ಭಾರತೀಯ ಸಿನಿಮಾಗಳಲ್ಲಿ ನಾಯಕಿ ಪ್ರಧಾನ ಚಿತ್ರಗಳಿಗೆ ವಿಶೇಷ ಸ್ಥಾನವಿದೆ. ನರ್ಗಿಸ್ ನಟಿಸಿದ್ದ ಹಿಂದಿ ಚಿತ್ರ ‘ಮದರ್ ಇಂಡಿಯಾ’ (೧೯೫೭) ಕಾಲದಿಂದಲೂ ನಾಯಕಿ ಪ್ರಧಾನ ಚಿತ್ರಗಳು ತಯಾರಾಗುತ್ತಿವೆ. ಬಾಲಿವುಡ್‌ಗೆ ಹೋಲಿಸಿದಲ್ಲಿ ದಕ್ಷಿಣ ಭಾರತದಲ್ಲಿ ನಾಯಕಿ ಕೇಂದ್ರಿತ ಚಿತ್ರಗಳಲ್ಲಿ ಹೆಚ್ಚು ಪ್ರಯೋಗಗಳಾಗಿವೆ. ಇತ್ತೀಚೆಗೆ ತೆರೆಕಂಡ ‘ನಾತಿಚರಾಮಿ’ ಕನ್ನಡ ಸಿನಿಮಾ ಸ್ತ್ರೀ ಸಂವೇದನೆಯನ್ನು ವಿಶಿಷ್ಟವಾಗಿ ನಿರೂಪಿಸಿದ ಪ್ರಯೋಗ.

ಮದರ್ ಇಂಡಿಯಾ: ಮೆಹಬೂಬ್ ಖಾನ್ ನಿರ್ದೇಶನದ ‘ಮದರ್ ಇಂಡಿಯಾ’, ಆಸ್ಕರ್‌ಗೆ ನಾಮನಿರ್ದೇಶನಗೊಂಡ ಮೊದಲ ಭಾರತೀಯ ಚಿತ್ರ. ನಾಯಕಿ ನರ್ಗಿಸ್ ದತ್ ‘ರಾಧಾ’ ಪಾತ್ರದಲ್ಲಿ ಭಾರತೀಯ ಸ್ತ್ರೀಶಕ್ತಿಯನ್ನು ಪ್ರತಿನಿಧಿಸಿದ್ದರು. ಸ್ಮಿತಾ ಪಾಟೀಲ್ ಸ್ತ್ರೀಕೇಂದ್ರಿತ ಚಿತ್ರಗಳಾದ ‘ಭೂಮಿಕಾ’, ‘ಚಕ್ರ’, ‘ಅರ್ಧ ಸತ್ಯ’ ಸೇರಿದಂತೆ ಹಲವು ಕಲಾತ್ಮಕ ಪ್ರಯೋಗಗಳಲ್ಲಿ ಅಭಿನಯಿಸಿದ್ದರು. ಶಬಾನಾ ಆಜ್ಮಿ, ರೇಖಾ ಕಲಾತ್ಮಕ ಚಿತ್ರಗಳ ಮುಂಚೂಣಿ ತಾರೆಯರು. ಹೇಮಾಮಾಲಿನಿ, ಶ್ರೀದೇವಿ ಕಮರ್ಷಿಯಲ್ ನಾಯಕಿಯರಾಗಿ ಹೆಸರು ಮಾಡಿದರು.

ರಂಗನಾಯಕಿ: ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ರ ಚಿತ್ರಗಳಲ್ಲಿ ನಾಯಕಿಯೇ ಕೇಂದ್ರಬಿಂದು. ‘ಶರಪಂಜರ’, ‘ಗೆಜ್ಜೆಪೂಜೆ’, ‘ಮಸಣದ ಹೂ’, ‘ಮಾನಸ ಸರೋವರ’, ‘ರಂಗನಾಯಕಿ’ ಸೇರಿದಂತೆ ಹಲವು ಸ್ತ್ರೀ ಕೇಂದ್ರಿತ ಚಿತ್ರಗಳ ಮೂಲಕ ಪುಟ್ಟಣ್ಣ ಭಿನ್ನ ಮಾದರಿಯ ಚಿತ್ರಗಳಿಗೆ ನಾಂದಿ ಹಾಡಿದರು. ಕಲ್ಪನಾ, ಆರತಿ, ಜಯಂತಿ, ಭಾರತಿ, ಪದ್ಮಾ ವಾಸಂತಿ ಮತ್ತಿತರ ಶ್ರೇಷ್ಠ ಕಲಾವಿದೆಯರು ಪುಟ್ಟಣ್ಣರ ಚಿತ್ರಗಳ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. ಈ ಚಿತ್ರಗಳು ನಾಯಕರನ್ನೂ ಚಿತ್ರರಂಗದಲ್ಲಿ ನೆಲೆ ನಿಲ್ಲಿಸಿದ್ದು ವಿಶೇಷ. ಇನ್ನು ಗಿರೀಶ್ ಕಾಸರವಳ್ಳಿ ತಮ್ಮ ‘ತಾಯಿಸಾಹೇಬ’, ‘ದ್ವೀಪ’ ಚಿತ್ರಗಳಲ್ಲಿ ಪಿ.ಶೇಷಾದ್ರಿ ‘ಹಸೀನಾ’ದಲ್ಲಿ ಸ್ತ್ರೀ ಸಂವೇದನೆಯನ್ನು ಆಪ್ತವಾಗಿ ಅನಾವರಣಗೊಳಿಸಿದ್ದರು.

ಲೇಡಿ ಕಮಿಷನರ್: ೯೦ರ ದಶಕದ ಕನ್ನಡ ಚಿತ್ರರಂಗದಲ್ಲಿ ನಾಯಕರಿಗೆ ಸರಿಸಮನಾಗಿ ಮಿಂಚಿದ ತಾರೆ ಮಾಲಾಶ್ರೀ. ಕೌಟುಂಬಿಕ ಚಿತ್ರಗಳಿಗಿಂತಲೂ ಚಿತ್ರಗಳಲ್ಲಿ ಮಾಲಾಶ್ರೀ ಹೆಸರು ಮಾಡಿದರು. ಆಕೆಗೆಂದೇ ಆಗ ನಿರ್ದೇಶಕರು ಕಥೆ ಹೆಣೆಯುತ್ತಿದ್ದರು. ‘ಲೇಡಿ ಕಮಿಷನರ್’, ‘ಎಸ್‌ಪಿ ಭಾರ್ಗವಿ’ ಸೇರಿದಂತೆ ಕೆಲವು ಚಿತ್ರಗಳಲ್ಲಿ ಪೊಲೀಸ್ ಅಧಿಕಾರಿಯಾಗಿ ಅವರು ಯಶಸ್ವಿಯಾಗಿದ್ದರು. ಒಂದೆಡೆ ಮಾಲಾಶ್ರೀ ನಾಯಕಿ ಪ್ರಧಾನ ಚಿತ್ರ ಪ್ರಧಾನ ಚಿತ್ರಗಳಲ್ಲಿ ಮಿಂಚಿದರೆ, ಶ್ರುತಿ ಕಣ್ಣೀರಿನ ಚಿತ್ರಗಳಲ್ಲಿ ಹೆಸರು ಮಾಡಿದರು. ದ್ವಾರಕೀಶ್‌ರ ನಾಯಕಿ ಪ್ರಧಾನ ‘ಶ್ರುತಿ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ಶ್ರುತಿಗೆ ಬ್ರೇಕ್ ಕೊಟ್ಟ ಮತ್ತೊಂದು ನಾಯಕಿ ಸಿನಿಮಾ ‘ರಂಜಿತಾ’. ಮುಂದೆ ಹಲವು ನಾಯಕಿಯರಿಗೆ ಇದು ಮೇಲ್ಪಂಕ್ತಿಯಾಯ್ತು. ಇತ್ತೀಚೆಗಷ್ಟೇ ತೆರೆಕಂಡ ‘ನಾತಿಚರಾಮಿ’ ಸ್ತ್ರೀ ಸಂವೇದನೆಯ ಅಪರೂಪದ ಸಿನಿಮಾ. ಸ್ತ್ರೀಯರ ಸಮಸ್ಯೆಗಳನ್ನು ಮೇಲ್ಪದರದಲ್ಲಿ ಹೇಳದೆ ಸೂಕ್ಷ್ಮವಾಗಿ ಚಿತ್ರಿಸುವ ಕಥಾವಸ್ತುವಿನ ಸಿನಿಮಾಗೆ ಇದೊಂದು ಉತ್ತಮ ಉದಾಹರಣೆಯಾಗಿ ಕಾಣಿಸಿದ್ದು ಹೌದು.

ಸೀತಾ ರಾಮು: 80ರ ದಶಕದಲ್ಲಿ ನಾಯಕ ಪ್ರಧಾನ ಕಮರ್ಷಿಯಲ್ ಚಿತ್ರಗಳು ತಯಾರಾದವು. ‘ಸೀತಾ ರಾಮು’ ಚಿತ್ರದಲ್ಲಿ ಮಂಜುಳಾ, ‘ಧೈರ್ಯಲಕ್ಷ್ಮಿ’ಯಲ್ಲಿ ಲಕ್ಷ್ಮಿ, ‘ರಣಚಂಡಿ’ಯಲ್ಲಿ ರಾಧಿಕಾ, ‘ಭದ್ರಕಾಳಿ’ಯಲ್ಲಿ ಮಹಾಲಕ್ಷ್ಮಿ, ‘ಬೆಂಕಿಯಲ್ಲಿ ಅರಳಿದ ಹೂ’ ಚಿತ್ರದಲ್ಲಿ ಸುಹಾಸಿನಿ, ‘ಸ್ವಾತಿ’ಯಲ್ಲಿ ಸುಧಾರಾಣಿ ಗಮನ ಸೆಳೆದಿದ್ದರು. ನಟರಾದ ಶಶಿಕುಮಾರ್, ಶ್ರೀಧರ್, ಸುನೀಲ್, ರಾಮ್‌ಕುಮಾರ್, ಅಭಿಜಿತ್, ‘ನಾಯಕಿ’ಯರ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡ ಹೀರೋಗಳು.

ಲೇಡಿ ಅಮಿತಾಭ್: ತೆಲುಗು ನಟಿ ವಿಜಯಶಾಂತಿ ‘ಲೇಡಿ ಅಮಿತಾಭ್’ ಎಂದೇ ಹೆಸರಾಗಿದ್ದರು. ೯೦ರ ದಶಕದಲ್ಲಿ ತೆಲುಗು, ತಮಿಳಿನಲ್ಲಿ ವಿಜಯಶಾಂತಿ ಅವರಿಗಾಗಿಯೇ ಚಿತ್ರಗಳು ತಯಾರಾಗುತ್ತಿದ್ದವು. ೬೦-೭೦ರ ದಶಕದ ಸೆಂಟಿಮೆಂಟ್ ತೆಲುಗು ಚಿತ್ರಗಳಲ್ಲಿ ನಟಿ ಜಮುನಾ, ಸಾವಿತ್ರಿ ಅವರಿಗೆ ವಿಶೇಷ ಪಾತ್ರಗಳಿರುತ್ತಿದ್ದವು. ಇದೇ ವೇಳೆ ತಮಿಳಿನಲ್ಲಿ ಸರಿತಾ, ಜಯಂತಿ, ಸರೋಜಾದೇವಿ ಮಿಂಚುತ್ತಿದ್ದರು. ಮಲಯಾಳಂನಲ್ಲಿ ಶಾರದಾ, ಶೀಲಾ ಸ್ತ್ರೀ ಪ್ರಧಾನ ಚಿತ್ರಗಳ ತಾರೆಯರು. ‘ಬ್ರಹ್ಮಗಂಟು’, ‘ಎರಡು ರೇಖೆಗಳು’ ಸೇರಿದಂತೆ ಮತ್ತೆ ಕೆಲವು ಚಿತ್ರಗಳಲ್ಲಿ ಸರಿತಾ ಕನ್ನಡಿಗರ ಮನಸೂರೆಗೊಂಡರು.

Arun Kumar

ಇದು ಅಗ್ನಿಸಾಕ್ಷಿ ಸನ್ನಿಧಿಯ ಗಿರ್ ಗಿಟ್ಲೆ!

Previous article

ಬಾಲಿವುಡ್ ಗಮನಸೆಳೆಯುತ್ತಿವೆ ’ಕಳಂಕ್’ ಫಸ್ಟ್ ಲುಕ್ ಪೋಸ್ಟರ‍್ಸ್ !

Next article

You may also like

Comments

Leave a reply

Your email address will not be published. Required fields are marked *