾನಕಾಗಿ ಅವರು ಪ್ರಜಾಕೀಯ ಪಕ್ಷ ಶುರು ಮಾಡಿದಾಗಿನಿಂದಲೂ ಬಿಜೆಪಿ ಅವರನ್ನು ಸೆಳೆಯೋ ಪ್ರಯತ್ನವನ್ನು ಮಾಡಿಕೊಂಡೇ ಬಂದಿತ್ತು. ಯಾಕೆಂದರೆ ಈ ಉಪೇಂದ್ರ ಅದೇನೇ ರಂಗು ರಂಗಾದ ಸ್ಕ್ರಿಪ್ಟು ರೆಡಿ ಮಾಡಿಕೊಂಡರೂ ಬಿಜೆಪಿ ಪಾಲಿನ ಮತಗಳೇ ಪ್ರಜಾಕೀಯದ ಪಾಲಾಗೋದು ಖಚಿತವಿತ್ತು. ಈ ಬಾರಿ ಶತಾಯಗತಾಯ ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಇರಾದೆ ಹೊಂದಿರೋ ಬಿಜೆಪಿ ತನ್ನ ಸಾಂಪ್ರದಾಯಿಕ ಮತಗಳನ್ನು ತನ್ನಲ್ಲೇ ಉಳಿಸಿಕೊಳ್ಳುವ ಉದ್ದೇಶದಿಂದ ಉಪೇಂದ್ರರನ್ನು ಸೆಳೆಯುವಲ್ಲಿ ಯಶ ಕಂಡಿದೆ. ಇನ್ನೊಂದು ತಿಂಗಳು ಇದೇ ರೀತಿ ತಿಪ್ಪರಲಾಗಾ ಹಾಕೋ ಉಪೇಂದ್ರ ಅಷ್ಟರಲ್ಲಿ ಮತ್ತೊಂದು ಸ್ಕ್ರಿಪ್ಟು ರೆಡಿ ಮಾಡಿಕೊಂಡು ಬಿಜೆಪಿ ಸೇರಿಕೊಳ್ಳೋದು ಖಚಿತ!

Leave a Reply

Your email address will not be published. Required fields are marked *


CAPTCHA Image
Reload Image