ಬಿಗ್ಬಾಸ್ ಮನೆಯೊಳಗೆ ರ್ಯಾಪಿಡ್ ಫಯರ್ ಶುರು!
ಬಿಗ್ ಬಾಸ್ ರಿಯಾಲಿಟಿ ಶೋನ ಆರನೇ ಆವೃತ್ತಿಗೆ ಅದ್ದೂರಿ ಆರಂಭ ಸಿಕ್ಕಿದೆ. ತಿಂಗಳ ಹಿಂದೆಯೇ ಯಾರ್ಯಾರು ಬಿಗ್ಬಾಸ್ ಮನೆ ಸೇರಿಕೊಳ್ಳಬಹುದೆಂಬ ಬಗ್ಗೆ ಹುಟ್ಟಿಕೊಂಡಿದ್ದ ಕುತೂಹಲ, ಅಂತೆಕಂತೆಗಳಿಗೂ ತೆರೆ ಬಿದ್ದಿದೆ. ಬಿಗ್ ಎಫ್ಎಂ ರೇಡಿಯೋ ಜಾಕಿಯಾಗಿದ್ದುಕೊಂಡೇ ನಟಿಯಾಗಿ, ನಿರೂಪಕಿಯಾಗಿ ಮನೆ ಮಾತಾಗಿರೋ ರ್ಯಾಪಿಡ್ ರಶ್ಮಿ ಪ್ರಧಾನ ಆಕರ್ಷಣೆಯಾಗಿ ಬಿಗ್ ಬಾಸ್ ಮನೆ ಸೇರಿಕೊಂಡಿದ್ದಾರೆ!
ಬಿಗ್ ಎಫ್ಎಂ ರೇಡಿಯೋ ಜಾಕಿ ರ್ಯಾಪಿಡ್ ರಶ್ಮಿ ಅಂದರೆ ಕಣ್ಣರಳಿಸೋ ಅಭಿಮಾನಿ ಪಡೆ ದೊಡ್ಡದಿದೆ. ಪಟ ಪಟನೆ ಮಾತಾಡುವ ಮೂಲಕವೇ ಭಾರೀ ಜನಪ್ರಿಯತೆ ಗಳಿಸಿಕೊಂಡಿರುವ, ಅಪಾರ ಅಭಿಮಾನಿಗಳನ್ನೂ ಹೊಂದಿರುವ ರಶ್ಮಿಯ ಬೋಲ್ಡ್ ಮಾತುಗಳಿಗೆ ಕ್ಲೀನ್ ಬೌಲ್ಡ್ ಆದವರ ಸಂಖ್ಯೆಯೇನೂ ಕಡಿಮೆ ಇಲ್ಲ. ಸಾಮಾನ್ಯವಾಗಿ ರೇಡಿಯೋ ಅಂದರೆ ಅಶರೀರವಾಣಿ ಎಂಬ ವಿಚಾರವನ್ನೂ ಮರೆ ಮಾಚುವಂತೆ ರಶ್ಮಿ ಇದೀಗ ಜೆ.ಪಿನಗರದ ಸ್ಟೋರ್ಸ್ ಎನ್ನುವ ಸ್ಥಳದಲ್ಲಿ ಫೇಸ್ ಬುಕ್ ಮೂಲಕ ಲೈವ್ ಶೋ ಕೊಟ್ಟು ಚರ್ಚೆ ನಡೆಸುವ ವಿನೂತನ ಪ್ರಯೋಗಕ್ಕೂ ಕೈ ಹಾಕಿ ಗೆದ್ದಿದ್ದಾರೆ.
ಇದೇ ಶೋ ಮೂಲಕ ಹಲವಾರು ಚಿತ್ರಗಳಿಗೆ ವ್ಯಾಪಕ ಪ್ರಚಾರ ಕಲ್ಪಿಸೋ ಕೆಲಸಕ್ಕೂ ರ್ಯಾಪಿಡ್ ರಶ್ಮಿ ಕೈ ಹಾಕಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಆರಂಭವಾದ ಈ ಕಾರ್ಯಕ್ರಮವೀಗ ಐವತ್ತು ಶೋಗಳನ್ನು ಯಶಸ್ವಿಯಾಗಿ ಪೂರೈಸಿಕೊಂಡಿದೆ. ಹೀಗೆ ಸದಾ ಕಾಲವೂ ಅಪ್ಡೇಟ್ ಆಗುತ್ತಾ ಹೊಸತನಗಳ ಮೂಲಕವೇ ಚಾಲ್ತಿಯಲ್ಲಿರೋ ರಶ್ಮಿ ಡೋಂಟ್ಕೇರ್ ಸ್ವಭಾವದ ಹುಡುಗಿ. ಇವರೀಗ ಬಿಗ್ಬಾಸ್ ಸ್ಪರ್ಧಿಯಾಗಿರೋದು ಸಹಜವಾಗಿಯೇ ಸಂಚಲನ ಸೃಷ್ಟಿಸಿದೆ.
ಕೇವಲ ರೇಡಿಯೋ ವಲಯ ಮಾತ್ರವಲ್ಲದೆ ಡ್ಯಾನ್ಸು, ನಟನೆ, ನಿರೂಪಣೆ… ಹೀಗೆ ರಶ್ಮಿ ಪಾದಾರ್ಪಣೆ ಮಾಡದ ಕ್ಷೇತ್ರಗಳೇ ಕಡಿಮೆ. ಇಂಥಾ ಚಟುವಟಿಕೆ, ಚುರುಕುತನಗಳ ಮೂಲಕವೇ ಇಷ್ಟವಾಗೋ ರ್ಯಾಪಿಡ್ ರಶ್ಮಿ ಎತ್ತೆತ್ತ ಸುತ್ತಿದರೂ ಮತ್ತೆ ಮತ್ತೆ ಬಂದು ರೇಡಿಯೋ ಲೋಕದಲ್ಲಿಯೇ ಸಕ್ರಿಯರಾಗುತ್ತಾರೆ. ಅವರನ್ನು ಆ ವಲಯದಲ್ಲಿಯೇ ನೋಡ ಬಯಸೋ ಮನಸುಗಳೂ ಕೂಡಾ ಲೆಕ್ಕವಿಲ್ಲದಷ್ಟಿವೆ. ಇಂಡಿಯನ್ ರೇಡಿಯೋ ಫೋರಂ ನಲ್ಲಿ ರಶ್ಮಿ ಅವರ ರೇಡಿಯೋ ಶೋಗೆ ೨೦೧೭ರ ಸಿಲ್ವರ್ ಮೆಡಲ್ ಬಂದಿದೆ. ಸ್ತನ ಕ್ಯಾನ್ಸರ್ ಜಾಗೃತಿಗಾಗಿ ನಡೆಸಿದ ಪಿಂಕ್’ಥಾನ್’ನಲ್ಲಿ ಮಿಲಿಂದ್ ಸೋಮನ್ ಅವರೊಂದಿಗೆ ಕೂಡಾ ರಶ್ಮಿ ಪಾಲ್ಗೊಂಡಿದ್ದಾರೆ.
ಪಕ್ಕಾ ಬೆಂಗಳೂರು ಹುಡುಗಿಯಾದ ರ್ಯಾಪಿಡ್ ರಶ್ನಿ ಬೆಂಗಳೂರಿನ ಹಿಸ್ಟರಿಯ ಪಳಯುಳಿಕೆಯಂತಿರೋ, ಆತ್ಮದಂತಿರೋ ಬಸವನಗುಡಿಯಲ್ಲೇ ಹುಟ್ಟಿ ಬೆಳೆದವರು. ಬೇರೆ ಬೇರೆ ವೆರೈಟಿಯ ಪ್ರತಿಭೆ ಇರೋ ರಶ್ಮಿ ಆರಂಭದಲ್ಲಿ ಉದಯ ಟಿವಿಯಲ್ಲಿ ಆಂಕರಿಂಗ್ ಮಾಡೋ ಮೂಲಕ ವೃತ್ತಿ ಜೀವನ ಆರಂಭಿಸಿದವರು. ಆ ಕಾಲದಲ್ಲಿ ಹೊಸದಾಗಿ ಹುಟ್ಟಿಕೊಂಡಿದ್ದು ಎಫ್ಫೆಮ್ ರೇಡಿಯೋ ಟ್ರೆಂಡ್. ಅದಕ್ಕೆ ಅಚ್ಚ ಕನ್ನಡದಲ್ಲಿ ಅರಳು ಹುರಿದಂತೆ ಮಾತಾಡೋ ಜಾಕಿಗಳ ಅವಶ್ಯಕತೆ ಇತ್ತು. ಇದೇ ಸಂದರ್ಭದಲ್ಲಿ ಟೀವಿ ಲೋಕ ಬಿಟ್ಟು ರೇಡಿಯೋ ಜಗತ್ತಿಗೆ ಕಾಲಿಟ್ಟು ಸುದೀರ್ಘವಾಗಿ ಇಷ್ಟೊಂದು ವರ್ಷಗಳ ಕಾಲ ಚಾಲ್ತಿಯಲ್ಲಿರೋದು ನಿಜಕ್ಕು ರ್ಯಾಪಿಡ್ ರಶ್ಮಿಯವರ ಹೆಚ್ಚುಗಾರಿಕೆ.
ಇದು ನಿಜಕ್ಕೂ ಸವಾಲಿನ ಕೆಲಸ. ದಿನಾ ಗಂಟೆಗಟ್ಟಲೆ ರೂಮೊಂದರಲ್ಲಿ ಕೂತು ಮಾತಾಡೋದಂದರೆ ಸಲೀಸಿನ ಸಂಗತಿಯೇನಲ್ಲ. ಆಡಿದ್ದನ್ನೇ ಮಾತಾಡುತ್ತಾ ಹೋದರೆ ವಾರ ಕಳೆತೋವಷ್ಟರಲ್ಲಿ ಕೇಳುಗರ ಕಿವಿ ಬೋರು ಹೊಡೆಯುತ್ತೆ. ಹಾಗಾಗದಂತೆ ನೋಡಿಕೊಳ್ಳಬೇಕೆಂದರೆ ಹೊಸಾ ವಿಚಾರಗಳನ್ನು ತಿಳಿದುಕೊಳ್ಳಬೇಕು. ಹೊಸತನಕ್ಕೆ ಒಗ್ಗಿಕೊಳ್ಳಬೇಕು. ಅದಕ್ಕೆ ಸದಾ ತೆರೆದುಕೊಂಡೇ ಬಂದಿರೋ ರಶ್ಮಿ ಇದೀಗ ಚಲನಚಿತ್ರ ಸಂಬಂಧಿ ಕಾರ್ಯಕ್ರಮದ ಮೂಲಕ ಚಿತ್ರರಂಗದ ಭಾಗವೂ ಆಗಿದ್ದಾರೆ.
ಇಂಥಾ ರ್ಯಾಪಿಡ್ ರಶ್ಮಿ ಬಿಗ್ಬಾಸ್ ಸ್ಪರ್ಧಿಯಾಗಿದ್ದಾರೆಂದ ಮೇಲೆ ಅಲ್ಲಿಯೂ ರ್ಯಾಪಿಡ್ ಫಯರ್ ಶುವಾಗಿದೆ ಎಂದೇ ಅರ್ಥ. ಯಾವುದಕ್ಕೂ ಕೇರು ಮಾಡದ, ಅಂದುಕೊಂಡಿದ್ದರಿಂದ ಹಿಂದೆ ಸರಿಯದ ಮನಸ್ಥಿತಿಯ ರಶ್ಮಿ ಎಲ್ಲರಿಗೂ ಸವಾಲೋಡ್ಡುವ ಸ್ಪರ್ಧಿಯಾಗುತ್ತಾರೆಂಬ ನಂಬಿಕೆಯಂತೂ ಇದ್ದೇ ಇದೆ.
ಬಿಗ್ಬಾಸ್ ಶೋ ಎಂಬುದು ಹಲವಾರು ತಕರಾರುಗಳ ನಡುವೆಯೂ ಕನ್ನಡಿಗರನ್ನು ಆವರಿಸಿಕೊಂಡಿದೆ. ಬಿಗ್ಬಾಸ್ನ ಆಗಮನದ ನಂತರ ದೇಶದಲ್ಲಿ ಜನರು ಟೆಲಿವಿಷನ್ ನೋಡುವ ರೀತಿಯೇ ಬದಲಾಗಿದೆ. ಬಿಗ್ಬಾಸ್ ಕನ್ನಡವೂ ಅಷ್ಟೆ. ಆರಂಭದಿಂದಲೂ ಜನಪ್ರಿಯತೆಯಲಿ ಎಲ್ಲ ಶೋಗಳಿಗಿಂತಲೂ ಮುಂದಿದೆ. ಬಿಗ್ಬಾಸ್ಕನ್ನಡ ಸೀಸನ್ ೫ರಲ್ಲಿ ಮೊಟ್ಟಮೊದಲ ಬಾರಿಗೆ ಜನಸಾಮಾನ್ಯರಿಗೆ ಪ್ರವೇಶ ಸಿಕ್ಕಿತ್ತು. ಈ ವರ್ಷವೂ ಜನಸಾಮಾನ್ಯರು ಮತ್ತು ಸೆಲೆಬ್ರಿಟಿಗಳ ಹದವಾದ ಮಿಶ್ರಣ ನೋಡುಗರಿಗೆ ಮುದ ನೀಡಲು ತಯಾರಾಗಿದೆ.
ಬಿಗ್ಬಾಸ್ನ ಆರನೇ ಆವೃತ್ತಿ ಕಲರ್ಸ್ ಸೂಪರ್ ಚಾನೆಲ್ನಲ್ಲಿ ಆರಂಭವಾಗಿದೆ. ಪ್ರತೀ ರಾತ್ರಿ ೮ ಗಂಟೆಗೆ ಪ್ರಸಾರವಾಗಲಿದೆ. ಒಟ್ಟು ಹದಿನೆಂಟು ಸ್ಪರ್ಧಿಗಳು ಈ ಬಾರಿ ಮನೆಯಲ್ಲಿ ಇರಲಿದ್ದಾರೆ. ಅವರಲ್ಲಿ ಅರ್ಧದಷ್ಟು ಮಂದಿ ಸೆಮಿ ಸೆಲೆಬ್ರಿಟಿಗಳು. ವಿಶ್ವಾದ್ಯಂತ ಈ ಶೋ ಸೆಲೆಬ್ರಿಟಿಗಳಿಂದ ಆರಂಭವಾಗಿ ಜನಸಾಮಾನ್ಯರ ಶೋ ಆಗುತ್ತಾ ನಡೆದಿದೆ. `ನಾವು ಯಾವುದೇ ಕಾರ್ಯಕ್ರಮಗಳನ್ನು ರೂಪಿಸುವಾಗ ನಮ್ಮ ವೀಕ್ಷಕರ ಬೇಕು ಬೇಡ ಮತ್ತುಅವರ ಆಸಕ್ತಿಗಳನ್ನು ಗಮನದಲ್ಲಿ ಇರಿಸಿಕೊಂಡಿರುತ್ತೇವೆ. ಕೇವಲ ಮೂರೇ ವರ್ಷಗಳಲ್ಲಿ ಕಲರ್ಸ್ ಸೂಪರ್ ಚಾನೆಲ್ ರೇಟಿಂಗ್ನಲ್ಲಾಗಲಿ, ಕಾರ್ಯಕ್ರಮ ವೈವಿಧ್ಯದಲ್ಲಾಗಲಿ ಭಾರೀ ಎತ್ತರಕ್ಕೆ ಏರಿದೆ. ಬಿಗ್ಬಾಸ್ ಯಾವ ರೀತಿಯ ಶೋ ಎಂದರೆ, ಕಾರ್ಯಕ್ರಮ ನಡೆಯುವ ಅಷ್ಟೂ ದಿನ ಜನರನ್ನು ಟೆಲಿವಿಷನ್ ಸೆಟ್ಗೆ ಅಂಟಿಕೂರುವಂತೆ ಮಾಡುವಂಥದ್ದು. ವಯಾಕಾಮ್೧೮ ಸಂಸ್ಥೆಯ ಕನ್ನಡ ಚಾನೆಲ್ಗಳು ಕನ್ನಡ ಮಾರುಕಟ್ಟೆಯ ಮುಂಚೂಣಿಯಲ್ಲಿ ಇದ್ದುಕೊಂಡು, ಅತ್ಯುತ್ತಮ ಗುಣಮಟ್ಟದ ರಿಯಾಲಿಟಿ ಶೋಗಳು ಹಾಗೂ ವೈವಿಧ್ಯಮಯ ಧಾರಾವಾಹಿಗಳನ್ನು ಜನರಿಗೆ ನೀಡುತ್ತಿವೆ’ ಎನ್ನುತ್ತಾರೆ ವಯಾಕಾಮ್೧೮ನ ರೀಜನಲ್ ಚಾನೆಲ್ಗಳ ಹೆಡ್ರವೀಶ್ಕುಮಾರ್.
`ನಾವು ಈ ಶೋಗೆ ಸ್ಪರ್ಧಿಗಳನ್ನು ಹುಡುಕುವಾಗ ಸೆಲೆಬ್ರಿಟಿಗಳಿಗಿಂತ ಹೆಚ್ಚಾಗಿ ಕ್ಯಾರೆಕ್ಟರ್ಗಳನ್ನು ಹುಡುಕುತ್ತಿರುತ್ತೇವೆ. ಆ ಕ್ಯಾರೆಕ್ಟರ್ಗಳು ಸೆಲೆಬ್ರಿಟಿಗಳಲ್ಲಿಯೂ ಇರಬಹುದು, ಜನ ಸಾಮಾನ್ಯರಲ್ಲೂ ಇರಬಹುದು. ಈ ಬಾರಿಯ ಹದಿನೆಂಟೂ ಜನರು ಬಹಳ ಇಂಟರೆಸ್ಟಿಂಗ್ ಕ್ಯಾರೆಕ್ಟರ್ಗಳಾಗಿರುತ್ತಾರೆ. ಒಮ್ಮೆ ಮನೆಯೊಳಗೆ ಹೋದ ಮೇಲೆ ಅವರು ಸೆಲೆಬ್ರಿಟಿಗಳೋ ಜನ ಸಾಮಾನ್ಯರೋ ಎಂಬ ಪ್ರಶ್ನೆ ಮುಖ್ಯವಾಗುವುದಿಲ್ಲ. ಅವರು ಎಷ್ಟು ಮನರಂಜನೆ ನೀಡುತ್ತಾರೆ ಎನ್ನುವುದಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಿದೆ’ ಎನ್ನುತ್ತಾರೆ ವಯಾಕಾಮ್ ೧೮ ಸಂಸ್ಥೆಯ ಕನ್ನಡ ಮಾರುಕಟ್ಟೆಯ ಬ್ಯುಸಿನೆಸ್ ಹೆಡ್ ಹಾಗೂ ಬಿಗ್ಬಾಸ್ನ ನಿರ್ದೇಶಕರೂ ಆಗಿರುವ ಪರಮೇಶ್ವರ ಗುಂಡ್ಕಲ್.
ಪ್ರತಿ ವರ್ಷದಂತೆ ಬಿಗ್ಬಾಸ್ನ ಬಹುದೊಡ್ಡ ಸೆಲೆಬ್ರಿಟಿ ಕಿಚ್ಚ. ಸುದೀಪ್ ಅವರ ಗತ್ತು, ಗೈರತ್ತು ಈ ಶೋನ ಬಹುದೊಡ್ಡ ಆಕರ್ಷಣೆಗಳಲ್ಲಿ ಒಂದು. ಅದು ಈ ಬಾರಿಯೂ ಮುಂದುವರಿದಿದೆ. ಕಿಚ್ಚ ಸುದೀಪ್ ಅವರ ಇಡೀ ವರ್ಷದ ಕ್ಯಾಲೆಂಡರ್ನಲ್ಲಿ ಬಿಗ್ಬಾಸ್ಗೆ ಬಹಳ ಮಹತ್ವದ ಪಾತ್ರವಿದೆ.
ಒಟ್ಟಿನಲ್ಲಿ ಬಿಗ್ಬಾಸ್ ಶುರುವಾಗುತ್ತದೆ ಎಂದರೆ ಬಿಗ್ಬಾಸ್ ಪ್ರಿಯರಿಗೆ ಹಬ್ಬದ ವಾತಾವರಣ. ಮುಂದಿನ ನೂರು ದಿನಗಳ ಕಾಲ ಅದರದ್ದೇ ಚರ್ಚೆ, ಅದರದ್ದೇ ಮಾತು. ಬಿಗ್ಬಾಸ್ ಕಲರ್ಸ್ ಸೂಪರ್ಚಾನೆಲ್ನಲ್ಲಿ ಪ್ರತೀ ರಾತ್ರಿ ೮ಗಂಟೆಗೆ ಪ್ರಸಾರವಾಗಲಿದೆ.
ಈ ಬಾರಿಯ ಬಿಗ್ಬಾಸ್ ಸೀಸನ್ ಕೂಡಾ ಕಳೆಗಟ್ಟಲಿದೆ ಎಂಬುದಕ್ಕೆ ಮನೆ ಪ್ರವೇಶ ಮಾಡಿರೋ ಮಂದಿಯೇ ಸಾಕ್ಷಿಯಾಗುತ್ತಾರೆ. ಒಂದು ಕಟ್ಟುಮಸ್ತಾದ ಪಡೆಯನ್ನೇ ಆಯೋಜಕರು ಆರಿಸಿದ್ದಾರೆ. ನಟಿ ಸೋನು ಪಾಟೀಲ್, ಆಂಡ್ರ್ಯೂ, ನಟಿ ಹಾಗೂ ಆಂಕರ್ ಜಯಶ್ರೀ ರಾಜ್, ರಾಕೇಶ್, ಒಗ್ಗರಣೆ ಡಬ್ಬಿ ಖ್ಯಾತಿಯ ಮುರುಳಿ, ಅಕ್ಷತಾ, ಕ್ರಿಕೆಟರ್ ರಕ್ಷಿತಾ, ರ್ಯಾಪಿಡ್ ರಶ್ಮಿ, ಅಡಮ್, ಸಿರೀಯಲ್ ನಟಿ ಕವಿತಾ, ಅಂತಾರಾಷ್ಟ್ರೀಯ ಖ್ಯಾತಿಯ ಬಾಡಿ ಬಿಲ್ಡರ್ ಹಾಗೂ ನಟ ಜಿಮ್ ರವಿ, ಶಶಿ, ರೀಮಾ, ಖ್ಯಾತ ಸಿಂಗರ್ ನವೀನ್, ಸಜ್ಜು, ಸ್ನೇಹಾ, ಆನಂದ್, ನೈನಾ, ಧನರಾಜ್ ಸೇರಿದಂತೆ ೯ ಜನ ಮಹಿಳೆಯರು, ೮ ಜನ ಪುರುಷ ಸ್ಪರ್ಧಿಗಳಿದ್ದಾರೆ. ತೃತೀಯ ಲಿಂಗಿ ಅಡಮ್ ಕೂಡ ಸ್ಪರ್ಧಿಯಾಗಿರೋದು ಈ ಬಾರಿಯ ವಿಶೇಷತೆ.
#
No Comment! Be the first one.