ನೀನು ದಿನಾ ಇಷ್ಟು ಊಟ ಮಾಡ್ತೀಯಾ? ಒಂದೊಂದು ಸರ್ತಿ ಇಷ್ಟೆಲ್ಲ ಊಟ ಕೊಡಿಸುವಷ್ಟು ದುಡ್ಡು ನನ್ನ ಹತ್ರ ಇರುತ್ತೋ ಇಲ್ವೋ…. ಎಂದು ಬಿಕ್ಕುತ್ತಾ ಹೇಳುತ್ತಾನೆ ಹುಡುಗ. ಇಲ್ಲ ಕಣೋ, ಇವತ್ತು ನೀನು ಹೋಗ್ತಿದ್ದೀಯ ಅಂತ ಬೇಜಾರಲ್ಲಿ ಬೆಳಿಗ್ಗೆಯಿಂದ ಏನೂ ತಿಂದಿರಲಿಲ್ಲ, ಅದಕ್ಕೆ ಸ್ವಲ್ಪ ಹೆಚ್ಚು ತಿಂದುಬಿಟ್ಟೆ, ಸಾರಿ ಕಣೋ ಎನ್ನುತ್ತಾಳೆ ಹುಡುಗಿ…
ಇದು ಎಲ್ಲ ಹುಡುಗರ ಎದೆಯೊಳಗಿನ ಗಿಲ್ಟು, ಆತಂಕ. ಪ್ರೇಮ ಅನ್ನೋದು ಏನೇನೆಲ್ಲ ಮಾತಾಡಿಸುತ್ತೆ, ಚಂದ್ರನನ್ನೇ ಮಡಿಲಿಗೆ ತಂದುಕೊಡ್ತೀನಿ ಅಂತೀವಿ. ಆದರೆ ಬದುಕಿನ ವಾಸ್ತವ ಬೇರೆ. ಕಂಬ್ಲಿಹುಳ ಎಂಬ ಸಿನಿಮಾ ಕಟ್ಟಿಕೊಟ್ಟಿರುವ ಹುಡುಗರು ಹೇಳಲು ಹೊರಟಿರುವುದು ಅದನ್ನೇ. ನವನ್ ಶ್ರೀನಿವಾಸ್ ಎಂಬ ಅಸಾಧ್ಯ ಪ್ರತಿಭೆಯ ಹುಡುಗನಿಗೆ, ಕನ್ನಡ ಚಿತ್ರರಂಗದಲ್ಲಿ ಬೇರೂರುವ ಎಲ್ಲ ಅರ್ಹತೆಯೂ ಇದೆ. ಅಂಜನ್ ಪ್ರಸಾದ್, ಅಶ್ವಿತಾ ಹೆಗಡೆ ನಾಯಕ, ನಾಯಕಿಯರಾಗಿ ಸಿಕ್ಕಾಪಟ್ಟೆ ಇಷ್ಟವಾಗುತ್ತಾರೆ. ಉಳಿದ ಪಾತ್ರಗಳೂ ಅಷ್ಟೆ, ಅವರೆಲ್ಲರದೂ ಸಹಜ ಅಭಿನಯ.
ಮಲೆನಾಡಿನ ಕೊಪ್ಪದವರಾದ ನವನ್ ಶ್ರೀನಿವಾಸ್ ಮಲೆನಾಡಿನ ಒಂದು ಪುಟ್ಟ ಪಟ್ಟಣದಲ್ಲಿ ನಡೆಯುವ ಕಥೆಯನ್ನೇ ಹೇಳಿದ್ದಾರೆ, ಮಲೆನಾಡಿನವನೇ ಆದ ನನಗೆ ಸಿನಿಮಾ ಇನ್ನಷ್ಟು ರಿಲೇಟ್ ಮಾಡಿಕೊಳ್ಳಲು ಸಾಧ್ಯವಾಗಿಸಿದೆ. ಸಿನಿಮಾ ಬದಲಿಗೆ ನಮ್ಮ ಸುತ್ತಲಿನ ಘಟನೆಗಳನ್ನೇ ನೋಡುತ್ತಿದ್ದೇವೆ ಎನಿಸುವಂತೆ ಮಾಡುವಲ್ಲಿ ನವನ್ ಯಶಸ್ವಿಯಾಗಿದ್ದಾರೆ. ಅಷ್ಟಕ್ಕೂ ಕಂಬ್ಳಿಹುಳದಲ್ಲಿ ಒಂದು ಕಥೆಯಿಲ್ಲ. ಹಲವು ಕಥೆಗಳ ಗುಚ್ಚವನ್ನೇ ಕೊಟ್ಟು ನಿಮಗಿಷ್ಟವಾಗಿದ್ದನ್ನು ಹೆಕ್ಕಿಕೊಳ್ಳಿ ಎನ್ನುತ್ತಾರೆ ನವನ್. ಇದು ಸಿನಿಮಾದ ಶಕ್ತಿಯೂ ಹೌದು, ಮಿತಿಯೂ ಹೌದು. ಈ ಥರದ ಪ್ರಯೋಗಗಳನ್ನು ತಮಿಳು, ಮಲಯಾಳಂನಲ್ಲಿ ನಾವು ನೋಡಿದ್ದೇವೆ. ಕನ್ನಡದ ಪ್ರೇಕ್ಷಕರಿಗೆ ಇದು ಹೊಸದು. ಒಂದು ಕಥೆಯೊಳಗೆ ಹೋಗುತ್ತಿದ್ದಂತೆ ಇನ್ನೊಂದು ಕಥೆಗೆ ಡಿಸ್ ಕನೆಕ್ಟ್ ಆಗುವ ಸಾಧ್ಯತೆ ಇದ್ದೇ ಇರುತ್ತದೆ, ಅದು ಸಿನಿಮಾದ ಮಿತಿ. ಅಲ್ಲಲ್ಲಿ ಒಂಚೂರು ಲ್ಯಾಗ್ ಅನ್ನಿಸಿದರೆ ಅದಕ್ಕೆ ಇದೇ ಮುಖ್ಯ ಕಾರಣ.
ಕಂಬ್ಳಿಹುಳ ನನಗೆ ಇಷ್ಟವಾಗಿದ್ದು, ಅದು ಮನುಷ್ಯ ಸಂಬಂಧಗಳ ತೀವ್ರತೆಯನ್ನು ಹೇಳುವ ಧಾಟಿಗೆ. ತಾಯಿ-ಮಗ, ಗೆಳೆಯರು, ಪ್ರೇಮಿಗಳು ಅವರ ನಡುವಿನ ಸಂಬಂಧಗಳು ನಿಮ್ಮನ್ನು ಕಾಡಿಸದೇ ಇರುವುದಿಲ್ಲ. ಅಲ್ಲಿ ನಿಮ್ಮ ಮತ್ತು ನಿಮ್ಮ ಸುತ್ತಮುತ್ತಲಿನ ಜೀವಗಳ ಮುಖಗಳನ್ನು ಕಂಡರೆ ಅದು ಕಂಬ್ಳಿಹುಳದ ಗೆಲುವು. ಖುಷಿಯ ವಿಷಯವೆಂದರೆ ಇದೆಲ್ಲವನ್ನೂ ಫಿಲ್ಮಿ ಫಿಲ್ಮಿಯಾಗಿ ಹೇಳುವುದಿಲ್ಲ. ಯಾವ ಮಾತೂ ಕೃತಕವೆನಿಸೋದಿಲ್ಲ. ಸಾವಿನ ಅಂಚಿನಲ್ಲಿರುವ ತಾಯಿಯ ಪಾದ ಹಿಡಿದುಕೂತ ಮಗ ನಾವೇ ಆಗಿಬಿಡುವಷ್ಟು ಪರಿಣಾಮಕಾರಿಯಾಗಿ ದೃಶ್ಯಗಳನ್ನು ಹೆಣೆದಿದ್ದಾರೆ ನವನ್.
ಕಂಬ್ಳಿಹುಳ ಹೊಸಬರ ಚಿತ್ರ, ಅವರ ಬೆನ್ನಿಗೆ ಯಾವ ದೊಡ್ಡ ಶಕ್ತಿಯೂ ಇಲ್ಲ. ಅವರಿಗೆ ಬೆಂಗಳೂರೂ ಕೂಡ ಹೊಸದು. ಮೊದಮೊದಲ ದಿನಗಳಲ್ಲಿ ಗೆಳೆಯರು, ಬಂಧುಗಳನ್ನು ಕರೆತಂದು ಚಿತ್ರಮಂದಿರ ತುಂಬಿಸುವ ಶಕ್ತಿಯೂ ಅವರಿಗಿಲ್ಲ. ಹೀಗಾಗಿ ಇರುವ ನಾಲ್ಕು ಥಿಯೇಟರುಗಳಲ್ಲಿ ನಾಳೆ ಪ್ರೇಕ್ಷಕರು ಬರದಿದ್ದರೆ ನಾಡಿದ್ದು ಈ ಹುಡುಗರು ಖಾಲಿ ಕೈಯಲ್ಲಿ ವಾಪಾಸು ಹೋಗಿಬಿಡುತ್ತಾರಲ್ಲ ಎಂದು ಯಾರಿಗಾದರೂ ಸಂಕಟವಾಗುತ್ತದೆ. ಸಾಧ್ಯವಾದಷ್ಟು ಬೇಗ ಸಿನಿಮಾ ನೋಡಿ. ಇದೇನು ಅತ್ಯದ್ಭುತ ಸಿನಿಮಾ ಏನಲ್ಲ. ಆದರೆ ಈ ಹುಡುಗರು ಗೆದ್ದರೆ ನಿಜಕ್ಕೂ ಅದ್ಭುತಗಳನ್ನು ಸೃಷ್ಟಿಸಬಲ್ಲರು. ಆ ಶಕ್ತಿ ಅವರಿಗಿದೆ. ಸಾಧ್ಯವಾದರೆ ಕನಸಿನ ರೆಕ್ಕೆ ಕಟ್ಟಿ ಹಾರುತ್ತಿರುವ ಈ ಚಿಟ್ಟೆಗಳ ಕಂಬ್ಳಿಹುಳ ನೋಡಿ
No Comment! Be the first one.