One N Only Exclusive Cine Portal

ಕಣಕ್ಕಿಳಿಯಲಿದೆಯಾ ನಟ ನಟಿಯರ ದಂಡು?

ಚುನಾವಣೆ ಹತ್ತಿರಾಗತ್ತಲೇ ರಿಯಲ್ ಸ್ಟಾರ್ ಉಪೇಂದ್ರ ಅವರ ಪ್ರಜಾಕೀಯದ ರಾಜಕೀಯ ಚಟುವಟಿಕೆಗಳೂ ಬಿರುಸು ಪಡೆಯುತ್ತಿವೆ. ಕರ್ನಾಟಕದ ಅಷ್ಟೂ ವಿಧಾನಸಭಾ ಕ್ರೇತ್ರಗಳಲ್ಲಿಯೂ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕೆಂಬ ಪಣ ತೊಟ್ಟು ಅಖಾಡಕ್ಕಿಳಿದಿದ್ದಾರೆ. ಅದರಲ್ಲಿಯೂ ಒಂದಷ್ಟು ಪರಿಚಿತರಾಗಿರೋ ಸಿನಿಮಾ ಮಂದಿಯನ್ನೇ ಕಣಕ್ಕಿಳಿಸಿದರೆ ಕೊಂಚ ಸಲೀಸಾಗಬಹುದೆಂಬ ಬುದ್ಧಿವಂತಿಕೆಯಿಂದಲೇ ಮುಂದುವರೆಯುತ್ತಿರೋ ಉಪ್ಪಿ ಈಗಾಗಲೇ ಕೆಲ ಮಂದಿಯನ್ನು ಫೈನಲ್ ಮಾಡಿರುವ ಸುದ್ದಿಯಿದೆ. ಸದ್ಯಕ್ಕೆ ನಟಿ, ನಿರ್ದೇಶಕಿ ಸೇರಿದಂತೆ ನಾನಾ ಪ್ರತಿಭೆ ಹೊಂದಿರುವ ರೂಪಾ ಅಯ್ಯರ್‌ಗೆ ಪ್ರಜಾಕೀಯ ಟಿಕೆಟ್ ಪಕ್ಕಾ ಆದಂತಿದೆ!

ಅಷ್ಟಕ್ಕೂ ರೂಪಾ ಅಯ್ಯರ್ ಈ ವರೆಗೂ ರಾಜಕೀಯಕ್ಕೆ ಅಡಿಯಿರಿಸೋ ಬಗ್ಗೆ ಮಾತಾಡಿದ್ದವರಲ್ಲ. ಆದರೆ ಪ್ರಜಾಕೀಯ ಪಕ್ಷದಲ್ಲಿ ಬಿಎಂಟಿಸಿ ಬಸ್ ಟಿಕೆಟಿಗಿಂತಲೂ ಸಲೀಸಾಗಿ ಟಿಕೆಟು ಸಿಗುತ್ತದೆಂಬ ಕಾರಣದಿಂದಲೋ, ಪ್ರಜೆಗಳ ಸೇವೆ ಮಾಡಬೇಕೆಂಬ ಹಂಬಲ ಒತ್ತರಿಸಿ ಬಂದ ಪರಿಣಾಮದಿಂದಲೋ ಅಥವಾ ಬುದ್ಧಿವಂತನ ಒತ್ತಡದಿಂದಲೋ ಅಂತೂ ರೂಪಾ ಅಯ್ಯರ್ ಪ್ರಜಾಕೀಯ ಪಕ್ಷದ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡುವ ಎಲ್ಲ ಲಕ್ಷಣಗಳೂ ಇವೆ.

ಅಂದಹಾಗೆ, ಈಗ ಸುಳಿದಾಡುತ್ತಿರೋ ಸುದ್ದಿಗಳ ಪ್ರಕಾರವಾಗಿ ಹೇಳೋದಾದರೆ ರೂಪಾ ಅಯ್ಯರ್ ಮೈಸೂರು ಭಾಗದಿಂದ ಪ್ರಜಾಕೀಯ ಪಕ್ಷದ ಮೂಲಕ ಕಣಕ್ಕಿಳಿಯಲಿದ್ದಾರೆ. ಈ ಭಾಗದಲ್ಲಿ ಬ್ರಾಹ್ಮಣ ಮತಗಳ ಅಧಿಕವಿರುವ ಪ್ರದೇಶವೊಂದರಿಂದ ರೂಪಾರನ್ನು ಅಖಾಡಕ್ಕಿಳಿಸುವ ಮಾಮೂಲು ರಾಜಕೀಯ ವರಸೆಯನ್ನು ಬುದ್ಧಿವಂತ ಉಪ್ಪಿ ಅನುಸರಿಸುತ್ತಿದ್ದಾರೆಂಬ ಮಾತುಗಳೂ ಇವೆ.

ವಿದೇಶ ಮಟ್ಟದಲ್ಲಿ ಕೆಲ ಕಾರ್ಯಕ್ರಮಗಳನ್ನು ಮಾಡಿ ಎನ್‌ಆರ್‌ಐಗಳೂ ಸೇರಿದಂತೆ ಸರ್ಕಾರದ ಆಯಕಟ್ಟಿನ ಮಂದಿಯನ್ನೂ ಪಳಗಿಸಿಕೊಳ್ಳೋ ಮೂಲಕ ರೂಪಾ ಸಮರ್ಥ ನಾಯಕತ್ವದ ಗುಣಗಳನ್ನು ಜಾಹೀರು ಮಾಡಿದ್ದಾರೆ. ನಟಿಯಾಗಿಯೂ ಗುರುತಿಸಿಕೊಂಡಿರೋ ರೂಪಾ, ನಿರ್ದೇಶಕಿಯಾಗಿ ಫೇಮಸ್ಸು. ಈ ಹಿಂದೆ ನೆನಪಿರಲಿ ಪ್ರೇಂನನ್ನು ನಾಯಕನನ್ನಾಗಿ ಮಾಡಿ ಚಂದ್ರ ಅಂತೊಂದು ಪೌರಾಣಿಕ ಸಿನಿಮಾ ಮಾಡಿದ್ದ ರೂಪಾರನ್ನು ಪ್ರೇಕ್ಷಕರು ಯಾವತ್ತಿಗೂ ಮರೆಯುವಂತಿಲ್ಲ. ಒಂದು ವೇಳೆ ಪ್ರೇಕ್ಷಕರು ಮರೆತರೂ ಈ ಚಿತ್ರದ ನಿರ್ಮಾಪಕ ಪ್ರಸಾದ್ ಅವರಂತೂ ಖಂಡಿತಾ ಮರೆಯಲು ಸಾಧ್ಯವೇ ಇಲ್ಲ. ಯಾಕೆಂದರೆ ಅವರು ಈ ಸಿನಿಮಾ ಮೂಲಕ ಬಿದ್ದ ಅರ್ಧಚಂದ್ರಾಕಾರದ ಗುನ್ನವನ್ನು ಈ ಕ್ಷಣವೂ ಸವರಿಕೊಳ್ಳುತ್ತಾ ಸುಧಾರಿಸಿಕೊಳ್ಳಲು ಶತ ಪ್ರಯತ್ನ ಪಡುತ್ತಿದ್ದಾರೆ!

ಸಿನಿಮಾ ಅಂದ ಮೇಲೆ ಇದೆಲ್ಲ ಮಾಮೂಲಿ. ಆದರೆ ಬುದ್ಧಿವಂತೆ ರೂಪಾ ಅಯ್ಯರ್ ಮತ್ತು ಬುದ್ಧಿವಂತ ಉಪ್ಪಿ ಕಾಂಬಿನೇಷನ್ನಿನ ರಾಜಕೀಯ ಪಟ್ಟುಗಳು ಹೇಗಿರುತ್ತವೆ ಅನ್ನೋದಷ್ಟೇ ಸದ್ಯ ಕುತೂಹಲ ಹುಟ್ಟಿಸಿದೆ.

Leave a Reply

Your email address will not be published. Required fields are marked *


CAPTCHA Image
Reload Image