ಅದು ಎಚ್.ಎಂ.ಟಿ.ಯ ಪಾಳುಬಿದ್ದ ಬೃಹತ್ ಫ್ಯಾಕ್ಟರಿ. ಅದರೊಳಗೆ ಮಾರಾಮಾರಿ ಹೊಡೆದಾಟ. ಯಾವ ಡ್ಯೂಪೂ ಇಲ್ಲದೆ ಅಲ್ಲಿದ್ದ ಹೀರೋ ರಿಯಲ್ಲಾಗೇ ಕಾದಾಡುತ್ತಿದ್ದರು. ಅಕ್ಷರಶಃ ಅದು ಪ್ರಸೆಂಟ್ ಪ್ರಪಂಚ!
೦% ಲವ್ ಪ್ರಸೆಂಟ್ ಪ್ರಸೆಂಟ್ ಪ್ರಪಂಚ ಎನ್ನುವ ವಿನೂತನ ಹೆಸರಿನ ಸಿನಿಮಾ ತಯಾರಾಗುತ್ತಿದೆ. ಬಹುತೇಕ ಫೆಬ್ರವರಿ ೧೪ರ ಪ್ರೇಮಿಗಳ ದಿನಕ್ಕೆ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ತಂಡದ್ದು. ಸರಿಸುಮಾರು ಎರಡು ವರ್ಷಗಳ ಹಿಂದೆ ತೆರೆ ಕಂಡಿದ್ದ ಸಂಯುಕ್ತ-೨ ಚಿತ್ರವನ್ನು ನಿರ್ಮಾಣ ಮಾಡಿದ್ದವರು ಡಾ. ಡಿ ಎಸ್ ಮಂಜುನಾಥ್. ಈ ಸಿನಿಮಾದಲ್ಲಿ ಯಾರೂ ನಿರೀಕ್ಷಿಸದ ಪಾತ್ರವೊಂದರಲ್ಲಿ ನಟನೆಯನ್ನೂ ಮಾಡಿದ್ದರು. ಇತ್ತೀಚೆಗಷ್ಟೇ ತೆರೆ ಕಂಡು ೨೦೧೯ರ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾಗಿರುವ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ನಿರ್ಮಾಪಕರೂ ಇವರೇ. ಈ ಸಿನಿಮಾದಲ್ಲೂ ವಕೀಲರ ಪಾತ್ರವೊಂದನ್ನು ನಿಭಾಯಿಸಿ ಗಮನ ಸೆಳೆದಿದ್ದರು. ಇಂಥಾ ಮಂಜುನಾಥ್ ೦%ಲವ್ ಪ್ರಸೆಂಟ್ ಪ್ರಪಂಚ ಎನ್ನುವ ಭಿನ್ನ ಶೀರ್ಷಿಕೆಯ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ಹೀರೋ ಆಗಿ ಲಾಂಚ್ ಆಗುತ್ತಿದ್ದಾರೆ. ಮಂಜುನಾಥ್ ಅವರು ಸಿನಿಮಾಗಾಗಿ ಅರ್ಜುನ್ ಮಂಜುನಾಥ್ ಎನ್ನುವ ಹೆಸರಿನಿಂದ ಪಾದಾರ್ಪಣೆ ಮಾಡುತ್ತಿರೋದು ವಿಶೇಷ. ಸದ್ಯ ಈ ಚಿತ್ರದ ಕ್ಲೈಮ್ಯಾಕ್ಸ್ ಫೈಟ್ ಚಿತ್ರೀಕರಣಗೊಳ್ಳುತ್ತಿದೆ.
ಕೃಷ್ಣಮೂರ್ತಿ ಎಲ್ ಮತ್ತು ರವಿಕುಮಾರ್ ಹೆಚ್.ಪಿ ನಿರ್ಮಿಸಿರುವ ಈ ಸಿನಿಮಾವನ್ನು ಅಭಿರಾಮ್ ರಚಿಸಿ ನಿರ್ದೇಶಿಸಿದ್ದಾರೆ. ಈಗ ೦% ಲವ್ ಸಿನಿಮಾವನ್ನು ನಿರ್ದೇಶಿಸುತ್ತಿರುವವೂ ಇವರೇ. ಸಂಯುಕ್ತ-೨ ಚಿತ್ರದ ನಿರ್ಮಾಣ ಹಂತದಲ್ಲೇ ಅಭಿರಾಮ್ ಅರ್ಜುನ್ ಮಂಜುನಾಥ್ ಅವರ ಬಳಿ “ನಿಮಗೇ ಅಂತಲೇ ಒಂದು ಕಥೆ ಮಾಡಿದ್ದೀನಿ” ಅಂದಿದ್ದರಂತೆ. ‘ಹೌದಾ’ ಅಂತಾ ಕೇಳಿ ಸುಮ್ಮನಾಗಿದ್ದ ಮಂಜುನಾಥ್ ನಂತರ ಸಾಕಷ್ಟು ಸಲ ಸದ್ಯಕ್ಕೆ ಬೇಡ ಅಂತಲೇ ಮುಂದೆ ಹಾಕಿದ್ದರಂತೆ. ಕಡೆಗೊಂದು ದಿನ ಸಿನಿಮಾದಲ್ಲಿ ನಟಿಸುತ್ತೀನಿ ಆದರೆ ನಾನು ನಿರ್ಮಾಣ ಮಾಡಲು ಆಗೋದಿಲ್ಲ ಅಂದಿದ್ದರಂತೆ. ಅಷ್ಟಕ್ಕೂ ಸುಮ್ಮನಾಗದ ಅಭಿರಾಮ್ ನಿರ್ಮಾಪಕರನ್ನೂ ಕರೆತಂದು ಮಂಜುನಾಥ್ ಅವರ ಮುಂದೆ ನಿಲ್ಲಿಸಿದರಂತೆ. ಅಲ್ಲಿಗೆ ಇದು ನಿಜಕ್ಕೂ ತಮಗಾಗಿಯೇ ರೂಪಿಸಿದ ಕತೆ ಅನ್ನೋದು ಮಂಜುನಾಥ್ ಅವರಿಗೆ ಮನದಟ್ಟಾಗಿತ್ತು. ಆ ಮೂಲಕ ಶುರುವಾದ ಚಿತ್ರ ೦% ಲವ್ ಪ್ರಸೆಂಟ್ ಪ್ರಪಂಚ!
ಬೆಂಗಳೂರು, ಮೈಸೂರಿನಲ್ಲಿಯೇ ಹೆಚ್ಚಾಗಿ ಚಿತ್ರೀಕರಣಗೊಂಡಿರೋ ಈ ಸಿನಿಮಾ ಗಂಡ ಹೆಂಡತಿಯ ನಡುವೆ ನಡೆಯೋ ಕಥೆ ಹೊಂದಿದೆ. ಗಂಡ ಹೆಂಡಿರಿಬ್ಬರೂ ಸಾಫ್ಟ್ ವೇರ್ ವಲಯದಲ್ಲಿ ಕೆಲಸ ಮಾಡುವಾಗ ಆಗೋ ವಿದ್ಯಮಾನಗಳ ಸುತ್ತಾ ರೋಚಕವಾಗಿ ಸಾಗೋ ಕಥೆಯನ್ನು ಈ ಚಿತ್ರ ಹೊಂದಿದೆಯಂತೆ. ಮಂಜುನಾಥ್ ಅವರಿಲ್ಲಿ ಪಕ್ಕಾ ಮಾಸ್ ಲುಕ್ಕಿನಲ್ಲಿಯೂ ಕಂಗೊಳಿಸಲಿದ್ದಾರೆ. ರೋಚಕವಾದ ಫೈಟುಗಳೂ ಇದರಲ್ಲಿರಲಿವೆ. ಮಂಜುನಾಥ್ ಅವರ ಎಂಟ್ರಿ ಫೈಟು ಎಲ್ಲರೂ ಬೆಚ್ಚಿ ಬೀಳುವಂತೆ ಮೂಡಿಬಂದಿದೆಯಂತೆ. ಕುಂಗ್ಫು ಚಂದ್ರು ಈ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದಾರೆ.
ಇನ್ನು ಹಾಡುಗಳ ವಿಚಾರದಲ್ಲಿಯೂ ಕೂಡಾ ಈ ಚಿತ್ರ ಅಲೆಯೆಬ್ಬಿಸೋದು ಗ್ಯಾರೆಂಟಿ. ಯಾಕೆಂದರೆ, ಶ್ರೇಯಾ ಘೋಷಾಲ್, ಸೋನುನಿಗಮ್, ಶಂಕರ್ ಮಹದೇವನ್ ಅವರಂಥಾ ಮೇರು ಗಾಯಕರಿಂದ ಇದರ ಹಾಡನ್ನು ಹಾಡಿಸಲಾಗಿದೆ. ಮಂಜುನಾಥ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದೇ ಸಂಯುಕ್ತ-೨ ಚಿತ್ರದ ಮೂಲಕ. ಅದರಲ್ಲಿ ಒಂದು ಮಹತ್ವದ ಪಾತ್ರ ನಿರ್ವಹಿಸೋ ಮೂಲಕವೂ ಅವರು ಗಮನ ಸೆಳೆದಿದ್ದರು. ಅದನ್ನು ಕಂಡ ಪ್ರತಿಯೊಬ್ಬರೂ ಇವರು ಹೀರೋ ಆದರೆ ಚೆನ್ನಾಗಿರುತ್ತದೆ ಎಂಬಂಥಾ ಭಾವನೆ ಹುಟ್ಟಿಕೊಂಡಿತ್ತು. ನಾಯಕನಾಗಲು ಬೇಕಾದ ಫಿಟ್ನೆಸ್ ಕಾಯ್ದುಕೊಂಡಿರೋ ಮಂಜುನಾಥ್ ಅವರು ಸಂಪೂರ್ಣ ತಯಾರಿಯೊಂದಿಗೇ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಸಿನಿಮಾ ಬಗ್ಗೆ ಆಳವಾದ ಆಸಕ್ತಿ ಹೊಂದಿರೋ ಮಂಜುನಾಥ್ ಅವರು ಈ ಸಿನಿಮಾ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗದಲ್ಲಿ ನೆಲೆ ನಿಲ್ಲುವಂತಾಗಲಿ…