ಸದ್ಯ ಜೆಕೆ ಕೈಯಲ್ಲಿ ಅವಕಾಶಗಳ ಗೊಂಚಲಿದೆ. ಅವೆಲ್ಲದರ ಸದುಪಯೋಗಕ್ಕೆ ಸಿದ್ಧವಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸದ್ಯದಲ್ಲೇ ಸ್ಯಾಂಡಲ್‌ವುಡ್ ಹೊಸ ತಾರೆಯೊಂದರ ಉದಯಕ್ಕೆ ಸಾಕ್ಷಿಯಾಗಲಿದೆ. ಇವತ್ತು ಜೆಕೆ ಬರ್ತಡೇ. ಈ ಸಂದರ್ಭದಲ್ಲಿ  ಅವರನ್ನು ಮಾತಾಡಿಸೋಣ ಬನ್ನಿ..

ಈಗ ಕಾಲ ಬದಲಾಗಿದೆ. ಜನಪ್ರಿಯತೆಯ ಮಾನದಂಡಕ್ಕೆ ಬೆಳ್ಳಿತೆರೆ, ಕಿರುತೆರೆ ಎಂಬ ಭೇದ ಅಳಿಯುತ್ತ ಬಂದಿದೆ. ಸಿನೆಮಾ ಹೀರೋಗಳಿಗೆ ಇರುವಷ್ಟೇ, ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚು ಅಭಿಮಾನಿಗಳು ಕಿರುತೆರೆಯ ಸ್ಟಾರ್‌ಗಳಿಗೆ ಇದ್ದಾರೆ. ಕಲರ್ಸ್ ಕನ್ನಡ ಜನಪ್ರಿಯ ಧಾರಾವಾಹಿ  ’ಅಶ್ವಿನಿ ನಕ್ಷತ್ರ ಮೂಲಕ ಹೆಸರು ಮಾಡಿದ ಕಾರ್ತಿಕ್ ಜಯರಾಂ ಅಲಿಯಾಸ್ ಜೆಕೆ ಅಂಥ ಒಬ್ಬ ಜನಪ್ರಿಯ ನಟ. ಕ್ರಿಕೆಟ್ ಮೂಲಕ ಪರಿಚಯವಾಗಿ ಕಿಚ್ಚ ಸುದೀಪ್ ಗರಡಿಯಲ್ಲಿ ಜಾಗ ಗಿಟ್ಟಿಸಿದ ಕಾರ್ತಿಕ್, ’ಜಸ್ಟ್ ಲವ್ ಅನ್ನುತ್ತ ಸ್ಯಾಂಡಲ್‌ವುಡ್ಡಿಗೆ ಕಾಲಿಟ್ಟವರು. ವಿಷ್ಣುವರ್ಧನ, ಕೆಂಪೇಗೌಡ, ವರದನಾಯಕ ಸಿನೆಮಾಗಳಲ್ಲೂ ಆಫರ್ ಪಡೆದು ಸೈಯೆನಿಸಿಕೊಂಡರು. ದುನಿಯಾ ವಿಜಯ್ ಅವರ ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್ ಚಿತ್ರದಲ್ಲಿಯೂ ನಟಿಸಿದರು. ಈ ಎಲ್ಲ ಚಿತ್ರಗಳಲ್ಲಿ ಅವರದ್ದು ನೆಗಟಿವ್ ಶೇಡ್ ಪಾತ್ರ. ಈಗ ಇವರು ಮಾಸ್ಟರ್ ಕಿಶನ್ ನಿರ್ದೇಶನದ ಕೇರಾಫ್ ಫುಟ್ ಪಾತ್ – ೨ರಲ್ಲಿ ಜೆಕೆ ಭ್ರಷ್ಟ ಅಧಿಕಾರಿಯ ಪಾತ್ರ ನಿರ್ವಹಿಸಿದ್ದರು.

ಹೀಗೆ ಸಣ್ಣ ಮಟ್ಟಿನ ಖಳ ನಾಯಕನ ಪಾತ್ರ ಮಾಡುತ್ತಲೇ ಸ್ಯಾಂಡಲ್ ವುಡ್ ಗೆ ಎಂಟ್ರಿ ಪಡೆದುಕೊಂಡ ಜೆಕೆ  ವೀರ ಧೀರ ಶೂರನ್ ಎಂಬ ತಮಿಳು ಚಿತ್ರದ ಖಳ ನಾಯಕನಾಗಿ ಕಾಲಿವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಶಂಕರ್ ದಯಾಳ್ ಈ ಚಿತ್ರದ ನಿರ್ದೇಶಕರು. ಚಿತ್ರದ ನಾಯಕನಾಗಿ ವಿಷ್ಣು ವಿಶಾಲ್ ನಟಿಸಿದ್ದಾರೆ. ಸಿಸಿಎಲ್ ಮೂಲಕ ಪರಿಚಯವಿದ್ದ ಚಿತ್ರದ ನಾಯಕ ವಿಷ್ಣು ವಿಶಾಲ್ ನಿರ್ದೇಶಕರಿಗೆ ಜೆ.ಕೆ ಬಗ್ಗೆ ಮಾಹಿತಿ ನೀಡಿದ್ದರಂತೆ. ಮೊದಲ ನೋಟದಲ್ಲೇ ಮೆಚ್ಚುಗೆಯಾಗಿ ಆಫರ್ ನೀಡಿದ್ದಾರೆ ಶಂಕರ್ ದಯಾಳ್. ಕನ್ನಡದ ಕಿರುತೆರೆಯ ಹುಡುಗ ಕಾಲಿವುಡ್ ಅಂಗಳ ತಲುಪಿದ ಎನ್ನುವಷ್ಟಕ್ಕೇ ಜೆಕೆಯ ಸಾಧನೆ ಮುಗಿಯುವುದಿಲ್ಲ. ಈತ ಹಿಂದಿ ಕಿರುತೆರೆಯಲ್ಲೂ ಭರ್ಜರಿ ಓಪನಿಂಗ್ ಪಡೆದಿದ್ದಾರೆ. ಹಿಂದಿ ವಾಹಿನಿಯೊಂದರಲ್ಲಿ ’ಸೀಯಾಕಾ ರಾಮ್ ಎಂಬ ರಾಮಾಯಣ ಕತೆಯಾಧಾರಿತ ಧಾರವಾಹಿಯಲ್ಲಿ ಜೆಕೆ ರಾವಣನಾಗಿ ಮಿಂಚಿದ್ದರು.

ಜೆಕೆಯ ಭರ್ಜರಿ ದೇಹವನ್ನು ನೋಡಿದವರು ಸೀಯಾ ಕಾ ರಾಮ್ ನಿರ್ದೇಶಕರಿಗೆ ಜೆಕೆ ಬಗ್ಗೆ ತಿಳಿಸಿದ್ದರಂತೆ. ನಂತರ ಆಡಿಷನ್ ಸಮಯದಲ್ಲಿ ಜೆಕೆ ರಾವಣನಾಗಿ ಅಭಿನಯಿಸಿದ ವಿಡಿಯೋವನ್ನು ಚಿತ್ರ ತಂಡಕ್ಕೆ ಕಳಹಿಸಿದ್ದರು. ಈ ವಿಡಿಯೋದಲ್ಲಿ ಜೆಕೆ ಅಭಿನಯ ಚಿತ್ರತಂಡಕ್ಕೆ ಇಷ್ಟವಾಗಿ ಅಂತಿಮವಾಗಿ ಜೆಕೆ ಅವರನ್ನೇ ರಾವಣನ ಪಾತ್ರಕ್ಕೆ ಆಯ್ಕೆ ಮಾಡಲಾಗಿತ್ತು. ಫಿಸಿಕ್, ರೂಪ, ಬಾಡಿ ಲಾಂಗ್ವೇಜ್, ಡಾನ್ಸ್, ಫೈಟ್, ಲುಕ್ಸ್ ಎಲ್ಲದರಲ್ಲೂ ಔಟ್‌ಸ್ಟ್ಯಾಂಡಿಂಗ್ ಆಗಿರುವ ಕಾರ್ತಿಕ್ ಹಿಂದಿ ಕಿರುತೆರೆಯಿಂದಲೂ ಬಡ್ತಿ ಪಡೆದದ್ದು ಅಚ್ಚರಿಯೇನಿಲ್ಲ. ಬಿಗ್ ಬಾಸ್ ಕಾರ್ಯಕ್ರಮದ ಕೊನೇದಿನದ ತನಕ ಪೈಪೋಟಿ ನೀಡಿ ಅಗಣಿತ ಜನರ ಹೃದಯ ಗೆದ್ದಿದ್ದೂ ಆಯಿತು. ಹೀಗೆ ಕಿರುತೆರೆ ಹಿರಿತೆರೆಗಳೆರಡರಲ್ಲೂ ಅವಕಾಶ ಹಾಗೂ ಜನಪ್ರಿಯತೆಗಳನ್ನು ಬಾಚುತ್ತ ಸಾಗಿರುವ ಕಾರ್ತಿಕ್ ಜಯರಾಂ ಉರ್ಫ್ ಜೆಕೆಗೆ ಭವಿಷ್ಯದ ಸ್ಟಾರ್ ಆಗುವ ಎಲ್ಲ ಲಕ್ಷಣಗಳೂ ಇವೆ.

ಕಾರ್ತಿಕ್ ಜಯರಾಂ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ. ಓದಿದ್ದು, ಬೆಳೆದಿದ್ದು ಬೆಂಗಳೂರಲ್ಲಿ. ಚಿಕ್ಕ ಹುಡುಗನಿಂದಲೇ ಮಹಾನ್ ತುಂಟ. ಕ್ರಿಕೆಟ್ ಅಂದ್ರೆ ಪ್ರಾಣ. ಎಂಜಿನಿಯರಿಂಗ್ ಮುಗಿಸಿ ಒಂದು ವರ್ಷ ದುಬೈನಲ್ಲಿ ಕೆಲಸ ಮಾಡಿ ಮರಳಿ ಬಂದ ಕಾರ್ತಿಕ್ ಮತ್ತೆ ಆ ಉದ್ಯೋಗದತ್ತ ತಲೆ ಹಾಕಿಯೂ ಮಲಗಲಿಲ್ಲವಂತೆ!

ನಟನಾ ಕ್ಷೇತ್ರಕ್ಕೆ ಜೆಕೆ ಬಂದಿದ್ದು ಆಕಸ್ಮಿಕ. ಕಾಲೇಜಿನಲ್ಲಿರುವಾಗ ಪ್ರತಿ ಶುಕ್ರವಾರ ಕ್ಲಾಸ್ ಬಂಕ್ ಮಾಡಿ ಸ್ವಾಗತ್ ಥಿಯೇಟರಿನಲ್ಲಿ ಸಿನೆಮಾ ನೋಡ್ತಿದ್ದರಂತೆ. ಅವರ ಸಿನೆಮಾ ಆಸಕ್ತಿ ಇಷ್ಟಕ್ಕೆ ಸೀಮಿತವಾಗಿತ್ತು. ಮುಂದೆ ಕಿರುತೆರೆಯಲ್ಲಿ ಅವಕಾಶ ಪಡೆದ ಮೇಲೆ ಬದುಕಿನ ಗತಿಯೇ ಬದಲಾಗಿಹೋಯ್ತು ಅನ್ನುತ್ತಾರೆ ಕಾರ್ತಿಕ್. ನಟನೆಯಲ್ಲಿ ಆಸಕ್ತಿ ಬಂದ ಮೇಲೆ ಅದಕ್ಕೆ ಬೇಕಾದ ಸಂಪೂರ್ಣ ಡೆಡಿಕೇಷನ್ನಿನಿಂದ ಕೆಲಸ ಮಾಡಿದೆ. ಅದೇ ನನ್ನ ಯಶಸ್ಸಿನ ಮಂತ್ರ ಅನ್ನುವ ಕಾರ್ತಿಕ್ ಸಮಯ ಸಿಕ್ಕಾಗೆಲ್ಲ ಜಿಮ್‌ನಲ್ಲಿ ಕಾಲ ಕಳೆಯುತ್ತಾರಂತೆ. ದೇಹವನ್ನು ಉತ್ತಮವಾಗಿ ಇಡುವುದಲ್ಲದೆ ಮನಸ್ಸನ್ನೂ ಉಲ್ಲಸಿತವಾಗಿಟ್ಟುಕೊಳ್ಳಲು ಅದು ಸಹಕಾರಿ ಅನ್ನುತ್ತಾರೆ ಜೆಕೆ.

ಸದ್ಯ ಕಿರುತೆರೆ ಸೂಪರ್ ಸ್ಟಾರ್ ಜೆಕೆ ಕೈಯಲ್ಲಿ ಅವಕಾಶಗಳ ಗೊಂಚಲಿದೆ. ಅವೆಲ್ಲದರ ಸದುಪಯೋಗಕ್ಕೆ ಸಿದ್ಧವಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸದ್ಯದಲ್ಲೇ ಸ್ಯಾಂಡಲ್‌ವುಡ್ ಹೊಸ ತಾರೆಯೊಂದರ ಉದಯಕ್ಕೆ ಸಾಕ್ಷಿಯಾಗಲಿದೆ. ಇವತ್ತು ಜೆಕೆ ಬರ್ತಡೇ. ಈ ಸಂದರ್ಭದಲ್ಲಿ  ಅವರನ್ನು ಮಾತಾಡಿಸೋಣ ಬನ್ನಿ..

  •   ಕಾರ್ತಿಕ್ ಜಯರಾಂ ಗಿಂತ ಜೆಕೆಯೇ ಹೆಚ್ಚು ಪಾಪ್ಯುಲರ್ ಅಲ್ವ?

ಖಂಡಿತ. ಆ ಬಗ್ಗೆ ನನಗೆ ಖುಷಿಯಿದೆ. ನನ್ನ ಹೆಸರು ಕಾರ್ತಿಕ್ ಆಗಿದ್ದರೂ ಬಹುತೇಕರು ಗುರುತಿಸೋದು ಜೆಕೆ ಅಂತಲೇ. ನನಗೂ ಅದು ರೂಢಿಯಾಗಿಬಿಟ್ಟಿದೆ.

  •   ಇಂಜಿನಿಯರಿಂಗ್ ಓದಿಕೊಂಡು ಸಿನೆಮಾಕ್ಕೆ ಕಾಲಿಟ್ಟಿದ್ದು ಹೇಗೆ?

ನನಗೆ ನಟನೆಯಲ್ಲಿ ಅಂತಹ ಆಸಕ್ತಿ ಇರಲಿಲ್ಲ. ಆದರೆ ಆಸಕ್ತಿ ಬಂದಮೇಲೆ ಅವಕಾಶ ಸಿಕ್ತಿರಲಿಲ್ಲ. ಲೀಡ್ ರೋಲ್ ಅಥವಾ ನಾಯಕ ಪಾತ್ರ ಕೇಳಿದ್ರೆ ನಿರಾಕರಣೆಯೇ ಉತ್ತರವಾಗಿರ‍್ತಿತ್ತು. ಸೀರಿಯಲ್ ಫೀಲ್ಡ್‌ನಿಂದ ಆಫರ್ ಬಂದಾಗ ನನಗೆ ಈ ಫೀಲ್ಡ್ ಬಗ್ಗೆ ನಂಬಿಕೆ ಇರಲಿಲ್ಲ. ಆದ್ರೆ ಅಲ್ಲಿವರೆಗೆ ಕೈಕೊಟ್ಟಿದ್ದ ಅದೃಷ್ಟ ಕೈಹಿಡಿಯಿತು. ನಟನಾ ಕ್ಷೇತ್ರದಲ್ಲಿ ನಾನು ಗುರುತಿಸಿಕೊಂಡೆ.

  • ಜೆಕೆಗೆ ಸ್ವಲ್ಪ ಜಂಭ ಅಂತಾರೆ…

ನಾನಾಯ್ತು ನನ್ನ ಕೆಲ್ಸ ಆಯ್ತು ಅಂತಿರೋ ವ್ಯಕ್ತಿ ನಾನು. ಇದೇ ಕಾರಣಕ್ಕೆ ಹೆಚ್ಚಿನವ್ರು ನನಗೆ ಅನ್ಕೊಂಡು ಬಿಡ್ತಾರೆ. ಹಾಗೆ ಜಂಭ ಇರೋದೇ ನಿಜವಾಗಿದ್ರೆ ನಾನು ಈವರೆಗೆ ಬರೋಕೆ ಸಾಧ್ಯವೇ ಆಗ್ತಿರಲಿಲ್ಲ. ಅಂಥವರಿಗೆ ಯಾರು ತಾನೇ ಕರೆದು ಅವಕಾಶ ಕೊಡ್ತಾರೆ ಹೇಳಿ?

  •  ಮೋಸ್ಟ್ ಎಲಿಜಬಲ್ ಬ್ಯಾಚುಲರ್ ನೀವು. ಮದುವೆ ಬಗ್ಗೆ..?

ಇಲ್ಲಿಯವರೆಗೆ ಮದುವೆ ಯೋಚನೆ ಮಾಡಿಲ್ಲ. ಗಾಳಿ ಸುದ್ದಿ ಬಗ್ಗೆನೂ ತಲೆಕೆಡಿಸಿಕೊಂಡಿಲ್ಲ. ಆರಾಮವಾಗಿ ಬ್ಯಾಚುಲರ್ ಲೈಫ್ ಎಂಜಾಯ್ ಮಾಡ್ತಿದ್ದೀನಿ.

  • ನಿಮ್ಮ ಮೆಚ್ಚಿನ ಹವ್ಯಾಸ?

ಸ್ವಲ್ಪ ಬಿಡುವಿದ್ರೂ ಜಿಮ್‌ಗೆ ಹೋಗ್ತ್ಪಿನಿ. ಅದು ನನ್ನದೇ ಲೋಕ. ಅಲ್ಲಿಗೆ ಹೋದರೆ ಸಂಪೂರ್ಣ ಕಳೆದುಹೋಗ್ತೀನಿ ನಾನು. ಮನಸ್ಸಲ್ಲಿ ಏನೇ ಕಹಿ, ಬೇಜಾರಿದ್ರೂ ಎಲ್ಲ ಕಳ್ಕೊಂಡು ಫ್ರೆಶ್ ಆಗ್ತೀನಿ. ಶಾಪಿಂಗ್ ನನಗೆ ಪ್ರಿಯವಾದ ಹವ್ಯಾಸ. ಅಲ್ಲೇ ತಗೋಬೇಕು ಇಲ್ಲೇ ತಗೋಬೇಕು ಅಂತೇನಿಲ್ಲ. ಆದ್ರೆ, ಯಾರೂ ಹಾಕ್ಕೊಳ್ಳದೆ ಇರೋ ಡಿಸೈನ್‌ಗಳನ್ನೇ ಹಾಕ್ಕೋಬೇಕು ಅನ್ನೋದು ನನ್ನ ಚಾಯ್ಸ್. ಸೋ ಶಾಪಿಂಗನ್ನು ಎಂಜಾಯ್ ಮಾಡ್ತೀನಿ.

  • ಹೊಸಬರಿಗೆ ನೀವು ಕೊಡಬಯಸುವ ಸಕ್ಸಸ್ ಮಂತ್ರ?

ಯಾವತ್ತೂ ಯುನೀಕ್ ಅನ್ನಿಸೋ ಸ್ವಭಾವ ರೂಢಿಸಿಕೊಳ್ಳಬೇಕು. ಇಡೀ ವ್ಯಕ್ತಿತ್ವದಲ್ಲಿ ಆ ಸಪರೇಶನ್ ಎದ್ದು ಕಾಣುವಂತಿರಬೇಕು. ಹಾಕ್ಕೊಳ್ಳೋ ಡ್ರೆಸ್, ಅಪಿಯರೆನ್ಸ್, ಆಡೋ ಮಾತು ಎಲ್ಲರದರಲ್ಲೂ ಆ ಅನನ್ಯತೆ ಇರಬೇಕು. ಯಾರನ್ನೂ ಅನುಕರಣೆ ಮಾಡಬಾರದು. ಒಳ್ಳೆಯದೋ ಕೆಟ್ಟದ್ದೋ ಸ್ವಂತಿಕೆ ಇರಬೇಕು. ಆಟಿಟ್ಯೂಡ್ ತೋರಿಸುವವರಿಗೆ ಸೋಲು ಕಟ್ಟಿಟ್ಟ ಬುತ್ತಿ. ಉಡಾಫೆ ಅಥವಾ ದುರಹಂಕಾರದಿಂದ ಮಾತಾಡಿದ್ರೆ ಬೆಳವಣಿಗೆಯೂ ಸಾಧ್ಯವಿಲ್ಲ, ಹೆಸರೂ ಉಳಿಯಲ್ಲ.

  • ಇಂದು ನಿಮ್ಮ ಹುಟ್ಟುಹಬ್ಬ.. ಏನು ಸ್ಪೆಷಲ್ಲು?

ಸೈಲೆಂಟಾಗಿ ಮನೇಲಿದ್ದು, ಯಾರಿಗೂ ತೊಂದರೆ ಕೊಡದಂತೆ ಹುಟ್ಟುಹಬ್ಬ ಆಚರಿಸಿಕೊಳ್ಳುವುದೇ ಸ್ಪೆಷಲ್ಲು.

  • ಈ ವರ್ಷ ಮದುವೆಯಾಗ್ತಿದ್ದೀರಿ ಅಂತಾ ಸುದ್ದಿ ಇದೆಯಲ್ಲಾ?

ಈ ವರ್ಷ ಅಲ್ಲ… ಪ್ರತೀ ವರ್ಷ ಸುದ್ದಿ ಇದ್ದೇ ಇರತ್ತೆ. ಭಟ್ ಮದುವೆ ಮಾತೇ ಇಲ್ಲ ಈಗ!

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

‘ಶಿವ’ಭಕ್ತನ ಪುರಾಣ!

Previous article

ಕೊರೋನಾ ಸಂಕಷ್ಟಕ್ಕೆ ಸ್ಪಂದಿಸುತ್ತಿದೆ ಸೈಫ್ ಸೇನೆ!

Next article

You may also like

Comments

Leave a reply

Your email address will not be published. Required fields are marked *