ಬೇಕು ಅಂದೋರು ಜೊತೆಗಿರಕ್ಕಾಗ್ತಿಲ್ಲ… ಬೇಡ ಅಂದೋರು ಬಿಟ್ಟುಹೋಗಕ್ಕಾಗ್ತಿಲ್ಲ… ಏನ್ ವಿಚಿತ್ರ ಅಲ್ವಾ?
– ಹೊಸ ದಿನಚರಿ ಹೆಸರಿನ ಚಿತ್ರವೊಂದು ಈ ವಾರ ಬಿಡುಗಡೆಯಾಗಲಿದೆ. ಆ ಸಿನಿಮಾದ ಟ್ರೇಲರಿನಲ್ಲಿರುವ ಮಾತುಗಳಿವು.
ಹೊಸ ದಿನಚರಿಯಯಲ್ಲಿ ಸಂಬಂಧಗಳು, ವಾತ್ಸಲ್ಯ, ಪ್ರೀತಿ, ಸಹಾನುಭೂತಿ ಈ ನಾಲ್ಕನ್ನೂ ಭಿನ್ನ ಭಾಗಗಳಾಗಿ ವಿಭಾಗಿಸಿ, ಮತ್ತೆ ಅದನ್ನು ಒಟ್ಟು ಸೇರಿಸಿ ಮನಸ್ಸಿಗೆ ಹತ್ತಿರವಾಗುವ ಕಥೆ ಹೆಣೆದಿದ್ದಾರೆ ಅನ್ನಿಸುತ್ತಿದೆ. ಬದುಕಿನ ಒಳಾರ್ಥ, ದ್ವಂದ್ವ, ಅಸ್ಪಷ್ಟತೆ… ಇಂಥವುಗಳ ಸುತ್ತಲಿನ ಕಂಟೆಂಟು ಇದರಲ್ಲಿರಬಹುದು.
ಯಾವ ಅಬ್ಬರ, ಅರಚಾಟಗಳಿಲ್ಲದ ಟ್ರೇಲರಿನಲ್ಲಿ ಆಪ್ತವೆನಿಸುವ ವಿಚಾರಗಳಿವೆ. ಹೊಸ ದಿನಚರಿಯ ಹಾಡುಗಳು ಕೂಡಾ ಅಷ್ಟೇ ಸೊಗಸಾಗಿ ಮೂಡಿಬಂದಿವೆ. ಇವನ್ನೆಲ್ಲಾ ಗಮನಸಿದಾಗ ಒಂದ್ಸಲ ಸಿನಿಮಾ ನೋಡಿಬಿಡಬೇಕು ಎನ್ನುವ ಭಾವ ಮೂಡುವಂತಿದೆ.
ಎಲ್ಲರ ಜೀವನದಲ್ಲೂ ಪ್ರೀತಿ ಇದ್ದೇ ಇರುತ್ತದೆ. ಆದರೆ ಪ್ರೀತಿಸಿದ ವ್ಯಕ್ತಿ ಕೊನೆಯವರೆಗೂ ಇರುತ್ತಾರಾ? ಅವರಿಲ್ಲದೇ ಬೇರೊಬ್ಬರು ಜೀವನದಲ್ಲಿ ಬಂದಾಗ ಏನಾಗುತ್ತದೆ? ಅನ್ನೋದು “ಹೊಸ ದಿನಚರಿ”ಯ ಕಥಾಸಾರಾಂಶ. ಈ ಚಿತ್ರದಲ್ಲಿರುವ ಬಹುತೇಕರು ಹೊಸಬರು. ಆದರೆ, ಕಿರುಚಿತ್ರಗಳನ್ನು ರೂಪಿಸಿದ ಅನುಭವ ಹೊಂದಿದ್ದಾರೆ. ಮೃತ್ಯುಂಜಯ ಶುಕ್ಲ, ಅಲೋಕ್ ಚೌರಾಸಿಯಾ ಹಾಗೂ ಗಂಗಾಧರ ಸಾಲಿಮಠ ಹೊಸ ದಿನಚರಿಗೆ ಬಂಡವಾಳ ಹೂಡಿದ್ದಾರೆ. ಕೀರ್ತಿ ಶೇಖರ್ ಹಾಗೂ ವೈಶಾಖ್ ಪುಷ್ಪಲತಾ ಜಂಟಿಯಾಗಿ ನಿರ್ದೇಶಿಸಿರುವ ಚಿತ್ರವಿದು.
ಬಾಬು ಹಿರಣ್ಣಯ್ಯ, ಅರುಣಾ ಬಾಲರಾಜ್, ದೀಪಕ್ ಸುಬ್ರಹ್ಮಣ್ಯ, ಮಂದಾರ, ವರ್ಷ, ಚೇತನ್ ವಿಕ್ಕಿ, ವಿವೇಕ್ ದೇವ್, ಶ್ರೀಪ್ರಿಯ, ಸುಪ್ರೀತಾ ಗೌಡ ಹಾಗೂ ಬೇಬಿ ಮಾನಿನಿ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
No Comment! Be the first one.