ಬ್ರಾಹ್ಮಣರ ಅಡಿಗೆಯಲ್ಲಿ ಮಜ್ಜಿಗೆ ಹುಳಿ ಟೇಸ್ಟು, ಜತೆಗೆ ಫೇಮಸ್ ಕೂಡ. ಸದ್ಯ ಅದೇ ಹೆಸರಿನ ಸಿನಿಮಾವೊಂದು ತಯಾರಾಗಿದ್ದು, ಚಿತ್ರಕ್ಕೆ ಮಜ್ಜಿಗೆ ಹುಳಿ ಎಂದೇ ಟೈಟಲ್ ನೀಡಲಾಗಿದೆ. ಈಗಾಗಲೇ ಸಿನಿಮಾದ ಫೋಸ್ಟ್ ಪ್ರೊಡಕ್ಷನ್ ಕೆಲಸಗಳೂ ಕಂಪ್ಲೀಟ್ ಆಗಿದ್ದು, ಇತ್ತೀಚಿಗೆ ಚಿತ್ರವು ಸೆನ್ಸಾರ್ ಬಾಗಿಲನ್ನು ತಟ್ಟಿತ್ತು. ಸದ್ಯ ಸೆನ್ಸಾರ್ ನ್ನು ಮುಗಿಸಿಕೊಂಡಿರುವ ಚಿತ್ರತಂಡ ಯಾವುದೇ ಕಟ್ಟು, ಮ್ಯೂಟು ಇಲ್ಲದೇ ಯು/ಎ ಪ್ರಮಾಣ ಪತ್ರವನ್ನು ಪಡೆದುಕೊಂಡು ಫುಲ್ ಖುಷಿಯಲ್ಲಿದೆ.
ಹೊಸದಾಗಿ ಮದುವೆಯಾದ ಜೋಡಿಯೊಂದು ಮೊದಲ ರಾತ್ರಿಯ ಆಚರಣೆಗೆ ಗೋವಾಗೆ ಹೋದಾಗ, ಆ ರಾತ್ರಿ ಅವರಿಗೆ ಏನೆಲ್ಲಾ ಅವಾಂತರಗಳು ಸೃಷ್ಟಿಯಾಗುತ್ತದೆ ಎನ್ನುವುದೇ ಮಜ್ಜಿಗೆ ಹುಳಿಯ ಒನ್ ಲೈನ್. ಮೊದಲ ರಾತ್ರಿ ಎಂದ ಮಾತ್ರಕ್ಕೆ ಯಾವುದೇ ಅಶ್ಲೀಲವಾದ ದೃಶ್ಯಗಳಿಗೆ ಹೆಚ್ಚು ಒತ್ತು ನೀಡದೇ ಹಾಸ್ಯದ ಮೂಲಕ ಮಜ್ಜಿಗೆ ಹುಳಿಯ ಕಥೆಯನ್ನು ಹೆಣೆಯಲಾಗಿದೆ ಎನ್ನುತ್ತಾರೆ ನಿರ್ದೇಶಕ ರವೀಂದ್ರ ಕೊಟಕಿ. ವಿಶೇಷವೆಂದರೆ ಒಂದೇ ಕೋಣೆಯಲ್ಲಿ 28 ಪಾತ್ರಗಳೊಂದಿಗೆ ಚಿತ್ರೀಕರಿಸಿರುವ ನಿರ್ದೇಶಕರು ಆ ಪಾತ್ರದ ಮುಖೇನವೇ ಸಿನಿಮಾ ಒಂದು ಹಂತಕ್ಕೆ ತಲುಪುವಂತೆಯೂ ಮಾಡಿದ್ದಾರೆ. ಇನ್ನು ಮಜ್ಜಿಗೆ ಹುಳಿಯ ಸವಿಯನ್ನು ಮುಂದಿನ ತಿಂಗಳು ಚಿತ್ರತಂಡ ಉಣಬಡಿಸಲಿದೆ.
ಚಿತ್ರದಲ್ಲಿ ನಾಯಕನಾಗಿ ದೀಕ್ಷಿತ್ ವೆಂಕಟೇಶ್ ನಟಿಸಿದ್ದು, ನಾಯಕಿಯಾಗಿ ರೂಪಿಕಾ ಜೊತೆಯಾಗಿದ್ದಾರೆ. ಇನ್ನು ಸುಚೇಂದ್ರ ಪ್ರಸಾದ್, ಮೋಹನ್ ಜುನೇಜಾ, ಮಿಮಿಕ್ರಿ ದಯಾನಂದ್, ರಮೇಶ್‍ಭಟ್, ತರಂಗ ವಿಶ್ವ, ಕೆಂಪೇಗೌಡ, ಕುರಿ ಸುನೀಲ್, ಯತಿರಾಜ್, ಶಂಕರ್ ನಾರಾಯಣ್‍ರಂತ ನುರಿತ ಕಲಾವಿದರ ದಂಡು ಈ ಸಿನಿಮಾದಲ್ಲಿದ್ದು. ಈ ಚಿತ್ರವನ್ನು ರಾಮಚಂದ್ರ ಎಸ್ ನಿರ್ಮಿಸಿದ್ದು, ರಾಘು ರಾಜು ವೈ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.
Leave a Reply
You must be logged in to post a comment.