One N Only Exclusive Cine Portal

ಯಾರ್ ಯಾರೋ ಗೋರಿ ಮೇಲೆ ಹಾಡುಗಳು ಕೇಳಿಸುತ್ತಿದೆ!

ಹಳ್ಳಿಯಿಂದ ಸಿಟಿಗೆ ಬರುವ ಹುಡುಗರಿಬ್ಬರು ಅಲ್ಲಿ ಯಾವ ರೀತಿ ಸಂದರ್ಭಗಳನ್ನು ಎದುರಿಸಿದರು ಎಂಬ ಕಥಾಹಂದರವನ್ನಿಟ್ಟುಕೊಂಡು ಮಾಡಿದ ಚಿತ್ರ ‘ಯಾರ್ ಯಾರೋ ಗೋರಿ ಮೇಲೆ’ ರಾಘುಚಂದ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದ ಹಾಡುಗಳ ಧ್ವನಿಸುರುಳಿ ಬಿಡುಗಡೆ ಸಮಾರಂಭ ಇತ್ತೀಚೆಗೆ ರೇಣುಕಾಂಭ ಥಿಯೇಟರ್‌ನಲ್ಲಿ ನಡೆಯಿತು. ಇಬ್ಬರು ನಾಯಕರ ಸುತ್ತ ನಡೆಯುವ ಈ ಕಥೆಯಲ್ಲಿ ನಾಲ್ಕು ಹಾಡುಗಳಿದ್ದು, 2 ಸಾಹಸ ದೃಶ್ಯಗಳಿವೆ. ಅಭಿ ಹಾಗೂ ರಾಜ್ ಈ ಚಿತ್ರದ ಇಬ್ಬರು ನಾಯಕರಾಗಿದ್ದು ರಾಜ್ (ಪುಟ್ಟರಾಜು) ನಾಯಕನಾಗಿ ಅಭಿನಯಿಸುವುದರೊಂದಿಗೆ ನಿರ್ಮಾಣದ ಜವಾಬ್ದಾರಿಯನ್ನೂ ಸಹ ಹೊತ್ತುಕೊಂಡಿದ್ದಾರೆ. ಶಿವಮೊಗ್ಗ ಮೂಲದ ವರ್ಷ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರದ 2 ಹಾಡುಗಳ ಹಾಗೂ ಟೀಸರ್ ಪ್ರದರ್ಶನದ ನಂತರ ನಡೆದ ಪತ್ರಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ರಾಘುಚಂದ್ ನಿರ್ದೇಶಕನಾಗಬೇಕು ಎಂಬುದು ನನ್ನ ಬಹುದಿನಗಳ ಕನಸು. ಸುಮಾರು ವರ್ಷಗಳಿಂದ ಕಷ್ಟಪಟ್ಟು ಕೊನೆಗೆ ನನ್ನ ಸ್ನೇಹಿತನ ಮೂಲಕ ನಿರ್ದೇಶಕನಾದೆ. ಲೋಕಿ ಅದ್ಭುತವಾದ ೪ ಹಾಡುಗಳನ್ನು ಮಾಡಿದ್ದಾರೆ. ಇದೊಂದು ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥಾನಕ ತೆಲುಗು, ತಮಿಳು ಚಿತ್ರಗಳ ರೇಂಜ್‌ನಲ್ಲಿ ಈ ಚಿತ್ರ ಮಾಡಿದ್ದೇವೆ. ಹುಟ್ಟು ಸಾವಿನ ಮಧ್ಯೆ ಸಂದರ್ಭ ನಮ್ಮನ್ನು ಹೇಗೆಲ್ಲಾ ಆಟ ಆಡಿಸುತ್ತದೆ ಎಂದು ಈ ಚಿತ್ರದ ಮೂಲಕ ಹೇಳಿದ್ದೇವೆ. ಈ ಚಿತ್ರದ ೮೦ ರಷ್ಟು ಭಾಗದ ಚಿತ್ರೀಕರಣ ನಡೆದಿರುವುದು ಬಳ್ಳಾರಿ ಸುತ್ತಮುತ್ತ. ಉಳಿದಂತೆ ಸಕಲೇಶಪುರ, ಬೆಂಗಳೂರು, ಶ್ರೀರಂಗಪಟ್ಟಣದಲ್ಲೂ ಶೂಟಿಂಗ್ ಮಾಡಿದ್ದೇವೆ ಎಂದು ಹೇಳಿದರು. ನಾಯಕ ಕಂ ನಿರ್ಮಾಪಕ ಪುಟ್ಟರಾಜು ಮಾತನಾಡಿ ನಾನು ಬಳ್ಳಾರಿಯವನು ನಮ್ಮ ಪೋಷಕರು ವ್ಯಾಪಾರ ಮಾಡಿಕೊಂಡಿದ್ದಾರೆ. ಸಿನಿಮಾ ರಂಗದಲ್ಲಿ ಇದು ನನ್ನ ಏಳು ವರ್ಷಗಳ ಹೋರಾಟ. ನನ್ನ ಸ್ನೇಹಿತನಿಗೂ ಒಂದು ಅವಕಾಶ ಬೇಕಿತ್ತು. ನಾನೂ ಕೂಡ ತೆರೆಯ ಮೇಲೆ ಕಾಣಿಸಿಕೊಳ್ಳಬೇಕಾಗಿತ್ತು. ಹಾಗಾಗಿ ಈ ಸಿನಿಮಾಗೆ ಬಂಡವಾಳ ಹೂಡಲು ನಿರ್ಧರಿಸಿದೆ. ಮನೆಯಲ್ಲೂ ಕೂಡ ಎಲ್ಲರೂ ಸಪೋರ್ಟ್ ಮಾಡಿದರು. ಚಿತ್ರದಲ್ಲಿ ನನ್ನದು ಒಬ್ಬ ಸೈಕೋ ತರದ ಪಾತ್ರ. ಚಿತ್ರ ಸೀನ್ ಟು ಸೀನ್ ಕುತೂಹಲ ಕೆರಳಿಸುತ್ತಾ ಹೋಗುತ್ತದೆ ಎಂದು ಹೇಳಿದರು.

ನಂತರ ಮತ್ತೊಬ್ಬ ನಟ ಅಭಿ ಮಾತನಾಡಿ ನಾನೂ ಕೂಡ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲ ವರ್ಷಗಳಿಂದ ಕೆಲಸ ಮಾಡಿದ್ದೇನೆ. ವಿರಾಟ್ ಚಿತ್ರದಿಂದ ಕಲಾವಿದನಾಗಿಯೂ ಕಾಣಿಸಿಕೊಂಡಿದ್ದೇನೆ. ಫೇಸ್‌ಬುಕ್ ಮೂಲಕ ನಾನು ಈ ತಂಡಕ್ಕೆ ಪರಿಚಿತನಾದೆ. ಈ ಚಿತ್ರದಲ್ಲಿ ನನ್ನದು ಡಬಲ್ ರೋಲ್. ಇದೊಂದು ತ್ರಿಕೋನ ಪ್ರೇಮಕಥೆ. ಪಕ್ಕಾ ರಾ ಲವ್ ಸಬ್ಜೆಕ್ಟ್ ಎಂದು ಚಿಕ್ಕದಾಗಿ ತನ್ನ ಪರಿಚಯ ಮಾಡಿಕೊಂಡರು. ನಂತರ ನಾಯಕಿ ವರ್ಷ ಮಾತನಾಡಿ ನಾನು ತೆರೆಯ ಮೇಲೆ ಕಾಣಿಸಿಕೊಳ್ಳಬೇಕು ಎಂಬುದು ನನ್ನ ತಾತನ ಆಸೆಯಾಗಿತ್ತು. ನನಗೆ ಆಕ್ಟಿಂಗ್ ಬಗ್ಗೆ ನನಗೇನು ಗೊತ್ತಿದ್ದಿಲ್ಲ. ಈ ಚಿತ್ರದಲ್ಲಿ ವರ್ಕ್ ಮಾಡಿ ಸಾಕಷ್ಟು ಕಲಿತೆ. ಈ ತರದ ಅವಕಾಶ ಮುಂದೆ ನನಗೆ ಸಿಗಲಿ ಎಂದು ಹೇಳಿದರು.

ಸಂಗೀತ ನಿರ್ದೇಶಕ ಲೋಕಿ ಮಾತನಾಡಿ ಹಂಸಲೇಖ ಅವರ ದೇಸಿ ಕಾಲೇಜಿನಲ್ಲಿ ವರ್ಕ್ ಮಾಡಿದ್ದೆ. ವೆರೈಟಿ ಸಾಂಗ್ ಈ ಚಿತ್ರದಲ್ಲಿದೆ ಎಂದು ಹೇಳಿದರು. ವಿನು ಮನಸು ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಪ್ರದೀಪ್ ಗಾಂಧಿ ಈ ಚಿತ್ರದ ಛಾಯಾಗ್ರಾಹಕರು. ಯಾರ್ ಯಾರೋ ಗೋರಿ ಮೇಲೆ ಚಿತ್ರದ ಹಾಡುಗಳ ಧ್ವನಿಸುರುಳಿಯನ್ನು ಹಿರಿಯ ನಿರ್ದೇಶಕ ಹೆಚ್.ವಾಸು, ಎಂ.ಡಿ.ಶ್ರೀಧರ್ ಹಾಗೂ ತೆಲುಗು ನಟ ಶಫಿ ಸೇರಿ ಬಿಡುಗಡೆ ಮಾಡಿದರು.

Leave a Reply

Your email address will not be published. Required fields are marked *


CAPTCHA Image
Reload Image