ಕನ್ನಡದ ಖ್ಯಾತ ಸಾಹಿತಿ ಸಿನಿಮಾ ನಿರ್ದೇಶಕ ಬರಗೂರು ರಾಮಚಂದ್ರಪ್ಪನವರು, ಡಾ. ರಾಜ್ ಕುಮಾರ್ ಅವರನ್ನು ತೀರ ಹತ್ತಿರದಿಂದ ಬಲ್ಲವರು. ಬರಗೂರು ಅವರು ಬರೆದಿರುವ ಜನಪದ ನಾಯಕ ಡಾ. ರಾಜ್ ಕುಮಾರ್ ಎಂಬ ಅಮೂಲ್ಯ ಕೃತಿಯನ್ನು ಜನ ಪ್ರಕಾಶನ ಹೊರತಂದಿದೆ. ಈ ಕೃತಿಯ ಆಯ್ದ ಅಧ್ಯಯನಗಳನ್ನು ಇಲ್ಲಿ ಪ್ರಕಟಿಸಿದ್ದೇವೆ. ಈ ಲೇಖನಗಳನ್ನು ಪ್ರಕಟಿಸಲು ಅನುಮತಿ ನೀಡಿದ ಜನ ಪ್ರಕಾಶನದ ಬಿ. ರಾಜಶೇಖರ್ ಮೂರ್ತಿ ಮತ್ತು ಬರಗೂರು ರಾಮಚಂದ್ರಪ್ಪನವರಿಗೆ ಕೃತಜ್ಞತೆಗಳು. ಡಾ. ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಅವರನ್ನು ಸ್ಮರಿಸಲು ಈ ಲೇಖನಗಳು ಅರ್ಥಪೂರ್ಣವಾದಂತಹವುಗಳು.

ಡಾ|| ರಾಜಕುಮಾರ್ ಅವರು ಶ್ರಮ ಸಂಕಟಗಳಿಲ್ಲದೆ ಎತ್ತರೆತ್ತರಕ್ಕೆ ಬೆಳೆದವರಲ್ಲ. ಸಾಮಾಜಿಕ ಅವಮಾನಗಳನ್ನು ಮೌನದಲ್ಲೇ ಅನುಭವಿಸಿ, ಅರಗಿಸಿ, ಅರಳುತ್ತ ಬಂದವರು. ಅವರು ಕೆರಳಿದ್ದು ಕಡಿಮೆ; ಅರಳಿದ್ದು ಅಧಿಕ. ಇದು ಅವರ ವ್ಯಕ್ತಿತ್ವ. ಅವರು ಸಿನಿಮಾರಂಗ ಪ್ರವೇಶ ಮಾಡಿದಾಗ ಎಲ್ಲವೂ ಹೊಸ ವಾತಾವರಣ. ಸ್ಟುಡಿಯೊ ಎನ್ನುವುದೇ ವಿನೂತನ ಆವರಣ. ಅಲ್ಲಿಗೆ ಇವರು ಹೊಂದಿಕೊಂಡು ಉಳಿದು ಬೆಳೆಯಬೇಕಾಗಿತ್ತು. ಹಳ್ಳಿಗನ ಮುಗ್ಧ ನಡವಳಿಕೆ, ಹಿಂಜರಿಕೆಗಳ ವ್ಯಕ್ತಿಗೆ ಆರಂಭದಲ್ಲಿ ಉತ್ಸಾಹದ ಸನ್ನಿವೇಶವೇನೂ ಇರಲಿಲ್ಲ. ಆದರೂ ರಾಜಕುಮಾರ್ ಅವರು ಎದೆಗುಂದಲಿಲ್ಲ. ಪ್ರತಿಭೆಯೇ ರಾಜಕುಮಾರ್ ಅವರ ಪ್ರತಿಕ್ರಿಯೆ, ಪ್ರತಿರೋಧ. ಇದು ಮಾತಿಲ್ಲದ ಮೌನಸಂಗ್ರಾಮ. ಸಂಗ್ರಾಮವು ಸ್ವಯಂ ಸಾಧನೆಯನ್ನು ಸ್ಥಾಪಿಸುವ ಸಾಧನವಾಗಿತ್ತೇ ಹೊರತು ಇತರರನ್ನು ಸೋಲಿಸುವ ಶಸ್ತ್ರವಾಗಿರಲಿಲ್ಲ. ಹಾಗೆಂದು ಇವರೆದುರಿಗೆ ಶಸ್ತ್ರಗಳು ಇರಲಿಲ್ಲವೆಂದಲ್ಲ. ಶಸ್ತ್ರಕ್ಕೆ ಶಸ್ತ್ರವೇ ಉತ್ತರವಾಗುವ ಬದಲು ಪ್ರತಿಭಾನಿಷ್ಠ ಪ್ರಾಮಾಣಿಕ ಕ್ರಿಯಾಸಾಧನೆ ಉತ್ತರವಾಗಿತ್ತು.

ಆರಂಭದ ದಿನಗಳಲ್ಲಿ ಒಮ್ಮೆ ಹೀಗಾಯಿತು: ರಾಜ ಕುಮಾರ್ ಅವರು ಮದ್ರಾಸಿನ ಸ್ಟುಡಿಯೊ ಪ್ರವೇಶಿಸಿದರು. ಅದಾಗಲೇ ಹೆಸರು ಮಾಡಿದ್ದ ನಟರೊಬ್ಬರ ಜೊತೆ ಕೆಲವರು ಹರಟುತ್ತ ಕೂತಿದ್ದರು. ರಾಜಕುಮಾರ್ ಅವರನ್ನು ನೋಡಿ ಆ ನಟ ಬಾರಯ್ಯ ಕೂತ್ಕೊ ಎಂದು ಕರೆದರು. ರಾಜಕುಮಾರ್ ಕೂತುಕೊಳ್ಳುವುದಕ್ಕೆ ಶುರು ಮಾಡಿದಾಗ ಕುರ್ಚಿಯನ್ನು ಹಿಂದಕ್ಕೆ ಎಳೆದರು. ರಾಜಕುಮಾರ್ ಕುಸಿದು ಬಿದ್ದರು. ಅಲ್ಲಿದ್ದವರು ಕಿಸಕ್ಕನೆ ನಕ್ಕರು. ರಾಜಕುಮಾರ್ ಅವಮಾನದಿಂದ ತಬ್ಬಿಬ್ಬಾದರು. ಅಂದು ಕುರ್ಚಿ ಎಳೆದು ಕಿಸಕ್ಕೆಂದವರನ್ನು ಏನೂ ಅನ್ನದ ರಾಜಕುಮಾರ್ ಮೌನ ವಹಿಸಿದರು. ಕೆಲವು ವರ್ಷಗಳಲ್ಲೇ ಕರ್ನಾಟಕದ ಜನಮಾನಸದ ಸಿಂಹಾಸನವನ್ನು ಏರಿದರು. ಜನರೇ ಇವರನ್ನು ರಾಜನಂತೆ ಮೆರೆಸಿದರು. ನಟ ಸಾರ್ವಭೌಮ ಎಂದರು. ಆದರೆ ರಾಜಕುಮಾರ್ ಯಾವತ್ತೂ ಸಂವೇದನೆಯನ್ನು ಕಳೆದುಕೊಂಡ ಸಾರ್ವಭೌಮರಾಗಲಿಲ್ಲ. ಎನಗಿಂತ ಕಿರಿಯರಿಲ್ಲ ಎಂಬ ಬಸವಣ್ಣನವರ ಮಾತನ್ನು ಮೈಮನಗಳಲ್ಲಿ ತುಂಬಿಕೊಂಡು ಬದುಕಿದರು.

ಒಮ್ಮೆ ಈ ಕುರ್ಚಿ ಪ್ರಸಂಗದ ಸತ್ಯಾಸತ್ಯತೆ ಕುರಿತು ನಾನು ಕೇಳಿದ್ದೆ. ಅವರು ಜೀವನದಲ್ಲಿ ಏನೇನೋ ಆಗುತ್ತೆ, ಅದನ್ನೇ ಯಾವಾಗ್ಲೂ ನೆನಪಿಸ್ಕೊಂಡು ಕೊರಗೋದು, ದ್ವೇಷ ಸಾಧಿಸೋದು ಸರಿಯಲ್ಲ ಸಾರ್. ಕುರ್ಚಿ ಎಳೆದದ್ದು ನಾನು ಗಟ್ಟಿ ಆಗೋಕೆ ಒಂದು ಕಾರಣ ಆಯ್ತು ಅಂದ್ಕೊಡ್ರಾಯ್ತು ಎಂದು ಉತ್ತರಿಸಿ ಬೇರೆ ವಿಷಯಕ್ಕೆ ಹೊರಳಿದರು.

ಡಾ. ರಾಜಕುಮಾರ್ ಅವರಿಗೆ ತಾರಾಮೌಲ್ಯ ಬಂದ ಮೇಲೂ ಕಾಲೆಳೆಯುವವರ ಕುಚೋದ್ಯ ನಿಲ್ಲಲಿಲ್ಲ. ಒಂದು ಪತ್ರಿಕೆ ಇವರಿಗೆ ಅ ಕಾರ ಮತ್ತು ಹ ಕಾರದ ವ್ಯತ್ಯಾಸಗೊತ್ತಿಲ್ಲ ಎಂದು ಬರೆದಿತ್ತು. ಇದೊಂದು ಹಸಿ ಸುಳ್ಳು ಎಂದು ಯಾರಿಗಾದರೂ  ತಿಳಿಯುತ್ತೆ. ರಾಜಕುಮಾರ್ ಸಿನಿಮಾರಂಗದ ಕನ್ನಡ ಮೇಷ್ಟ್ರು. ಸ್ಪಷ್ಟ ಉಚ್ಚಾರವಷ್ಟೇ ಅಲ್ಲ, ಪಾತ್ರಕ್ಕೆ ತಕ್ಕಂತೆ ಬಹುವಿಧದ ಕನ್ನಡವನ್ನು ಸುಲಲಿತವಾಗಿ ಆಡಿ ಅಭಿನಯಿಸಿದ ಅತ್ಯುತ್ತಮ ಕಲಾವಿದರು. ಆದರೆ ಮೊಸರಲ್ಲಿ ಕಲ್ಲು ಹುಡುಕುವವರಿಗೆ ಸತ್ಯ ಬೇಕಿರುವುದಿಲ್ಲ. ಕರ್ನಾಟಕದ ಜನಸಾಮಾನ್ಯರ ಮನದಲ್ಲಿ ವರನಟರೆಂದು ನೆಲೆಯೂರಿದ್ದು ಕೆಲವು ಅಕ್ಷರ ಹಲ್ಲೆಕೋರರಿಗೆ ಹಿಡಿಸಲಿಲ್ಲ. ಒಬ್ಬರು ಈತ ಕರ್ನಾಟಕಕ್ಕೆ ವರವೋ ಶಾಪವೋ ಎಂದು ಬರೆದದ್ದು ಉಂಟು. ರಾಜಕುಮಾರ್ ಅವರು ಯಾವತ್ತೂ ಇಂತ ಕಿಡಿಗೇಡಿತನಗಳಿಗೆ ಉತ್ತರಿಸುವ ಗೋಜಿಗೆ ಹೋಗಲಿಲ್ಲ. ಅವರು ಇಂತಹ ವೈಯಕ್ತಿಕ ಮತ್ತು ಸಾಮಾಜಿಕ ಸವಾಲುಗಳಿಗೆ ಸಾಧನೆಯ ಮೂಲಕ ಮಾತ್ರ ಉತ್ತರಿಸಿದರು. ಕನ್ನಡವೇ ಏಕೆ ಇಂಗ್ಲೀಷ್‌ನಲ್ಲಿ ಪಾಠ ಮಡುವ ಮೇಷ್ಟ್ರಾಗಿ (ಎರಡು ಕನಸು ಚಿತ್ರದಲ್ಲಿ) ಮಿಂಚಿದರು. ಕವಿರತ್ನ ಕಾಳಿದಾಸದಲ್ಲಿ ಸಂಸ್ಕೃತ ಶ್ಲೋಕ ಹಾಡಿದರು. ಆಡುಭಾಷೆಯ ಹಾಡುಗಾರಿಕೆಯ ಜೊತೆಗೆ ಶಾಸ್ತ್ರೀಯ ದಾಟಿಯಲ್ಲೂ ಹಾಡಿ ಉತ್ತರಕೊಟ್ಟರು. ಸಾಧನಾ ಸಂಗ್ರಾಮದಲ್ಲಿ ಜನಮನವನ್ನು ಗೆದ್ದರು.

ಇಷ್ಟೆಲ್ಲ ಸಾಧನೆ ಮಾಡಿದಾರೂ ಕನ್ನಡದ ಮೊಟ್ಟಮೊದಲ ಪೂರ್ಣವರ್ಣಚಿತ್ರ ಅಮರ ಶಿಲ್ಪ ಜಕಣಾಚಾರಿಗೆ ನಾಯಕನಾಗಿ ಆಯ್ಕೆಯಾದ ಮೇಲೂ ವಂಚಿತರಾದರು. ಅದು ಆದದ್ದು ಹೀಗೆ : ಅದಾಗಲೇ ಕರ್ನಾಟಕದ ಕೋಟ್ಯಂತರ ಜನರ ಅಣ್ಣಾವ್ರು ಎಂಬ ಅಭಿದಾನದ ಅಭಿಮಾನಕ್ಕೆ ಪಾತ್ರರಾಗಿದ್ದ ರಾಜಕುಮಾರ್ ಅವರು ಜಕ್ಕಣಚಾರಿ ಪಾತ್ರಕ್ಕೆ ಆಯ್ಕೆಯಾಗಿದ್ದರು. ಚಿತ್ರೀಕರಣ ಆರಂಭಕ್ಕೆ ಒಂದೆರಡು ದಿನ ಮುಂಚೆ ಮೇಕಪ್ ಹಾಕಿ ನೋಡುವುದಕ್ಕೆ ಸ್ಟುಡಿಯೋಗೆ ಕರೆಯಲಾಯಿತು. ಸೋದರ ವರದಪ್ಪನವರು ಕಾರಿನಲ್ಲಿ ರಾಜಕುಮಾರ್ ಅವರನ್ನು ಕರೆತಂದು ಬಿಟ್ಟು ಸಾಯಂಕಾಲ ಬರುವುದಾಗಿ ಹೇಳಿ ಹೊರಟುಹೋದರು. ಮೇಕಪ್ ಮಾಡಲಾಯಿತು. ಗಂಟೆಗಳು ಕಳೆದರೂ ನಿರ್ದೇಶಕರು ಪರಿಶೀಲನೆಗೆ ಬರಲಿಲ್ಲ. ಏನಾದರೂ ಬದಲಾವಣೆ ಬೇಕಾಗಬಹುದೆ ಎಂದು ನೋಡಬೇಕಿತ್ತಾದರೂ ಮೇಕಪ್ ರೂಮಿನ ಕಡೆ ಸುಳಿಯಲಿಲ್ಲ. ಮೇಕಪ್‌ಮನ್ ಅವರು ಯಾವುದೋ ಚರ್ಚೇಲಿದ್ದಾರೆ ಬರ‍್ತಾರೆ ಅಣ್ಣ ಎಂದು ಹೇಳಿದ. ರಾಜಕುಮಾರ್ ಪರವಾಗಿಲ್ಲ ಬಿಡಿ ಎಂದು ಕಾಯುತ್ತ ಕೂತರು. ಯಾರೂ ಬರದೇ ಇದ್ದಾಗ ರಾಜಕುಮಾರ್ ಮೇಕಪ್ ಮನ್‌ಗೆ ಕರೆದು ಬರಲು ಹೇಳಿದರು. ಆತ ಹೋಗಿ ವಾಪಸ್ ಬಂದವನೇ ಅಣ್ಣ, ನೀವು ಮನೆಗೆ ಹೋಗ್‌ಬೇಕಂತೆ ಎಂದು ಹೇಳಿದಾಗ ರಾಜಕುಮಾರ್ ಅವರಿಗೆ ಅಚ್ಚರಿಯಷ್ಟೇ ಅಲ್ಲ ಬೇಸರವೂ ಅಯಿತು. ಆದರೂ ಹೋಗಿ ಯಾಕೆಂದು ಕೇಳಲಿಲ್ಲ. ವಾಪಸ್ ಮನೆಗೆ ಹೋಗಲು ಸ್ಟುಡಿಯೋ ಫೋನ್ ಬಳಸಿ ವರದಪ್ಪನವರಿಗೆ ಫೋನ್ ಮಾಡಲೂ ಇಷ್ಟವಾಗಲಿಲ್ಲ. ಮೇಕಪ್ ಕಳಚಿ ಅಲ್ಲಿಂದ ಹೊರಟರು. ಈಗ ಅಣ್ಣಾಸಲೈ ಎಂದು ಕರೆಯುವ ಮುಖ್ಯರಸ್ತೆಯಲ್ಲಿ ಒಂದು ಸಿಂಡಿಕೇಟ್ ಬ್ಯಾಂಕ್ ಇದ್ದು ಅದರಲ್ಲಿ ಇವರ ಬಂಧು ಸುಧಾಕರ್ ಎನ್ನುವವರು ಕೆಲಸದಲ್ಲಿದ್ದದ್ದು ನೆನಪಾಯಿತು. ಅಲ್ಲಿಗೆ ಹೋದರು. ಅವರನ್ನು ಕೇಳಿ ಆಟೋ ಖರ್ಚಿಗೆ ಹಣ ತೆಗೆದುಕೊಂಡರು. (ಅವರು ತಮ್ಮೊಂದಿಗೆ ಯಾವತ್ತೂ ಹಣ ಇಟ್ಟುಕೊಳ್ಳುತ್ತಿರಲಿಲ್ಲವಾದ್ದರಿಂದ ಇನ್ನೊಬ್ಬರಿಂದ ಪಡೆದುಕೊಳ್ಳಬೇಕಾಯಿತು) ಅಲ್ಲಿಂದ ಆಟೋ ಹತ್ತಿ ಮನೆಗೆ ಹೋದರು.

ಒಂದೆರಡು ದಿನದಲ್ಲಿ ಅಮರಶಿಲ್ಪಿ ಜಕ್ಕಣಾಚಾರಿ ಚಿತ್ರೀಕರಣ ಪ್ರಾರಂಭವಾದಾಗ ಪ್ರಸಿದ್ಧ ನಟ ಕಲ್ಯಾಣ್‌ಕುಮಾರ್ ನಾಯಕ ಪಾತ್ರಧಾರಿಯಾಗಿದ್ದರು. ಈ ಬಗ್ಗೆ ನಾನು ಪ್ರಸ್ತಾಪಿಸಿದಾಗ ರಾಜಕುಮಾರ್ ವಿಷಯವನ್ನು ಬೆಳೆಸಲಿಲ್ಲ. ಅವರವರು ಪಡೆದುಕೊಂಡದ್ದು ಅವರವರಿಗೆ ಅಷ್ಟೆ ಸಾರ್. ಕಲ್ಯಾಣಕುಮಾರ್ ಒಳ್ಳೆ ನಟ, ನನಗಿಂತ ಮುಂಚೆ ಪ್ರಸಿದ್ಧಿಗೆ ಬಂದಾತ. ಆತ ಒಂದ್ ವಿಷಯದಲ್ಲಿ ನನಗೆ ಗುರು ಎಂದರು. ಅದು ಹೇಗೆ ಸಾರ್ ಅವರು ಗುರು ಆದ್ರು? ಎಂದು ಕೇಳಿದೆ. ನಾನು ಮದ್ರಾಸಿಗೆ ಹೋದಾಗ ನಾಟಕದೋರ್ ತರಾ ಉದ್ದಕೂದಲು ಇತ್ತು. ಏ ಮುತ್ತುರಾಜ, ಇಲ್ಲಿ ಹೀಗೆಲ್ಲ ಕೂದ್ಲು ಬಿಟ್ಕೊಂಡ್ ಇರ್‌ಬಾರ‍್ದು ಬಾ ಅಂತ ಕರ‍್ಕೊಂಡ್ ಹೋಗಿ ನೀಟಾಗಿ ಕಟಿಂಗ್ ಮಾಡ್ಸಿದ್ದು ಕಲ್ಯಾಣಕುಮಾರ್ ಸಾರ್. ಈ ವಿಷಯದಲ್ಲಿ ಗುರು ತಾನೆ? ಎಂದು ತೀರಾ ಸಹಜವಾಗಿ ಮೆಚ್ಚಿ ಮಾತಾಡಿದ ರಾಜ್ ಅಚ್ಚರಿಯಾಗಿ ಕಂಡರು. ಅವರ ಸಮಚಿತ್ತವೇ ನನ್ನ ಅಚ್ಚರಿಗೆ ಕಾರಣವಾಗಿತ್ತು.

ಮುಂದುವರೆದು ಇನ್ನೊಬ್ಬರು ಗುರುವಿನ ಬಗ್ಗೆಯೂ ರಾಜಕುಮಾರ್ ಹೇಳಿದರು. ಆ ಗುರುವೇ ಶ್ರೀಮತಿ ಪಂಡರಿಬಾಯಿಯವರು. ರಾಜಕುಮಾರ್ ಅವರು ನಾಯಕನಟರಾದ ಮೊದಲ ಚಿತ್ರ ಬೇಡರ ಕಣ್ಣಪ್ಪದಲ್ಲಿ ಪಂಡರಿಬಾಯಿಯವರೇ ನಾಯಕಿ. ರಾಜಕುಮಾರ್ ಅವರಿಗೆ ಆಗ ನಿರ್ದೇಶಕರು ಮತ್ತು ಛಾಯಾಗ್ರಾಹಕರು ಸೂಚಿಸುವ ಲೆಫ್ಟ್‌ಲುಕ್ ರೈಟ್‌ಲುಕ್ ಮುಂತಾದ ಮಾತುಗಳು ಅರ್ಥವಾಗುತ್ತಿರಲಿಲ್ಲವಂತೆ. ಪಂಡರಿಬಾಯಿಯವರು ಅರ್ಥ ಹೇಳಿಕೊಟ್ಟು ನೆರವಾಗುತ್ತಿದ್ದರಂತೆ. ಇದನ್ನು ರಾಜಕುಮಾರ್ ಅವರು ಹೇಳಿ ಆ ವಿಷಯದಲ್ಲಿ ಪಂಡರಿಬಾಯಿಯವರು ನನಗೆ ಗುರುವಾದರು ಎಂದು ನೆನದುಕೊಂಡಾಗ ನಿಜಕ್ಕೂ ಇವರು ದೊಡ್ಡ ಮನುಷ್ಯ ಅನ್ನಿಸಿತು.

ಗುರುವಿನ ವಿಷಯ ಬಂದಾಗ ಇನ್ನೊಂದು ಪ್ರಸಂಗ ನೆನಪಾಗುತ್ತದೆ. ಇದು ಜೊತೆ ಕಲಾವಿದರಿಗೆ ಸಂಬಂಧಿಸಿದ್ದಲ್ಲ. ಆದರೆ ರಾಜಕುಮಾರ್ ಅವರ ವಿನೀತಭಾವದ ಒಂದು ಸಂಕೇತ ಪ್ರಸಂಗ. ತಿಪಟೂರಿನ ರಾಮಸ್ವಾಮಿಯವರು ರಂಗಭೂಮಿ ಬದುಕಿನಲ್ಲಿ ರಾಜ್ ಅವರಿಗೆ ಜೊತೆಯಾದವರು. ಅವರನ್ನು ನೋಡಬೇಕೆನ್ನಿಸಿದಾಗ ರಾಜಕುಮಾರ್ ಅವರು ತಾವೇ ತಿಪಟೂರಿಗೆ ಹೋದದ್ದುಂಟು. ರಾಮಸ್ವಾಮಿಯವರು ಬೆಂಗಳೂರಿಗೆ ಬಂದಾಗ ಕೆಲವೊಮ್ಮೆ ತಾವೇ ತಿಪಟೂರಿನವರೆಗೆ ಬಿಟ್ಟು ಬಂದದ್ದೂ ಉಂಟು. ಹೀಗೆ ಒಮ್ಮೆ ಪ್ರಯಾಣ ಮಾಡುತ್ತಿದ್ದರು. ರಾಜಕುಮಾರ್ ಅವರಿಗೆ ಬಾಯಾರಿಕೆ ಯಾಯಿತು, ರಸ್ತೆ ಪಕ್ಕದ ಒಂದು ಹೊಲದಲ್ಲಿ ಬಾವಿಯಿತ್ತು. ಕಾರು ನಿಲ್ಲಿಸಿ ರಾಜಕುಮಾರ್ ಬಾವಿಯ ಒಳಗೆ ಇಳಿದರು. ಅಲ್ಲಿ ಕುರಿ ಕಾಯುತ್ತಿದ್ದ ಹುಡುಗನೊಬ್ಬ ಬಂದ. ಆತನಿಗೆ ಇವರು ರಾಜಕುಮಾರ್ ಎಂಬುದು ಗೊತ್ತಿಲ್ಲ. ಬಂದವನೇ ನಿಮಗೇನ್ ಮೈಮ್ಯಾಗೆ ಗ್ಯಾನ ಇಲ್ವ? ಮೆಟ್ಟು ಆಕ್ಕಂಡೇ ಬಾವೀಗೆ ಇಳೀತಾರ? ಮದ್ಲು ಮ್ಯಾಲ್ ಮೆಟ್ ಬಿಟ್ಟು ಬಾವೀನಾಗ್ ವೋಗಿ. ಗಂಗಮ್ಮ ತಾಯಿಗೆ ಇಂಗೆಲ್ಲ ಮಾಡ್‌ಬಾರ‍್ದು ಎಂದು ಗದರಿದ. ರಾಮಸ್ವಾಮಿಯವರು ರಾಜಕುಮಾರ್ ಅವರ ಬಗ್ಗೆ ಹೇಳಹೋದಾಗ ರಾಜ್ ಅವರು ಸನ್ನೆ ಮಾಡಿ ಸುಮ್ಮನಿರಿಸಿ ಬಾವಿ ಮೆಟ್ಟಲು ಹತ್ತಿ ಮೇಲೆ ಬಂದರು. ತಪ್ಪಾಯ್ತು ಕಂದ ಎಂದು ಆ ಹುಡುಗನಿಗೆ ಹೇಳಿ ಚಪ್ಪಲಿ ಬಿಟ್ಟರು. ಬರಿಗಾಲಲ್ಲಿ ಬಾವಿಗೆ ಇಳಿದರು. ನೀರು ಕುಡಿದು ಮೇಲೆ ಬಂದು ಹುಡುಗನಿಗೆ ಕೈ ಮುಗಿದು ಹೊರಟರು. ಈ ಪ್ರಸಂಗವನ್ನು ನೆನದ ರಾಜ್ ಆ ಕುರಿ ಕಾಯೋ ಹುಡುಗ ಅವತ್ತು ನನಗೆ ಗುರು ಆದ ಎಂದರು. ಅವರು ಹಾಗೆ ಭಾವಿಸಲು ಎರಡು ಕಾರಣ ಕೊಟ್ಟರು. ಅ ಬಾವಿ ನೀರಿನಿಂದ ಬೇಸಾಯ ನಡ್ಯುತ್ತೆ, ಅದ್ರಿಂದ ಆ ನೀರು ಬೇಸಾಯಗಾರರಿಗೆ ಬರೀ ನೀರಲ್ಲ ಸಾರ್ ತಾಯಿ ಇದ್ದಂಗೆ. ಆ ತಾಯೀಗೆ ಗೌರವ ಕೊಡಬೇಕು ಅನ್ನೋದನ್ನ ಆ ಹುಡುಗ ಹೇಳ್ಕೊಟ್ಟ. ಇನ್ನೊಂದ್ ವಿಷ್ಯ ಅಂದ್ರೆ, ನಾವು ಸಿನಿಮಾ ನಟರು ಪ್ರಸಿದ್ಧಿಗ್ ಬಂದ್ ಮೇಲೆ ಎಲ್ರಿಗೂ ಗೊತ್ತಿರ‍್ತೇವೆ ಅಂತ ಭ್ರಮೇಲಿರ‍್ತೇವೆ. ಆ ಹುಡುಗನಿಗೆ ನಾನ್ಯಾರು ಅಂತಾನೇ ಗೊತ್ತಿರಲಿಲ್ಲ. ಅದ್ರಿಂದ ನಮ್ಮ ಭ್ರಮೆ ಬಿಡಿಸ್ದ. ಈ ಎರಡು ಕಾರಣಕ್ಕೆ ಗುರುವಾಗಿಬಿಟ್ಟ  ಹೀಗೆ ರಾಜಕುಮಾರ್ ಅವರು ವಿವರಿಸಿದಾಗ ನನಗೆ ಮಾತೇ ಹೊರಡಲಿಲ್ಲ. ಅಲ್ಲಿ ಮಾತಿಗೆ ಕೆಲಸವಿರಲಿಲ್ಲ. ಮನಸ್ಸು ತುಂಬಿ ಮೌನವೇ ಸದ್ದಿಲ್ಲದ ಮಾತಾಗಿತ್ತು.

ಡಾ|| ರಾಜಕುಮಾರ್ ಅವರಿಗೆ ಸಾಮಾನ್ಯರು-ಅಸಾಮಾನ್ಯರು ಎಂಬ ಭೇದಭಾವ ಇರಲಿಲ್ಲ. ಅಭಿಮಾನದಲ್ಲಿ ಅಸಮಾನತೆಗೆ ಅವಕಾಶವಿರಲಿಲ್ಲ. ಇಲ್ಲಿ ಒಬ್ಬ ಹುಡುಗನಿಗೆ ಬೆಲೆಕೊಟ್ಟಂತೆ ವಯಸ್ಸಾದವರಿಗೆ ಗೌರವ ಕೊಟ್ಟ ಪ್ರಸಂಗಗಳೂ ಇವೆ. ಪ್ರಾಸಂಗಿಕವಾಗಿ ಇಲ್ಲಿ ಒಂದು ಪ್ರಸಂಗವನ್ನು ಸಾದರಪಡಿಸುತ್ತೇನೆ. ಅದು ಗೋಕಾಕ್ ಚಳವಳಿಯ ಕಾಲ, ೧೯೮೨ ಏಪ್ರಿಲ್ ೧೭ ರಂದು ಬೆಂಗಳೂರಲ್ಲಿ ಗೋಕಾಕ್ ಚಳವಳಿಗೆ ಪ್ರವೇಶ ಮಾಡಿದ ರಾಜಕುಮಾರ್ ಆನಂತರ ಕನ್ನಡ ಪರವಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿದರು. ಹಗಲು ರಾತ್ರಿಯೆನ್ನದೆ ಸುತ್ತಾಡಿದರು. ಒಮ್ಮೆ ಒಂದು ಊರಲ್ಲಿ ಸಮಾರಂಭ ಮುಗಿಸಿ ಮುಂದಿನೂರಿನ ಸಮಾರಂಭಕ್ಕೆ ಒಂದು ಹಳ್ಳಿಯಲ್ಲಿ ಹಾದು ಹೋಗಿದ್ದಾರೆ. ಆ ಹಳ್ಳಿಯಲ್ಲಿ ನಿಲ್ಲುವ ಕಾರ್ಯಕ್ರಮ ಇರಲಿಲ್ಲ. ಆದರೆ ರಾಜಕುಮಾರ್ ಅವರು ಅಲ್ಲಿ ಹಾದು ಹೋಗುತ್ತಾರೆಂದು ತಿಳಿದು ಕೆಲವರು ಸೇರಿದ್ದರು. ಒಬ್ಬರು ಹಣ್ಣುಹಣ್ಣಾದ ಮುದುಕಿ ಹಾರ ಹಿಡಿದು ನಿಂತಿದ್ದರು. ರಾಜಕುಮಾರ್ ಗಮನಿಸಲಿಲ್ಲ. ಆ ಊರಿಂದ ಹತ್ತು ಹನ್ನೆರಡು ಕಿಲೋಮೀಟರ್ ಸಾಗಿದ ಮೇಲೆ ಕಾರಿನಲ್ಲಿದ್ದ ನಿರ್ದೇಶಕ ಭಗವಾನ್ ಅವರು ಮುದುಕಿಯ ಬಗ್ಗೆ ಹೇಳಿದರು. ರಾಜಕುಮಾರ್ ಅಲ್ಲೇ ಹೇಳಬಾರದಿತ್ತ ಎಂದವರೆ ಕಾರು ನಿಲ್ಲಿಸಿ ಹಿಂದಕ್ಕೆ ಹೋಗಲು ಹೇಳಿದರು. ಆ ಮುದುಕಿಯಿದ್ದ ಹಳ್ಳಿಗೆ ವಾಪಸ್ ಬಂದರು. ಆ ಮುದುಕಿ ಅಲ್ಲಿಯೇ ಇದ್ದರು. ಕಾರಿನಿಂದಿಳಿದ ರಾಜಕುಮಾರ್ ಅವರನ್ನು ನೋಡಿ ಆಕೆಗೆ ಆನಂದವೋ ಆನಂದ. ಆಕೆ ಹಾರ ಹಾಕಲು ಹೋದಾಗ, ರಾಜಕುಮಾರ್ ಹಾರವನ್ನು ಆಕೆಗೆ ಹಾಕಿ ಕಾಲಿಗೆ ನಮಸ್ಕರಿಸಿದರು. ನಿಮ್ಮ ಆಶೀರ್ವಾದ ಇರಲಿ ಅಮ್ಮ ಎಂದು ಕೇಳಿಕೊಂಡರು. ಅಲ್ಲಿದ್ದವರೆಲ್ಲ ಊಹೆಗೆ ನಿಲುಕದ ಘಟನೆಗೆ ಸಾಕ್ಷಿಯಾಗಿ ನಿಂತಿದ್ದರು. ಎಲ್ಲರಿಗೂ ಕೈ ಮುಗಿದು ರಾಜಕುಮಾರ್ ಅಲ್ಲಿಂದ ಹೊರಟರು.

ರಾಜಕುಮಾರ್ ಅವರು ತಮ್ಮ ವೃತ್ತಿ ಬಂಧುಗಳಲ್ಲಿಯೂ ಚಿಕ್ಕವರು ದೊಡ್ಡವರು ಎಂಬ ವ್ಯತ್ಯಾಸ ಮಾಡುತ್ತಿರಲಿಲ್ಲ. ಇದರ ಫಲವಾಗಿ ಅವರಿದ್ದ ಕಡೆ ಚಿತ್ರೀಕರಣ  ಸಂದರ್ಭದಲ್ಲಿ ಸಮಾನ ಸಹಪಂಕ್ತಿ ಭೋಜನದ ವ್ಯವಸ್ಥೆಯಾಗುತ್ತಿತ್ತು. ನಾಯಕ ನಟನೆಂದು ಪ್ರತ್ಯೇಕ ಊಟದ ವ್ಯವಸ್ಥೆ ಮಾಡಿಸಿಕೊಳ್ಳುತ್ತಿರಲಿಲ್ಲ. ಒಮ್ಮೊಮ್ಮೆ ನೆಲದ ಮೇಲೆ ಕೂತು ಎಲ್ಲರ ಜೊತೆ ಊಟ ಮಾಡುತ್ತಿದ್ದರು. ಇಂಥದ್ದೊಂದು ಪ್ರಸಂಗವನ್ನು ಪದ್ಮಭೂಷಣ ಡಾ|| ಬಿ.ಸರೋಜಾದೇವಿ ಯವರು ಹೇಳಿದ್ದಾರೆ. ಅದು ಬಬ್ರುವಾಹನ ಸಿನಿಮಾ ಚಿತ್ರೀಕರಣ. ಸರೋಜಾದೇವಿಯವರು ಚಿತ್ರಾಂಗದೆ ಪಾತ್ರದ ಉಡುಪುಗಳನ್ನು ಧರಿಸಿಯಾಗಿದೆ. ಕುರ್ಚಿಯಲ್ಲಿ ಕೂತು ಊಟ ಮಾಡುತ್ತಿದ್ದಾರೆ. ರಾಜಕುಮಾರ್ ಬಂದವರು ಎಲ್ಲರ ಜೊತೆ ನೆಲದ ಮೇಲೆ ಊಟಕ್ಕೆ ಕೂತುಕೊಳ್ಳುತ್ತಾರೆ. ಆಗ ಸರೋಜಾದೇವಿಯವರು ನಾನು ಇದೆಲ್ಲ ಕಾಸ್ಟೂಮ್ ಹಾಕ್ಕೊಂಡ್ ಬಿಟ್ಟಿದ್ದೀನಿ ಅಲ್ಲಿ ನಿಮ್ ಜೊತೆ ಕೂತ್ಕೊಳ್ಳೋಕಾಗಲ್ಲ ಎಂದು ಸಂಕೋಚದಿಂದ ಹೇಳುತ್ತಾರೆ. ಆಗ ರಾಜಕುಮಾರ್ ಛೆ! ಛೆ! ಅದೆಲ್ಲ ಚಿಂತೆ ಮಾಡ್‌ಬೇಡಿ. ಆ ವೇಷದಲ್ಲಿ ನೀವು ಕುರ್ಚಿ ಮೇಲೆ ಕೂತ್ಕೊಬೇಕು. ಅದೇ ಚೆಂದ. ಮಾಡಿ, ಸಂಕೋಚವಿಲ್ದೆ ಊಟ ಮಾಡಿ ಎನ್ನುತ್ತಾರೆ. ತಾವು ಮಾತ್ರ ಎಲ್ಲರ ಸಾಲಿನಲ್ಲಿ ಕೂತು ಊಟ ಮುಗಿಸುತ್ತಾರೆ. ಈ ಪ್ರಸಂಗವನ್ನು ಸ್ವತಃ ಸರೋಜಾದೇವಿಯವರೇ ಹೇಳಿ, ರಾಜ್ ವ್ಯಕ್ತಿತ್ವದ ಸರಳತೆ ಮತ್ತು ನಿಷ್ಕಪಟತೆಯನ್ನು ಹೊಗಳಿದ್ದು ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು.

ರಾಜಕುಮಾರ್ ಸಹಕಲಾವಿದರನ್ನು ಪ್ರೀತ್ಯಾದರಗಳಿಂದ ನಡೆಸಿಕೊಂಡ ಅನೇಕ ಉದಾಹರಣೆಗಳಿವೆ. ಜೋಕರ್ ಶ್ಯಾಮ್ ಒಬ್ಬ ಹಾಸ್ಯನಟರು. ಅವರು ಭಲೇ ಜೋಡಿ ಚಿತ್ರದಲ್ಲಿ ಒಂದು ಚಿಕ್ಕ ಪಾತ್ರ ಮಾಡಿದ್ದಾರೆ. ಮದ್ರಾಸ್‌ನಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ ಒಂದು ಇಕ್ಕಟ್ಟಿಗೆ ಸಿಲುಕುತ್ತಾರೆ. ಚಿತ್ರೀಕರಣ ಮುಗಿಸಿ ಅವರು ಸಂಜೆ ಬೆಂಗಳೂರು ತಲುಪಿ ಚಿತ್ರನಟಿ ಎಂ.ಎನ್.ಲಕ್ಷ್ಮೀದೇವಿ ಅವರ ತಂಡದ ಆರಾಧನ ಎಂಬ ನಾಟಕದಲ್ಲಿ ಅಭಿನಯಿಸಬೇಕಿತ್ತು. ಈ ನಾಟಕದ ಪ್ರದರ್ಶನವು ಕಾಂಗ್ರೆಸ್ ವಸ್ತು ಪ್ರದರ್ಶನದಲ್ಲಿ ಏರ್ಪಾಟಾಗಿತ್ತು. ಈಗ ಬೆಂಗಳೂರಿನ ಮೆಜೆಸ್ಟಿಕ್ ಏರಿಯಾದಲ್ಲಿರುವ ಬಿ.ಎಂ.ಟಿ.ಸಿ ಬಸ್ ನಿಲ್ದಾಣ ಆಗ ಖಾಲಿಯಾಗಿದ್ದ ಮೈದಾನ. ಅಲ್ಲಿ ಪ್ರತಿ ವರ್ಷ ಕಾಂಗ್ರೆಸ್ ವಸ್ತುಪ್ರದರ್ಶನದ ವ್ಯವಸ್ಥೆಯಾಗುತ್ತಿತ್ತು. ತಿಂಗಳಾನುಗಟ್ಟಲೆ ನಡೆಯುತ್ತಿತ್ತು. ಮನರಂಜನೆ ಕಾರ್ಯಕ್ರಮಗಳಿರುತ್ತಿದ್ದವು.  ಇಲ್ಲಿ ಪ್ರದರ್ಶನಗೊಳ್ಳಲಿದ್ದ ನಾಟಕಕ್ಕೆ ಜೋಕರ್ ಶ್ಯಾಮ್ ಬರಲೇಬೇಕಿತ್ತು. ಆದರೆ ಅಲ್ಲಿ ಮದ್ರಾಸ್‌ನಲ್ಲಿ ಮದ್ಯಾಹ್ನದ ವೇಳೆಗೆ ಚಿತ್ರೀಕರಣ ಮುಗಿಯಲಿಲ್ಲ. ಸಾಯಂಕಾಲದವರೆಗೆ ಇರಲೇಬೇಕೆಂದು ನಿರ್ದೇಶಕರು ಕಟ್ಟುನಿಟ್ಟಾಗಿ ಹೇಳಿಬಿಟ್ಟಿದ್ದರು. ಸಾಯಂಕಾಲ ಬಸ್ ಹತ್ತಿ ಬೆಂಗಳೂರು ತಲುಪುವ ವೇಳೆಗೆ ಮಧ್ಯರಾತ್ರಿಯಾಗಿರುತ್ತಿತ್ತು! ನಾಟಕಕ್ಕೆ ಹೋಗಲು ಸಾಧ್ಯವೇ ಇಲ್ಲದ ಸ್ಥಿತಿ. ಶ್ಯಾಮ್ ಅವರು ಸಹನಟರಾದ್ದರಿಂದ ವಿಮಾನದಲ್ಲಿ ಕಳಿಸುವ ಪದ್ಧತಿಯೂ (ಔದಾರ‍್ಯವೂ) ಇಲ್ಲ. ಶ್ಯಾಮ್‌ಗೆ ತಡೆಯಲಾಗದ ಸಂಕಷ್ಟ. ತನ್ನ ಸಂಕಷ್ಟವನ್ನು ರಾಜಕುಮಾರ್ ಅವರಿಗೆ ಹೇಳಿದರು. ಕೂಡಲೇ ರಾಜಕುಮಾರ್, ನಿರ್ಮಾಪಕ ಮತ್ತು ನಿರ್ದೇಶಕರನ್ನು ಕರೆದು ಶ್ಯಾಮ್ ಅವರಿಗೆ ವಿಮಾನದ ಟಿಕೆಟ್ ಬುಕ್ ಮಾಡಿ, ಬೆಂಗಳೂರಿಗೆ ಸಕಾಲಕ್ಕೆ ಹೋಗ್ಲಿ, ಅವ್ರ್ ಹೊಟ್ಟೆ ಮೇಲೆ ಯಾಕ್ ಹೊಡೀತೀರಿ ಎಂದು ಹೇಳಿದಾಗ ಅವರಿಬ್ಬರೂ ಮರುಮಾತಿಲ್ಲದೆ ಒಪ್ಪಿದರು. ಜೋಕರ್ ಶ್ಯಾಮ್ ಸಂಭ್ರಮದಿಂದ ಚಿತ್ರೀಕರಣ ಮುಗಿಸಿ ವಿಮಾನ ಹತ್ತಿದರು. ರಾಜಕುಮಾರ್ ಅವರಿಂದ ನನ್ನಂತೋನೂ ವಿಮಾನದಲ್ಲಿ ಹೋಗೋದ್ ಸಾಧ್ಯ ಆಯ್ತು ಎಂದು ಒಂದು ಕಡೆ ಅವರೇ ಹೇಳಿಕೊಂಡಿದ್ದಾರೆ.

ಬಂಗಾರದ ಪಂಜರ ಚಿತ್ರೀಕರಣ ನಡೆಯುವಾಗ ಒಂದು ಘಟನೆ ನಡೆಯಿತು. ಇದು ವಾದ್ಯಗಾರ ಮತ್ತು ಹಾಸ್ಯನಟ ಹನುಮಂತಾಚಾರ್ ಅವರಿಗೆ ಸಂಬಂಧಿಸಿದ ಘಟನೆ. ಅದು ಮದ್ರಾಸಿನ ಎ.ವಿ.ಎಂ. ಸ್ಟುಡಿಯೋದ ಎಂಟನೇ ಫ್ಲೋರ್. ರಾಜಕುಮಾರ್ ಅವರು ಮೂವತ್ತಕ್ಕೂ ಮೀರಿದ ಜನರ ನಡುವೆ ಮಾತಾಡುತ್ತಾ ಕೂತಿದ್ದಾರೆ. ಆಗ ಹನುಮಂತಾಚಾರ್ ಬರುತ್ತಾರೆ. ನಮಸ್ಕಾರ್ ರ್ರೀ ರಾಜಕುಮಾರ್ ಅವರೇ ಎನ್ನುತ್ತಾರೆ. ರಾಜಕುಮಾರ್ ಮುಖ ನೋಡಿದರು, ಪ್ರತಿಕ್ರಿಯಿಸಲಿಲ್ಲ, ನಮಸ್ಕರಿಸಲಿಲ್ಲ. ಹನುಮಂತಾಚಾರ್ ಅವರಿಗೆ ಬೇಸರವಾಯ್ತು. ಪೆಚ್ಚಾಗಿ ಸುಮ್ಮನಾದರು. ಸಂಜೆಯವರೆಗೆ ಚಿತ್ರೀಕರಣದಲ್ಲಿ ಇಬ್ಬರೂ ಭಾಗವಹಿಸಿದರು. ಆನಂತರ ರಾಜಕುಮಾರ್ ಅವರು ಹನುಮಂತಾಚಾರ್ ಅವರ ಬಳಿಗೆ ಬಂದು ಹೇಳಿದರು: ಬೆಳಿಗ್ಗೆ ನಿಮಗೆ ಬೇಜಾರಾಗಿರ‍್ಬೇಕು, ನಂಗೂ ಬೇಜಾರಾಗಿದೆ ಸ್ವಾಮಿ, ಯಾಕ್ ಗೊತ್ತಾ? ನೀವು ನನ್ನ ಬಹುವಚನದಲ್ಲಿ ಮಾತಾಡ್ಸಿದ್ರಿ, ಇದು ಸರೀನ? ಯಾವತ್ತಿನಂತೆ ನೀವು ನನ್ನನ್ನ ಮರೀ ಅಂತ ಕರೀಬೇಕು. ಇಲ್ಲವೆ ಮುತ್ತುರಾಜ ಅನ್ಬೇಕು. ಹಾಗಿದ್ರೇ ನಾನ್ ಮಾತಾಡೋದು. ಇದು ಫಸ್ಟ್ ಅಂಡ್ ಲಾಸ್ಟ್ ವಾರ್ನಿಂಗ್ ಎಂದು ರಾಜಕುಮಾರ್ ಹುಸಿ ಗದರುದನಿಯಲ್ಲಿ ಹೇಳಿ ಅಪ್ಪಿಕೊಂಡರು. ಹನುಮಂತಾಚಾರ್ ಕಣ್ಣಲ್ಲಿ ನೀರು ತುಂಬಿ ಕೆನ್ನೆ ಮೇಲೆ ಆತ್ಮೀಯ ಅಕ್ಷರ ಬರೆಯಿತು.

ಹನುಮಂತಚಾರ್ ಅವರ ಈ ಪ್ರಸಂಗದ ಜೊತೆಗೆ ಗುಬ್ಬಿವೀರಣ್ಣ ಅವರಿಗೆ ಸಂಬಂಧಿಸಿದ ಘಟನೆಯೊಂದು ನೆನಪಾಗುತ್ತಿದೆ. ಗುಬ್ಬಿವೀರಣ್ಣನವರು ಕರ್ನಾಟಕದ ರಂಗಭೂಮಿ ಕ್ಷೇತ್ರದ ಧೀಮಂತ ಸಾಧಕರು. ಇವರನ್ನು ಕಂಡರೆ ಡಾ. ರಾಜಕುಮಾರ್ ಅವರಿಗೆ ಅಪರಿಮಿತ ಗೌರವಾದರ. ಗುಬ್ಬಿವೀರಣ್ಣನವರ ನಾಟಕ ಕಂಪನಿಯಿಂದ ತಾವು ಬೆಳೆದು ಬಂದದ್ದನ್ನು ರಾಜಕುಮಾರ್ ಎಂದೂ ಮರೆತಿರಲಿಲ್ಲ. ರಂಗಭೂಮಿಯ ಅನ್ನದಾತರೆಂದೇ ಗುಬ್ಬಿವೀರಣ್ಣನವರನ್ನು ಗೌರವಿಸುತ್ತಿದ್ದರು. ಸುಬ್ಬಯ್ಯನಾಯ್ಡು ಅವರ ಬಗ್ಗೆಯೂ ಇದೇ ಗೌರವ ಭಾವ ಹೊಂದಿದ್ದರು. ರಾಜಕುಮಾರ್ ಅವರು ಒಮ್ಮೆ ಚಿತ್ರೀಕರಣದಲ್ಲಿದ್ದಾಗ ಗುಬ್ಬಿವೀರಣ್ಣನವರ ಆರೋಗ್ಯ ತೀರಾ ಹದಗೆಟ್ಟಿರುವ ಸುದ್ದಿ ಬಂತು. ಕೂಡಲೇ ಅವರು ಆಸ್ಪತ್ರೆಗೆ ಧಾವಿಸಿದರು. ಗುಬ್ಬಿವೀರಣ್ಣನವರ ಅನಾರೋಗ್ಯ ಸ್ಥಿತಿ ಕಂಡು ಕಣ್ಣಲ್ಲಿ ತಾನೇ ತಾನಾಗಿ ನೀರು ತುಂಬಿಕೊಂಡಿತು. ಇದನ್ನು ಕಂಡ ಗುಬ್ಬಿವೀರಣ್ಣನವರು ರಾಜಕುಮಾರ್ ಅವರೆ, ನಿಮ್ಮ ಜೊತೆ ಯಾವುದಾದರೂ ಸಿನಿಮಾದಲ್ಲಿ ಪಾತ್ರ ಮಾಡ್ಬೇಕು ಅಂತ ನನಗೆ ಆಸೆ ಇತ್ತು. ಅದು ಈಡೇರಲಿಲ್ಲ ರಾಜಕುಮಾರ್ ಅವರೆ ಎಂದು ಭಾವುಕರಾಗಿ ನುಡಿದರು. ದಯವಿಟ್ಟು ನನ್ನನ್ನ ರಾಜಕುಮಾರ್ ಅವರೆ ಅಂತ ಬಹುವಚನದಲ್ಲಿ ಮಾತಾಡಿಸ್ಬೇಡಿ ಅದ್ರಿಂದ ನಂಗೆ ತುಂಬಾ ನೋವಾಗುತ್ತೆ. ನಾನು ಯಾವತ್ತೂ ನಿಮ್ಮ ಮುತ್ತುರಾಜ. ಏಕವಚನದಲ್ಲೇ ನನ್ನನ್ನ ಕರೀಬೇಕು ಸ್ವಾಮಿ ಎಂದು ನಿವೇದಿಸಿ ಕೊಂಡು ಗುಬ್ಬಿವೀರಣ್ಣನವರ ಕಾಲುಗಳನ್ನು ಭದ್ರವಾಗಿ ಹಿಡಿದು ಹಣೆ ಮುಟ್ಟಿ ನಮಸ್ಕರಿಸಿದರು. ಆಗ ಗುಬ್ಬಿವೀರಣ್ಣನವರ ಕಣ್ಣಲ್ಲಿ ನೀರು ತುಂಬಿ ಕೊಂಡು ಮೌನ ಆವರಿಸಿತು. ಗುಬ್ಬಿವೀರಣ್ಣನವರ ಜೀವಸ್ತಬ್ಧವಾಗಿ ಮೌನಸ್ಥಾಯಿಯಾದಾಗ ಅವರ ದೇಹವಿದ್ದ ತೆರೆದ ವಾಹನದಲ್ಲಿ ರಾಜಕುಮಾರ್ ಅವರು ಪಕ್ಕದಲ್ಲೇ ಕೂತು ಅಂತ್ಯಕ್ರಿಯೆ ನಡೆಸಲು ಗುಬ್ಬಿಗೆ ಪ್ರಯಾಣಿಸಿದರು. ಜೊತೆಗೆ ಉದಯಕುಮಾರ್ ಇದ್ದರು. ಈ ದೃಶ್ಯವನ್ನು ನಾನೇ ಕಣ್ಣಾರೆ ನೋಡಿದ್ದೆ.

ತಾವು ತಪ್ಪು ಮಾಡಿದೆ ಎನ್ನಿಸಿದಾಗ ಹಿರಿಯರು, ಕಿರಿಯರೆನ್ನದೆ ಕ್ಷಮಿಸಿ ಎನ್ನುವ ಮನೋಧರ್ಮ ರಾಜಕುಮಾರ್ ಅವರದಾಗಿತ್ತು. ರತ್ನಾಕರ್ ವಿಷಯದಲ್ಲಿ  ಇಂಥದೇ ಒಂದು ಘಟನೆ ನಡೆಯಿತು. ಅದು ರೌಡಿ ರಂಗಣ್ಣ ಚಿತ್ರದ ಶೂಟಿಂಗ್ ಸಂದರ್ಭ. ರತ್ನಾಕರ್‌ದು ತಂಗಿಯ ಮದುವೆಗೆ ಕಂಟಕನಾದ ಖಳನ ಪಾತ್ರ. ಕೆರಳಿದ ರಾಜ್ ಪಾತ್ರ ರತ್ನಾಕರ್ ಅವರ ಕತ್ತು ಹಿಡಿಯುವ ಸನ್ನಿವೇಶ. ರಾಜಕುಮಾರ್ ಪಾತ್ರದಲ್ಲಿ ತಲ್ಲೀನರಾಗಿ ರತ್ನಾಕರ್ ಕತ್ತನ್ನು ಸಿಟ್ಟಿನಿಂದ ಬಿಗಿಯಾಗಿ ಹಿಡಿದು ಅಭಿನಯಿಸಿದ್ದಾರೆ. ರತ್ನಾಕರ್‌ಗೆ ಮೇಲುಗಣ್ಣು ತೇಲುಗಣ್ಣು! ಆದರೆ ಸನ್ನಿವೇಶ ಚೆನ್ನಾಗಿ ಬಂತೆಂದು ಅಲ್ಲಿದ್ದವರೆಲ್ಲ ಚಪ್ಪಾಳೆ ತಟ್ಟುತ್ತಾರೆ. ರತ್ನಾಕರ್ ಮಾತ್ರ ಸುಸ್ತಾಗಿ ಕೂತು ಬಿಡುತ್ತಾರೆ. ರಾಜಕುಮಾರ್ ಅವರಿಗೆ ಅರಿವಾಯಿತು. ರತ್ನಾಕರ್ ಅವರ ಹತ್ತಿರ ಹೋಗಿ ಏನೋ ಆವೇಶದಲ್ಲಿ ನಿಮ್ಮ ಕತ್ತನ್ನು ಹೆಚ್ಚು ಒತ್ತಿ ಹಿಡಿದೆ. ತಪ್ಪು ತಿಳೀಬೇಡಿ, ಕ್ಷಮಿಸಿ ಎನ್ನುತ್ತಾರೆ. ಈ ಮಾತೇ ರತ್ನಾಕರ್ ನೋವನ್ನು ವಾಸಿ ಮಾಡಿಬಿಡ್ತು ಎನ್ನುವಂತೆ ಅವರು ಗೆಲುವಾಗಿ ಬಿಡುತ್ತಾರೆ.

ಸತಿಶಕ್ತಿ ಚಿತ್ರೀಕರಣದ ಒಂದು ಪ್ರಸಂಗವನ್ನು ಇಲ್ಲಿ ನೆನೆಯಬಹುದು. ಸತಿಶಕ್ತಿ ರಾಜಕುಮಾರ್ ಅವರ ದ್ವಿಪಾತ್ರಾಭಿನಯದ ಚಿತ್ರ. ವಿರೂಪಾಕ್ಷ ಎಂಬ ನಾಯಕ ಮತ್ತು ರಕ್ತಾಕ್ಷ ಎಂಬ ಖಳನಾಯಕ – ಎರಡೂ ಪಾತ್ರಗಳನ್ನು ಅವರು ನಿರ್ವಹಿಸಿದ್ದರು. ಈ ಚಿತ್ರದ ನಿರ್ದೇಶಕರು ಕಣಗಾಲ್ ಪ್ರಭಾಕರ್ ಶಾಸ್ತ್ರಿಯವರು. ಇವರ ತಮ್ಮ ಪುಟ್ಟಣ್ಣ ಕಣಗಾಲ್ ಮತ್ತು ಕೆ.ಎಸ್.ಎಲ್.ಸ್ವಾಮಿ (ರವೀ) ಅವರಿಬ್ಬರೂ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ವಿರೂಪಾಕ್ಷನೊಳಗೆ ರಕ್ತಾಕ್ಷ ಪ್ರವೇಶಿಸಿ ವಿರೂಪಾಕ್ಷನು ರಕ್ತಾಕ್ಷನಂತೆ ನಡೆಯುವ ಒಂದು ದೃಶ್ಯ ಭಾಗದ ಚಿತ್ರೀಕರಣ ನಡೆಯುತ್ತಿತ್ತು. ತುಂಬಾ ಉದ್ದದ ಟ್ರ್ಯಾಕ್ ಹಾಕಿ ಟ್ರಾಲಿ ಶಾಟ್ ತೆಗೆಯುವ ವ್ಯವಸ್ಥೆಯಾಗಿತ್ತು. ಈ ಜವಾಬ್ದಾರಿಯನ್ನು ಪುಟ್ಟಣ್ಣ ಕಣಗಾಲ್ ಅವರು ನಿರ್ವಹಿಸುತ್ತಿದ್ದರು. ನಿರ್ದೇಶಕರು ಸೂಚನೆ ನೀಡಿ ನೋಡುತ್ತಿದ್ದರು. ರಾಜಕುಮಾರ್ ಅವರು ನಾಲ್ಕೈದು ಸಾರಿ ನಡೆದರೂ ಪುಟ್ಟಣ್ಣನವರು ಸರಿಯಿಲ್ಲ ಎಂದು ರೀಟೇಕ್ ಮಾಡುತ್ತಿದ್ದರು. ಒಂದು ಘಟ್ಟದಲ್ಲಿ ರಾಜಕುಮಾರ್ ನಾನು ನಡೆಯೋದು ಸರಿ ಇಲ್ಲ ಅನ್ನೋದಾರ್ರೆ ನೀವೇ ಒಂದ್ಸಾರಿ ನಡೆದು ತೋರ‍್ಸಿ, ಸುಮ್ನೆ ರೀಟೇಕ್ ಆಗೋದ್ ಬೇಡ ಎಂದರು. ಪುಟ್ಟಣ್ಣನವರು ನಾನು ತೋರ‍್ಸೋದಾದ್ರೆ ನೀವ್ಯಾಕ್ ನಟರಾಗಿದ್ದೀರಿ ಎಂದು ಬಿರುಸಾಗಿ ಹೇಳಿದಾಗ ರಾಜಕುಮಾರ್ ಅವರು ಥಟ್ಟನೆ ತೋರ‍್ಸೋಕಾಗಲ್ಲ ಅನ್ನೋದಾದ್ರೆ ನೀವ್ಯಾಕೆ ಸಹನಿರ್ದೇಶಕರಾಗಿದ್ದೀರಿ? ಎಂದು ಹೇಳಿ ಸೆಟ್‌ನಿಂದ ಹೊರನಡೆದು ಬಿಟ್ಟರು. ಆಗ ನಿರ್ದೇಶಕರಾದಿಯಾಗಿ ಎಲ್ಲರಿಗೂ ಆತಂಕ. ರಾಜಕುಮಾರ್ ಸಾಮಾನ್ಯವಾಗಿ ಸಿಟ್ಟಾಗಿ ಸೆಟ್ ಬಿಟ್ಟು ಹೋಗುವವರಲ್ಲ. ಆದರೆ ಈಗ ಹೀಗಾಗಿಬಿಟ್ಟಿದೆ. ಏನು ಮಾಡುವುದೆಂದು ಯೋಚಿಸಿ ಅವರನ್ನು ಕರೆತರುವ ಹೊಣೆಯನ್ನು ಕೆ.ಎಸ್.ಎಲ್.ಸ್ವಾಮಿ ಅವರಿಗೆ ವಹಿಸಲಾಯಿತು. ಅದಕ್ಕೆ ಕಾರಣವೂ ಇತ್ತು. ಕೆ.ಎಸ್.ಎಲ್.ಸ್ವಾಮಿ(ರವೀ) ಅವರಿಗೆ ರಾಜಕುಮಾರ್ ಅವರ ಜೊತೆ ಸಾಕಷ್ಟು ಸಲಿಗೆಯಿತ್ತು. ಸರಿ, ಸ್ವಾಮಿಯವರು ಸ್ಟುಡಿಯೋ ಸೆಟ್‌ನಿಂದ ಹೊರಬಂದು ನೋಡಿದರು. ರಾಜಕುಮಾರ್ ಒಬ್ಬರೇ ದೂರದಲ್ಲಿ ಒಂದು ಮರದ ಕೆಳಗೆ ನಿಂತಿದ್ದರು. ಸ್ವಾಮಿಯವರು ಹತ್ತಿರ ಬಂದು ಬಾ ರಾಜಣ್ಣ, ಶೂಟಿಂಗ್ ಮುಂದುವರ‍್ಸೋಣ ಎಂದು ಕೇಳಿದರು. ರಾಜಕುಮಾರ್ ವ್ಯಾಕುಲಗೊಂಡಂತೆ ಕಂಡರು. ಏನೂ ಮಾತಾಡಲಿಲ್ಲ. ಸ್ವಾಮಿಯವರು ಅಲ್ಲ, ಪುಟ್ಟಣ್ಣ ನಿನಗೆ ಗೊತ್ತಲ್ಲ, ಒಳ್ಳೆ ಕೆಲಸಗಾರ, ಆದ್ರೆ ಸ್ವಲ್ಪ ಮುಂಗೋಪಿ. ಏನೋ ಅಂದ್‌ಬಿಟ್ಟ. ಮರ‍್ತ್ ಬಿಡು, ಬಾ ರಾಜಣ್ಣ ಎಂದು ಸ್ನೇಹಪೂರ್ವಕ ಸಲಿಗೆಯ ಒತ್ತಾಯ ಮಾಡಿದರು. ಆಗ ರಾಜಕುಮಾರ್ ಹೇಳಿದ್ದೇನು ಗೊತ್ತೆ? ನೋಡು ರವೀ, ಆತ ಏನೋ ಹಾಗ್ ಮಾತಾಡ್ಬಿಟ್ಟ, ನನ್ ಚಿಂತೆ ಅದಲ್ಲ, ಆತ ಮಾತಾಡಿದ್ ರೀತೀಲೇ ನಾನೂ ಮಾತಾಡ್‌ಬಿಟ್ನಲ್ಲ ಅಂತ ನನ್ ಬಗ್ಗೆ ನನಗೇ ಬೇಜಾರಾಗ್ತಿದೆ ಎಂದು ರಾಜಕುಮಾರ್ ಹೇಳಿದಾಗ ರವೀ (ಕೆ.ಎಸ್.ಎಲ್.ಸ್ವಾಮಿ) ಅವರಿಗೆ ಮಾತೇ ಹೊರಡಲಿಲ್ಲ. ಎಂಥ ಆತ್ಮಾವಲೋಕನ! ಎಂಥ ದೊಡ್ಡತನ ಎಂದುಕೊಂಡು ಮಾತಾಡದೆ ನಿಂತಿದ್ದಾಗ ರಾಜ್ ಅವರು ಬಾ ಬಾ ಶೂಟಿಂಗ್ ಶುರು ಮಾಡ್ರಿ, ನನ್ನಿಂದ ತೊಂದರೆ ಆಗ್‌ಬಾರದು ಎಂದು ಕೈ ಹಿಡಿದು ಕರೆದೊಯ್ದರು. ಇದಿಷ್ಟು ವಿವರಗಳನ್ನು ಸ್ವತಃ ಕೆ.ಎಸ್.ಎಲ್.ಸ್ವಾಮಿಯವರೇ ಈ ಟಿವಿ ಸಂದರ್ಶನದಲ್ಲಿ ಹೇಳಿದ್ದರು.

ಉಯ್ಯಾಲೆ ಚಿತ್ರೀಕರಣ ಸಂದರ್ಭದಲ್ಲಿ ನಿರ್ದೇಶಕ ಎನ್.ಲಕ್ಷ್ಮೀನಾರಾಯಣ್ ಅವರ ಜೊತೆಗೂ ಸಣ್ಣ ಭಿನ್ನಾಭಿಪ್ರಾಯವೊಂದು ತಲೆದೋರಿತ್ತು. ಅದು ಮಹಡಿಯಿಂದ ರಾಜಕುಮಾರ್ ನಿಧಾನವಾಗಿ ಮೆಟ್ಟಿಲು ಇಳಿದು ಹಾಲ್‌ಗೆ ಬಂದು ನಿಂತು ಯೋಚಿಸುವ ಸನ್ನಿವೇಶ. ಒಂದೇ ಶಾಟ್‌ನಲ್ಲಿ ತೆಗೆಯಬೇಕೆಂದು ಲಕ್ಷ್ಮೀನಾರಾಯಣ್ ಅವರ ನಿರ್ಧಾರ. ಆಗ ರಾಜಕುಮಾರ್ ತುಂಬಾ ಎಳೆದಂತೆ ಆಗುತ್ತೆ, ಒಂದೇ ಶಾಟ್ ಬೇಡ ಅಲ್ವ? ಎಂದು ಕೇಳುತ್ತಾರೆ. ಲಕ್ಷ್ಮೀನಾರಾಯಣ್ ಬೇಕು ಎಂದು ದೃಢವಾಗಿ ಹೇಳುತ್ತಾರೆ. ರಾಜಕುಮಾರ್ ಅವರು ಮೌನವಾಗಿ ಒಂದು ರೂಮಲ್ಲಿ ಐದು ನಿಮಿಷ ಕೂತು ಆಮೇಲೆ ಬಂದು ರೆಡಿ ಎನ್ನುತ್ತಾರೆ. ಸಿನಿಮಾ ಪೂರ್ಣಗೊಂಡು ಮೊದಲ ಪ್ರದರ್ಶನದಲ್ಲಿ ಕೂತು ನೋಡಿದ ಮೇಲೆ ರಾಜಕುಮಾರ್ ಅವರು ಲಕ್ಷ್ಮೀನಾರಾಯಣ್ ಅವರ ಬಳಿ ಬಂದು ಅವತ್ತು ಒಂದೇ ಶಾಟ್ ಬೇಡ ಅಂತ ನಾನು ಹೇಳಿದ್ದು ತಪ್ಪಾಯ್ತು. ನಿಮ್ಮ ಕಲ್ಪನೆ ಸರಿಯಾಗಿದೆ ಅಂತ ಚಿತ್ರ ನೋಡಿದ ಮೇಲೆ ಮನವರಿಕೆ ಆಯ್ತು. ಅದಕ್ಕೆ ಅವರವರ ಕೆಲ್ಸ ಅವರವರದು ಅಂತ ನಾವು ಸುಮ್ಮನಿರಬೇಕು. ಕೊನೇಲಿ ಸಿನಿಮಾ ಹೇಗ್ ಬರುತ್ತೆ ಅಂತ ನಿರ್ದೇಶಕರಿಗೆ ಗೊತ್ತಿರುತ್ತೆ. ನಾವು ಸುಮ್ನೆ ಅಭಿನಯ ಮಾಡ್ಬೇಕು ಅಷ್ಟೆ ಎಂದು ಹೇಳಿದರಂತೆ. ಈ ವಿಷಯವನ್ನು ಸ್ವತಃ ಎನ್.ಲಕ್ಷ್ಮೀನಾರಾರಾಯಣ್ ಅವರೇ ನನಗೆ ಹೇಳಿದ್ದರು. ಆತ್ಮೀಯರಾದ ಮೇಲೆ ರಾಜಕುಮಾರ್ ಅವರಿಂದಲೂ ಈ ಪ್ರಸಂಗವನ್ನು ಕೇಳಿದ್ದೆ. ಅವರು ನಾವು ಹೀರೊಗಳು ಅಂತ ಏನೇನೋ ಯೋಚಿಸಬಾರದು. ಕತೆ ಮುಖ್ಯ ಎಂದು ಬಂಗಾರದ ಮನುಷ್ಯ ಮತ್ತು ಕಸ್ತೂರಿ ನಿವಾಸ ಚಿತ್ರಗಳ ಅಂತಿಮ ದೃಶ್ಯ ಕುರಿತು ಎದ್ದಿದ್ದ ಭಿನ್ನಾಭಿಪ್ರಾಯದ ವಿವರ ನೀಡಿದ್ದರು. ಈ ಭಿನ್ನಾಭಿಪ್ರಾಯಕ್ಕೆ ಇವರು ಕಾರಣರಲ್ಲ.  ವಿತರಕರು ಮತ್ತು ಕೆಲವು ಹಿತೈಷಿಗಳು ಕಾರಣ.

ಬಂಗಾರದ ಮನುಷ್ಯ ಚಿತ್ರವನ್ನು ನಿರ್ದೇಶಿಸಿದ್ದು ಸಿದ್ದಲಿಂಗಯ್ಯನವರು. ಅಂತಿಮ ದೃಶ್ಯದ ವಿಷಯ ಹೇಳುವುದಕ್ಕೆ ಮುಂಚೆ ಇವರು ನಿರ್ದೇಶಕರಾಗುವುದಕ್ಕೆ ರಾಜಕುಮಾರ್ ಮತ್ತು ವರದಪ್ಪನವರು ಕಾರಣರಾದದ್ದನ್ನು ಹೇಳುತ್ತೇನೆ. ನಾನು ಮತ್ತು ನಿರ್ದೇಶಕ ಸಿದ್ದಲಿಂಗಯ್ಯನವರು ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನಲ್ಲಿ ಹುಟ್ಟಿದವರು. ಸಿದ್ದಲಿಂಗಯ್ಯನವರ ನೆಂಟರು ನಮ್ಮೂರು ಬರಗೂರಲ್ಲಿ ಇದ್ದಾರೆ. ಸಿನಿಮಾ ಸೆಳೆತಕ್ಕೆ ಬೀಳುವುದಕ್ಕೆ ಮುಂಚೆ ಇವರು ನಮ್ಮೂರಿಗೂ ಬರುತ್ತಿದ್ದರಂತೆ. ಮದ್ರಾಸ್ ಸೇರಿದ ಮೇಲೆ ಬಂದ ನೆನಪು ನನಗಿಲ್ಲ. ಮದ್ರಾಸ್‌ನಲ್ಲಿ ಸಹನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಸಿದ್ದಲಿಂಗಯ್ಯನವರಿಗೆ ಸಹಜವಾಗಿ ನಿರ್ದೇಶಕರಾಗುವ ಆಸೆ. ಆದರೆ ಅದಕ್ಕೆ ನಿರ್ಮಾಪಕರು ಸಿಗಬೇಕು. ಅದೇ ಸಂದರ್ಭದಲ್ಲಿ ದ್ವಾರಕೀಶ್ ಅವರಿಗೆ ರಾಜಕುಮಾರ್ ಅವರನ್ನು ಹಾಕಿಕೊಂಡು ಸಿನಿಮಾ ನಿರ್ಮಿಸುವ ಆಸೆ. ಇಬ್ಬರ ಆಸೆಯೂ ಈಡೇರುವ ಕಾಲ ಬಂತು. ವರದಪ್ಪನವರು ರಾಜಕುಮಾರ್ ಬಳಿ ಸಿದ್ದಲಿಂಗಯ್ಯನವರಿಗಿರುವ ಆಸೆಯನ್ನು ಪ್ರಸ್ತಾಪಿಸಿದರು. ರಾಜಕುಮಾರ್ ಸಿದ್ದಲಿಂಗಯ್ಯನವರು ನನ್ನ ಚಿತ್ರ ನಿರ್ದೇಶನ ಮಾಡಲಿ ಎಂದು ಒಪ್ಪಿಗೆ ಕೊಟ್ಟರು. ಸಿದ್ದಲಿಂಗಯ್ಯನವರು ರಾಜಕುಮಾರ್ ಅವರು ತಮ್ಮ ನಿರ್ದೇಶನದಲ್ಲಿ ನಟಿಸಲು ಒಪ್ಪಿರುವ ವಿಷಯವನ್ನು ದ್ವಾರಕೀಶ್ ಅವರಿಗೆ ತಿಳಿಸಿದರು. ದ್ವಾರಕೀಶ್ ಕೂಡಲೆ ತಾವೇ ಆ ಚಿತ್ರದ ನಿರ್ಮಾಪಕನಾಗುತ್ತೇನೆಂದರು. ಹೀಗೆ ಇಬ್ಬರ ಆಸೆಯೂ ಈಡೇರಿ ಮೇಯರ್ ಮುತ್ತಣ್ಣ ಚಿತ್ರ ರೂಪುಗೊಂಡಿತು. ಇದೇ ರೀತಿ ಇನ್ನೂ ಅನೇಕರಿಗೆ ರಾಜಕುಮಾರ್-ವರದಪ್ಪ ಜೋಡಿ ಬೆಂಬಲಿಸಿದ ಘಟನೆಗಳಿವೆ. ಇಲ್ಲಿಯೇ ನಿರ್ಮಾಪಕ ಚಂದೂಲಾಲ್ ಜೈನ್ ಅವರ ಘಟನೆಯನ್ನು ನೆನೆಯಬಹುದು. ಚಂದೂಲಾಲ್ ಜೈನ್ ಅವರು ಮದ್ರಾಸ್‌ನಲ್ಲಿ ಅಂಗಡಿಯೊಂದನ್ನು ನಡೆಸುತ್ತಿದ್ದರು. ಕರ್ನಾಟಕದವರಾದ್ದರಿಂದ ವರದಪ್ಪನವರ ಸ್ನೇಹ ಬೆಳೆಯಿತು. ಚಂದೂಲಾಲ್ ಜೈನ್ ಅವರಿಗೆ ಸಿನಿಮಾ ನಿರ್ಮಾಪಕರಾಗುವ ಆಸೆ. ಆದರೆ ಅಷ್ಟೊಂದು ಹಣವಿಲ್ಲ. ಇವರು ತಮ್ಮ ಆಸೆಯನ್ನು ವರದಪ್ಪನವರ ಬಳಿ ಪ್ರಸ್ತಾಪಿಸುತ್ತಿದ್ದರು. ಒಮ್ಮೆ ರಾಜಕುಮಾರ್ ಬಳಿ ವರದಪ್ಪನವರು ಜೈನ್ ಆಸೆಯ ವಿಷಯ ತಿಳಿಸಿದರು. ರಾಜಕುಮಾರ್ ಅವರು ಕರ್ನಾಟಕದೋರು, ಆಸೆ ಪಟ್ಟಿದ್ದಾರೆ, ನನ್ನ ಕಾಲ್‌ಶೀಟ್ ಕೊಡೋಣ ಬಿಡು ಎಂದು ಸಮ್ಮತಿ ಸೂಚಿಸಿದರು. ರಾಜಕುಮಾರ್ ಕಾಲ್‌ಶೀಟ್ ಜೊತೆಗೆ ವರದಪ್ಪನವರು ನಿರ್ಮಾಣದ ಹಣ ಹೊಂದಿಸಲೂ ನೆರವಾದರು. ರಾಜಕುಮಾರ್ ಕಾಲ್‌ಶೀಟ್ ಇದ್ದರೆ ಯಾರಾದರೂ ಹಣವನ್ನು ಸಾಲವಾಗಿ ಕೊಡಲು ಸಿದ್ಧರಿದ್ದರು. ಅದರ ಸದುಪಯೋಗ ಪಡೆದ ಚಂದೂಲಾಲ್ ಜೈನ್ ನಿರ್ಮಾಪಕರಾಗಿ ಬಿಟ್ಟರು. ರಾಜಕುಮಾರ್ ಕೈ ಹಿಡಿದದ್ದರ ಕೃತಜ್ಞತೆ ತುಂಬಿಕೊಂಡ ಇವರು ತಮ್ಮ ಮಗನಿಗೆ ರಾಜಕುಮಾರ್ ಎಂದು ಹೆಸರಿಟ್ಟರು. ಹೀಗೆ ರಾಜಕುಮಾರ್ ಅವರು ಕೈಹಿಡಿದ ಅನೇಕ ನಿರ್ದಶನಗಳಿವೆ. ಉದಯಕುಮಾರ್, ಟಿ.ಎನ್.ಬಾಲಕೃಷ್ಣ, ಎಂ.ಪಿ.ಶಂಕರ್, ಪಂಡರಿಬಾಯಿ ಮುಂತಾದ ಜೊತೆಕಲಾವಿದರ ನಿರ್ಮಾಣದ ಚಿತ್ರಗಳಲ್ಲಿ ಅಭಿನಯಿಸಿದ್ದನ್ನು ಇಲ್ಲಿ ಉದಾಹರಿಸಬಹುದು.

ಈಗ ಬಂಗಾರದ ಮನುಷ್ಯ ಪ್ರಸಂಗಕ್ಕೆ ಬರೋಣ. ಆ ಚಿತ್ರದ ಕೊನೆಯಲ್ಲಿ ರಾಜಕುಮಾರ್ ನಿರ್ವಹಿಸಿದ ಪಾತ್ರವು ಮನೆಯವರಿಂದ ಕಟಕಿಯಾಡಿಸಿಕೊಂಡು, ಊಟದ ತಟ್ಟೆಯಲ್ಲೇ ಅನ್ನವನ್ನು ಬಿಟ್ಟು ಒಬ್ಬರೇ ಅನಾಥರಂತೆ ಹೋಗುವ ದೃಶ್ಯವಿದೆ. ಅದೊಂದು ವಿಷಾದಭಾವದ ದೃಶ್ಯ. ಬಿಡುಗಡೆಗೆ ಮುಂಚೆ ಏರ್ಪಡಿಸಿದ್ದ ಪ್ರದರ್ಶನವನ್ನು ನೋಡಿದ ವಿತರಕರನ್ನೂ ಒಳಗೊಂಡಂತೆ ಕೆಲವರು ಪ್ರೇಕ್ಷಕರು ರಾಜಕುಮಾರ್ ಅವರನ್ನು ಹೀಗೆ ನೋಡೋಕೆ ಇಷ್ಟ ಪಡೋದಿಲ್ಲ. ಕೊನೆಯ ದೃಶ್ಯ ಬದಲಾಯಿಸಬೇಕು. ಇಲ್ಲದಿದ್ರೆ ಸಿನಿಮಾ ಸೋಲುತ್ತೆ ಎಂದು ಅಭಿಪ್ರಾಯ ಪಟ್ಟರು. ರಾಜಕುಮಾರ್ ಅವರಿಗೂ ಸ್ಪಷ್ಟಪಡಿಸಿದರು. ಆದರೆ ರಾಜಕುಮಾರ್ ಅವರಿಗೆ ಈ ಅಭಿಪ್ರಾಯ ಸಮ್ಮತವಾಗಲಿಲ್ಲ. ಕತೆ ಬಯಸಿದಂತೆ ದೃಶ್ಯಗಳು ಇರಬೇಕು ಎಂಬುದು ಅವರ ಅಭಿಪ್ರಾಯ. ನಿರ್ದೇಶಕ ಸಿದ್ದಲಿಂಗಯ್ಯನವರಂತೂ ಪಟ್ಟುಬಿಡದ ವ್ಯಕ್ತಿ. ಸಿನಿಮಾದ ಅಂತ್ಯ ಹೀಗೇ ಇರಬೇಕು ಎಂದರು. ರಾಜಕುಮಾರ್ ನಿರ್ದೇಶಕರದೇ ತೀರ್ಮಾನ ಎಂದು ಬೆಂಬಲಿಸಿದರು. ಬಂಗಾರದ ಮನುಷ್ಯ ಬಿಡುಗಡೆಯಾದ ಮೇಲೆ ಉಂಟು ಮಾಡಿದ ಪರಿಣಾಮದಿಂದ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದವರ ದೃಷ್ಟಿಕೋನ ತಪ್ಪು ಎಂದು ಸಾಬೀತಾಯಿತು. ಸಿನಿಮಾ ನೋಡಿದ ಅನೇಕರು ಅದರ ಪ್ರಭಾವಕ್ಕೊಳಗಾಗಿ ಕೃಷಿಗೆ ಆದ್ಯತೆ ಕೊಟ್ಟು ನಗರದ ವೃತ್ತಿ ಬಿಟ್ಟು ಹಳ್ಳಿಗೆ ಮರಳಿದರು. ಬೆಂಗಳೂರಿನ ಒಂದು ಚಿತ್ರಮಂದಿರದಲ್ಲಿ ಸತತ ಎರಡು ವರ್ಷ ಪ್ರದರ್ಶನಗೊಂಡು ದಾಖಲೆ ನಿರ್ಮಿಸಿದ ಬಂಗಾರದ ಮನುಷ್ಯ ಸಿನಿಮಾದಿಂದ, ರಾಜಕುಮಾರ್ ಅವರನ್ನು ಅದೇ ಅಭಿಮಾನಿಗಳು ಅದೇ ಅಭಿದಾನದಿಂದ – ಅಂದರೆ ಬಂಗಾರದ ಮನುಷ್ಯ ಎಂದು ಕರೆಯುವಂತಾಯಿತು.

ಕಸ್ತೂರಿ ನಿವಾಸ ಸಿನಿಮಾದ ಅಂತ್ಯ ಕುರಿತಂತೆಯೂ ಇದೇ ರೀತಿಯ ಭಿನ್ನಾಭಿಪ್ರಾಯ ವ್ಯಕ್ತವಾಗಿತ್ತು. ಸ್ವತಃ ರಾಜಕುಮಾರ್ ಅವರೇ ಈ ಕುರಿತು ನನಗೆ ಹೇಳಿದರು. ಕಸ್ತೂರಿ ನಿವಾಸದಲ್ಲಿ ರಾಜಕುಮಾರ್ ನಿರ್ವಹಿಸಿದ ಪಾತ್ರವು ನಿಧನವಾಗುವುದರ ಮೂಲಕ ಅಂತ್ಯವಾಗುತ್ತದೆ. ರಾಜಕುಮಾರ್ ಅವರನ್ನು ಹೀಗೆ ನೋಡಲು ಜನರು ಇಚ್ಛಿಸುವುದಿಲ್ಲ. ಈ ಸಿನಿಮಾ ಸೋಲುತ್ತದೆ ಎಂದು ಪ್ರಥಮ ಖಾಸಗಿ ಪ್ರದರ್ಶನದ ದಿನ ಕೆಲವರು ಬಲವಾಗಿ ಪ್ರತಿಪಾದಿಸಿದರು. ಆದರೆ ರಾಜಕುಮಾರ್ ಅವರಿಗೆ ಹಾಗನ್ನಿಸಿರಲಿಲ್ಲ. ನಿರ್ದೇಶಕರು ಸರಿಯಾಗಿಯೇ ಯೋಚಿಸಿರುತ್ತಾರೆ ಎಂಬ ನಂಬಿಕೆ ಅವರದಾಗಿತ್ತು. ಅಲ್ಲದೆ ಅಂತ್ಯ, ಪರಿಣಾಮಕಾರಿ ಎನ್ನಿಸಿತ್ತು. ಆದರೂ ಕೆಲವರಿಂದ ಅನುಮಾನ ಮೂಡಿತ್ತು. ಅನುಮಾನವು ಚಿತ್ರದ ಬಗ್ಗೆಯಾಗಲಿ, ನಿರ್ದೇಶಕರ ಕಲ್ಪನೆಯ ಬಗ್ಗೆಯಾಗಲಿ ಅಲ್ಲ. ಕೆಲವೊಮ್ಮೆ ಜನರು ಹೇಗೆ ಸ್ವೀಕರಿಸುತ್ತಾರೆಂದು ನಿರ್ಧರಿಸಲಾಗದ ಮನಸ್ಥಿತಿಯ ಬಗ್ಗೆ. ಪ್ರಥಮ ಪ್ರದರ್ಶನ ಮುಗಿಸಿ ಮನೆಗೆ ಬಂದವರೆ, ವರದಪ್ಪನವರಿಗೆ ಎಲ್ಲವನ್ನೂ ವಿವರಿಸಿದರು. ಅಂದು ವರದಪ್ಪನವರಿಗೆ ಬೇರೆ ತುರ್ತು ಕೆಲಸವಿತ್ತಾದ್ದರಿಂದ ಪ್ರಥಮ ಪ್ರದರ್ಶನಕ್ಕೆ ಬಂದಿರಲಿಲ್ಲ. ಅಣ್ಣನಿಂದ ಎಲ್ಲ ಕೇಳಿಸಿಕೊಂಡು ನಾನೊಂದ್ಸಾರಿ ಸಿನಿಮಾ ನೊಡ್ತೀನಿ ಇರಪ್ಪ ಎಂದರು. ನಿರ್ಮಾಪಕ-ನಿರ್ದೇಶಕರಿಗೆ ತಿಳಿಸಿ ಸಿನಿಮಾ ನೋಡಿದರು. ಕಸ್ತೂರಿ ನಿವಾಸ ಸಿನಿಮಾ ನೂರು ದಿನ ನಡೆಯೋದು ಗ್ಯಾರಂಟಿ. ಅಂತ್ಯ ಬದಲಾಯಿಸೊ ಅಗತ್ಯವಿಲ್ಲ ಎಂದು ಖಚಿತವಾಗಿ ಹೇಳಿದರು. ವರದಪ್ಪನವರ ಮಾತು ನಿಜವಾಯಿತು.

ವರದಪ್ಪನವರೆಂದರೆ, ತರ್ಕಬದ್ಧ ನೋಟದ ವಾಸ್ತವಿಕ ವಿಶ್ಲೇಷಕರು. ಅವರು ಚಿತ್ರಕತೆಯ ಚರ್ಚೆಯಲ್ಲಿ ಭಾಗವಹಿಸಿದರೆಂದರೆ ಅದಕ್ಕೊಂದು ಉತ್ತಮ ರೂಪ ಸಿಗುತ್ತದೆಯೆಂದೇ ಅರ್ಥ. ಮೂಲತಃ ರಂಗಭೂಮಿಯ ಹಾಸ್ಯನಟರಾಗಿದ್ದ ಅವರು ಸತಿಶಕ್ತಿ ಸಿನಿಮಾದವರೆಗೂ ಅಭಿನಯಿಸಿದರು. ಆನಂತರ ಬಹುಕಾಲ ರಾಜಕುಮಾರ್ ಅವರ ಸಿನಿಮಾ ಬದುಕಿನ ನಿರ್ವಹಣಕಾರರಾದರು. ಕತೆ, ಚಿತ್ರಕತೆ ಕೇಳುವ, ದಿನಾಂಕಗಳನ್ನು ನೀಡುವ ಕೆಲಸ ಮಾಡುತ್ತ ಬಂದರು. ರಾಜಕುಮಾರ್ ಒಬ್ಬರಿಗಾಗಿಯೇ ಅಲ್ಲ, ರಾಜ್ ಅವರ ಮೂವರು ಮಕ್ಕಳ ಸಿನಿಮಾಗಳ ಕತೆ ಕೇಳಿ ಆಗಬಹುದು ಎಂದರೆ ಮಾತ್ರವೇ ಮಕ್ಕಳು ಮುಂದುವರೆಯುತ್ತಿದ್ದರು. ಕತೆ ಒಪ್ಪಿದ ಮೇಲೆ ಚಿತ್ರಕತೆ, ಸಂಭಾಷಣೆಯ ಓದನ್ನು ಕೇಳಿ ಸಲಹೆಗಳನ್ನು ನೀಡುತ್ತಿದ್ದರು. ಇವರು ಓ.ಕೆ ಎಂದ ಮೇಲೆ ಚಿತ್ರೀಕರಣ ನಿಗದಿಯಾಗುತ್ತಿತ್ತು. ನಾನು -ಜನುಮದ ಜೋಡಿ, ಕುರುಬನ ರಾಣಿ, ಜೋಡಿಹಕ್ಕಿ, ನಮ್ಮೂರ ಹುಡುಗ – ಸಿನಿಮಾಗಳ ರಚನಾಕಾರ್ಯದಲ್ಲಿ ತೊಡಗಿದಾಗ ಅವರ ಒಳನೋಟ ಮತ್ತು ಮುನ್ನೋಟವನ್ನು ಸಮೀಪದಿಂದ ಕಂಡಿದ್ದೇನೆ. ಅವರ ಸಾಹಿತ್ಯ ಜ್ಞಾನವನ್ನು ಅರಿತು ವಿಸ್ಮಿತನಾಗಿದ್ದೇನೆ. ರಾಜ್ ಕುಟುಂಬದಲ್ಲಿ ಪಾರ್ವತಮ್ಮನವರದು ಒಟ್ಟು ನಿರ್ವಹಣೆಯ ಸಮರ್ಥ ನಾಯಕತ್ವ; ವರದಪ್ಪನವರದು ಸಿನಿಮಾ ಸ್ವರೂಪದ ನಿರ್ಧಾರಕ ಸತ್ವ.

ಜನುಮದ ಜೋಡಿ ಕತೆಯ ಬಗ್ಗೆ ಚರ್ಚಿಸುತ್ತಿದ್ದಾಗ ನಡೆದ ಸಂಗತಿಯೊಂದನ್ನು ಇಲ್ಲಿ ಹೇಳಬೇಕು. ಅದರಿಂದ ರಾಜಕುಮಾರ್ ಮತ್ತು ವರದಪ್ಪನವರ ಸಂಬಂಧವೂ ರಾಜಕುಮಾರ್ ಅವರ ಸೌಜನ್ಯವೂ ಒಟ್ಟಿಗೇ ತಿಳಿಯುತ್ತದೆ. ನನ್ನನ್ನು ಚಿತ್ರಕತೆ ರೂಪಿಸುವ ಚರ್ಚೆಯಲ್ಲಿ ತೊಡಗಿಸಿಕೊಳ್ಳಲಾಗಿತ್ತು (ಸಂಭಾಷಣೆ ಮತ್ತು ಮೂರು ಹಾಡುಗಳ ರಚನಕಾರ ನಾನೇ ಎಂದು ಇನ್ನೊಂದು ಕಡೆ ಹೇಳಿದ್ದೇನೆ) ಸಿನಿಮಾದಲ್ಲಿ ನಾಯಕಿಯು ಊರಿನ ಜನರಿಗೆ ಎದುರಾಗಿ ಉತ್ತರಿಸಿ ಅನಂತರ ಅರೆಮನಸ್ಕಳಾಗಿ ನಗುತ್ತಾ ಓ ದ್ಯಾವ್ರೆ ಎಂದು ಹಾಡುತ್ತ ಹೋಗುವ ದೃಶ್ಯವಿದೆ. ಈ ದೃಶ್ಯವನ್ನು ನಾನು ಬರೆದು ಓದಿ ಹೇಳಿದ್ದೆ. ನಾಯಕಿಯನ್ನು ಅನೇಕರು ಹಿಂದೆಲ್ಲ ಹಂಗಿಸಿರುತ್ತಾರೆ. ಈ ದೃಶ್ಯದಲ್ಲಿ ನಾಯಕಿಯು ತನ್ನನ್ನು ಹಂಗಿಸಿದ್ದ ಒಬ್ಬೊಬ್ಬರ ಬಳಿಯೂ ಹೋಗಿ, ಅವರು  ಹಂಗಿಸಿದ್ದನ್ನು ನೆನಪಿಸಿ ಅವರ ಅನೈತಿಕ ನಡೆಯನ್ನು ಎತ್ತಿತೋರಿಸುತ್ತಾಳೆ. ಒಬ್ಬೊಬ್ಬರ ಬಳಿಯೂ ಹೇಳಲು ಒಂದಿಷ್ಟು ಮೊನಚು ಮಾತು ಬರೆದಿದ್ದೆ. ಇದು ರಾಜಕುಮಾರ್ ಅವರಿಗೆ ಅಷ್ಟಾಗಿ ಹಿಡಿಸಲಿಲ್ಲ. ಈ ದೃಶ್ಯ ಸ್ವಲ್ಪ ಬದಲಾಯಿಸಿ ಬರೆದ್ರೆ ಉತ್ತಮ, ಎಲ್ಲರ ಹತ್ತಾನೂ ಪ್ರತ್ಯೇಕವಾಗಿ ಹೋಗೋ ಬದಲು ಒಂದೇ ಕಡೆ ನಿಂತು ಎಲ್ರಿಗೂ ಉತ್ತರ ಕೊಡೋ ತರಾ ಇದ್ರೆ ಚೆನ್ನಾಗಿರುತ್ತೆ ಅನ್ಸುತ್ತೆ ಎಂದು ಸಲಹೆ ನೀಡಿದರು. ನಾನು ಆಗಲಿ ಸಾರ್ ಎಂದು ದೃಶ್ಯವನ್ನು ಮರುಸಂಯೋಜನೆ ಮಾಡಿ ಮಾರನೇ ದಿನ ಓದಿದೆ. ಓದುವುದಕ್ಕೆ ಮುಂಚೆ ಒಂದು ಮಾತು ಹೇಳಿದೆ; ನೆನ್ನೆ ಬರೆದದ್ರಲ್ಲಿ ಒಂದು ರೀತಿ ಟೆಂಪೊ ಬೆಳೀತಾ ಬಂದಿತ್ತು ಸಾರ್. ಈಗ ಓದೋದು ನೀವು ಎಚ್ಚಮ ನಾಯಕ ನಾಟಕದಲ್ಲಿ ಒಂದೇ ಉಸಿರಲ್ಲಿ ಮಾತಾಡೊ ಡೈಲಾಗ್ ಇದ್ಯಲ್ಲ, ಹಾಗಿದೆ ಸಾರ್ ಎಂದವನೇ ಓದಲು ಶುರುಮಾಡಿದೆ. ದೃಶ್ಯದ ಓದು ಮುಗಿದ ಮೇಲೆ ರಾಜಕುಮಾರ್ ಮೌನವಾದರು. ಅವರಿಗೆ ತೀರ್ಮಾನ ಕಷ್ಟವಾದಂತೆ ಕಂಡಿತು. ವರದಪ್ಪನವರ ಕಡೆ ಏನಂತೀಯಪ್ಪ? ಎಂಬಂತೆ ನೋಡಿದರು. ವರದಪ್ಪನವರು ನೆನ್ನೆ ಬರಗೂರವರು ಬರೆದದ್ದೇ ಚೆನ್ನಾಗಿದ್ಯಪ್ಪ. ಅದನ್ನೇ ಉಳಿಸ್ಕೊಳ್ಳೋಣ ಎಂದರು. ರಾಜಕುಮಾರ್ ಆಯ್ತಪ್ಪ ಆಗ್ಲಿ ಎಂದು ನನ್ನ ಕಡೆ ನೋಡಿ ಅಂತೂ ನೀವೇ ಗೆದ್ರಿ ಎಂದು ನಗುತ್ತಾ ತಮಾಷೆ ಮಾಡಿದರು. ನಾನಲ್ಲ ಸಾರ್ ಕತೆ ಎಂದೆ – ಹೌದೌದು, ಕತೇನ ಚೆನ್ನಾಗಿ ನಿರೂಪಿಸಿದ್ರೆ ಸಿನಿಮಾ ಗೆಲ್ಲುತ್ತೆ ಎಂದು ಮುಂದಿನ ದೃಶ್ಯ ಕೇಳಲು ಸಜ್ಜಾದರು.

ಜನುಮದ ಜೋಡಿ  ಸಿದ್ಧವಾಗಿ ಖಾಸಗಿ ಪ್ರದರ್ಶನವನ್ನು ಬೆಂಗಳೂರು ಕಾರ್ಪೊರೇಷನ್ ಕಚೇರಿ ಮುಂಭಾಗದಲ್ಲಿದ್ದ ಬಾದಾಮಿ ಹೌಸ್ ನಲ್ಲಿ ನೋಡಿದೆವು. ಪ್ರದರ್ಶನ ಮುಗಿದ ಮೇಲೆ ರಾಜಕುಮಾರ್ ಅವರು ನನ್ನ ಹತ್ರ ಬಂದು ಅವತ್ತು ನಾನು ಹೇಳಿದ್ದು ಸರಿಯಲ್ಲ ಅಂತ ಸಿನಿಮಾ ನೋಡಿದ್ ಮೇಲೆ ಅರ್ಥವಾಯ್ತು. ನೀವೂ ವರದಪ್ಪ ತೀರ್ಮಾನಿಸಿದ್ದೇ ಸರಿ ಎಂದು ವಿನಯದಿಂದ ಹೇಳಿದಾಗ ನಾನು ಆ ತೀರ್ಮಾನದಲ್ಲಿ ನೀವೂ ಇದ್ದೀರಿ ಸಾರ್ ಎಂದೆ. ಅವರಾಗ ಹೇಳಿದ ಮಾತು ಯಾವತ್ತೂ ಮನನೀಯವಾದುದು; ನೋಡಿ, ನಾವು ಕಲಾವಿದರು, ನಮ್ಮ ಅಭಿನಯ ಅಷ್ಟೇ ಯೋಚಿಸಿ ತೀರ್ಮಾನ ಹೇಳಿದ್ರೆ ತಪ್ಪಾಗ್ ಬಿಡುತ್ತೆ. ಎಲ್ಲಾ ದೃಷ್ಟಿಯಿಂದಾನೂ ಯೋಚಿಸಬೇಕು, ನಿಜವಾದ ನಿರ್ದೇಶಕರು ಆ ಕೆಲ್ಸ ಮಾಡ್ತಾರೆ – ಈ ಮಾದರಿಯ ಮಾತನ್ನು ಅವರು ಹಿಂದೊಮ್ಮೆಯೂ ಹೇಳಿದ್ದರು. ಅಂತೂ ನನ್ನ ದೃಶ್ಯ ಕಲ್ಪನೆಯನ್ನು ಅವರು ಮೆಚ್ಚಿದ್ದು ಸಂತೋಷಕೊಟ್ಟಿತ್ತು. ಆ ದೃಶ್ಯ ಕಲ್ಪನೆಯನ್ನು ನಿರ್ದೇಶಕ ನಾಗಾಭರಣ ಸಮರ್ಥವಾಗಿ ಚಿತ್ರೀಕರಿಸಿದ್ದರು. ಚಿತ್ರಮಂದಿರದಲ್ಲಿ ಈ ದೃಶ್ಯಕ್ಕೆ ಶಿಳ್ಳೆಗಳ ಮೆಚ್ಚುಗೆಯೂ ದೊರಕಿತ್ತು.

ಡಾ. ರಾಜಕುಮಾರ್ ಅವರ ಮುಖ್ಯ ಗುಣಗಳಲ್ಲೊಂದು ಅವರ ಆತ್ಮಾವಲೋಕನ. ಅವರ ಅಭಿನಯವನ್ನು ಮಾನಸಿಕ ದೂರದಿಂದ ನೋಡಿ ಇನ್ನಷ್ಟು ಚೆನ್ನಾಗಿ ಮಾಡಬಹುದಿತ್ತಲ್ಲವೆ ಎಂದು ತಮಗೆ ತಾವೇ ವಿಶ್ಲೇಷಿಸಿಕೊಳ್ಳುವ ಪರಿಪಾಠ ಅವರಲ್ಲಿತ್ತು. ಹೀಗಾಗಿ ಅವರು ಎಲ್ಲ ಪಾತ್ರಗಳಿಗೂ ಜೀವಶಕ್ತಿ ತುಂಬಲು ಸಾಧ್ಯವಾಗುತ್ತಿತ್ತು. ಅಭಿನಯಕ್ಕೆ ಅವರದೇ ಒಂದು ವಿಶಿಷ್ಟ ಮೀಮಾಂಸೆಯಿದೆ. ನಟನಾಮೀಮಾಂಸೆಯಲ್ಲಿ ಸಾಮಾನ್ಯವಾಗಿ ಪ್ರತಿಪಾದಿಸುವ ಅಂಶವೆಂದರೆ – ಪರಕಾಯಪ್ರವೇಶ. ಪಾತ್ರಧಾರಿಯು – ಅಂದರೆ – ನಟ ಅಥವಾ ನಟಿ – ತಾನು ಅಭಿನಯಿಸುವ ಪಾತ್ರದ ಶರೀರ ಪ್ರವೇಶ ಮಾಡಬೇಕು ಎಂಬುದು ಪರಕಾಯ ಪ್ರವೇಶ ಪರಿಕಲ್ಪನೆಯ ಸಾರ. ಪಾತ್ರಧಾರಿಯು ಪಾತ್ರದ ಒಳಗೆ ಹೋಗುವ ಪ್ರಕ್ರಿಯೆಗೆ ಈ ಪರಿಕಲ್ಪನೆಯಲ್ಲಿ ಪ್ರಾಶಸ್ತ್ಯ. ಆದರೆ ರಾಜಕುಮಾರ್ ಅವರು ಹೇಳುತ್ತಿದ್ದ ನಟನಾ ಮೀಮಾಂಸೆ ಈ ಪರಿಕಲ್ಪನೆಗೆ ವ್ಯತಿರಿಕ್ತವಾಗಿತ್ತು. ಪಾತ್ರ ಬಂದು ನಮ್ಮನ್ನ ಕೆಡವಿ ಚಿತ್ ಮಾಡ್‌ಬೇಕು, ಪಾತ್ರವೇ ನಮ್ಮ ಒಳಗಡೆ ಪ್ರವೇಶ ಮಾಡಬೇಕು. ಅಂಥ ಪಾತ್ರ ಮಾಡ್‌ಬೇಕು ಎನ್ನುತ್ತಿದ್ದರು. ಇಲ್ಲಿ ಪಾತ್ರಧಾರಿಯು ಪಾತ್ರದ ಒಳಗೆ ಹೋಗುವ ಪ್ರಕ್ರಿಯೆಗೆ ಬದಲು ಪಾತ್ರವೇ ಪಾತ್ರಧಾರಿಯ ಒಳಗೆ ಬಂದು ಪಾತ್ರಧಾರಿಯನ್ನು ಗೆಲ್ಲಬೇಕು ಎಂಬ ಪ್ರಕ್ರಿಯೆ ಪ್ರಧಾನವಾದುದು. ಪಾತ್ರವೊಂದು ಪಾತ್ರಧಾರಿಯ ಒಳಗೆ ಬಂದು ಸೇರಿಕೊಂಡಾಗ ಪಾತ್ರಧಾರಿಯು ಪಾತ್ರಕ್ಕೆ ಸೋತು ತನ್ನ ಮೂಲಗುಣ ಲಕ್ಷಣಗಳನ್ನು ತಾತ್ಕಾಲಿಕವಾಗಿ ತ್ಯಜಿಸಿ ಪಾತ್ರವೇ ಆಗುವುದು ಮುಖ್ಯವೆಂಬುದು ಅವರ ಮಾತಿನ ಅರ್ಥ.

ರಾಜಕುಮಾರ್ ಅವರು ಹೀಗೆ ಚಿಂತನೆ ಮಾಡುತ್ತಿದ್ದರಿಂದಲೇ ಕೇವಲ ಚಪ್ಪಾಳೆಗೆ ಮಾರು ಹೋಗಿ ಮೈಮರೆಯುತ್ತಿರಲಿಲ್ಲ. ತಾನೆಷ್ಟರ ಮಟ್ಟಿಗೆ ಪಾತ್ರವಾಗಿ ರೂಪಾಂತರಗೊಂಡೆ ಎಂದು ಯೋಚಿಸುತ್ತಿದ್ದರು. ಮೂರೂವರೆ ವಜ್ರಗಳು ಸಿನಿಮಾದ ಚಿತ್ರೀಕರಣ ಸಂದರ್ಭದಲ್ಲಿ ಒಮ್ಮೆ ಹೀಗಾಯಿತು: ರಾಜಕುಮಾರ್ ಒಂದು ದೃಶ್ಯಭಾಗದಲ್ಲಿ ಅಭಿನಯಿಸಿದಾಗ ಸ್ಟುಡಿಯೋದಲ್ಲಿದ್ದವರಲ್ಲಿ ಅನೇಕರು ಚಪ್ಪಾಳೆ ತಟ್ಟಿದರು. ಆದರೆ ರಾಜಕುಮಾರ್ ಅವರಿಗೆ ಇನ್ನೂ ಚೆನ್ನಾಗಿ ಮಾಡಬಹುದಿತ್ತಲ್ಲವೆ ಅನ್ನೊ ಅನುಮಾನ ಬಂದಿತ್ತು. ಸುತ್ತ ಕಣ್ಣು ಹಾಯಿಸಿದರು. ಸ್ವಲ್ಪ ದೂರದಲ್ಲಿ ನಟ ಶ್ರೀನಾಥ್ ಕೂತಿದ್ದರು. ಅವರ ಕಡೆ ನೋಡಿ ಹೇಗಿತ್ತು ಎಂದು ಹುಬ್ಬು ಹಾರಿಸಿ ಸನ್ನೆ ಮಾಡಿ ಕೇಳಿದರು. ಶ್ರೀನಾಥ್ ರೀಟೇಕ್ ಆದರೆ ಉತ್ತಮ ಅನ್ನೋದನ್ನು ಸನ್ನೆಯಲ್ಲೇ ಹೇಳಿದರು. ರಾಜಕುಮಾರ್ ನಿರ್ದೇಶಕರ ಬಳಿಗೆ ಬಂದು ರೀಟೇಕ್ ಮಾಡಲು ಕೇಳಿಕೊಂಡರು. ತಾನೆಲ್ಲಿ ತಪ್ಪು ಮಾಡಿದ್ದೆ ಎಂದು ತಾವೇ ಕಂಡುಕೊಂಡು ಅಭಿನಯಿಸಿದರು. ರೀಟೇಕ್ ಆದ ಮೇಲೆ ಶ್ರೀನಾಥ್ ಅವರ ಬಳಿಗೆ ಬಂದು ಧನ್ಯವಾದ ಹೇಳಿದರು. ಸಾಮಾನ್ಯವಾಗಿ ತಾರಾಮೌಲ್ಯದ ನಟರು – ವಿಶೇಷವಾಗಿ ರಾಜಕುಮಾರ್ ಅಂಥವರು – ಅಭಿನಯದಲ್ಲಿ ಯಾರ ಮಾತನ್ನೂ ಕೇಳುವುದಿಲ್ಲ ಎಂಬ ಗಾಳಿಮಾತನ್ನು ಸುಳ್ಳು ಮಾಡಿದರು. ಯಾರೇ ಇಷ್ಟಪಟ್ಟರೂ ತಮ್ಮ ಪಾತ್ರವನ್ನು ತಾವೇ ವಿಶ್ಲೇಷಿಸಿಕೊಳ್ಳುವ ಗುಣಗ್ರಾಹಿತನ ಅವರಲ್ಲಿತ್ತು. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಬಿ.ಆರ್.ಪಂತಲು ಅವರು ನಿರ್ಮಿಸಿ, ನಿರ್ದೇಶಿಸಿದ ಶ್ರೀಕೃಷ್ಣದೇವರಾಯ ಚಿತ್ರ. ಕೃಷ್ಣದೇವರಾಯನ ಪಾತ್ರವನ್ನು ಚೆನ್ನಾಗಿ ಮಾಡಿದ್ದಾರೆಂದು ಬಹುಪಾಲು ಪ್ರೇಕ್ಷರನ್ನು ಒಳಗೊಂಡಂತೆ ಇಡೀ ಚಿತ್ರತಂಡ ಹೇಳಿದರೂ ಅವರಿಗೆ ಅತೃಪ್ತಿಯಿತ್ತು. ತಮ್ಮ ಆತ್ಮಕತೆ (ಕಥಾನಾಯಕನಕತೆ)ಯಲ್ಲಿ ಅವರು ಹೀಗೆ ಹೇಳಿದ್ದಾರೆ. ನನಗೆ ಕೃಷ್ಣದೇವರಾಯನ ಪಾತ್ರ ಅಷ್ಟು ತೃಪ್ತಿ ನೀಡಲಿಲ್ಲ. ಆ ಅರಸನಿಗೆ ಬೇಕಾದ ಘನತೆ, ಗಾಂಭೀರ್ಯ ಕಡಿಮೆ ಆಗಿತ್ತು ಅನ್ನಿಸುತ್ತೆ. ಪಾತ್ರದ ಎಲ್ಲಾ ಕಡೆ ಅತಿರೇಕ ಕಾಣುಸ್ತಾ ಇತ್ತು. ಇದು ನನ್ನ ಅನಿಸಿಕೆ. ಆದರೆ ಪಂತಲು ಅವರು ಹೀಗೇ ಇರಬೇಕು ಎಂದು ಅಪೇಕ್ಷೆ ಪಟ್ಟಿದ್ದರು. ಅವರಿಗೆ ತೃಪ್ತಿ ಇತ್ತು. ನನ್ನೊಬ್ಬನನ್ನು ಬಿಟ್ಟು ಎಲ್ಲರಿಗೂ ನನ್ನ ಪಾತ್ರದ ಬಗ್ಗೆ ಸಮಾಧಾನ-ಸಂತೋಷ ಇತ್ತು – ಅದೇ ಮಾತುಗಳನ್ನು ನನ್ನ ಬಳಿಯೂ ಪುನರುಚ್ಚರಿಸಿದ್ದರು. ಸರ್ವಜ್ಞಮೂರ್ತಿ ಚಿತ್ರದ ಬಗ್ಗೆಯೂ ಮಾತಾಡುತ್ತ ಆ ಪಾತ್ರಾನ ಇನ್ನೂ ಚೆನ್ನಾಗ್ ಮಾಡ್ಬೇಕಿತ್ತು ಅನ್ಸುತ್ತೆ. ವರದಪ್ಪ, ಬರಗೂರವರಿಗೆ ಆ ಚಿತ್ರಾನ ತೋರ‍್ಸಿ ಬೇರೆ ಚಿತ್ರಕತೆ ಬರೆಸಿ ಮತ್ತೆ ಮಾಡೊಣ ಅನ್ಸುತ್ತಪ್ಪ ಎಂದಿದ್ದೂ ಉಂಟು.

ನಿರ್ಮಾಪಕರಿಗೆ ಸರ್ವಜ್ಞಮೂರ್ತಿ ಚಿತ್ರದಲ್ಲಿ ಪಾತ್ರ ಮಾಡಲು ರಾಜಕುಮಾರ್ ಅವರು ಒಪ್ಪುತ್ತಾರೊ ಇಲ್ಲವೊ ಎಂಬ ಅನುಮಾನವಿತ್ತು. ಯಾಕೆಂದರೆ ಸರ್ವಜ್ಞನದು ಇಡೀ ಚಿತ್ರದಲ್ಲಿ ಲಂಗೋಟಿಯಲ್ಲೇ ಇರಬೇಕಾದ ಪಾತ್ರ. ರಾಜಕುಮಾರ್ ತಾರಾಮೌಲ್ಯದ ಕಲಾವಿದರು. ಅವರನ್ನು ಹೇಗೆ ಕೇಳೋದು ಅನ್ನೊ ಅಳಕು. ಆದರೆ, ರಾಜಕುಮಾರ್ ಮರುಮಾತಿಲ್ಲದೆ ಒಪ್ಪಿದ್ದರು. ಅದಕ್ಕೆ ಎರಡು ಮೂರು ಕಾರಣಗಳಿವೆ. ಈ ಚಿತ್ರವನ್ನು ನಿರ್ಮಿಸಲು ಮುಂದಾದವರು ಚಿತ್ರ ಸಾಹಿತಿ ನರೇಂದ್ರಬಾಬು ಅವರು. ವೃತ್ತಿಬಂಧುವೊಬ್ಬರು ಕೇಳಿದಾಗ ಇಲ್ಲ ಎಂದು ಹೇಳಬಾರದೆಂಬ ನೈತಿಕತೆ ಒಂದು ಕಡೆ; ಸರ್ವಜ್ಞನಂತಹ ಮಹಾನ್ ಸಾಧಕನ ಪಾತ್ರ ಮಾಡುವ ಹಂಬಲ ಇನ್ನೊಂದು ಕಡೆ; ಈ ಪಾತ್ರ ಪೂರ್ತಿಯಾಗಿ ಕೇವಲ ಲಂಗೋಟಿಯಲ್ಲೇ ಇರಬೇಕಾಗುತ್ತದೆಯೆಂದಾಗ ಪಾತ್ರವನ್ನು ಆಹ್ವಾನಿಸಿಕೊಳ್ಳುವುದಷ್ಟೇ ಮುಖ್ಯ ಎಂಬ ಕಲಾಬದ್ಧತೆ ಮತ್ತೊಂದು ಕಡೆ. ಈ ಮೂರು ಅಂಶಗಳು ಸೇರಿ ಒಪ್ಪಿ ಅಭಿನಯಿಸಿದ್ದ ರಾಜಕುಮಾರ್ ಅವರಿಗೆ ತಾನಿನ್ನೂ ಚೆನ್ನಾಗಿ ಮಾಡಬಹುದಿತ್ತು ಮತ್ತು ಮತ್ತೆ ಮಾಡಬೇಕು ಎಂಬ ಕಾಡುವಿಕೆ ಎಪ್ಪತ್ತರ ವಯೋಮಾನದಲ್ಲೂ ಇದ್ದದ್ದು ವಿಶೇಷವೇ ಸರಿ. ಇದೇ ರಾಜಕುಮಾರ್ ವಿಶಿಷ್ಟತೆ.

ಚಿತ್ರೀಕರಣದ ಸಂದರ್ಭದಲ್ಲಿ ಪಾತ್ರವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲವೆಂದು ತಮಗೆ ಅನ್ನಿಸಿದಾಗ ನಿರ್ದೇಶಕರನ್ನು ಕೋರಿ ಸಮಯ ತೆಗೆದುಕೊಳ್ಳುವ ಪರಿಪಾಠವನ್ನು ರಾಜಕುಮಾರ್ ರೂಢಿಸಿಕೊಂಡಿದ್ದರು. ಈ ಪರಿಪಾಠವು ಆತ್ಮನಿರೀಕ್ಷೆಯ ಭಾಗವೇ ಆಗಿದೆ. ಮೋಹಿನಿ ಭಸ್ಮಾಸುರ ಸಿನಿಮಾದಲ್ಲಿ ಮೋಹಿನಿ ಮತ್ತು ಭಸ್ಮಾಸುರರ ನಡುವೆ ನಡೆಯುವ ನೃತ್ಯ ಪೈಪೋಟಿಯ ದೃಶ್ಯದಲ್ಲಿ ರಾಜಕುಮಾರ್ ಭಸ್ಮಾಸುರನಾಗಿ, ರಾಜಶ್ರೀಯವರು ಮೋಹಿನಿಯಾಗಿ ಅಭಿನಯಿಸುತ್ತಿದ್ದ ಸನ್ನಿವೇಶವನ್ನು ಇಲ್ಲಿ ಉಲ್ಲೇಖಿಸ ಬಯಸುತ್ತೇನೆ. ರಾಜಶ್ರೀಯವರು ನೃತ್ಯಪಟುವೂ ಆಗಿದ್ದರು. ಅವರ ಜೊತೆ ನರ್ತಿಸುವಾಗ ರಾಜಕುಮಾರ್ ಅವರಿಗೆ ತಮ್ಮ ಸಿದ್ಧತೆ ಸಾಲದೆನ್ನಿಸಿತು. ಆಗ ಅವರು ಒಂದು ವಾರ ಬಿಡುವು ಕೇಳಿಕೊಂಡರು. ನೃತ್ಯ ನಿರ್ದೇಶಕರನ್ನು ಆಹ್ವಾನಿಸಿ ಅವರ ಮಾರ್ಗದರ್ಶನದಲ್ಲಿ ನೃತ್ಯಾಭ್ಯಾಸ ಮಾಡಿದರು. ಆನಂತರ ಚಿತ್ರೀಕರಣಕ್ಕೆ ಬಂದು ಭಾಗವಹಿಸಿದ್ದರು. ನೃತ್ಯಗಾರ್ತಿ ರಾಜಶ್ರೀಯವರೇ ಅಚ್ಚರಿಪಡುವಂತೆ ಅಭಿನಯಿಸಿದರು.

ಮನಸ್ಸಿದ್ದರೆ ಮಾರ್ಗ ಚಿತ್ರದ ಒಂದು ದೃಶ್ಯದಲ್ಲಿ ಒಂದು ಪುಟದಷ್ಟು ಸಂಭಾಷಣೆ ಹೇಳಬೇಕಾಗಿತ್ತು. ಅದು ಟ್ರಾಲಿಶಾಟ್. ಸಂಭಾಷಣೆ ಕೈಕೊಟ್ಟಿತು. ಕಷ್ಟ ಆಗುತ್ತೆ ಅಂತ ನಿರ್ದೇಶಕರ ವೈ.ಆರ್.ಸ್ವಾಮಿಯವರು ಸಂಭಾಷಣೆ ಕಡಿಮೆ ಮಾಡೊಣ ಅಥವಾ ಕಟ್ ಶಾಟ್ಸ್ ಮಾಡೊಣ ಎಂದರು. ರಾಜಕುಮಾರ್ ಬೇಡ ಅಪ್ಪಾಜಿ, ಸ್ವಲ್ಪ ಟೈಮ್ ಕೊಡಿ ಎಂದು ಕೇಳಿಕೊಂಡರು. ಚೆನ್ನಾಗಿ ಸಂಭಾಷಣೆ ನೋಡಿಕೊಂಡು ಒಂದೇ ಟೇಕ್‌ನಲ್ಲಿ ಯಶಸ್ವಿಯಾಗಿ ಹೇಳಿದರು. ತಾನು ಮೊದಲು ಅತಿ ಆತ್ಮವಿಶ್ವಾಸ ತೋರಿ ಅಭ್ಯಾಸ ಮಾಡಿಕೊಳ್ಳದೆ ಹೋದದ್ದು ತಪ್ಪಾಯಿತು ಎಂದು ಹೇಳಿದರು. ವೈ.ಆರ್.ಸ್ವಾಮಿಯವರ ನಿರ್ದೇಶನದ ಇನ್ನೊಂದು ಚಿತ್ರ ಕಠಾರಿವೀರದ ಒಂದು ಕತ್ತಿವರಸೆ ಸನ್ನಿವೇಶದಲ್ಲಿ ರಾಜಕುಮಾರ್ ಮತ್ತು ಉದಯಕುಮಾರ್ ಭಾಗವಹಿಸಿದ್ದರು. ಶಿವಯ್ಯ ಸಾಹಸ ನಿರ್ದೇಶಕರಾಗಿದ್ದರು. ಕತ್ತಿವರಸೆ ಮಾಡುತ್ತಿದ್ದಾಗ ಉದಯಕುಮಾರ್ ಅವರು ಬೀಸಿದ ಕತ್ತಿಯ ಮೊನೆ ರಾಜಕುಮಾರ್ ಅವರ ಕಣ್ಣಿಗೆ ತಗುಲಿ ಆಳವಾದ ಪೆಟ್ಟಾಯಿತು. ಅಮ್ಮಾ ಎಂದು ಕೂಗುತ್ತ ಕೆಳಗೆ ಬಿದ್ದರು. ಜ್ಞಾನ ತಪ್ಪಿ ಕೆಲಕಾಲ ಮೂರ್ಛಾವಸ್ಥೆಯಲ್ಲಿದ್ದರು. ಆಸ್ಪತ್ರೆಗೆ ಸೇರಿಸಲಾಯಿತು. ಎಲ್ಲರಿಗೂ ಗಾಬರಿ, ಆತಂಕ. ಉದಯಕುಮಾರ್ ಅವರಿಗಂತೂ ತಾನು ಬೀಸಿದ ಕತ್ತಿಯಿಂದ ಹೀಗಾಯಿತಲ್ಲ ಎಂಬ ಕಳವಳ. ಜ್ಞಾನ ಬಂದಾಗ ಸಾವರಿಸಿಕೊಂಡು ರಾಜಕುಮಾರ್ ಹೇಳಿದರು:  ಇದ್ರಲ್ಲಿ ಯಾರ ತಪ್ಪೂ ಇಲ್ಲ, ನನ್ನದೇ ತಪ್ಪಿರಬೇಕು. ನಾನು ಹೇಗೆ ತಿರುಗಿದೆ ಎಂದೇ ಗೊತ್ತಿಲ್ಲ ನೀನೇಕೆ ಹೆದರ‍್ತೀರಿ? ಎಂದು ಉದಯಕುಮಾರ್ ಅವರಿಗೆ ಸಾಂತ್ವನ ಹೇಳಿದರು. ಈ ಘಟನೆ ವಿವಾದವಾಗಿ ಮಾರ್ಪಾಡಾಗಲಿಲ್ಲ. ಯಾರೂ ಈ ಘಟನೆಯನ್ನು ತಂದಿಕ್ಕಿ ತಮಾಷೆ ನೋಡಲು ಬಳಸಿಕೊಳ್ಳಲಿಲ್ಲ.

ಆದರೆ ಗಂಧದಗುಡಿ ಚಿತ್ರೀಕರಣದ ಸಂದರ್ಭದಲ್ಲಿ ನಡೆದ ಘಟನೆ ದೊಡ್ಡ ವಿವಾದಕ್ಕೆ ಕಾರಣವಾಯಿತು. ವಿಷ್ಣುವರ್ಧನ್ ಅವರು ನಾಗರಹಾವು ಚಿತ್ರದ ಮೂಲಕ ಹೊಸ ನಾಯಕ ನಟರಾಗಿ ಹೊರಹೊಮ್ಮಿದ್ದರು. ಗಂಧದಗುಡಿ ಯಲ್ಲಿ ರಾಜಕುಮಾರ್ ಸೋದರನಾಗಿ – ಖಳಪಾತ್ರದಲ್ಲಿ ನಟಿಸಿದ್ದರು. ಬಂದೂಕದ ಗುಂಡು ಹಾರಿಸುವ ಸನ್ನಿವೇಶ. ಬೇರೆಯವರು ನಿಜವಾದ ಬುಲೆಟ್ ಹಾಕಿದ್ದು ಗೊತ್ತಿಲ್ಲದೆ ಚಾಲೂ ಮಾಡಿದಾಗ ಗುಂಡು ಹಾರಿತು. ಆದರೆ ಶಾಟ್ ತೆಗೆಯುವಾಗ ಆದ ಘಟನೆ ಇದಾಗಿರಲಿಲ್ಲ. ಮುಂಚೆಯೇ ವಿಶ್ರಾಂತಿ ಸಮಯದಲ್ಲಿ ಆಕಸ್ಮಾತ್ ಇದು ಸಂಭವಿಸಿತು, ಚಿತ್ರದ ದೃಶ್ಯದಲ್ಲಿ ವಿಷ್ಣುವರ್ಧನ್ ಅವರು ರಾಜಕುಮಾರ್ ಅವರ ಕಡೆ ಗುಂಡು ಹಾರಿಸುವ ದೃಶ್ಯವಿದ್ದು ಆಗ ನಿಜವಾದ ಗುಂಡು ಹಾರಿಸಲಾಯಿತೆಂದು ಸುಳ್ಳು ಸುದ್ದಿ ಹಬ್ಬಿಸಲಾಯಿತು. ವಿಷ್ಣುವರ್ಧನ್ ಅವರು ಇದರಿಂದ ಸಂಕಟ ಅನುಭವಿಸಬೇಕಾಯಿತು. ರಾಜಕುಮಾರ್ ಅವರು ವಿಷ್ಣುವರ್ಧನ್ ಕಡೆಯಿಂದ ತಪ್ಪಾಗಿಲ್ಲ ಎಂದು ವಿಜಯಚಿತ್ರ ಪತ್ರಿಕೆಯಲ್ಲಿ ಹೇಳಿದ್ದು ಬೇರೆ ಕಡೆ ಹೆಚ್ಚು ಸುದ್ದಿಯಾಗಲೇ ಇಲ್ಲ. ಇದೊಂದು ಪ್ರಮಾದವೇ ಸರಿ. ರಾಜಕುಮಾರ್ ಅವರ ಸ್ಪಷ್ಟನೆಗೆ ವ್ಯಾಪಕ ಪ್ರಚಾರ ಸಿಕ್ಕಿದ್ದರೆ ಚೆನ್ನಾಗಿತ್ತು. ಸ್ಥಳದಲ್ಲಿದ್ದವರು ಏನೇನು ಮಾಹಿತಿ ಕೊಟ್ಟರೊ ತಿಳಿಯದು. ಒಟ್ಟಿನಲ್ಲಿ ಕಠಾರಿವೀರ ಚಿತ್ರೀಕರಣದಲ್ಲಿ ನಡೆದ ಘಟನೆ ಗಂಧದಗುಡಿ ಯಂತೆ ವಿವಾದಕ್ಕೆ ಕಾರಣವಾಗಲಿಲ್ಲ. ಗಂಧದಗುಡಿ ಘಟನೆ ವದಂತಿಗಳ ಉರಿಯಲ್ಲಿ ವಿವಾದವಾಯಿತು. ಇದೊಂದು ಆಗಬಾರದಿದ್ದ ಹುಸಿ ವಿವಾದ. ಆದರೆ ನನಗೆ ಗೊತ್ತಿರುವಂತೆ ರಾಜಕುಮಾರ್ ಮತ್ತು ವಿಷ್ಣುವರ್ಧನ್ ಅವರ ನಡುವೆ ಉತ್ತಮ ಬಾಂಧವ್ಯವಿತ್ತು. ಇಬ್ಬರೂ ತಾವಾಗಿ ವಿವಾದಕ್ಕೆ ಪ್ರೇರಣೆಯಾಗಿರಲಿಲ್ಲ. ಚಿತ್ರೀಕರಣದಲ್ಲಿ ಒಮ್ಮೊಮ್ಮೆ ಆಕಸ್ಮಿಕಗಳು ಸಂಭವಿಸುತ್ತವೆ. ಅವು ಉದ್ದೇಶಪೂರ್ವಕವೆಂದು ತಿಳಿಯಬಾರದು. ಕನ್ನಡ ಮನಸ್ಸು ಬೇಕಾಗಿಯೇ ಅಷ್ಟು ಕೆಟ್ಟದಾಗಿ ನಡೆದುಕೊಳ್ಳುವುದಿಲ್ಲ. ಕನ್ನಡ ಕಲಾವಿದರು ಅಷ್ಟು ಕೆಟ್ಟವರಲ್ಲ. ಕನ್ನಡ ಚಿತ್ರರಂಗ ದ್ವೇಷದ ದ್ವೀಪವಲ್ಲ. ಕೆಲವೊಮ್ಮೆ ಅನಪೇಕ್ಷಿತ ಸನ್ನಿವೇಶಗಳು ಸೃಷ್ಟಿಯಾದರೂ ಸಾಮರಸ್ಯಕ್ಕೆ ಬರವಿಲ್ಲ. ಆದ್ದರಿಂದಲೇ ರಾಜಕುಮಾರ್ ಮತ್ತು ವಿಷ್ಣುವರ್ಧನ್ ಇಬ್ಬರೂ ತಲಾ ೨೦೦ ಚಿತ್ರಗಳನ್ನು ಮೀರಿ ಅಭಿನಯಿಸಲು ಸಾಧ್ಯವಾಯಿತು.

ಇಲ್ಲಿಯೇ ಊಟಿ ಪ್ರಕರಣ ನೆನಪಾಗುತ್ತದೆ. ಆಗ ರಾಜಕುಮಾರ್ ಅವರು ಕನ್ನಡಪರ ಹೋರಾಟಗಳಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದರು. ಗೋಕಾಕ್ ಚಳವಳಿ, ಕನ್ನಡ ಚಿತ್ರಗಳಿಗೆ ಥಿಯೇಟರ್‌ಗಳಲ್ಲಿ ಆದ್ಯತೆ ಮುಂತಾದ ಹೋರಾಟಗಳ ಮುಂಚೂಣಿ ನಾಯಕರಾಗಿದ್ದರು. ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಕೆಲವು ತಮಿಳು ಸಂಘಟನೆಗಳು ಭಾಷಿಕ ಮೂಲಭೂತವಾದಕ್ಕೆ ಪ್ರೇರಣೆ ನೀಡಿದವು. ಆದರೆ ಎಲ್ಲ ತಮಿಳರೂ ತಮಿಳು ಸಂಘಟನೆಗಳೂ ಹೀಗಿರಲಿಲ್ಲ. ರಾಜ್ ಅವರನ್ನ ವೀರಪ್ಪನ್‌ನಿಂದ ಬಿಡಿಸಿಕೊಂಡು ಬರುವಾಗ ಸಹಕರಿಸಿದ ತಮಿಳು ಮುಂದಾಳುಗಳನ್ನು ಇಲ್ಲಿ ನೆನೆಯಬಹುದು. ಈಗ ಊಟಿ ವಿಷಯಕ್ಕೆ ಬರೋಣ. ಒಂದು ತಮಿಳು ಗುಂಪಿನವರು ಊಟಿಯಲ್ಲಿ ನಡೆಯುತ್ತಿದ್ದ ರಾಜಕುಮಾರ್ ಸಿನಿಮಾವೊಂದರ ಚಿತ್ರೀಕರಣದ ಸ್ಥಳಕ್ಕೆ ಬಂದು ಪ್ರತಿಭಟನೆ ಮಾಡಿದರು. ರಾಜಕುಮಾರ್ ವಿರುದ್ಧ ಘೋಷಣೆ ಕೂಗಿದರು. ಕಡೆಗೆ ಕೆಲವರು ಮೈ ಮೇಲೆ ಬಿದ್ದರು. ಆಗ ಏನೇನಾಯಿತು ಎಂಬ ವಿಷಯದಲ್ಲಿ ಅನೇಕ ವದಂತಿಗಳು ಹಬ್ಬಿದವು. ಆದರೆ ರಾಜಕುಮಾರ್ ಅವರೇ ನನಗೆ ಹೇಳಿದ ವಿವರಗಳನ್ನು ಇಲ್ಲಿ ಸಾದರಪಡಿಸುತ್ತಿದ್ದೇನೆ: ರಾಜ್ ಅವರ ಮೇಲೆ ತಮಿಳು ತಂಡದವರು ಹಲ್ಲೆ ಮಾಡಿದಾಗ ತಮಿಳು ತಂಡದ ನಾಯಕನೇ ಅಡ್ಡ ನಿಲ್ಲುತ್ತಾನೆ. ಹಲ್ಲೆಯನ್ನು  ತಡೆದು ಬರೀ ಘೋಷಣೆ ಕೂಗಬೇಕೇ ಹೊರತು ಮೈ ಮುಟ್ಟಬಾರದೆಂದು ಗದರಿಸುತ್ತಾನೆ. ಆನಂತರ ಚಿತ್ರೀಕರಣ ಬಂದ್ ಆಗಿ ಬೆಂಗಳೂರಿಗೆ ವಾಪಸ್ಸಾಗುತ್ತಾರೆ. ಹಲ್ಲೆಯ ಪ್ರಯತ್ನದಿಂದ ರಾಜಕುಮಾರ್ ಅವರಿಗೆ ಮಾನಸಿಕವಾಗಿಯಷ್ಟೇ ಅಲ್ಲ ದೈಹಿಕವಾಗಿಯೂ ಘಾಸಿಯಾಗಿತ್ತು. ಕತ್ತಿನ ಸುತ್ತ ಗಾಯಗಳಾಗಿದ್ದವು. ಆಗ ರಾಜ್ ಬಳಗದ ಅನೇಕರು ದೈಹಿಕ ಹಲ್ಲೆಯಿಂದ ಗಾಯವಾಗಿರುವ ವಿಷಯವನ್ನು ಮಾಧ್ಯಮದವರ ಮುಂದೆ ಹೇಳಬೇಕೆಂದು ಒತ್ತಾಯಿಸಿದರು. ಆದರೆ ರಾಜಕುಮಾರ್ ಅವರು ಒಪ್ಪಲಿಲ್ಲ. ಯಾರು ಎಷ್ಟೇ ಹೇಳಿದರೂ ಒತ್ತಾಯಕ್ಕೆ ಮಣಿಯಲಿಲ್ಲ. ಅವರು ಹೇಳಿದ್ದು ಇಷ್ಟು : ಊಟಿಯಲ್ಲಿ ನನ್ನ ಮೇಲೆ ಹಲ್ಲೆ ನಡೆದು ಕತ್ತಿನ ಸುತ್ತ ಗಾಯಗಳಾಗಿವೆಯೆಂದು ಬಹಿರಂಗವಾಗಿ ತೋರಿಸಿ ಹೇಳಿದರೆ ಏನೆಲ್ಲ ಅನಾಹುತ ಆಗುತ್ತೆ ಅಂತ ಯೋಚಿಸಿ. ಇಲ್ಲಿ ಭಾಷಾ ಗಲಭೆಯಾಗಿ ಆಗಬಾರದ್ದೆಲ್ಲ ಆಗಬಹುದು. ಯಾರೊ ಕೆಲವರು ಮಾಡಿದ ಕೆಟ್ಟ ಕೆಲಸವನ್ನು ನಾನೇ ಖುದ್ದು ಬಹಿರಂಗ ಪಡಿಸಿದರೆ ಗಲಭೆಗೆ ಪ್ರಚೋದನೆ ನೀಡಿದಂತಾಗುತ್ತದೆ. ಕರ್ನಾಟಕದ ಶಾಂತಿ ಕದಡಲು ನಾನು ಕಾರಣವಾಗುವುದಿಲ್ಲ. ಕೆಟ್ಟದ್ದನ್ನು ಈಗ ಮರೆತು ಮುಂದಿನದನ್ನು ನೋಡೋಣ ಎಂದು ಹೇಳಿ ಗಾಯಗಳು ವಾಸಿಯಾಗುವವರೆಗೆ ಯಾರಿಗೂ ಸಿಗದಂತೆ ತೋಟದ ಮನೆಯಲ್ಲಿ ವಾಸವಾಗಿದ್ದರು.

ಉದಯಕುಮಾರ್, ವಿಷ್ಣುವರ್ಧನ್ ಮತ್ತು ಊಟಿ ಪ್ರಕರಣಗಳಲ್ಲಿ ರಾಜಕುಮಾರ್ ಅವರು ಎಷ್ಟು ಸಮಚಿತ್ತದಿಂದ ನಡೆದುಕೊಂಡರೆಂಬುದು ಈ ವಿವರಣೆಯಿಂದ ಅರಿವಾಗುತ್ತದೆ. ಜೊತೆಕಲಾವಿದರ ವಿಷಯದಲ್ಲಂತೂ ಅವರು ಸದಾ ಸ್ನೇಹಮಯಿಯಾಗಿದ್ದಕ್ಕೆ ಅನೇಕ ನಿದರ್ಶನಗಳಿವೆ.

ಸಿಪಾಯಿ ರಾಮು ಚಿತ್ರದ ಒಂದು ಪಾತ್ರಕ್ಕೆ ತೂಗುದೀಪ ಶ್ರೀನಿವಾಸ್ ಅವರನ್ನು ಆಹ್ವಾನಿಸಲಾಗುತ್ತದೆ. ಅವರು ಅಭಿನಯಿಸಬೇಕಾದ ಮೊದಲ ದೃಶ್ಯದಲ್ಲೇ ಉದ್ದ ಸಂಭಾಷಣೆಯನ್ನು ಹೇಳಬೇಕಾಗಿರುತ್ತದೆ. ತೂಗುದೀಪ ಶ್ರೀನಿವಾಸ್ ಅವರು ತುಂಬಾ ಟೇಕ್ಸ್ ತಗೊಳ್ತಿರುವಾಗ ನಿರ್ದೇಶಕರಿಗೆ ಒಳಗೇ ಬೇಸರವಾಗುವುದು ಸಹಜ. ಅವರಿಗಿಂತ ಹೆಚ್ಚಾಗಿ ಕಲಾವಿದರಿಗೇ ಅಳುಕು ಆರಂಭವಾಗುತ್ತದೆ. ಇದನ್ನು ಅರ್ಥಮಾಡಿಕೊಂಡ ರಾಜಕುಮಾರ್, ನಿರ್ದೇಶಕರ ಬಳಿ ಬಂದು ಸ್ವಲ್ಪ ಕಾಲ ಚಿತ್ರೀಕರಣ ನಿಲ್ಲಿಸುವಂತೆ ಕೇಳಿದರು. ಆನಂತರ ಶ್ರೀನಿವಾಸ್ ಅವರನ್ನು ದೂರ ಕರೆದೊಯ್ದು ಧೈರ್ಯ ತುಂಬಿದರು. ಅಳುಕಬೇಡಿ, ನಾವೆಲ್ಲ ಹೀಗೆ ತಪ್ಪು ಮಾಡಿಯೇ ಬೆಳದಿರೋದು. ಈಗ್ಲೂ ಒಮ್ಮೊಮ್ಮೆ ನಾವೂ ಜಾಸ್ತಿ ಟೇಕ್ಸ್ ತಗೋತೇವೆ ಎಂದು ಆತ್ಮವಿಶ್ವಾಸ ತುಂಬಿದರು. ಆನಂತರ ಚಿತ್ರೀಕರಣದ ಸ್ಥಳಕ್ಕೆ ಕರೆತಂದರು. ಶ್ರೀನಿವಾಸ್ ಒಂದೇ ಟೇಕ್‌ನಲ್ಲಿ ಸಂಭಾಷಣೆ ಒಪ್ಪಿಸುವುದರೊಂದಿಗೆ ಚೆನ್ನಾಗಿ ಅಭಿನಯಿಸಿದರು. ಹುಲಿಯ ಹಾಲಿನ ಮೇವು ಚಿತ್ರೀಕರಣದಲ್ಲಿ ಎಂ.ಪಿ.ಶಂಕರ್ ಅವರಿಗೂ ಇಂಥದೇ ಅನುಭವವಾಗಿತ್ತಂತೆ. ಆಗ ರಾಜಕುಮಾರ್ ಅವರೇ ಧೈರ್ಯ ಹೇಳಿದರಂತೆ. ಈ ಕ್ಯಾಮರಾ ಇದೆಯಲ್ಲ, ಎಂಥವರಿಗೂ ಭಯ ಹುಟ್ಸುತ್ತೆ. ಆದ್ರೂ ಹೆದರಬೇಡಿ ಎಂದು ಉತ್ತೇಜಿಸಿದರಂತೆ.

ಕಸ್ತೂರಿ ನಿವಾಸ ಚಿತ್ರದಲ್ಲಿ ಆರತಿಯವರು ರಾಜಕುಮಾರ್ ಅವರ ಜೊತೆ ಹಾಡಿಗೆ ನೃತ್ಯ ಮಾಡುತ್ತ ಅಭಿನಯಿಸುವ ಸನ್ನಿವೇಶವಿದೆ. ಆರತಿಯವರಿಗೆ ಆಗ ನೃತ್ಯದ ಅಭ್ಯಾಸ ಅಷ್ಟಾಗಿ ಇರಲಿಲ್ಲವಂತೆ. ಜೊತೆಗೆ ರಾಜಕುಮಾರ್ ಜೊತೆಗಿನ ಅಭಿನಯ ಎಂದಾಗ ಯಾರಿಗಾದರೂ ಆರಂಭದ ಅಳುಕು ಇರುತ್ತದೆ. ಈ ಚಿತ್ರದ ನೃತ್ಯ ನಿರ್ದೇಶಕರಾದ ಉಡುಪಿ ಜಯರಾಂ ಮತ್ತು ದೇವಿ ಅವರು ಆರತಿಯವರಿಗೆ ನೃತ್ಯಾಭಿನಯ ಹೇಳಿಕೊಟ್ಟರು. ತುಂಬಾ ಸಮಯವಾದರೂ ಸರಿಬರದೇ ಇದ್ದಾಗ ಆರತಿಯವರು ಅತ್ತುಬಿಟ್ಟರು. ಆಗ ರಾಜಕುಮಾರ್ ನೃತ್ಯ ನಿರ್ದೇಶಕರಿಗೆ ಯಾಕ್ರೀ ಆರತಿಯವರನ್ನು ಅಳುಸ್ತೀರಿ. ಹೊಸ ಅನುಭವ, ಮಾಡ್ತಾರೆ ಬಿಡಿ ಎಂದು ಆರತಿಯವರ ಬಳಿ ಬಂದು ಆರತಿಯವರೆ ನಿಮಗೆ ಪಾರ್ಟು ಮಾಡೋಕೆ ಇಷ್ಟ ಇದೆ ತಾನೆ? ಎಂದು ಕೇಳುತ್ತಾರೆ. ಆರತಿ ಖಂಡಿತ ಇಷ್ಟ ಎನ್ನುತ್ತಾರೆ. ಆಗ ನಿರ್ದೇಶಕರಾದ ದೊರೆ-ಭಗವಾನ್ ಬಳಿ ಬಂದ ರಾಜಕುಮಾರ್ ದಯವಿಟ್ಟು ಶೂಟಿಂಗ್  ರದ್ದು ಮಾಡಿ. ಆರತಿ ಅವರಿಗೆ ಪ್ರತ್ಯೇಕವಾಗಿ ಅಭ್ಯಾಸ ಮಾಡ್ಸಿ. ಎಲ್ಲರ ಎದುರು ಇಲ್ಲಿ ಸರಿಬರಲಿಲ್ಲ ಅಂತ ಸತಾಯ್ಸೋದ್ ಬೇಡ ಎಂದು ಹೇಳುತ್ತಾರೆ. ಅವರ ಮಾತಿನಂತೆ ಚಿತ್ರೀಕರಣ ರದ್ದಾಗುತ್ತದೆ. ಆರತಿಯವರಿಗೆ ಪ್ರತ್ಯೇಕವಾಗಿ ಹೇಳಿಕೊಡಲಾಗುತ್ತದೆ. ಮರುದಿನ ಆರತಿ ಸರಾಗವಾಗಿ ಅಭಿನಯಿಸುತ್ತಾರೆ. ಮುಂದೆ ಕಸ್ತೂರಿ ನಿವಾಸ ಚಿತ್ರವೂ ಯಶಸ್ವಿಯಾಗುತ್ತದೆ.

ಪ್ರಸಿದ್ಧ ತಾರೆ ಹರಿಣಿಯವರು ರಾಜಕುಮಾರ್ ಅವರು ತಮ್ಮ  ಜೊತೆಗಿನ ಕಲಾವಿದರ ಬಗ್ಗೆ ನಡೆದುಕೊಳ್ಳುತ್ತಿದ್ದ ರೀತಿ ಕುರಿತು ಹೀಗೆ ಹೇಳಿದ್ದಾರೆ: ರಾಜಕುಮಾರ್ ಅವರ ಬಗ್ಗೆ ಹೇಳಬೇಕು ಅಂದ್ರೆ ವೆರಿವೆರಿ ನೈಸ್ ಪರ್ಸನ್. ನಮ್ಮ ಜೊತೆ ಸಹಜವಾಗಿ ಇರ‍್ತಿದ್ರು. ಎಲ್ರೂ ಒಟ್ಟಿಗೇ ಕುಳಿತು ಊಟ ಮಾಡ್ತಿದ್ವಿ. ಒಟ್ಟಿಗೇ ಆಟ ಆಡ್ತಿದ್ವಿ; ಹರಟೆ ಹೊಡೀತಿದ್ವಿ; ಯಾರೂ ಮೇಲು ಕೀಳು ಅನ್ನೊ ಭಾವನೇನೇ ಚಿತ್ರತಂಡದಲ್ಲಿ ಇರ‍್ತಿರಲಿಲ್ಲ. ರಾಜಕುಮಾರ್ ಅವರು ಎಂದೂ ಸಹ ತಾವು ನಾಯಕ ನಟ ಎಂಬ ಭಾವನೇನ ತೋರಿಸ್ಲೇ ಇಲ್ಲ. ನಿಜ ಜೀವನದಲ್ಲೂ ಅವರು ಅತ್ಯಂತ ಸಜ್ಜನಿಕೆಯ ವ್ಯಕ್ತಿ. ಹಾಗಾಗಿ ಜನರು ಅವರನ್ನು ರೋಲ್ ಮಾಡೆಲ್ ಅಂತ ತಗೊಂಡ್ರೇನೊ ಅಂತ ಅನ್ಸುತ್ತೆ ಹೀಗೆ ವಿಶ್ಲೇಷಿಸಿದ ಹರಿಣಿಯವರು ರಾಜಕುಮಾರ್ ಅವರ ಜನಪ್ರಿಯತೆಯ ಬಗ್ಗೆ ಒಂದು ಘಟನೆಯನ್ನು ಹೇಳುತ್ತಾರೆ. ಹರಿಣಿಯವರು ತಮ್ಮ ಪತಿ ಜೊತೆ ಅಮೇರಿಕಾಕ್ಕೆ ಹೋಗಿದ್ದಾಗ ಅಲ್ಲಿ ವಿದೇಶಿ ದಂಪತಿಗಳಿಗೆ ಇವರನ್ನು ಪರಿಚಯಿಸಲಾಗುತ್ತದೆ. ಹರಿಣಿಯವರು ಕನ್ನಡದ ನಟಿ ಎಂದು ತಿಳಿದಕೂಡಲೇ ಆ ವಿದೇಶಿ ದಂಪತಿ ನೀವು ರಾಜಕುಮಾರ್ ಜೊತೆ ನಟಿಸಿದ್ದೀರಾ? ಎಂದು ಕೇಳುತ್ತಾರೆ. ಹರಿಣಿಯವರಿಗಷ್ಟೇ ಅಲ್ಲ ಜೊತೆಯಲ್ಲಿದ್ದ ಎಲ್ಲರಿಗೂ ಆಶ್ಚರ್ಯ! ಇವರಿಗೆ ರಾಜಕುಮಾರ್ ಹೇಗೆ ಗೊತ್ತು? ಅದನ್ನೇ ಕೇಳಿದಾಗ ವಿದೇಶಿ ದಂಪತಿ ಸ್ಪಷ್ಟಪಡಿಸುತ್ತಾರೆ. ಅವರು ಬೆಂಗಳೂರಿಗೆ ಬಂದಿದ್ದಾಗ ಚಿತ್ರಮಂದಿರಗಳ ಮುಂದೆ ಮತ್ತು ಅನೇಕ ರಸ್ತೆಗಳಲ್ಲಿ ಹಾಕಿದ್ದ ಪೋಸ್ಟರ್‌ಗಳಲ್ಲಿ ಒಂದೇ ಗಂಡುಮುಖ ಕಾಣಿಸಿತಂತೆ. ಈ ನಟ ಯಾರು ಎಂದು ಕೇಳಿದಾಗ ರಾಜಕುಮಾರ್ ಎಂದು ಗೊತ್ತಾಯಿತಂತೆ. ರಾಜಕುಮಾರ್ ಅವರ ಅಸಂಖ್ಯಾತ ಪೋಸ್ಟರ್‌ಗಳೇ ಅವರ ಜನಪ್ರಿಯತೆಗೆ ಸಾಕ್ಷಿ ಎಂದುಕೊಂಡ ದಂಪತಿ ರಾಜ್ ಕುರಿತು ಜನರ ಅಭಿಪ್ರಾಯಗಳನ್ನೂ ಕೇಳಿ ಎಂಥ ಜನಪ್ರಿಯ ಕಲಾವಿದ ಎಂದು ಅಚ್ಚರಿಗೊಂಡರಂತೆ. ಹರಿಣಿಯವರು ರಾಜಕುಮಾರ್ ಅವರ ಜೊತೆ ನಟಿಸುವಷ್ಟು ಖ್ಯಾತರಾದ ನಟಿಯೆ ಎಂದು ತಿಳಿದುಕೊಳ್ಳಲು ರಾಜಕುಮಾರ್ ಜೊತೆ ನಟಿಸಿದ್ದೀರ? ಎಂದು ಕೇಳಿದರಂತೆ. ಈ ಎಲ್ಲ ವಿವರ ಕೇಳಿದ ಅಲ್ಲಿಯವರು ಪುಳಕಿತರಾದದ್ದು ಸಹಜ.

ಹೀಗೆ ತುಂಬಾ ಜನಪ್ರಿಯರಾಗಿದ್ದರೂ ಡಾ|| ರಾಜಕುಮಾರ್ ಅವರು ಯಾವತ್ತೂ ಚಿತ್ರೀಕರಣಕ್ಕೆ ತಡವಾಗಿ ಬಂದವರಲ್ಲ. ತೊಂದರೆ ಕೊಟ್ಟವರಲ್ಲ. (ಇನ್ನೊಂದು ಲೇಖನದಲ್ಲಿ ಕೆಲವು ನಿದರ್ಶನ ನೀಡಿದ್ದೇನೆ) ಒಮ್ಮೆ ಹೀಗಾಗುತ್ತದೆ. ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋಗೆ ೯ ಗಂಟೆಗೆ ಚಿತ್ರೀಕರಣಕ್ಕೆ ಹಾಜರಾಗಬೇಕು. ಆಗ ಬೆಂಗಳೂರಲ್ಲಿ ಮನೆ ಮಾಡಿರಲಿಲ್ಲವಾದ್ದರಿಂದ ಹೈಲ್ಯಾಂಡ್ಸ್ ಹೋಟೆಲ್‌ನಲ್ಲಿ ತಂಗುತ್ತಿದ್ದರು. ಪಾರ್ವತಮ್ಮನವರು ಬೇಗ ಬರುತ್ತೇನೆಂದು ಕಾರು ತೆಗೆದುಕೊಂಡು ಹೋದವರು ಎಂಟೂವರೆಯಾದರೂ ಬರಲಾಗಲಿಲ್ಲ. ರಾಜಕುಮಾರ್ ಮೇಕಪ್ ಮಾಡಿಕೊಂಡು ಸಿದ್ಧವಾಗಿದ್ದರು. ಚಿತ್ರೀಕರಣಕ್ಕೆ ತಡವಾಗುತ್ತದೆಯೆಂದು ಕಾರಿಗಾಗಿ ಕಾಯದೆ ಒಂದು ಆಟೋದಲ್ಲಿ ಚಾಮುಂಡೇಶ್ವರಿ ಸ್ಟುಡಿಯೊ ತಲುಪಿದರು. ಇದು ರಾಜಕುಮಾರ್ ಮಾದರಿ.

ಜಾನಕಿರಾಂ ಅವರ ನಿರ್ಮಾಣ ಮತ್ತು ನಿರ್ದೇಶನದ ಪುಣ್ಯಪುರುಷ ಚಿತ್ರೀಕರಣಕ್ಕೆ ಅನಿವಾರ್ಯವಾಗಿ ಅರ್ಧಗಂಟೆ ತಡವಾಗಿ ಬಂದ ರಾಜಕುಮಾರ್ ಸೀದಾ ಮೇಕಪ್‌ಮನ್ ಬಳಿಗೆ ಬರುತ್ತಾರೆ. ಜಾನಕಿರಾಂ ಅವರ ಹತ್ರ ಹೋಗಿ ಇನ್ನೆಂದೂ ತಡವಾಗಿ ಬರೊಲ್ಲ. ಈ ಸಾರಿ ತಪ್ಪಾಗಿದೆ ಅಂತ ನಾನು ಹೇಳಿದ್ದಾಗಿ ತಿಳಿಸು-ಅಂತ ಆತನನ್ನು ಕಳಿಸುತ್ತಾರೆ. ಜಾನಕಿರಾಂ ಅವರು ಕಿಂಚಿತ್ತೂ ಬೇಸರ ಮಾಡಿಕೊಂಡಿರುವುದಿಲ್ಲ. ಅರ್ಧಗಂಟೆ ತಡವೆಂಬುದು ಲೆಕ್ಕಕ್ಕಿಲ್ಲ. ಆದರೆ ರಾಜಕುಮಾರ್ ಅವರಿಗೆ ಅದೇ ದೊಡ್ಡದು. ಜಾನಕಿರಾಂ ಅವರು ತಮ್ಮ ಹಿಂದಿನ ಚಿತ್ರದಲ್ಲಿ ನಷ್ಟ ಅನುಭವಿಸಿ ಅದರಿಂದ ಹೊರಬರಲು ರಾಜಕುಮಾರ್ ಅವರ ಕಾಲ್‌ಶೀಟ್ ಕೇಳಿದ್ದು, ರಾಜಕುಮಾರ್ ಒಪ್ಪಿದ್ದು, ಅದರ ಫಲವಾಗಿ ಪುಣ್ಯ ಪುರುಷ ನಿರ್ಮಾಣಗೊಂಡಿತ್ತು. ಜಾನಕಿರಾಂ ಅವರಿಗೆ ಧನ್ಯತಾ ಭಾವವಿತ್ತು. ಆದರೆ ರಾಜಕುಮಾರ್ ಅವರಿಗೆ ತಾನೇನೋ ಉಪಕಾರ ಮಾಡಿದೆ ಎಂಬ ಭಾವನೆಯಿರಲಿಲ್ಲ. ಇಲ್ಲಿ ತಾನೊಬ್ಬ ಶಿಸ್ತಿನ ಕಲಾವಿದ ಅಷ್ಟೆ ಎಂಬ ನಮ್ರತೆ ಮತ್ತು ಬದ್ಧತೆ ಅವರದಾಗಿತ್ತು. ಒಮ್ಮೆ ಚಿತ್ರೀಕರಣಕ್ಕೆ ತಡವಾಗಿ ಬಂದ ರಾಜ್, ಇನ್ನೊಮ್ಮೆ ಸಹನಟರೊಬ್ಬರಿಗಾಗಿ ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಆದರೂ ಬೇಸರ ಮಾಡಿಕೊಳ್ಳದೆ ಕಾಯುತ್ತಾರೆ.

ಪಾತ್ರಕ್ಕೆ ತಕ್ಕಂತೆ ಉಡುಗೆ-ತೊಡುಗೆ ಇರಬೇಕೆಂಬುದನ್ನು ಇದೇ ಚಿತ್ರೀಕರಣದ ಸಂದರ್ಭದಲ್ಲಿ ಮಾಡಿತೋರಿಸುತ್ತಾರೆ. ಶ್ರೀಮಂತಿಕೆಯನ್ನು ಕಳೆದುಕೊಂಡ ಬಡವನ ಪಾತ್ರಕ್ಕೆ ಕಡಿಮೆ ಬೆಲೆಯ ಹೊಸ ಬಟ್ಟೆ ತಂದಿರುತ್ತಾರೆ. ರಾಜಕುಮಾರ್ ಅದನ್ನು ನೆಲದ ಮಣ್ಣಿಗೆ ಹಾಕಿ, ಹಳೆ ಬಟ್ಟೆಯಂತೆ ಮಾಡಿ ಧರಿಸುತ್ತಾರೆ. ಕಾಲಿಗೆ ಹೊಸ ಚಪ್ಪಲಿ ಕೊಟ್ಟಾಗ ಅದನ್ನು ಹಾಕಿಕೊಳ್ಳದೆ, ಲೈಟ್‌ಬಾಯ್ ಒಬ್ಬರನ್ನು ಕರೆದು ಆತನ ಹಳೆಯ ಚಪ್ಪಲಿ ಕೇಳಿ ಪಡೆದು ಹಾಕಿಕೊಳ್ಳುತ್ತಾರೆ.

ರಾಜಕುಮಾರ್ ಅವರು ದ್ವಾರಕೀಶ್, ಚಂದೂಲಾಲ್ ಜೈನ್, ಜಾನಕಿರಾಂ, ಎಂ.ಪಿ.ಶಂಕರ್, ನರೇಂದ್ರಬಾಬು ಮುಂತಾದ ವೃತ್ತಿ ಬಂಧುಗಳಿಗೆ ಕಾಲ್‌ಶೀಟ್ ನೀಡಿ ನಿರ್ಮಾಣಕ್ಕೆ ನೆರವಾದಂತೆ ಜೊತೆ ಕಲಾವಿದ ಬಿ.ಎಂ.ವೆಂಕಟೇಶ್ ಅವರು ನಿರ್ಮಾಪಕರಾಗಲು ಸಹಕರಿಸಿದ್ದಾರೆ. ಬಿ.ಎಂ.ವೆಂಕಟೇಶ್, ಬೆಂಗಳೂರಿನ ಅರಳೇಪೇಟೆಯಲ್ಲಿ ವಾಸಿಸುತ್ತಿದ್ದರು. ತಮ್ಮ ಮನೆಯ ಸನಿಹದಲ್ಲೇ ನಡೆದ ದಾರುಣ ಘಟನೆಯನ್ನಾಧರಿಸಿ ಸಿನಿಮಾ ಮಾಡಲು ಯೋಚಿಸಿದರು. ಆ ಘಟನೆಯನ್ನು ಹೇಳಿ ಅದನ್ನು ಹೇಗೆ ಕಥಾರೂಪವನ್ನಾಗಿಸಬೇಕೆಂದು ರಾಜ್ ಅವರಿಗೆ ಹೇಳಿದಾಗ ಚೆನ್ನಾಗಿದೆ ಎಂದರು. ವೆಂಕಟೇಶ್ ಅವರಿಗೆ ಅಷ್ಟು ಸಾಕಿತ್ತು. ರಾಜಕುಮಾರ್ ಅವರನ್ನು ನಾಯಕ ಪಾತ್ರ ಮಾಡಲು ಕೇಳಿಕೊಂಡರು. ರಾಜ್ ಒಪ್ಪಲಿಲ್ಲ. ವೆಂಕಟೇಶ್ ಬಿಡಲಿಲ್ಲ. ರಾಜ್ ಅವರಿಗೆ ಇಷ್ಟವಿರಲಿಲ್ಲವೆಂದಲ್ಲ. ಅವರು ನೋಡಿ ವೆಂಕಟೇಶ್, ನೀವು ಹೇಳಿದ್ದು ಚೆನ್ನಾಗಿದೆ. ನಾಯಕನ ಪಾತ್ರವೂ ಚೆನ್ನಾಗಿದೆ, ನೀವೇ ನಾಯಕನ ಪಾತ್ರ ಮಾಡಿ, ಯಾಕೆಂದರೆ ಹೊಸಬರಿಗೂ ಒಳ್ಳೆಯ ಅವಕಾಶಗಳು ಸಿಗಬೇಕು. ನೀವ್ ಮಾಡಿ ಎಂದು ಒತ್ತಾಯಿಸಿದರು. ವೆಂಕಟೇಶ್ ಒಪ್ಪಲಿಲ್ಲ. ರಾಜಕುಮಾರ್ ಅವರಿಗೆ ಬಿಡುವೂ ಇರಲಿಲ್ಲ. ಹೇಗಾದರೂ ಮಾಡಿ ರಾಜಕುಮಾರ್ ಅವರನ್ನು ಒಪ್ಪಿಸಬೇಕೆಂದು ವರದಪ್ಪನವರ ಹಿಂದೆ ಬಿದ್ದರು. ವರದಪ್ಪನವರು ರಾಜಕುಮಾರ್ ಅವರಿಗೆ ಬಿಡುವಿರುವ ದಿನಗಳನ್ನು ಗುರುತು ಹಾಕಿ ಹೇಳಿದರು. ಕಡೆಗೆ ರಾಜ್ ಒಪ್ಪಿದರು. ಹೀಗೆ ನಿರ್ಮಾಣವಾದದ್ದು ನ್ಯಾಯವೇ ದೇವರು ಚಿತ್ರ. ಇದು ಮೈಸೂರು ಅರಮನೆಯ ಹೊರ ಆವರಣದಲ್ಲಿ ಚಿತ್ರಿತವಾದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. ಮೊದಲು ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿರಲಿಲ್ಲವಾದರೂ ರಾಜಕುಮಾರ್ ಅಭಿನಯವುಳ್ಳ ಚಿತ್ರವೆಂಬ ಕಾರಣಕ್ಕೆ ಆನಂತರ ಅರಮನೆಯಿಂದ ಅನುಮತಿ ನೀಡಲಾಯಿತು. ರಾಜಕುಮಾರ್ ಅವರು ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರನ್ನು ಭೇಟಿಯಾಗಿ ಗೌರವಾರ್ಪಣೆ ಮಾಡಿದ್ದರು. ರಾಜಕುಮಾರ್ ತಮ್ಮ ಜೊತೆಕಲಾವಿದರು ಕಿರಿಯರಾಗಿದ್ದರೂ, ಹೊಸಬರಾಗಿದ್ದರೂ ಸಮಾನ ದೃಷ್ಟಿಯಿಂದ ನೋಡಿ ಸಹಕರಿಸುತ್ತಿದ್ದರಂತೆ.

CG ARUN

ಡಾ.ರಾಜಕುಮಾರ್ ಜನರಿಗೆ ಕೊಟ್ಟಿದ್ದೇನು?

Previous article

ಮನ್ನಣೆ ಮೀರಿಸುವ ಮೇರು ವ್ಯಕ್ತಿತ್ವ..

Next article

You may also like

Comments

Leave a reply

Your email address will not be published. Required fields are marked *

More in cbn