ಯಜಮಾನ ಚಿತ್ರದ ಚಿತ್ರೀಕರಣದ ವೇಳೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ನಟನಿಗೆ ಹೊಡೆದಿದ್ದಾರೆ… ಹೀಗೊಂದು ಸುದ್ದಿ ಕೊಡಿಗೇಹಳ್ಳಿಯ ಶಿವರಾಮ್ ಅವರ ಸ್ಟುಡಿಯೋದಿಂದ ಹೊರ ಬಿದ್ದೇಟಿಗೆ ಒಂದರೆಕ್ಷಣ ಅಲ್ಲೋಲಕಲ್ಲೋಲವೇ ಸೃಷ್ಟಿಯಾಗಿದೆ. ದರ್ಶನ್ ಅವರಿಗೆ ಸಿಟ್ಟು ತುಸು ಜಾಸ್ತಿ. ಅದೇ ಭರದಲ್ಲಿ ಏನೋ ಎಡವಟ್ಟು ಮಾಡಿಕೊಂಡು ಸಹನಟನಿಗೆ ಹೊಡೆದರಾ ಅಂತೊಂದು ಪ್ರಶ್ನೆಯನ್ನಿಟ್ಟುಕೊಂಡು ಹುಡುಕಾಟಕ್ಕಿಳಿದಾಗ ಈ ಬಗೆಗಿನ ಅಸಲೀ ಮ್ಯಾಟರ್ ಹೊರ ಬಿದ್ದಿದೆ! ಸತಃ ಈ ಚಿತ್ರದ ನಿರ್ಮಾಪಕ ಬಿ. ಸುರೇಶ ಸಿನಿಬಜ಼್ ಜೊತೆ ಮಾತಾಡಿ ಘಟನೆಯ ಪೂರ್ತಿ ವಿವರವನ್ನು ನೀಡಿದ್ದಾರೆ…

ಇದೀಗ ಕೊಡಿಗೇಹಳ್ಳಿಯ ಬೃಹತ್ ಸ್ಟುಡಿಯೋದಲ್ಲಿ ಯಜಮಾನ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಅಲ್ಲಿ ಚಾಲೆಂಜಿಂಗ್ದ್ ಸ್ಟಾರ್ ದರ್ಶನ್ ನೂರಕ್ಕೂ ಹೆಚ್ಚು ಮಂದಿಯ ಸಹನಟರು ಮತ್ತು ಇನ್ನೂರು ಜನ ತಂಡದೊಂದಿಗೆ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಪ್ರದೇಶಕ್ಕೆ ಚಿತ್ರ ತಂಡ ಬಿಟ್ಟರೆ ಸಾರ್ವಜನಿಕರ್‍ಯಾರೂ ಪ್ರವೇಶ ಮಾಡುವಂತೆಯೇ ಇರಲಿಲ್ಲ. ಇನ್ನೇನು ಊಟದ ಹೊತ್ತು ಸಮೀಪಿಸುತ್ತಿರುವಾಗಲೇ ದರ್ಶನ್ ತುಸು ಕೋಪಗೊಂಡಿದ್ದಾರೆ.

ದರ್ಶನ್ ಅವರು ಸಹಕಲಾವಿದನೊಬ್ಬ ಚಿತ್ರೀಕರಣವನ್ನು ತನ್ನ ಮೊಬೈಲಿನಲ್ಲಿ ಚಿತ್ರೀಕರಿಸಿಕೊಳ್ಳೋದನ್ನು ಗಮನಿಸಿದ್ದಾರೆ. ಯಾರೂ ಅತ್ತ ಗಮನ ಹರಿಸದಿದ್ದರೂ ಆ ಸಹ ನಟನ ಮೇಲೊಂದು ಕಣ್ಣಿಟ್ಟಿದ್ದ ದರ್ಶನ್ ಅವರು ಆ ಸಹ ಕಲಾವಿದನನ್ನು ಕರೆದಿದ್ದಾರೆ. ಸ್ವತಃ ಆತನ ಮೊಬೈಲು ಪಡೆದುಕೊಂಡು ಪರಿಶೀಲಿಸಿದ್ದಾರೆ. ಅದರಲ್ಲಿ ಚಿತ್ರೀಕರಣದ ಸಂದರ್ಭದಲ್ಲಿ ಸೆರೆ ಹಿಡಿದಿದ್ದ ದೃಷ್ಯಾವಳಿಗಳ ಸಾಕ್ಷಿ ಸಿಕ್ಕಿದೆ. ಹೀಗಾಗುತ್ತಲೇ ನಿರ್ಮಾಪಕರು ಸೇರಿದಂತೆ ಇತರೇ ತಂತ್ರಜ್ಞರನ್ನು ಹತ್ತಿರ ಕರೆದ ದರ್ಶನ್ ಆ ಸಹ ಕಲಾವಿದ ಮಾಡಿದ್ದ ಕಚಡಾ ಕೆಲಸವನ್ನು ಜಾಹೀರು ಮಾಡಿದ್ದಾರೆ.

ಇದೆಲ್ಲ ಬಯಲಾಗುತ್ತಲೇ ದರ್ಶನ್ ಆ ಸಹ ಕಲಾವಿದನಿಗೆ ಬೈದಿದ್ದಾರೆ. `ನೀನೂ ಒಬ್ಬ ಚಿತ್ರ ತಂಡದವನಾಗಿ ನಿರ್ಮಾಪಕರ ಮೇಲೆ ಕಾಳಜಿ ಇರಬೇಡವೇ? ನೀನು ಈ ಥರ ಚಿತ್ರೀಕರಣದ ದೃಷ್ಯಾವಳಿಗಳನ್ನು ಫೇಸ್‌ಬುಕ್, ಇನ್ಸ್ಟಾಗ್ರಾಮ್‌ಗಳಲ್ಲಿ ಹಾಕಿಕೊಂಡರೆ ಕುತೂಹ ಎಲ್ಲಿ ಉಳಿಯುತ್ತೆ. ನಿನ್ನಂಥವರಿಂದಲೇ ಸಿನಿಮಾಗಳ ಗುಟ್ಟು ಚಿತ್ರೀಕರಣಕ್ಕೆ ಮುನ್ನವೇ ಬಯಲಾಗುತ್ತೆ. ಇಂಥಾ ಕೆಲಸ ಮಾಡೋಕೆ ನಾಚಿಕೆ ಆಗೋದಿಲ್ವಾ’ ಅಂತೆಲ್ಲ ಬೈದಿದ್ದಾರೆ. ತಿಳಿ ಹೇಳಿದ್ದಾರೆ. ಮತ್ತು ಸ್ವತಃ ತಾವೇ ಆತನ ಮೊಬೈಲಲ್ಲಿ ರೆಕಾರ್ಡ್ ಆಗಿದ್ದ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್ ಕೋಪಗೊಂಡಿದ್ದದ್ದು ಹೌದಾದರೂ ಹಲ್ಲೆಯಂಥಾದ್ದೇನೂ ನಡೆದಿಲ್ಲ ಅಂತ ಚಿತ್ರ ತಂಡವೇ ಸ್ಪಷ್ಟೀಕರಣ ನೀಡಿದೆ.

ಇದು ಯಾರಾದರೂ ಕೋಪಗೊಳ್ಳುವ ವಿಚಾರವೇ. ಯಾಕೆಂದರೆ ಓಪನ್ ಪ್ಲೇಸಿನಲ್ಲಿ ಚಿತ್ರೀಕರಣ ನಡೆಯುವ ಸಂದರ್ಭದಲ್ಲಿ ಅಭಿಮಾನಿಗಳು ಅಭಿಮಾನದ ಉದ್ವೇಗದಲ್ಲಿ ಇಂಥಾದ್ದನ್ನು ಮಾಡುತ್ತಾರೆ. ಆದರೆ ಸಂಬಳ ಪಡೆಯುವ ಓರ್ವ ಸಹ ಕಲಾವಿದನಾಗಿ ಇಂಥಾ ಕೆಲಸ ಮಾಡೋದು ಅಕ್ಷಮ್ಯವೇ. ಆದರೆ ಇಂಥಾ ಕೆಲಸ ಮಾಡಿದ ಈ ಶಿವು ತಪ್ಪೊಪ್ಪಿಕೊಂಡು ತೆಪ್ಪಗಿರೋದನ್ನು ಬಿಟ್ಟು ಇದನ್ನಿಟ್ಟುಕೊಂಡು ಬಿಟ್ಟಿ ಪ್ರಚಾರ ಪಡೆಯಲು ಮುಂದಾದಂತಿದೆ. ಯಾಕೆಂದರೆ ಆತ ಚಿತ್ರೀಕರಣದ ಸ್ಥಳದಿಂದ ಒಂದಷ್ಟು ಜನರನ್ನು ಕರೆದುಕೊಂಡು ನಾಪತ್ತೆಯಾಗಿದ್ದಾನಂತೆ. ಆದರೆ ದರ್ಶನ್ ಅವರು ಆ ಸಹ ಕಲಾವಿದ ಮಾಡಿದ ಕೆಲಸದ ವಿರುದ್ಧ ಸಿಟ್ಟಾಗಿದ್ದು ನಿಜವಾದರೂ ಹಲ್ಲೆಯಂಥಾದ್ದು ಖಂಡಿತಾ ನಡೆದಿಲ್ಲ ಅಂತ ಸ್ವತಃ ನಿರ್ಮಾಪಕ ಬಿ. ಸುರೇಶ ಸ್ಪಷ್ಟಪಡಿಸಿದ್ದಾರೆ.

#

LEAVE A REPLY

Please enter your comment!
Please enter your name here

17 − 9 =