ಏಕಾಏಕಿ ಮೈಸೂರು ಮೃಗಾಲಯದಲ್ಲಿನ ಪ್ರಾಣಿಗಳು ಮತ್ತು ಕೆಲ ಮನುಷ್ಯರೂ ಕೊಲೆಯಾದೇಟಿಗೆ ಎಂಟ್ರಿ ಕೊಡೋ ಸಿಐಡಿ ಆಫಿಸರ್. ಇದರ ಹಿಂದಿರೋ ಘಾತುಕ ಶಕ್ತಿಗಳನ್ನು ಹುಡುಕಿ ಇಡೀ ಪ್ರಕರಣದ ರಹಸ್ಯ ಭೇದಿಸೋದೇ ಆತನ ಪರಮ ಉದ್ದಿಶ್ಯ. ಈ ಕೊಲೆಯಗಳ ಸುತ್ತಲಿನ ತನಿಖೆಯ ಜಾಡಿನಲ್ಲಷ್ಟೇ ಮುಂದುವರೆದಿದ್ದರೆ ಉದ್ದಿಶ್ಯ ಚಿತ್ರ ಸಸ್ಪೆನ್ಸ್ ಥ್ರಿಲ್ಲರ್ ಜಾನರಿಗಷ್ಟೇ ಫಿಕ್ಸಾಗುತ್ತಿತ್ತು. ಆದರೆ ಈ ತನಿಖೆಯ ಹಾದಿಯಲ್ಲಿಯೇ ಭಯಾನಕ ವಾಮಾಚಾರಿ ಎದುರಾಗುತ್ತಾನೆ. ಆತನ ಪ್ರಭೆಯಲ್ಲಿಯೇ ಮೂವರು ಸುಂದರಿಯರು ಮತ್ತು ಅಚಾನಕ್ಕಾಗಿ ಬಿಚ್ಚಿಕೊಳ್ಳೋ ಹಾರರ್ ಟ್ರ್ಯಾಕ್… ಇವಿಷ್ಟೂ ಉದ್ದಿಶ್ಯ ಚಿತ್ರವನ್ನು ಮಾಮೂಲು ಸಿನಿಮಾಗಳಿಗಿಂತಲೂ ತುಸು ಭಿನ್ನವಾಗಿಸುತ್ತವೆ.
ಹೇಮಂತ್ ಕೃಷ್ಣಪ್ಪ ನಿರ್ಮಾಣ ಮಾಡಿ, ನಿರ್ದೇಶಿಸಿ, ಈ ಚಿತ್ರದಲ್ಲಿ ಸಿಐಡಿ ಅಧಿಕಾರಿಯಾಗಿ ಖಡಕ್ಕಾದ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಹಾಲಿವುಡ್ ಕಥೆಗಾರ ಬರೆದಿರೋ ಕಥೆಯ ಕಾರಣದಿಂದ, ವಿಶಿಷ್ಟವಾದ ಟೈಟಲ್ಲಿನ ದೆಸೆಯಿಂದ ಉದ್ದಿಶ್ಯ ಚಿತ್ರದ ಬಗೆಗೊಂದು ಕುತೂಹಲ ಮೂಡಿಕೊಂಡಿತ್ತಲ್ಲಾ? ಅದನ್ನು ಸಂಪೂರ್ಣವಾಗಿ ತಣಿಸುವ ಹೇಮಂತ್ ಕೃಷ್ಣಪ್ಪನವರ ಉದ್ದಿಶ್ಯ ತಕ್ಕಮಟ್ಟಿಗೆ ಈಡೇರಿದೆ!
ಕಥೆ ತೆರೆದುಕೊಳ್ಳೋದೇ ಸಿಕ್ಕು ಸಿಕ್ಕಾಗ ಕೊಲೆಗಳಿಂದ. ಮೃಗಾಲಯದಲ್ಲಿ ಮೇಲ್ನೋಟಕ್ಕೆ ಯಾವ ಸುಳಿವೂ ಸಿಗದಂತೆ ಕೆಲ ಪ್ರಾಣಿಗಳು ಮತ್ತು ವ್ಯಕ್ತಿಗಳು ಕೊಲೆಯಾಗುತ್ತಿರುತ್ತಾರೆ. ಇದರ ಹಿಂದೆ ಏನಿದೆ ಎಂಬುದನ್ನು ಪತ್ತೆಹಚ್ಚಲೆಂದೇ ಖಡಕ್ ಸಿಐಡಿ ಅಧಿಕಾರಿಯ ಆಗಮನವಾಗುತ್ತದೆ. ತನಿಖೆ ನಡೆಯುತ್ತಲೇ ಇದರ ಹಿಂದೆ ಓರ್ವ ಭಯಾನಕ ಮಾಂತ್ತಿಕರ ನೆರಳು ಕಾಣುತ್ತದೆ. ಆ ಮೂಲಕವೇ ಕಥೆ ಮತ್ತೊಂದು ಮಜಲು ಪಡೆದುಕೊಂಡು ಹಾರರ್ ಬಾಧೆಯೂ ಆರಂಣಭವಾಗುತ್ತೆ. ಸ್ವತಃ ಸಿಐಡಿ ಅಧಿಕಾರಿಯನ್ನೇ ಕಂಗಾಲು ಮಾಡುವಂಥಾ ಅನುಭವಗಳೂ ಆಗುತ್ತವೆ. ಈ ಭಯಾನಕ ಮಾಂತ್ರಿಕನಿಗೂ ಮೂವರು ಹುಡುಗಿಯರಿಗೂ ಏನು ಸಂಬಂಧ? ಸರಣಿ ಕೊಲೆಗಳಿಗೆ ಕಾರಣವೇನೆಂಬುದು ಅಸಲೀ ಕುತೂಹಲ.
ಕಥೆ ಹೆಚ್ಚೇನೂ ಭಿನ್ನವಾಗಿಲ್ಲದಿದ್ದರೂ ಅದನ್ನು ಹೊಸಾ ರೀತಿಯಲ್ಲಿ ನಿರೂಪಣೆ ಮಾಡುವಲ್ಲಿ ನಿರ್ದೇಶಕರಾಗಿಯೂ ಹೇಮಂತ್ ಶ್ರಮ ಎದ್ದು ಕಾಣುತ್ತದೆ. ಇನ್ನೊಂಚೂರು ಖದರ್ ತುಂಬಿಕೊಳ್ಳೋ ಪ್ರಯತ್ನ ಮಾಡಬೇಕಿತ್ತೆನ್ನಿಸಿದರೂ ಅವರು ನಟನಾಗಿಯೂ ಗಮನಾರ್ಹ ಅಭಿನಯ ನೀಡಿದ್ದಾರೆ. ಅರ್ಚನಾ ಗಾಯಕವಾಡ್, ಅಕ್ಷತಾ, ಇಚ್ಚಾ ನಾಯಕಿಯರಾಗಿ ತಂತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಒಂದಷ್ಟು ಕೊರತೆಗಳಾಚೆಗೂ ತಾಂತ್ರಿಕವಾಗಿ ಹೊಸತನ ಹೊಂದಿರೋ ಈ ಚಿತ್ರ ಥ್ರಿಲ್ಲಿಂಗ್ ಅನುಭವ ನೀಡುವಲ್ಲಿ ಸಫಲವಾಗಿದೆ.
#
No Comment! Be the first one.