One N Only Exclusive Cine Portal

ಜನಾರ್ಧನ ರೆಡ್ಡಿ ಪರ ಪ್ರಚಾರ ಮಾಡಲಿದ್ದಾರಾ ಯಶ್!

ಇನ್ನೇನು ವಿಧಾನಸಭಾ ಚುನಾವಣೆಗೆ ತಿಂಗಳಷ್ಟೇ ಬಾಕಿ ಉಳಿದಿದೆ. ಈ ಬಾರಿ ರಾಜಕೀಯದ ರಂಗು ಚಿತ್ರರಂಗದಲ್ಲಿಯೂ ತುಸು ಹೆಚ್ಚೇ ಪ್ರತಿಫಲಿಸುತ್ತಿದೆ. ನಾನಾ ರಾಜಕೀಯ ಪಕ್ಷಗಳ ತಮ್ಮ ಪರವಾಗಿ ನಟ ನಟಿಯರನ್ನು ಪ್ರಚಾರಕ್ಕೆ ಸೆಳೆದುಕೊಳ್ಳುವ ಕಸರತ್ತನ್ನೂ ತೀವ್ರಗೊಳಿಸಿವೆ. ಹೀಗಿರುವಾಗಲೇ ಬಳ್ಳಾರಿಯಲ್ಲಿ ಗಾಲಿ ಜನಾರ್ಧನ ರೆಡ್ಡಿ ಪರವಾಗಿ ಪ್ರಚಾರ ನಡೆಸಲು ರಾಕಿಂಗ್ ಸ್ಟಾರ್ ಯಶ್ ಸಜ್ಜಾಗಿರುವ ಸುದ್ದಿ ಹರಿದಾಡಲಾರಂಭಿಸಿದೆ!

ರಾಕಿಂಗ್ ಸ್ಟಾರ್ ಯಶ್ ಈ ವರೆಗೆ ಹಲವಾರು ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡುತ್ತಾ ಸೈ ಅನ್ನಿಸಿಕೊಂಡಿದ್ದರೂ ಯಾವುದೇ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡವರಲ್ಲ. ಆದರೆ ಜನಾರ್ಧನ ರೆಡ್ಡಿ ಮತ್ತು ಯಶ್ ನಡುವೆ ಲಾಗಾಯ್ತಿನಿಂದಲೂ ಗಾಢವಾದೊಂದು ಸ್ನೇಹವಿದೆ. ಯಶ್ ಮನೆಯ ಶುಭ ಸಮಾರಂಭಗಳಿಗೆ ರೆಡ್ಡಿ ಹೋಗಿ ಬರುವಷ್ಟು ಆತ್ಮೀಯತೆಯೂ ಇದೆ. ಇದೇ ಸ್ನೇಹ ಇದೀಗ ಯಶ್ ಅವರನ್ನು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರೆಡ್ಡಿ ಪರವಾಗಿ ಕಣಕ್ಕಿಳಿದು ಪ್ರಚಾರ ನಡೆಸಲು ಪ್ರೇರೇಪಿಸಿದಂತಿದೆ.

ಈ ಪ್ರಚಾರ ಕಾರ್ಯದ ಬಗ್ಗೆ ತಾಜ್ ವೆಸ್ಟ್ ಎಂಡ್ ಹೊಟೇಲಿನಲ್ಲಿ ಜನಾರ್ಧನ ರೆಡ್ಡಿ ಮತ್ತು ಯಶ್ ಸವಿಸ್ತಾರವಾದ ರೂಪು ರೇಷೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರಂತೆ. ಏನನ್ನೇ ಮಾಡಿದರೂ ಭಿನ್ನವಾಗಿ ಆಲೋಚಿಸುವ ಯಶ್ ರೆಡ್ಡಿ ಪರವಾದ ಪ್ರಚಾರವನ್ನೂ ಕೂಡಾ ಮಾಮೂಲಿಗಿಂತಲೂ ಬೇರೆಯದಾಗಿ ರೂಪಿಸಲು ನೀಲ ನಕ್ಷೆ ಸಿದ್ಧಗೊಳಿಸಿದ್ದಾರಂತೆ. ಅಂತೂ ತಾಜ್ ವೆಸ್ಟ್ ಎಂಡ್ ಹೊಟೀಲಿನಲ್ಲಿ ಬೀಡು ಬಿಟ್ಟಿರುವ ಜನಾ ರೆಡ್ಡಿ ಮತ್ತು ಯಶ್ ಈ ಕ್ಷಣಕ್ಕೂ ಪ್ರಚಾರದ ತಂತ್ರಗಾರಿಕೆ ಹೊಸೆಯೋದರಲ್ಲಿ ತೊಡಗಿಸಿಕೊಂಡಿದ್ದಾರಂತೆ.

ಅಂತೂ ಯಶ್ ಆಗಮನದಿಂದ ಈ ಬಾರಿ ಬಳ್ಳಾರಿಯಲ್ಲಿ ಚುನಾವಣೆ ಬೇರೆಯದ್ದೇ ರಂಗು ಪಡೆಯಲಿರೋದಂತೂ ಖಚಿತ!

Leave a Reply

Your email address will not be published. Required fields are marked *


CAPTCHA Image
Reload Image