ಟ್ರೈಲರ್ ಮೂಲಕ ಯಶ್ ಅಭಿನಯದ ಚಿತ್ರ ದೇಶಾಧ್ಯಂತ ನಿರೀಕ್ಷೆಯ ತರಂಗಗಳನ್ನೆಬ್ಬಿಸಿದೆ. ಬಹು ನಿರೀಕ್ಷಿತ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಗಿಟ್ಟಿಸಿಕೊಂಡಿರೋ ಈ ಟ್ರೈಲರ್ ಬಗ್ಗೆ ಎಲ್ಲ ಭಾಷೆಗಳಿಂದಲೂ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಇದೀಗ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಬಾಲಯ್ಯ ಕೂಡಾ ಕೆಜಿಎಫ್ ಟ್ರೈಲರ್ ಕಂಡು ಭೇಷ್ ಅಂದಿದ್ದಾರೆ!
ಬಾಲಯ್ಯ ಅಂದರೇನೇ ವಿಕ್ಷಿಪ್ತ ವ್ಯಕ್ತಿತ್ವಕ್ಕೆ ಹೆಸರಾದ ನಟ. ಅವರು ಬಡಪೆಟ್ಟಿಗೆ ಯಾರನ್ನೂ, ಯಾವುದನ್ನೂ ಮೆಚ್ಚಿಕೊಳ್ಳುವವರಲ್ಲ. ಚಿತ್ರಗಳ ವಿಚಾರದಲ್ಲಂತೂ ಮುಖಕ್ಕೆ ಹೊಡೆದಂತೆ ಅಭಿಪ್ರಾಯ ಹೇಳೋದರಲ್ಲಿ ಅವರು ನಿಸ್ಸೀಮರು. ಇದೆಲ್ಲದರಾಚೆಗೆ ಅವರು ಒಂದು ಚಿತ್ರವನ್ನು ಮೆಚ್ಚಿಕೊಂಡರೆಂದರೆ ಆ ಚಿತ್ರ ಗೆಲ್ಲೋದು ಗ್ಯಾರೆಂಟಿ ಎಂಬಂಥಾ ವಾತಾವರಣವೇ ಇದೆ. ಇದೀಗ ಅಂಥಾ ಬಾಲಯ್ಯನೇ ಕೆಜಿಎಫ್ ಟ್ರೈಲರ್ ಅನ್ನು ಮೆಚ್ಚಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರೋ ಬಾಲಯ್ಯ ತಾವು ಸದಾ ಗೌರವಿಸೋ ಕನ್ನಡದ ಕೆಜಿಎಫ್ ಚಿತ್ರದ ಟ್ರೈಲರ್ ಅನ್ನು ಕೊಮಡಾಡಿದ್ದಾರೆ. ಈ ಚಿತ್ರ ಯಶ ಕಾಣಲೆಂದು ಶುಭ ಕೋರಿದ್ದಾರೆ. ಈ ಮೂಲಕ ಅವರು ತಮ್ಮ ಕನ್ನಡ ಪ್ರೇಮವನ್ನೂ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಬಾಲಯ್ಯನವರ ಈ ಮೆಚ್ಚುಗೆಯ ಮಾತುಗಳು ಕೆಜಿಎಫ್ ಚಿತ್ರತಂಡಕ್ಕೆ ಮತ್ತಷ್ಟು ಹುರುಪು ತುಂಬಿರೋದಂತೂ ನಿಜ.
ಆರಂಭದಲ್ಲಿ ಶಾರೂಖ್ ಖಾನ್ ನಟನೆಯ ಝೀರೋ ಚಿತ್ರಕ್ಕೆದುರಾಗಿ ಕೆಜಿಎಫ್ ಬಿಡುಗಡೆಯಾಗೋ ಸುದ್ದಿ ಕೇಳಿ ಕುಹಕವಾಡಿದ್ದವರೇ ಹೆಚ್ಚು. ಶಾರೂಖ್ ಅಭಿಮಾನಿಗಳೆಂದು ಬಿಂಬಿಸಿಕೊಂಡವರೊಂದಷ್ಟು ಮಂದಿ ಝೋರೋ ಚಿತ್ರಕ್ಕೆದುರಾಗೋ ಹುಂಬ ಸಾಹಸ ಮಾಡಿದ ಕೆಜಿಎಫ್ ಧೂಳೀಪಟವಾಗಲಿದೆ ಅಂತಲೂ ಅಬ್ಬರಿಸಿದ್ದರು. ಆದರೀಗ ಕೆಜಿಎಫ್ ಅಬ್ಬರದ ಮುಂದೆ ಝೀರೋ ಚಿತ್ರವೇ ಕಂಗಾಲಾಗಿದೆ. ಭಾರತೀಯ ಬಹು ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಕೆಜಿಎಫ್ ಎರಡನೇ ಸ್ಥಾನದಲ್ಲಿದ್ದರೆ, ಝೀರೋ ಚಿತ್ರ ನಾಲಕ್ಕನೇ ಸ್ಥಾನಕ್ಕೆ ಗದುಮಿಸಿಕೊಂಡಿದೆ!
#